ಸಹೃದಯರೇ,
'ಕವಿಕಿರಣ'ದ 1, ಡಿಸೆಂಬರ್, 2010 ರ ಸಂಚಿಕೆಯನ್ನು ಈ ಮೂಲಕ ತಮ್ಮ ಅವಗಾಹನೆಗೆ ಪ್ರಕಟಿಸಿದೆ. ಕಾಲಕ್ರಮೇಣ ಉಳಿದ ಸಂಚಿಕೆಗಳನ್ನೂ ಪ್ರಕಟಿಸಲಾಗುವುದು. ನಿಮ್ಮ ಸಲಹೆ, ಸೂಚನೆ, ಸಹಕಾರಗಳನ್ನು ಹೃತ್ಪೂರ್ವಕ ಸ್ವೀಕರಿಸಲಾಗುವುದು.
ಇದು ಕವಿ ಪ್ರಕಾಶನದ ಪ್ರಕಟಣೆಗಳನ್ನು ಅಂತರ್ಜಾಲದ ಮೂಲಕವೂ ಜನರಿಗೆ ತಲುಪಿಸಲು ಉದ್ದೇಶಿಸಿರುವ ಬ್ಲಾಗ್. ಈ ತಾಣದಲ್ಲಿ ಇದುವರೆಗೆ ಪ್ರಕಟಿಸಿದ ಇತರ ಪ್ರಕಟಣೆಗಳು:
1. 'ಕವಿಕಿರಣ' ಪತ್ರಿಕೆ ಮೂಡಿದ ಪರಿಯ ಪರಿಚಯ, http://kavikirana.blogspot.in/2011/01/blog-post_26.html
2. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2008ರ ಸಂಚಿಕೆ
http://kavikirana.blogspot.in/2011/02/2008.html
3. 'ಕವಿಕಿರಣ' ಪತ್ರಿಕೆಯ ಜೂನ್, 2009ರ ಸಂಚಿಕೆ
http://kavikirana.blogspot.in/2011/04/2009.html
4. 'ಕವಿಕಿರಣ' ಪತ್ರಿಕೆಯ ಡಿಸೆಂಬರ್, 2009ರ ಸಂಚಿಕೆ
http://kavikirana.blogspot.in/2011/05/01-12-2009.html
5. 'ಕವಿಕಿರಣ' ಪತ್ರಿಕೆಯ ಜೂನ್, 2010ರ ಸಂಚಿಕೆ
http://kavikirana.blogspot.in/2011/07/01-06-2010.html
6. 'ಕವಿಕಿರಣ' ಪತ್ರಿಕೆಯ ಜೂನ್, 2010ರ ವಿಶೇಷ ಸಂಚಿಕೆ
http://kavikirana.blogspot.in/2011/07/01-06-2010.html
7. ಕ.ವೆಂ. ನಾಗರಾಜರ ಕೃತಿ: ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ (ವ್ಯಕ್ತಿಚಿತ್ರಣ) http://kavikirana.blogspot.in/2011/06/blog-post_23.html
8. ಕವಿ ವೆಂ. ಸುರೇಶರ 'Karmayogi – Kalavallabha S.K. LINGANNAIYA – a concise biography of Sri S.K. Lingannaiya'
http://kavikirana.blogspot.in/2011/07/this-book-is-biography-of-one-of.html
ಕಾಲಕ್ರಮೇಣ ಉಳಿದ ಪ್ರಕಟಣೆಗಳನ್ನೂ ಸಹೃದಯೀ ವಾಚಕರ ಮುಂದಿಡುವ ವಿಚಾರವಿದೆ. ಪ್ರತಿಗಳು ಬೇಕೆನಿಸಿದವರು ನನ್ನನ್ನಾಗಲೀ, ಕವಿ ಸುರೇಶರನ್ನಾಗಲೀ ಸಂಪರ್ಕಿಸಬಹುದು. ತಮ್ಮ ಪ್ರತಿಕ್ರಿಯೆ, ಸಲಹೆ, ಸೂಚನೆ, ಸಹಕಾರಗಳಿಗೆ ಸ್ವಾಗತ.
-ಕ.ವೆಂ.ನಾಗರಾಜ್, ಸಂಪಾದಕ.
- - - - - - - - - - - - - - - - - - - - - - - - - - - - - - - - - - - - - - -
ಮೂಢ ಉವಾಚ
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ|
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ||
- ಕ.ವೆಂ.ನಾ..
* * * *
ಸಂಪಾದಕರು:
ಕ.ವೆಂ. ನಾಗರಾಜ್,
ನಂ.೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ.
೨ನೆಯ ಮುಖ್ಯರಸ್ತೆ, ಶಾಂತಿನಗರ,
ಹಾಸನ - ೫೭೩೨೦೧.
kavinagaraj2010@gmail.com
ಮೊಬೈಲ್ ದೂ: ೯೪೪೮೫ ೦೧೮೦೪.
ಸಹಸಂಪಾದಕರು:
ಕವಿ ವೆಂ. ಸುರೇಶ್,
ಸೌಪರ್ಣಿಕಾ, ೩ನೆಯ ಮುಖ್ಯ ರಸ್ತೆ, ೩ನೆಯ
ಅಡ್ಡರಸ್ತೆ, ಅಕ್ಕಮಹಾದೇವಿ ಪಾರ್ಕ್ ಹತ್ತಿರ,
ಬಸವೇಶ್ವರ ನಗರ, ಶಿವಮೊಗ್ಗ - ೫೭೭೨೦೪.
ಮೊಬೈಲ್ ದೂ: ೯೪೪೮೯ ೩೨೮೬೬.
E mail: bsr_kavisuresh@yahoo.co.in
ಮುದ್ರಕರು ಮತ್ತು ಪ್ರಕಾಶಕರು:
ಕವಿ ಪ್ರಕಾಶನ, ಶಿವಮೊಗ್ಗ.
* * * *
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.
*************
ಸೂಚನೆ
ಕವಿಕಿರಣದ ಸದುದ್ದೇಶ, ಸದಾಶಯಗಳಿಗೆ ಪೂರಕವಾದ ಕಥೆ , ಕವನ, ಲೇಖನ, ಇತ್ಯಾದಿಗಳಿಗೆ ಆಹ್ವಾನವಿದೆ. ಸಕಾಲದಲ್ಲಿ ಕಳುಹಿಸಿಕೊಡಲು ಕೋರಿದೆ. ಸೀಮಿತ ಪುಟಸಂಖ್ಯೆಗಳ ಕಾರಣ ಕಿರುಬರಹಗಳಿಗೆ ಆದ್ಯತೆಯಿದೆ.
***********
ಕವಿ ಪ್ರಕಾಶನದ ಪ್ರಕಟಣೆಗಳು
೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ - ಲೇ: ಕವಿ ವೆಂ. ಸುರೇಶ್, ಪು: ೧೨೬. ಬೆಲೆ: ರೂ. ೧೨೫/-
೨. Karmayogi – Kalavallabha S.K. LINGANNAIYA – a concise biography of Sri S.K. Lingannaiya – Author: Kavi Suresh. P:114. Price: Rs. 80/-
೪. ಕವಿಸಂಪರ್ಕವಾಹಿನಿ (ದೂರವಾಣಿ ಕೈಪಿಡಿ) - ಸಂ. ಕವಿ ಸುರೇಶ್, ಪು:೨೬, ಬೆಲೆ: ರೂ.೧೫/-
೫. ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ -(ವ್ಯಕ್ತಿಚಿತ್ರಣ)- ಲೇ: ಕ. ವೆಂ. ನಾಗರಾಜ್, ಹಾಸನ. ಪು.೬೦, ಬೆಲೆ: ರೂ.೪೦/-.
*****
ಪತ್ರಿಕೆಯ ಸಂಚಿಕೆಗಳನ್ನು ಸಂಗ್ರಹಿಸಿಡಿ
ಕವಿ ಕುಟುಂಬಗಳ ಕುರಿತು ಅಮೂಲ್ಯ ಮಾಹಿತಿಗಳು ಪ್ರತಿ ಸಂಚಿಕೆಯಲ್ಲೂ ಇರುವುದರಿಂದ ಎಲ್ಲಾ ಸಂಚಿಕೆಗಳನ್ನು ಕವಿ ಕುಟುಂಬಗಳವರು ಹಾಗೂ ಬಂಧುಗಳು ಕುಟುಂಬದ ದಾಖಲೆಯಾಗಿ ಸಂರಕ್ಷಿಸಿಡಲು ಕೋರಿದೆ. ಈ ಸಂಚಿಕೆಗಳು ಮುಂದಿನ ಪೀಳಿಗೆಗಳಿಗೂ, ಇತಿಹಾಸಾಸಕ್ತರಿಗೂ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ.
*****
ರಕ್ಷಾಪುಟಗಳು
ಪುಟ ೧: ಕೆಳದಿ ಅರಸರ ಲಾಂಛನ (ಕೃಪೆ: ಪ್ರಾಚ್ಯ ವಸ್ತು
ಸಂಗ್ರಹಾಲಯ, ಕೆಳದಿ)
ಪುಟ ೪: ಕೆಳದಿ ಶಿವಪ್ಪನಾಯಕನ ಅರಮನೆ ಪ್ರಾಂಗಣ,
ಶಿವಮೊಗ್ಗ.
*********************
ರಸಭರಿತ ಫಲಮೂಲ ಕೊಂಬೆ ತಾನಲ್ಲ|
ಫಲಸತ್ವ ಸಾಗಿಪ ಮಾರ್ಗ ತಾನಹುದು||
ಮಾಡಿದೆನೆನಬೇಡ ನಿನ್ನದೆನಬೇಡ|
ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ||
ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಎಂತಹ ವಾಹಕರು ಎಂಬುದು ನಮ್ಮಿಂದ ಆಗುವ ಕಾರ್ಯಗಳು ತೋರಿಸುತ್ತವೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ.
ಕಶ್ಮಲಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಶ್ಮಲಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೀಡಿದರೆ ಅರ್ಥವಾಗಬಹುದು. ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅವರ ೩ ವರ್ಷದ ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು ನೀನು ಪೆದ್ದ, ದಂಡ ಎಂದಿತು. ಚಿಕ್ಕ ಮಗುವಾದ್ದರಿಂದ ಆ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು ಮಗು ಸರಿಯಾಗಿ ಹೇಳಿತು, ಬಿಡು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ ಎಂದರು. ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಈ ಪ್ರಸಂಗ ನನ್ನನ್ನು ವಿಚಾರಕ್ಕೆ ದೂಡಿತು. ಹಿರಿಯರಿಗೂ ಆ ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ. ಈಗ ಅವರು ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂದು ಶಹಭಾಸಗಿರಿ ಕೊಟ್ಟಂತಾಯಿತು. ಮಗು ಮುಂದೆ ಇಂತಹ ಮಾತುಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದರಲ್ಲವೇ? ಇದು ಸರಿಯೇ? ಮಕ್ಕಳು ನಿಷ್ಕಲ್ಮಷವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಷಗಳನ್ನು ತುಂಬಬಾರದಿತ್ತಲ್ಲವೇ?
ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ತಮ್ಮ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಅವರ ಬಗ್ಗೆ ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. ಆತ್ಮೀಯರು ಸೀನಿದರೆ ಸಾಕು, ಏನೋ ಆಗಿಹೋಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಎಷ್ಟು ಜನರನ್ನು ಹಾಳುಮಾಡಬೇಕೋ? ಎಂದು ಉದ್ಗರಿಸುತ್ತಾರೆ. ಇಂತಹವರನ್ನು ಒಳ್ಳೆಯ ವಾಹಕರೆನ್ನಬಹುದೆ? ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಇಂತಹವರನ್ನು ಸಾಮಾನ್ಯವಾಗಿ ಜನ ಒಳ್ಳೆಯವರೆಂದು ಗುರುತಿಸುತ್ತಾರೆ. ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ ಎಂಬುದರಲ್ಲಿ ಅನುಮಾನವಿಲ್ಲ.
ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಯಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಗೀತೆಯ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ ಎಂಬಂತೆ ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಆಗ ಉಳಿಯುವ ಮಾರ್ಗ. ಆದರೆ ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ.
ನಾವೆಷ್ಟು ಒಳ್ಳೆಯವರು ಎಂಬುದರ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡಿರಿ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಿಮ್ಮ ದೃಷ್ಟಿಯಲ್ಲಿ ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಇನ್ನೊಂದು ಕಲಮಿನಲ್ಲಿ ಅವರ ದೃಷ್ಟಿಯಲ್ಲಿ ನೀವು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಒಂದು ಆಶ್ಚರ್ಯದ ಸಂಗತಿ ನಿಮಗೇ ಗೋಚರಿಸುವುದು. ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನೀವು ಒಳ್ಳೆಯವರೆಂದು ಹೇಳುವವರು ನಿಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನೀವು ಕೆಟ್ಟವರೆನ್ನುವವರು ನಿಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿರಿ. ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನೀವು ಒಳ್ಳೆಯವರೇ. ಕೆಟ್ಟವರು ಎಂಬ ವಿವರ ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ. ಇದರ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?
ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ? ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿಕೊಳ್ಳುತ್ತೇವೆಯೇ? ಒಂದು ವೇಳೆ ನಾವು ಸದ್ಯದಲ್ಲೇ ಸಾಯುತ್ತೇವೆ ಎಂಬುದು ನಮ್ಮ ಅರಿವಿಗೆ ಬಂದಾಗ ಮತ್ತು ಏನಾದರೂ ಹೇಳಲು ಐದು ನಿಮಿಷ ಮಾತ್ರ ಅವಕಾಶ ಸಿಕ್ಕಾಗ ನಾವು ಏನು ಹೇಳಬಹುದು, ಊಹಿಸಿಕೊಳ್ಳಿ. ಆ ಮಾತನ್ನು ಈಗಲೇ ಏಕೆ ಹೇಳಬಾರದು? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ. ಬರ್ನಾರ್ಡ್ ಶಾ ಹೇಳಿದಂತೆ ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ. ಸಂತೋಷ ಹಂಚಿಕೊಳ್ಳೋಣ- ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ- ಅದು ಅರ್ಧ ಕಡಿಮೆಯಾಗುತ್ತದೆ. ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ.
-ಕ.ವೆಂ.ನಾಗರಾಜ್.
*************************
*************************************************
ಕೆಳದಿ ಕವಿಮನೆತನದ ಮೂಲಪುರುಷ -
ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ
ಗದ್ಯಾನುವಾದ:: ಕೆ. ಗುಂಡಾಜೋಯಿಸ್
ಪ್ರಥಮಾಶ್ವಾಸಂ
-೫-
(ಹಿಂದಿನ ಸಂಚಿಕೆಯಿಂದ ಮುಂದಕ್ಕೆ)
ಮೆರೆವಾ ಚೌಡಪಮನ್ನೆಯಂಗೆ ಶುಭಯುಕ್ಕೇಂದ್ರ ತ್ರಿಕೋಣಂಗಳಿಂ
ಪರಮೋಚ್ಚಸ್ಥಿತಸದ್ಗ್ರಹತ್ರಯಗಳಿಂ ಕ್ರೂರಾರಿದುಶ್ಚಿತ್ಕದಿಂ
ಬೆಳೆದುತ್ಕೃಷ್ಟ ಸುಲಗ್ನದೊಳ್ಪ್ರಬಲಚಂದ್ರಾವಸ್ಥೆಯೊಳ್ಪುಟ್ಟಿದಂ
ಸ್ಫುರದತ್ನುನ್ನತ ರಾಜಯೋಗದೊಳೆ ಲೋಕಾನಂದನಂ ನಂದನಂ | ೪೮ |
ಆ ಚೌಡಪ್ಪನಿಗೆ ಶುಭಗ್ರಹಯುಕ್ತವಾದ ಕೇಂದ್ರ ತ್ರಿಕೋಣಗಳೊಂದಲೂ ಪರಮೋಚ್ಛಸ್ಥಾನದಲ್ಲಿರುವ ಒಳ್ಳೆಯ ಮೂರು ಗ್ರಹಗಳಿಂದಲೂ, ಕ್ರೂರಗ್ರಹಗಳ ಶತ್ರುಸ್ಥಾನಗಳಿಂದಲೂ ಕೂಡಿ ಉತ್ಕೃಷ್ಟ ಲಗ್ನದಲ್ಲಿ, ಪ್ರಬಲ ಚಂದ್ರಾವಸ್ಥೆಯಲ್ಲಿ, ಅತ್ಯುನ್ನತವಾದ ರಾಜಯೋಗದಲ್ಲಿ ಲೋಕಾನಂದಕಾರಕನಾದ ಮಗನು ಹುಟ್ಟಿದನು.
ಆ ಸುತನೊಗೆದ ಮುಹೂರ್ತದ
ಭಾಸುರತರ ರಾಜಯೋಗಮುಖ ಫಲಗಳುಮಂ
ಜೋಸಿಗರ ಮುಖದೆ ಕೇಳ್ದು ಮ
ಹಾ ಸಂತೋಷಾಂಬುಧಿಯೊಳೋಲಾಡುತ್ತುಂ | ೪೯ |
ಆ ಮಗನು ಹುಟ್ಟಿದ ಮುಹೂರ್ತದ ರಾಜಯೋಗ ಮುಂತಾದ ಫಲಗಳನ್ನು ಕೇಳಿ ತಿಳಿದು ಚೌಡಪ್ಪನು ಸಂತೋಷ ಸಮುದ್ರದಲ್ಲಿ ಓಲಾಡಿದನು.
ಬಗೆಬಗೆಯ ದಾನಧಮ್ಮಾ
ದಿಗಳಂ ವಿರಚಿಸಿ ಸದಾಶಿವಯ್ಯನೆನುತ್ತುಂ
ಸೊಗಯಿಸುವಭಿಧಾನವನಿ
ಟ್ಟಗಣಿತ ಹರ್ಷದೊಳೆ ಚೌಡಪಂ ಪೋಷಿಸಿದಂ | ೫೦ |
ಬಗೆಬಗೆಯ ದಾನಧರ್ಮಾದಿಗಳನ್ನು ಮಾಡಿದನು. ಮಗನಿಗೆ ಸದಾಶಿವಯ್ಯನೆಂಬ ಉತ್ತಮವಾದ ಹೆಸರನ್ನಿಟ್ಟು ಅಪಾರವಾದ ಸಂತೋಷದಿಂದ ಪೋಷಿಸಿದನು.
ವ|| ಇಂತು ಪೋಷಿಸುತ್ತುಮಿರಲಾ ಬಾಲಕಂ ಬಾಲೇಂದು ವಿನಂತೆ ಪ್ರತಿದಿನಂಗಳೊಳ್ ಪರಮಾಭಿವೃದ್ಧಿಯಂ ಪಡೆದು ವಿರಾಜಿಸುತ್ತುಮಿರಲಾ ಸುತನಂ ನಿಟ್ಟಿಸಿ ನಲಿಯುತ್ತುಂ ಮತ್ತಮಾ ಕುಮಾರಂಗೆ ಯೌವನೋದಯಮಾಗಲೊಡನೆ ಸತ್ಕುಲಸಂಭವೆಯರಪ್ಪ ವೀರಮಾಂಬೆಭದ್ರಮಾಂಬೆ ಯೆಂಬಿರ್ವರ್ ಕನ್ಯಾರತ್ನಂಗಳನಡಿವಿಭವದಿಂ ವಿವಾಹಮಂ ರಚಿಸಿ ಕೆಳದಿ ರಾಮೇಶ್ವರಗೃಹಮಂ ದಾರುಮಾಯವನಾಗಿಸಿ ಸದ್ಭಕ್ತಿಯಿಂದರ್ಚಿಸುತ್ತುಂ ತತ್ಕೃಪಾಕಟಾಕ್ಷಮೂಲದಿಂ ದಿನದಿನದೊಳ್ ಭಾಗ್ಯಾಭಿವೃದ್ಧಿಯಂ ಪಡೆದು ನಾಲ್ದೆಸೆ ಯೊಳ್ ಪರಮ ಪ್ರಖ್ಯಾತಿವೆತ್ತು ವರ್ತಿಸುತ್ತುಮಿರ್ದ ನಂತುಮಲ್ಲದೆಯುಂ-
ವ|| ಹೀಗೆ ಆ ಹುಡುಗನು ಬಾಲಚಂದ್ರನಂತೆ ಪ್ರತಿದಿನ ಅಭಿವೃದ್ಧಿಯನ್ನು ಹೊಂದುತ್ತಾ ವಿರಾಜಿಸುತ್ತಿದ್ದನು. ಚೌಡಪ್ಪನು ಆ ಮಗನನ್ನು ನೋಡಿ ಸಂತೋಷಪಡುತ್ತಾ ಇದ್ದನು. ಆ ಮಗನಿಗೆ ಯೌವನವುಂಟಾದಾಗ ಒಳ್ಳೆಯ ವಂಶದಲ್ಲಿ ಹುಟ್ಟಿದ ವೀರಮಾಂಬೆ-ಭದ್ರಮಾಂಬೆ ಎಂಬ ಇಬ್ಬರು ಕನ್ಯಾರತ್ನಗಳನ್ನು ತಂದುಕೊಂಡು ಅತಿ ವೈಭವದಿಂದ ಮದುವೆ ಮಾಡಿಸಿದನು. ಕೆಳದಿ ಶ್ರೀ ರಾಮೇಶ್ವರ ದೇವರ ಮಂದಿರವನ್ನು ಮರಮುಟ್ಟುಗಳಿಂದ ಪೂರ್ಣಗೊಳಿಸಿದನು. ಸದ್ಭಕ್ತಿಯಿಂದ ಶ್ರೀರಾಮೇಶ್ವರನನ್ನು ಅರ್ಚಿಸುತ್ತಾ ಆತನ ಕೃಪಾಕಟಾಕ್ಷದಿಂದ ಪ್ರತಿದಿನವೂ ಭಾಗ್ಯಾಭಿವೃದ್ಧಿಯನ್ನು ಹೊಂದಿ ನಾಲ್ಕು ದಿಕ್ಕುಗಳಲ್ಲೂ ಹೆಚ್ಚು ಪ್ರಸಿದ್ಧಿಯನ್ನು ಪಡೆದನು. ಅಲ್ಲದೆ
ಒತ್ತಿ ಪೊಡೆದೆಡವಲಂಗಳ
ಬಿತ್ತರಮಾಡಿಳೆಗಳಂ ಪರಗ್ರಾಮಗಳಂ
ಗುತ್ತಿಗೆಯನೆಸಗಿ ಮಿಗೆ ದೆಸೆ
ವೆತ್ತಾತಂ ದಿನದಿನಗಳೊಳಭಿವರ್ಧಿಸಿದಂ | ೫೧ |
ಎಡಬಲದ ಭೂಮಿಗಳಿಗೆ ಮುನ್ನುಗ್ಗಿ, ಆಕ್ರಮಿಸಿ ಬೇರೆ ಗ್ರಾಮಗಳನ್ನು ಅಧೀನಗೊಳಿಸಿಕೊಂಡನು. ಹಾಗೂ ಹೆಚ್ಚಾಗಿ ಒಳ್ಳೆಯ ದೆಸೆಯನ್ನು ಪಡೆದು ದಿನದಿನಕ್ಕೆ ಅಭಿವೃದ್ಧಿಯನ್ನು ಹೊಂದಿದನು.
ಚಿರರನನುಚರರನದಟರ
ನುರುತರ ಪರಿಜನರನಂಗರಕ್ಷಕ ಸಾಮಂ
ತರ ನೆರಹಿ ಭುಜಬಲಾಢ್ಯರೊ
ಳುರೆ ಬಲ್ಲಿದನೆನಿಸಿ ಚೌಡಪಂ ರೂಢಿಸಿದಂ | ೫೨ |
ಆ ಚೌಡಪ್ಪನು ಚಾರಕರನ್ನೂ, ಸೇವಕರನ್ನೂ, ಪರಾಕ್ರಮಿಗಳನ್ನೂ, ಪರಿಜನರನ್ನೂ, ಅಂಗರಕ್ಷಕರನ್ನೂ ಮತ್ತು ಸಾಮಂತರನ್ನೂ ಸೇರಿಸಿಕೊಂಡು ಭುಜಬಲ ಸಮರ್ಥರಲ್ಲಿ ತಾನೇ ಬಲ್ಲಿದನೆನಿಸಿ ಅಧಿಕಾರವನ್ನು ರೂಢಿಸಿಕೊಂಡನು.
ಗುರುಲಿಂಗಜಂಗಮಾರ್ಚನ
ನಿರತಂ ವರವೀರಶೈವಮಾರ್ಗಾನುಗ ಸ
ಚ್ಚರಿತನುರುದಾನಧರ್ಮಾ
ಚರಣೈಕಪ್ರಥಿತನೆನಿಸಿ ರಾರಾಜಿಸಿದಂ | ೫೩ |
ಆ ಚೌಡಪ್ಪನು ಗುರುಲಿಂಗಜಂಗಮರ ಅರ್ಚನೆಯಲ್ಲಿ ಆಸಕ್ತನಾಗಿದ್ದನು. ವೀರಶೈವಮಾರ್ಗಾನುಯಾಯಿಯಾಗಿ ಸಚ್ಚರಿತ್ರನಾಗಿದ್ದನು. ದಾನಧರ್ಮಾಚರಣೆಯಿಂದ ಪ್ರಸಿದ್ಧನಾಗಿ ರಾರಾಜಿಸಿದನು.
.. ಮುಂದುವರೆಯುವುದು.
*******
ಪ್ರಾಯೋಜಕತ್ವ
ಕವಿಕಿರಣ ಪತ್ರಿಕೆಯ ಸಂಚಿಕೆಗಳನ್ನು ಪ್ರಾಯೋಜಿಸಲು ಅವಕಾಶವಿದೆ. ರೂ. ೬೦೦೦/- ಮತ್ತು ಮೇಲ್ಪಟ್ಟು ಮೊಬಲಗು ನೀಡಿದಲ್ಲಿ ಅವರನ್ನು ಸಂಚಿಕೆಯ ಪ್ರಾಯೋಜಕರೆಂದು ಪರಿಗಣಿಸಿ ಪತ್ರಿಕೆಯಲ್ಲಿ ಅವರ ಕುಟುಂಬದ ಪೂರ್ಣ ಪುಟದ ಭಾವಚಿತ್ರ ಪ್ರಕಟಿಸಿ ಸ್ಮರಿಸಲಾಗುವುದು. ಪ್ರಾಯೋಜಕರು ಮುಂದೆ ಬರಲು ಕೋರಿದೆ.
**
ಹಿಂದಿನ ಸಂಚಿಕೆಗಳ ಪ್ರಾಯೋಜಕರುಗಳು:
೧. ಶ್ರೀ ಕ.ವೆಂ. ಅನಂತ ಮತ್ತು ಕುಟುಂಬ, ಕಾಲೇಜ್ ವಿಲೆ, ಪಿಎ, ಯು.ಎಸ್.ಎ.
೨. ಶ್ರೀ ಹೆಚ್,ಎಸ್ ಪುಟ್ಟರಾಜು ಮತ್ತು ಕುಟುಂಬ, ಜಾವಗಲ್, ಅರಸಿಕೆರೆ ತಾಲ್ಲೂಕು.
೩. ಕವಿಮನೆತನದ ಓರ್ವ ಹಿರಿಯರು, ಬೆಂಗಳೂರು
೪. ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬ, ಬೆಂಗಳೂರು.
೫. ದಿ. ಶ್ರೀ ಕವಿ ವೆಂಕಟಸುಬ್ಬರಾಯರ ಮಕ್ಕಳು. (ವಿಶೇಷ ಪೂರಕ ಸಂಚಿಕೆ)
******************
******************
ಈ ಸಂಚಿಕೆಯ ಪ್ರಾಯೋಜಕರು:
ತಾಯಿ ದಿ.ಶ್ರೀಮತಿ ಸರಸ್ವತಮ್ಮನವರ ನೆನಪಿಗಾಗಿ ಶ್ರೀ ಎನ್. ಶ್ರೀನಿವಾಸ ಮತ್ತು ಕುಟುಂಬ, ಬೆಂಗಳೂರು.
**********************
**********************
ಮುಂದಿನ ಸಂಚಿಕೆಯ ಪ್ರಾಯೋಜಕರು:
ನೀವೇ ಇರಬಹುದೇ?
********************************
ಮನವಿ
ಇದು ಕವಿ ವಂಶಸರ ಕುಟುಂಬದ ಹಾಗೂ ಬಂಧು ಬಳಗದವರ ಪತ್ರಿಕೆಯಾಗಿದ್ದು, ಈ ಪತ್ರಿಕೆಗೆ ಕುಟುಂಬಗಳವರೇ ಆಧಾರ. ಈಗಾಗಲೇ ನಿರ್ಧಾರವಾಗಿರುವಂತೆ ಪ್ರತಿ ಕುಟುಂಬದ ಪ್ರತಿ ಘಟಕದಿಂದ ವಾರ್ಷಿಕ ರೂ. ೫೦೦/- ಅನ್ನು ವಂತಿಕೆಯಾಗಿ ಸಂಗ್ರಹಿಸಲು ಉದ್ದೇಶಿಸಿದ ವಿಷಯ ತಿಳಿದದ್ದೇ ಆಗಿದೆ. ಈ ಹಣವನ್ನು ಪತ್ರಿಕೆಗೆ ಮಾತ್ರವಲ್ಲದೆ ಕುಟುಂಬಗಳ ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಸಹ ಬಳಸಲು ಉದ್ದೇಶಿಸಿರುವುದರಿಂದ ಎಲ್ಲರ ಸಹಕಾರ ಕೋರಿದೆ. ವಾರ್ಷಿಕವಾಗಿ ರೂ. ೫೦೦/- ನೀಡುವುದು ಕಷ್ಟವಾಗಲಾರದಾದರೂ, ಇಷ್ಟೇ ಕೊಡಬೇಕೆಂದು ಒತ್ತಾಯವಿರುವುದಿಲ್ಲ. ವಂತಿಕೆ ಸಂಗ್ರಹಕ್ಕೆ ಯಾgನ್ನೂ ನಿಯೋಜಿಸಿರುವುದಿಲ್ಲ. ದಯವಿಟ್ಟು ಪ್ರತಿ ಕುಟುಂಬದವರೂ ಸ್ವಯಂ ಪ್ರೇರಿತರಾಗಿ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಪಾವತಿಸಿ ತಿಳಿಸಲು ಕೋರಿದೆ. ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಬಳಗದ ಕುಟುಂಬಗಳವರು ಹಾಗೂ ಹಿತೈಷಿಗಳು ಸ್ವ ಇಚ್ಛೆಯಿಂದ ಸಹಕಾರ ನೀಡಿದಲ್ಲಿ ಸ್ವಾಗತವಿದೆ.
ಸಂಗ್ರಹವಾದ ಮೊಬಲಗನ್ನು ಶ್ರೀ ಸಾ.ಕ. ಕೃಷ್ಣಮೂರ್ತಿ ಮತ್ತು ಶ್ರೀ ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ೨ನೆಯ ಹಂತದ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಯಲ್ಲಿ ಜಂಟಿ ಖಾತೆಯಲ್ಲಿ ಜಮಾ ಇರಿಸಲಾಗಿದೆ. ಖಾತೆಸಂ. ೦೪೭೮೨೦೧೦೦೩೭೬೫೦ ಆಗಿದ್ದು, ಈ ಖಾತೆಗೆ ನೇರವಾಗಿ ಜಮಾ ಮಾಡಲೂ ಅವಕಾಶವಿದೆ. ಆದಾಯ- ವೆಚ್ಚದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.. ಪರಿಶೀಲನೆಗೂ ಅವಕಾಶವಿದೆ.
ಸಂಗ್ರಹವಾಗುವ ಮೊಬಲಗು ಸದುದ್ದೇಶಕ್ಕೆ/ ಸಮಾಜಕಾರ್ಯಕ್ಕೆ ಮಾತ್ರ ಬಳಕೆಯಾಗುವುದರಿಂದ ಮನೆಗಳಲ್ಲಿ ಶುಭಕಾರ್ಯ ನಡೆಯುವ ಮತ್ತು ಇತರ ಸಂದರ್ಭಗಳಲ್ಲಿ ಹಾಗೂ ಹಿರಿಯರ ನೆನಪಿಗಾಗಿ ಮಂಗಳನಿಧಿ ಹೆಸರಿನಲ್ಲಿ ಸಹ ದೇಣಿಗೆ ನೀಡಬಹುದು.
************************
ಕೆಳದಿ ಕವಿಮನೆತನದ ಪೂರ್ವಜರು
ಕವಿ ಕೃಷ್ಣಪ್ಪ - ಸುಬ್ಬಮ್ಮ
-ಕ.ವೆಂ.ನಾಗರಾಜ್.
ಕೆಳದಿ ಕವಿಮನೆತನದ ನಾಲ್ಕನೆಯ ಪೀಳಿಗೆಯವರ ಬಗ್ಗೆ ಹೆಚ್ಚು ಮಾಹಿತಿಗಳು ತಿಳಿದಿಲ್ಲ. ನಾಲ್ಕನೆಯ ಪೀಳಿಗೆಗೆ ಸೇರಿದ ವೆಂಕಭಟ್ಟ-ಜಾನಕಮ್ಮರವರ ಮೂವರು ಮಕ್ಕಳು ಅಪ್ಪಣ್ಣಭಟ್ಟ, ಕೃಷ್ಣಪ್ಪ ಮತ್ತು ಶಿವಭಟ್ಟ (ಶಿವರಾಮಭಟ್ಟ). ಎರಡನೆಯ ಮಗನಾದ ಕವಿ ಕೃಷ್ಣಪ್ಪನವರು ೧೯ನೆಯ ಶತಮಾನದ ಆದಿ ಭಾಗದಲ್ಲಿದ್ದವರು. ಇವರ ಪತ್ನಿ ಸುಬ್ಬಮ್ಮ. ಕೆಳದಿ ಸಂಸ್ಥಾನದ ಚರಿತ್ರೆ ಎಂಬ ಸಂಕ್ಷೇಪ ಗದ್ಯಾನುವಾದ ೧೯೧೮-೧೯ರ ಮಲೆನಾಡು ಸಮಾಚಾರ ಪತ್ರಿಕೆಯಲ್ಲಿ ಪ್ರಕಟವಾಗಿದೆಯೆಂದು ಹೇಳಲಾಗಿದೆ. ಇದು ಹಿಂದೆ ಆಸ್ಥಾನಕವಿಗಳಾದ ಮ: ಕೃಷ್ಣಪ್ಪನವರಿಂದ ಬರೆಯಲ್ಪಟ್ಟಿದ್ದು ಎಂದು ಆ ಪತ್ರಿಕೆಯ ಸಂಪಾದಕರು ತಿಳಿಸಿದ್ದಾರೆಂದೂ ಹೇಳಲಾಗಿದೆ. ಕೆಳದಿ ರಾಯ ಪದ್ಧತಿ ಎಂಬ ಒಂದು ಪದ್ಯಗ್ರಂಥವೂ ಇದ್ದ ಬಗ್ಗೆ ಬುಕನನ್ ಸಾಹೇಬರ ಹೇಳಿಕೆ ಇದ್ದು, ಇದನ್ನು ಬಂಗಾಳದ ಏಷ್ಯಾಟಿಕ್ ಲೈಬ್ರರಿಗೆ ದಿವಾನ್ ಪೂರ್ಣಯ್ಯನವರು ಕಳಿಸಿರುವುದಾಗಿ ಹೇಳಲಾಗಿದೆ. ಫ್ರಾನ್ಸಿಸ್ ಬುಕನನ್ ರ ಹೇಳಿಕೆ ಈ ರೀತಿ ಇದೆ:“I here found a Brahmin Belur Dewappa whose ancestors have been the hereditary writers of the chronicles of the Keladi family. It is in the old dialect and character of Karnata and contains 400 slokas or distinchs; for like all other works of any note among the Hindus it is poetical. He afterwards forwarded a copy of the work to Poornaiah who was so good as to add a translation into the modern language and character and both of them have been delivered to the Bengal Government. The family of the histeriographer enjoyed an inam, or free land, to the amounting of 60 pagodas a year.” [AJMCMC & MFB vol. II p.378].
ಕೃಷ್ಣಪ್ಪ, ಸುಬ್ಬಮ್ಮನವರು ಶಿವಮೊಗ್ಗ ಜಿಲ್ಲೆಯ ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿ ವಾಸವಿದ್ದ ಮನೆ ಈಗ ಹೀಗಿದೆ:
ಈ ಮನೆಯನ್ನು ಕವಿಕುಟುಂಬದವರು ಶ್ರೀ ವೆಂಕೋಬರಾವ್ ಬಾಪಟ್ ಎನ್ನುವವರಿಗೆ ಮಾರಿದ್ದರೆಂದು ತಿಳಿದುಬರುತ್ತದೆ. ಈಗ ಈ ಮನೆಯಲ್ಲಿ ವೆಂಕೋಬರಾವ್ ಬಾಪಟ್‌ರವರ ಮಗ ಶ್ರೀ ಕೇಶವರಾವ್ ಬಾಪಟ್‌ರವರು ವಾಸವಾಗಿದ್ದಾರೆ. ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳಿಗೆ ರಾಮಣ್ಣ, ವೆಂಕಣ್ಣ, ಲಿಂಗಣ್ಣ ಎಂಬ ಮೂವರು ಗಂಡು ಮಕ್ಕಳು, ಗಂಗೆ, ತುಂಗೆಯರೆಂಬ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗ ರಾಮಣ್ಣ ಪತ್ನಿ ನರಸಮ್ಮರೊಂದಿಗೆ ಕೆಳದಿಯಲ್ಲಿ ವಾಸವಿದ್ದರೆಂದು ಹೇಳಲಾಗಿದೆ. ನರಸಮ್ಮನವರ ದೇಹಾವಸಾನದ ನಂತರ ಸುಭದ್ರಮ್ಮರನ್ನು ಇವರು ವಿವಾಹವಾಗಿದ್ದರು. ಕೆಳದಿಯಲ್ಲಿದ್ದ ಜಮೀನುಗಳ ಉಸ್ತುವಾರಿಯನ್ನು ಇವರೇ ನೋಡಿಕೊಳ್ಳುತ್ತಿದ್ದರೆಂದು ಹೇಳುತ್ತಾರೆ. ಎರಡನೆಯ ಮಗ ವೆಂಕಣ್ಣ ಪತ್ನಿ ಲಕ್ಷ್ಮಮ್ಮರೊಂದಿಗೆ ಇದೇ ಸಾಗರದ ಮನೆಯಲ್ಲಿ ವಾಸವಿದ್ದರೆಂದು ಹೇಳುತ್ತಾರೆ. ಮೂರನೆಯ ಮಗ ಎಸ್.ಕೆ.ಲಿಂಗಣ್ಣಯ್ಯ ಬೆಂಗಳೂರಿನಲ್ಲಿ ವಾಸವಿದ್ದರು. ಮಗಳು ಗಂಗಮ್ಮಳನ್ನು ಕೆಳದಿಯ ಜೋಯಿಸ್ ಮನೆತನದ ಕೃಷ್ಣಜೋಯಿಸರಿಗೆ ಕೊಟ್ಟು ವಿವಾಹ ಮಾಡಿದ್ದರು. ಇನ್ನೊಬ್ಬ ಮಗಳು ತುಂಗಮ್ಮಳನ್ನು ಹೆಬ್ಬೈಲಿನ ದ್ಯಾವಪ್ಪರಿಗೆ ಕೊಟ್ಟು ವಿವಾಹ ಮಾಡಿದ್ದರು. ಕವಿ ಕೃಷ್ಣಪ್ಪನವರ ವಂಶವೃಕ್ಷ ಕೆಳಗೆ ಕೊಟ್ಟಿದೆ. ಈ ವಂಶವೃಕ್ಷದಲ್ಲಿ ಕಾಣಿಸಿರುವ ಎಲ್ಲರೂ ಕಾಲಾಧೀನರಾಗಿದ್ದಾರೆ.
********************
ದ್ರೌಪದಿ - ಪಾಂಡವರ ಸರಸ ಸಂವಾದ
ವಿವಾಹ ಮಹೋತ್ಸವದ ಸಂದರ್ಭದಲ್ಲಿ ವಧೂವರರು ದೇವರ ದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಮತ್ತು ವಧುವನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿ ವಧುವಿನ ಹೆಸರನ್ನು ವರನಿಂದ ಮತ್ತು ವರನ ಹೆಸರನ್ನು ವಧುವಿಂದ ಹೇಳಿಸುವ ಸಂಪ್ರದಾಯವನ್ನು ಕಾಣುತ್ತೇವೆ. ಇದಕ್ಕೆ ಅರ್ಥವೂ ಇತ್ತು. ಹಿಂದೆ ಗಂಡ ಹೆಂಡತಿಯನ್ನು ಮತ್ತು ಹೆಂಡತಿ ಗಂಡನನ್ನು ಹೆಸರು ಹಿಡಿದು ಕರೆಯುವ ಅಭ್ಯಾಸ ಇರಲಿಲ್ಲ. ಆದರೆ ಪರಸ್ಪರರಲ್ಲಿ ಪ್ರೀತಿಗೆ ಕೊರತೆಯಿರುತ್ತಿರಲಿಲ್ಲ.
ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್
ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಅವರುಗಳು ಮನೆಗೆ ಬಂದ ಸಂದರ್ಭದಲ್ಲಿ ದ್ರೌಪದಿಯು ಬಾಗಿಲನ್ನು ಹಾಕಿ ವಿನೋದದಿಂದ ಸಂವಾದ ನಡೆಸಿದ ಹಾಡು ಇದು. ಜಾನಪದ ಗೀತೆಯ ಧಾಟಿಯಲ್ಲಿ ಇದನ್ನು ಹಾಡಬಹುದು.
ಪುರುಷರೈವರು ಕೂಡಿ| ಹರುಷದಿಂ ಬರುತಿರೆ|
ಸರಸದಿಂ ಕೃಷ್ಣೆ ಕದವಿಕ್ಕೆ|| (ಎರಡು ಸಲ ಹೇಳುವುದು)
ಪಾಂಡವರು: ನಾಗವೇಣಿಯೆ ನೀನು| ಸಾಗಿ ಮುಂದಕೆ
ಬಂದು| ಬಾಗಿಲಿಕ್ಕಿದ ಬಗೆ ಪೇಳೆ||
-----------------------------------------------------------------------------
ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾಯರು ಚಿಕ್ಕವರಾಗಿದ್ದಾಗ ಅವರ ಅಜ್ಜಿಯವರು ಹೇಳಿಕೊಳ್ಳುತ್ತಿದ್ದ ದೇವರ ನಾಮಗಳಲ್ಲದೆ ಅವರ ತಾಯಿ ಮತ್ತು ತಂದೆಯವರು ಅವರಿಗೆ ಹಾಗೂ ಅವರ ತಮ್ಮ ಶ್ರೀ ಸಾ.ಕ. ಕೃಷ್ಣಮೂರ್ತಿಯವರಿಗೆ ಹೇಳಿಕೊಟ್ಟಿದ್ದ ಹಾಡುಗಳನ್ನು ಬರೆದಿಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಸಂಗ್ರಹದಲ್ಲಿರುವ ದ್ರೌಪದಿ-ಪಾಂಡವರ ಸರಸ ಸಂವಾದ ಮತ್ತು ಸಂಕ್ಷೇಪ ರಾಮಾಯಣದ ಭಾಗಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಸಹ ಇತರರಿಗೆ ಪ್ರೇರಕ ಮತ್ತು ಮಾರ್ಗದರ್ಶಿಯಾಗಿದೆ. ಕಳೆದ ವರ್ಷ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಲು ರೂ. ೫೦೦೦/- ನೀಡಿದ್ದಲ್ಲದೆ ಪ್ರತಿ ವರ್ಷ ತಪ್ಪದೆ ಕವಿಮನೆತನದ ಮಂಗಳನಿಧಿಗಾಗಿ ವಂತಿಕೆ ನೀಡುತ್ತಿದ್ದಾರೆ. ಈ ವರ್ಷ ಕವಿಕಿರಣ ಪತ್ರಿಕೆಗಾಗಿ ಬಳಸಿಕೊಳ್ಳಲು ರೂ. ೨೦೦೦/- ನೀಡಿರುತ್ತಾರೆ. ಅವರಿಗೆ ಕವಿಕಿರಣ ಬಳಗದ ಹೃತ್ಪೂರ್ವಕ ನಮನಗಳು. -ಸಂ.
ಲೇಖಕರ ವಿಳಾಸ: ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್ ದ್ವಾರಾ: ಶ್ರೀ ಎಸ್.ಎನ್. ಮೂರ್ತಿ, #೨೩-೨೮, ೫ನೆಯ ಎ ಅಡ್ಡರಸ್ತೆ, ಜೆ.ಪಿ.ನಗರ, ೧ನೆಯ ಹಂತ, ಸಾರಕ್ಕಿ ಮುಖ್ಯ ರಸ್ತೆ, ಬೆಂಗಳೂರು -೫೬೦೦೭೮.
ದೂ. ೦೮೦-೨೬೬೫೭೫೭೪.
--------------------------------------------------------------------------
ದ್ರೌಪದಿ: ಯಾರು ಬಂದವರೆಂದು| ಹೇಳದೆ ನಿಮ್ಮ
ಹೆಸರನ್ನು| ಹೇಗೆ ತೆಗೆಯಲಿ ಕದವನು?||
ಧರ್ಮರಾಯ: ಭರದಿ ದ್ರೌಪತಿಯೆ ಕೇಳು| ಧರೆಗೆ
ಧರ್ಮಜನು ನಾನು| ತ್ವರಿತದಿ ಬಂದೆ ತೆಗೆ ನೀನು||
ದ್ರೌಪದಿ: ದೊರೆಗಳಾದರೆ ರಾಜ್ಯ| ಪರರಿಗೆ ಕೊಟ್ಟು
ಕಾನನದಿ| ಅಡವಿಲ್ಯಾತಕೆ ಚರಿಸೋರಿ?||
ಭೀಮ: ಪಟ್ಟದರಸಿಯ ಕೂಡೆ| ಗಟ್ಟಿ ಮಾತುಗಳೇಕೆ|
ಶ್ರೇಷ್ಠ ಭೀಮನು ನಾ ಬಂದೇನೆ||
ದ್ರೌಪದಿ: ಶ್ರೇಷ್ಠನಾದೊಡೆ ಕೈಯೊಳು| ಸೌಟು
ಹಿಡಿದುಕೊಂಡು| ಅಟ್ಟ ಅಡಿಗೆ ಬಡಿಸ್ಹೋಗು||
ಅರ್ಜುನ: ಪುಂಡು ಕೌರವರಿಗೆ| ಗಂಡನೆನಿಸಿ ಮತ್ತೆ|
ಗಾಂಡೀವಾರ್ಜುನ ನಾ ಬಂದೇನೆ||
ದ್ರೌಪದಿ: ದುಂಡು ಹರಡಿನಿಟ್ಟು| ಗೊಂಡ್ಯದ ಹೆರಳ
ಕಟ್ಟಿ| ಕಂಡ ವಿದ್ಯವ ಕಲಿಸ್ಹೋಗೈ||
ನಕುಲ: ಸಕಲ ವಿದ್ಯೆಗಳಲ್ಲಿ| ನಿಪುಣ ಸಂಪನ್ನನಾಗಿ|
ನಕುಲರಾಯನು ನಾ ಬಂದೇನೆ||
ದ್ರೌಪದಿ: ಸಕಲ ವಿದ್ಯೆಗಳಲ್ಲಿ| ನಿಪುಣನಾದರೆ ತೇಜಿ|
ಕೆಲಸ ರಾಯರಿಗೆ ತಿಳಿಸ್ಹೋಗೈ||
ಸಹದೇವ: ಪಾವಕ ತನುಜೆ| ನಾ ಮಹಾಜ್ಞಾನಿ|
ಸಹದೇವರಾಯನು ನಾ ಬಂದೇನೆ||
ದ್ರೌಪದಿ: ಗೋವು ಕಾಯುತಲಿ| ಗೋಪಾಲಕನಾಗಿ
ಕೊಳಲೂದಿ| ಗೊಲ್ಲರೋಳ್ ಆಡು ಹೋಗು||
ಎಲ್ಲರೂ: ತಿರುಗಿ ತಿರುಗಿ ಬಹಳ| ಬಳಲಿ ಬಂದೇವು
ನಾವು| ಕರುಣವಿಲ್ಲವೆ ಕಮಲಾಕ್ಷಿ|
ನೀಲ ಮಾಣಿಕ್ಯದ ಕದವ| ತೆಗೆದು ಪತಿಗಳಿಗೆಲ್ಲ| ಪ್ರೇಮದಿ ಚರಣಕ್ಕೆರಗಿದಳು||
ಗಂಡರೈವರ ಮುಂದೆ| ಗರುವಿಲಿ ನಿಂದಳು| ದುಂಡು ಮಲ್ಲಿಗೆ ಮುಡಿ ಬಾಗಿ||
ನಳಿನ ಮುಖಿಯು ನಾಚಿ| ನಲಿಯುತ ವಲಿಯುತ| ಬಿಳಿ ಎಲೆ ಅಡಿಕೆ ಮಡಿಸುತ್ತ||
ಭೀಮ ನಗುತ| ಬಿಗಿದಪ್ಪಿ ದ್ರೌಪದಿಯ| ಧರ್ಮರಾಯನ ತೊಡೆಯಲ್ಲಿರಿಸೀದ||
ಅರ್ಜುನ ಅತಿ ಮೋಹದಿಂದ| ಮುಂಗುರುಳ ತಿದ್ದಿ| ವಜ್ರದಾಭರಣ ತೊಡಿಸೀದ||
ಕೃಷ್ಣ ರುಕ್ಮಿಣಿಯ ಸಹಿತ| ಅಷ್ಟಮ ಸ್ತ್ರೀಯರು| ಮುತ್ತಿನಾರುತಿಯ ಬೆಳಗೋರು||
********
ಸಂಕ್ಷೇಪ ರಾಮಾಯಣ
ರಾಗ: ಮೋಹನ
ಶ್ರೀ ರಾಮನಾಮವ ನುಡಿ ಮನವೆ|
ಸುಮ್ಮನಿರಲು ಸುಖವೇ ಶ್ರೀ ರಾಮ ||ಪ||
ದೇವದೇವನಾಗಿ ಮಹಿಗೆ|
ಸೇವಿಸುವರ ಪೊರೆಯುವುದಕೆ|
ಭೂವರಂಗೆ ದಶರಥಂಗೆ|
ಕುವರನೆನಿಸಿ ಮುದವನಿತ್ತ ||೧||
ಮೌನಿವರ‍್ಯಗಾದಿ ಸುತನ|
ಮುಖವ ಪೊರೆದು ದೈತ್ಯ ದಮನ|
ನೆನಿಸಿ ನಡೆಯಲಾಗ ಚರಣ|
ರಜದಿ ಶಿಲೆಯ ಪೆಣ್ಣಗೈದ||೨||
ಜನಕರಾಜಪುರಕೆ ನಡೆದು|
ಘನಮಹೇಶ ಧನುವ ಮುರಿದು|
ಜನಕಸುತೆಯ ಕರವ ಪಿಡಿದು|
ಮುನಿಯ ಪರಶ್ಮರಾಮನ ಗೆಲ ||೩||
ಜನಕನಾಜ್ಞ್ಷೆಯಿಂದ ಸಾರಿ|
ವನಕೆ ಸೀತೆಯೊಡನೆ ಸೇರಿ|
ಮುನಿಯ ಸಂಪದವನ್ನೆ ತೋರಿ|
ಮುನಿಜನಂಗಳ ಪೊರೆದ ಪಾವನ ||೪||
ಗೋತ್ರದೊಳು ಪವಿತ್ರನೆಂದು|
ಸ್ತೋತ್ರಪಾತ್ರನಾಗಿ ಬಂದು|
ಚಿತ್ರಕೂಟದೊಳು ನಿಂದು|
ಭ್ರಾತೃಗಿತ್ತ ಪಾದುಕಾಶ್ರಯ ||೫||
ಪಂಚವಟಿಯ ಸೇರಿ ಸುಖಿಯ|
ವಂಚಿಸಿದಳಾ ಕಾಮಮುಖಿಯ|
ಪೊಂಚಿ ದಂಡಿಸಿ ಶೂರ್ಪನಖಿಯ|
ಕಾಂಚನಾಂಗ ಮೃಗವ ಮೀಂಟಿದ ||೬||
ನೀಲವೇಣಿ ಹರಣದಿಂದ|
ಗೋಳಿಡಲಾಜಟಾಯುವಿಂದ|
ಕೇಳಲಾಗ ಕಥೆಯ ಬಂದ|
ವಾಲಿಪುರಕೆ ವೀರನಾ ರಘು ||೭||
ಮಾಡಿ ವಾಲಿಯ ವಧೆಯ ಬೇಗ|
ಕೂಡಿದಾ ಸುಗ್ರೀವನಾಗ|
ರೂಢಿಸುತ್ತ ಕಪಿಗಳಾಗ|
ನೋಡಿ ವಾಯುಸುತನ ಮೆಚ್ಚಿದ ||೮||
ದಾಸಗಾಂಜನೇಯಗರುಹಿ|
ಭೂಸುತೆಯ ಬಳಿಗೆ ಕಳುಹಿ|
ಆ ಸಮುದ್ರವನೆ ನಿಲುಹಿ|
ವಾಸಿಯಿಂದ ಲಂಕೆಗೈದ ||೯||
ರಾವಣಾದಿಗಳನು ಸಂಹರಿಸಿ|
ಆ ವಿಭೀಷಣನಿಗೆ ಹರಸಿ|
ಪಾವನೇಯ ಸ್ವೀಕರಿಸಿ|
ಭಾವಿಸಿದನು ಭರತಭಕ್ತಿಯ ||೧೦||
ಕಿಂಕರಾಳಿಗಿತ್ತು ವರವ|
ಬಿಂಕದಿಂದ ಸಾರಿಪುರವ|
ಪಂಕಜಾಕ್ಷಿಯೊಡನೆ ಮೆರೆವೊ|
ವೆಂಕಟಾರ್ಯ ಬಿಡದೆ ಪಾಡುವ ||೧೧||
ಪ್ರಸ್ತುತಿ: ಶ್ರೀಮತಿ ಸುಬ್ಬಲಕ್ಷ್ಮಮ್ಮ ಸುಬ್ಬರಾವ್
**************
ಸಂಬಂಧ
ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು ||
ಎಲ್ಲರೂ ಬೇಕೆಂದವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು ||
**********************
ಯಾರೂ ಬೇಡವೆಂದವರು
ಯಾರಿಗೂ ಬೇಡವಾಗುವರು
ಸ್ವಹಿತವೇ ಮೇಲೆಂಬರು
ಇತರರನು ದೂರುವರು
ಮೂಲೆಗುಂಪಾಗುವರು ||
ಎಲ್ಲರೂ ಬೇಕೆಂದವರೂ
ಯಾರಿಗೂ ಬೇಡವಾಗುವರು
ಅವರ ಪರವೆಂದಿವರು
ಇವರ ಪರವೆಂದವರು
ದೂರಿ ದೂಡಿಬಿಡುವರು ||
**********************
ಕವಿ ಮನೆತನದ ಮಂಗಳನಿಧಿಗೆ ವಂತಿಕೆ ನೀಡಿದ ಮಹನೀಯರು
೨೦೦೯ನೆಯ ಸಾಲು
ಶ್ರೀ/ ಶ್ರೀಮತಿಯರಾದ:
೧. ಕವಿ ಮನೆತನದ ಓರ್ವ ಹಿರಿಯರು ರೂ ೬೦೦೦
೨. ಬಿ.ವಿ. ಹರ್ಷ, ಬೆಂಗಳೂರು ೬೦೦೦
೩. ಸುಬ್ಬಲಕ್ಷ್ಮಮ್ಮಸುಬ್ಬರಾವ್,ಬೆಂಗಳೂರು ೫೦೦೦ +೫೦೦
೪. ಹೆಚ್.ಎಸ್. ಪುಟ್ಟರಾಜು, ಜಾವಗಲ್ ೫೦೦೦
೫. ಪದ್ಮಾವತಮ್ಮಸುಬ್ಬರಾವ್,ಬೆಂಗಳೂರು ೧೦೦೦
೬. ಕ.ವೆಂ. ನಾಗರಾಜ್, ಹಾಸನ ೮೨೦
೭. ಕವಿ ವೆಂ. ಸುರೇಶ, ಶಿವಮೊಗ್ಗ ೫೦೦
೮. ಕೆ. ಶ್ರೀಕಂಠ, ಬೆಂಗಳೂರು ೫೦೦
೯. ರಾಮಮೂರ್ತಿ, ಕೆಳದಿ ೫೦೦
೧೦.ಕೆ.ರಾಮರಾವ್,ಹರಳಾಪುರ, ಹರಿಹರ ೩೦೦
ಒಟ್ಟು ೨೬೧೨೦
೨೦೧೦ನೆಯ ಸಾಲು (೩೧-೧೦-೧೦ರವರೆಗೆ)
ಶ್ರೀ/ ಶ್ರೀಮತಿಯರಾದ:
೧. ಕ.ವೆಂ. ನಾಗರಾಜ್, ಹಾಸನ ೫೦೦
೨. ಕವಿ ವೆಂ. ಸುರೇಶ, ಶಿವಮೊಗ್ಗ ೫೦೦
೩. ಗಿರಿಜಾಲಕ್ಷ್ಮೀಪತಿ, ಬೆಂಗಳೂರು ೫೦೦
೪. ಗಿರಿಜಾಂಬಾಕುಮಾರಸ್ವಾಮಿ, ಹಾಸನ ೫೦೦
೫. ಹೆಚ್.ಎಸ್. ದಾಕ್ಷಾಯಿಣಿ, ಹಾಸನ ೫೦೦
೬. ಕವಿ ವೆಂಕಟಸುಬ್ಬರಾಯರ ಮಕ್ಕಳು (ವಿಶೇಷ ಪೂರಕ ಸಂಚಿಕೆಗಾಗಿ) ೩೦೦೦
೭. ತಾಯಿ ಶ್ರೀಮತಿ ಸರಸ್ವತಮ್ಮನವರ ನೆನಪಿನಲ್ಲಿ ಎನ್.ಶ್ರೀನಿವಾಸ,ಬೆಂಗಳೂರು ೫೦೦೦
೮. ಸುಬ್ಬಲಕ್ಷ್ಮಮ್ಮಸುಬ್ಬರಾವ್,ಬೆಂಗಳೂರು ೨೦೦೦
೯. ಡಾ. ಕೆಳದಿ ಕೃಷ್ಣಾಜೋಯಿಸ್, ಬೆಂ. ೧೦೦೦
೧೦. ಕೆಳದಿ ಗುಂಡಾಜೋಯಿಸ್, ಕೆಳದಿ ೫೦೦
೧೧.ಖರ್ಚಾಗದ ಮೊಬಲಗು ಮರುಜಮೆ ೧೯೨೫
೧೨. ಕೆ. ಶ್ರೀಕಾಂತ್, ಬೆಂಗಳೂರು ೫೦೦
ಒಟ್ಟು ೧೬೪೨೫
ವೆಚ್ಚದ ವಿವರ (೦೧-೦೫-೧೦ರಿಂದ ೩೧-೧೦-೧೦ರವರೆಗೆ)
೧.ಐವರು ವಿದ್ಯಾರ್ಥಿಗಳಿಗೆ ಸಹಾಯಧನ ೧೫೦೦೦
೨.ಸಂಚಿಕೆ ಮುದ್ರಣ ವೆಚ್ಚ ೬೭೫೦
೩.ವಿಶೇಷ ಪೂರಕ ಸಂಚಿಕೆ ವೆಚ್ಚ ೩೦೦೦
೪.ಅಂಚೆ ವೆಚ್ಚ, ಕೊರಿಯರ್ ವೆಚ್ಚ ೨೫೫
ಒಟ್ಟು ೨೫೦೦೫
ಜಮಾ ಖರ್ಚು ಗೋಷ್ವಾರೆ
(೧-೦೫-೦೯ರಿಂದ ೩೧-೧೦-೧೦ರವರೆಗೆ)
೦೧-೦೫-೧೦ರಲ್ಲಿದ್ದಂತೆ ಪ್ರಾರಂಭಶಿಲ್ಕು ರೂ.೩೬೫೨೮
ಸಂಗ್ರಹ(೦೧-೦೫-೧೦ರಿಂದ ೩೧-೧೦-೧೦) ೧೩೯೨೫
ಬಡ್ಡಿ ಮೊಬಲಗು ೪೨೨
ಒಟ್ಟು ೫೦೮೭೫
ವೆಚ್ಚ ೨೫೦೦೫
ಆಖೈರು ಶಿಲ್ಕು (೩೧-೧೦-೧೦ರಲ್ಲಿದ್ದಂತೆ) ೨೫೮೭೦
*************
ಮಾಹಿತಿಗಾಗಿ:
ಈ ಹಿಂದಿನ ಸಂಚಿಕೆಯಲ್ಲಿ ತಿಳಿಸಿದ್ದಂತೆ ಐವರು ವಿದ್ಯಾರ್ಥಿಗಳಿಗೆ ರೂ. ೧೫೦೦೦/- ಅನ್ನು ವಿದ್ಯಾ ಸಹಾಯನಿಧಿಯಾಗಿ ನೀಡಲಾಗಿತ್ತು. ಈ ಪೈಕಿ ಶ್ರೀ ಕೆ.ವಿ. ಶ್ರೀಧರರವರ ಮಗ ವಿಜೇತನಿಗೆ ಕೊಟ್ಟಿದ್ದ ರೂ. ೨೦೦೦/-ದ ಚೆಕ್ ಅನ್ನು ಶ್ರೀ ಶ್ರೀಧರರವರು ಬ್ಯಾಂಕಿಗೆ ಕೊಟ್ಟ ಸಂzರ್ಭದಲ್ಲಿ ಬ್ಯಾಂಕಿನವರು ಚೆಕ್ ಕಳೆದದ್ದರಿಂದ ಶ್ರೀ ಶ್ರೀಧರರವರ ಕೋರಿಕೆ ಮೇರೆಗೆ ಆ ಚೆಕ್ಕಿಗೆ ಪಾವತಿ ತಡೆಹಿಡಿಯಲು ಸೂಚಿಸಲಾಗಿತ್ತು. ಈ ಹಂತದಲ್ಲಿ ಅವರು ಮನಸ್ಸು ಬದಲಾಯಿಸಿ ತಮ್ಮ ಮಗನಿಗೆ ಕೊಟ್ಟಿದ್ದ ಹಣವನ್ನು ಕವಿಮನೆತನದ ಮಂಗಳನಿಧಿಗೆ ಮರುಜಮ ಮಾಡಬಹುದೆಂದು ತಿಳಿಸಿದ್ದರ ಮೇರೆಗೆ ಬ್ಯಾಂಕ್ ಕಮಿಷನ್ ರೂ.೭೫/- ಕಳೆದು ಉಳಿದ ರ. ೧೯೨೫/- ಅನ್ನು ಬ್ಯಾಂಕ್ ಖಾತೆಗೆ ಮರುಜಮಾ ಮಾಡಲಾಗಿರುತ್ತದೆ.
^^^^^^^^^^^^^
ಕೆಳದಿ ಕವಿಮನೆತನದ ಸಮಕಾಲೀನರು
ಎಸ್.ಕೆ. ರಾಮರಾವ್ - ನಾಗರತ್ನಮ್ಮ
ಸರಳ ಮತ್ತು ನಿರಾಡಂಬರ ವ್ಯಕ್ತಿ ರಾಮರಾಯರು ಬಹುಮುಖ ಪ್ರತಿಭೆ ದಿ. ಶ್ರೀ ಎಸ್.ಕೆ. ಲಿಂಗಣ್ಣಯ್ಯ - ಲಕ್ಷ್ಮಮ್ಮ ದಂಪತಿಗಳ ಕಿರಿಯ ಪುತ್ರ. ಕೆಳದಿ ಕವಿಮನೆತನವೆಂಬ ಹೆಸರು ಬರಲು ಕಾರಣರಾದ ಕವಿ ಲಿಂಗಣ್ಣನನ್ನು ಕವಿಮನೆತನದ ಮೂಲಪುರುಷನೆಂದು ಪರಿಗಣಿಸಿದರೆ ರಾಮರಾಯರು ಏಳನೆಯ ಪೀಳಿಗೆಗೆ ಸೇರುತ್ತಾರೆ. ಈ ಹಿಂದಿನ ಸಂಚಿಕೆಯಲ್ಲೇ ಇವರ ಪರಿಚಯ ಲೇಖನ ಪ್ರಕಟವಾಗಬೇಕಿತ್ತು. ಆದರೆ ಪ್ರಚಾರ ಬಯಸದೆ ಎಲೆಮರೆಯಕಾಯಿಯಾಗಿಯೇ ಇರಬಯಸಿದ ಅವರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಪ್ರಚಾರದ ದೃಷ್ಟಿಯಿಂದ ಈ ಕೆಲಸ ಮಾಡುತ್ತಿಲ್ಲವೆಂದೂ ಎಲ್ಲಾ ಕವಿಕುಟುಂಬಗಳಿಗೆ ಮತ್ತು ಬಂಧುಗಳಿಗೆ ಪರಿಚಯ ಮಾಡಿಸುವ ಹಾಗೂ ಕವಿಕುಟುಂಬದ ದಾಖಲೆಯಾಗಿ ಉಳಿಸುವ ಉದ್ದೇಶ ಮಾತ್ರ ಇದರ ಹಿಂದೆ ಇರುವುದನ್ನು ಅವರಿಗೆ ಮನಗಾಣಿಸಿದ ನಂತರ ಅವರು ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟಿರುತ್ತಾರೆ. ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಅವರು ನೀಡಿದ ಸಂಕ್ಷಿಪ್ತ ಮಾಹಿತಿ ಆಧರಿಸಿ ಈ ಪರಿಚಯ ಲೇಖನ ಪ್ರಸ್ತುತ ಪಡಿಸಿದೆ. ೭೮ ವರ್ಷಗಳ ಈ ಹಿರಿಯರು ಸಂದರ್ಶನದ ಸಂದರ್ಭದಲ್ಲಿ ಅನಾರೋಗ್ಯಪೀಡಿತರಾಗಿದ್ದು ಆಗಿನ್ನೂ ಚೇತರಿಸಿಕೊಳ್ಳುತ್ತಿದ್ದರು. ಅನಾರೋಗ್ಯವನ್ನು ತೋರಿಸಿಕೊಳ್ಳದೆ ಸಹಜ ರೀತಿಯಲ್ಲಿ ವರ್ತಿಸಿದ ಅವರು ಅಭಿನಂದನೀಯರು. ಅವರ ಮನೋಬಲ ಹಾಗೂ ಧೃಢನಿಶ್ಚಯಗಳು ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಅಂಶಗಳಾಗಿದ್ದು ಅವರು ಸದ್ಯದಲ್ಲೇ ಪೂರ್ಣವಾಗಿ ಚೇತರಿಸಿಕೊಂಡು ಮೊದಲಿನಂತೆ ಆಗುವುದರಲ್ಲಿ ಸಂಶಯವಿಲ್ಲ. ಸಮಾಜಮುಖಿ ಹಾಗೂ ಆಧ್ಯಾತ್ಮಿಕ ಒಲವು ಹೊಂದಿರುವ ಅವರು ಶತಾಯುಷಿಯಾಗಲಿ, ಅವರಿಂದ ಎಲ್ಲರಿಗೂ ಪ್ರೇರಣೆ ಸಿಗಲಿ ಎಂದು ಕವಿಕಿರಣ ಬಳಗ ಬಯಸುತ್ತದೆ.
ಕವಿಮನೆತನ ಕಂಡ ಅದ್ಭುತ ಪ್ರತಿಭೆಗಳಲ್ಲಿ ದಿ. ಎಸ್.ಕೆ. ಲಿಂಗಣ್ಣಯ್ಯನವರು ಒಬ್ಬರು. ಬಹುಮುಖ ಪ್ರತಿಭೆಯಾಗಿದ್ದ ಅವರು ಹೆಸರು ಮಾಡದಿದ್ದ ಕ್ಷೇತ್ರ ಇಲ್ಲವೆಂದೇ ಹೇಳಬಹುದು. ದಕ್ಷ ಆಡಳಿತಗಾರ, ಚಿತ್ರಕಾರ, ಸಾಹಿತಿ, ಪ್ರಕಾಶಕ, ಸಂಗೀತಗಾರ, ಉದ್ಯಮಿ ಇತ್ಯಾದಿ ಏನೆಲ್ಲವೂ ಆಗಿದ್ದ ಅವರು ವೈದ್ಯಕೀಯ, ಜ್ಯೋತಿಷ್ಯ ಮುಂತಾದ ಸಂಗತಿಗಳಲ್ಲೂ ಛಾಪು ಗುರುತಿಸಿಕೊಂಡಿದ್ದವರು. ಲಿಂಗಣ್ಣಯ್ಯನವರು ಮೊದಲ ಪತ್ನಿ ಜಾನಕಮ್ಮನವರ ದೇಹಾವಸಾನದ ನಂತರದಲ್ಲಿ ಲಕ್ಷ್ಮಮ್ಮನವರನ್ನು ವಿವಾಹವಾದರು. ಅವರಿಗೆ ಎಂಟು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳು. ಮಕ್ಕಳೆಲ್ಲರೂ ಒಳ್ಳೆಯ ಸ್ಥಾನಮಾನಗಳನ್ನು ಹೊಂದಿ ಪ್ರತಿಷ್ಠಿತರಾಗಿರುವುದು ವಿಶೇಷವೇ ಸರಿ. ರಾಮರಾಯರು ಕಿರಿಯ ಪುತ್ರರಾಗಿ ಜನಿಸಿ ಎಲ್ಲರಿಗೆ ಅಚ್ಚುಮೆಚ್ಚು ಮತ್ತು ಪ್ರೀತಿಪಾತ್ರರಾಗಿದ್ದವರು.
ಬೆಂಗಳೂರಿನ ವಿಶ್ವೇಶ್ವರಪುರದ ಮನೆಯಲ್ಲಿ ೧೯-೦೨-೧೯೩೩ರಲ್ಲಿ ಜನಿಸಿದ ಅವರು ೬ ವರ್ಷಗಳಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ತಂದೆ-ತಾಯಿಯರ ಮುದ್ದಿನ ಮಗನಾಗಿದ್ದ ಅವರಿಗೆ ತಂದೆಯ ಸಾಧನೆಗಳ ಬಗ್ಗೆ ವಿಶೇಷ ಹೆಮ್ಮೆ ಮತ್ತು ಗೌರವ. ತಂದೆಯ ಜೀವನಶೈಲಿ ತಮ್ಮ ಮೇಲೆ ಗಾಢ ಪ್ರಭಾವ ಬೀರಿದೆಯೆಂದು ನೆನೆಸಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ಮಾಡಿದ ಅವರು ಸುಪ್ರಸಿದ್ಧ ಸೆಂಟ್ರಲ್ ಕಾಲೇಜಿನಲ್ಲಿ ಓದು ಮುಂದುವರೆಸಿ ೧೯೫೫ರಲ್ಲಿ ಬಿ.ಎಸ.ಸಿ. ಪದವೀಧರರಾದರು. ಎಲ್ಲಾ ಅಕ್ಕಂದಿರೂ ತಮ್ಮನ್ನು ಮಾತೃಸಮಾನ ಅಕ್ಕರೆ ಮತ್ತು ಪ್ರೀತಿ ತೋರಿ ಬೆಳೆಸಿದ ಬಗ್ಗೆ ಹೆಮ್ಮೆ ಮತ್ತು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಾರೆ. ರಾಮರಾಯರ ಅಕ್ಕ ಮೂಕಮ್ಮನವರ ಮಗ ಕೆಳದಿಯ ಶ್ರೀ ಗುಂಡಾಜೋಯಿಸರು ಅವರ ಸಹಪಾಠಿಯಾಗಿದ್ದು ಅವರು ಆ ಕಾಲದ ನೆನಪುಗಳನ್ನು ನೆನಸಿಕೊಂಡು ಬರೆದ ಲೇಖನ ರಾಮರಾಯರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ.
ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಸೆಕ್ಷನ್ ಅಧಿಕಾರಿಯಾಗಿ ೧೯೯೧ರ ಫೆಬ್ರವರಿಯಲ್ಲಿ ನಿವೃತ್ತರಾಗುವ ಮುನ್ನ ಹುಬ್ಬಳ್ಳಿ, ತಿರುಮಲೈ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ ಅವರು ಉತ್ತಮ ಮತ್ತು ದಕ್ಷ ಕೆಲಸಗಾರರಾಗಿ ಹೆಸರು ಪಡೆದವರು. ಯಾವುದೇ ಕಪ್ಪು ಚುಕ್ಕೆಯಿಲ್ಲದ ಸೇವಾಕಾಲದಲ್ಲಿ ಅವರು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದರು.
ರಾಮರಾಯರ ಬಾಳಸಂಗಾತಿಯಾಗಿ ೨೯-೦೫-೧೯೬೦ರಲ್ಲಿ ಬಂದ ಮಂಡ್ಯದ ಶ್ರೀ ಸಿ. ಹರಿರಾವ್ ಮತ್ತು ಶ್ರೀಮತಿ ರಾಜಮ್ಮನವರ ಮಗಳು ನಾಗರತ್ನಮ್ಮನವರು ಸಹ ಸರಳತೆ, ಸಜ್ಜನಿಕೆಗಳಿಂದ ಗುರುತಿಸಲ್ಪಟ್ಟವರು. ಪತಿಯ ಆಧ್ಯಾತ್ಮಿಕ ವಿಚಾರಗಳಲ್ಲಿ ಸಹಮತ ಹೊಂದಿದವರು. ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿದವರು. ಹಿರಿಯ ಮಗಳು ವಾಸಂತಿ (ಜನನ: ೧೫-೦೪-೧೯೬೨) ಬಿ.ಎಸ್.ಸಿ. ಪದವೀಧರೆಯಾಗಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಪತಿ ಶ್ರೀ ಸತೀಶರೊಂದಿಗೆ ಅಲ್ಲಿಯೇ ಇರುವ ಅವರಿಗೆ ಈಗ ೧೩ ವರ್ಷದ ಮುದ್ದಿನ ಮಗ ಅಶುತೋಷ್ (ಮಂಜುನಾಥ್) ಇದ್ದಾನೆ. ಎರಡನೆಯ ಮಗಳು ವೈಜಯಂತಿ (ಜನನ: ೧೮-೦೮-೧೯೬೪) ಬಿ.ಕಾಮ್.,ಎಂ.ಟೆಕ್. ವಿದ್ಯಾಭ್ಯಾಸ ಮಾಡಿದ್ದು ಇವರ ಪತಿ ಶ್ರೀ ಸುದರ್ಶನ್‌ರವರು ಬೆಂಗಳೂರಿನ ಟಿಸಿಟಿ ಬ್ಯಾಬ್‌ಕಾಕ್ ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿಯ (ಹೆಚ್.ಆರ್.ಡಿ.) ಪ್ರಧಾನ ವ್ಯವಸ್ಥಾಪಕರಾಗಿದ್ದಾರೆ. ಕಿರಿಯ ಮಗ ಅಶ್ವತ್ಥಪ್ರಸಾದ್ (ಜನನ: ೦೬-೦೨-೧೯೭೦) ಬಿ.ಇ. ಪದವೀಧರರಾಗಿದ್ದು ಪ್ರಸ್ತುತ ವಿಪ್ರೋ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ ಕವಿತಾ ಸಹ ಬಿ.ಇ. ಪದವೀಧರೆಯಾಗಿದ್ದು ಟಿ.ಸಿ.ಎಸ್. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುದ್ದಾದ ಮತ್ತು ಚೂಟಿಯಾಗಿರುವ ಈಗ ಐದು ವರ್ಷಗಳಾಗಿರುವ ಅವಳಿ-ಜವಳಿ ಮಕ್ಕಳು ಅದಿತಿ ಮತ್ತು ಅರುಂಧತಿ (ಸ್ಮೃತಿ) (ಜನನ: ೦೨-೧೨-೨೦೦೫) ಮನೆ- ಮನಗಳನ್ನು ಬೆಳಗುತ್ತಿದ್ದಾರೆ.
ಚಿಕ್ಕಂದಿನಲ್ಲಿ ಕೆಳದಿಗೆ ಹೋಗಿದ್ದಾಗ (ಬಹುಷಃ ೧೯೪೮ರಲ್ಲಿ) ಶಿವಮೊಗ್ಗಕ್ಕೂ ಹೋಗಿ ಕವಿ ಸುಬ್ರಹ್ಮಣ್ಯಯ್ಯನವರ ಮನೆಯಲ್ಲಿ ಎರಡು ದಿನವಿದ್ದು ಬಂದುದನ್ನು ಜ್ಞಾಪಿಸಿಕೊಳ್ಳುತ್ತಾರೆ.
ಹೊಳೆನರಸಿಪುರದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀ ಮಹಾಸ್ವಾಮಿಗಳವರಲ್ಲಿ (೦೫-೦೧-೧೯೮೦ - ೦೫-೦೮-೧೯೭೫) ೧೬ ವರ್ಷಗಳ ಕಾಲ ಶಿಷ್ಯವೃತ್ತಿ ಮಾಡಿದ್ದ ಸುಪ್ರಸಿದ್ಧ ವೇ|| ವಿದ್ವಾನ್ ಶ್ರೀ ಕೆ.ಜಿ. ಸುಬ್ರಾಯಶರ್ಮರ ಪ್ರವಚನಗಳಿಂದ ಪ್ರೇರಿತರಾದ ರಾಮರಾಯರು ಆಧ್ಯಾತ್ಮಿಕ ವಿಚಾರಗಳಲ್ಲಿ ಸೆಳೆಯಲ್ಪಟ್ಟವರು. ಶ್ರೀ ಸುಬ್ರಾಯ ಶರ್ಮರವರು ತಮ್ಮ ಬಾಳಿನ ದಿಕ್ಕನ್ನು
ಮುದ್ದಿನ ಮೊಮ್ಮಕ್ಕಳು ಅರುಂಧತಿ (ಸ್ಮೃತಿ) ಮತ್ತು ಅದಿತಿ
ನಿರ್ದೇಶಿಸಿದವರು ಎಂದು ಅವರನ್ನು ಗುರು ಭಾವನೆಯಿಂದ ನೆನೆಯುತ್ತಾರೆ. ರಾಮರಾಯರು ಖಂಡಿತವಾದಿಗಳಾಗಿದ್ದು ತಮಗೆ ಅನ್ನಿಸಿದ್ದನ್ನು ಹೇಳಿಬಿಡುತ್ತಿದ್ದು ಶೀಘ್ರಕೋಪಿಗಳಾಗಿದ್ದರೆಂದೂ ಆದರೆ ಮೃದುಹೃದಯದವರೆಂದು ಅವರನ್ನು ಬಲ್ಲವರು ಹೇಳುತ್ತಾರೆ. ಆಧ್ಯಾತ್ಮಿಕ ವಿಚಾರಗಳ ಸೆಳೆತಕ್ಕೆ ಒಳಗಾದ ನಂತರ ಶಾಂತ, ಸಮಚಿತ್ತ ಮನೋಭಾವ ರೂಢಿಸಿಕೊಂಡವರು. ಒಳ್ಳೆಯ ವಿಚಾರಗಳಿಗೆ ಸ್ಪಂದಿಸುವ ಮನೋಭಾವದ ಅವರು ಅನೇಕ ಒಳ್ಳೆಯ ಸಂಗತಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ, ಸಹಾಯ ಮಾಡುತ್ತಿದ್ದಾರೆ. ವಿಶೇಷವೆಂದರೆ ಅದಕ್ಕೆ ಯಾವ ಪ್ರಚಾರವನ್ನೂ ಅವರು ಬಯಸದಿರುವುದು. ರಾಮಕೃಷ್ಠಾಶ್ರಮದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವಲ್ಲಿ ಆನಂದ ಮತ್ತು ಸಾರ್ಥಕತೆ ಕಾಣುತ್ತಿದ್ದಾರೆ. ರಾಮರಾಯರ ಪತ್ನಿ ಮತ್ತು ಮಕ್ಕಳು ಸಹ ಇವರಿಂದ ಪ್ರೇರಿತರಾಗಿ ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿರುವುದು ವಿಶೇಷವಾಗಿದೆ. ರಾಮರಾಯರು - ನಾಗರತ್ನಮ್ಮ ದಂಪತಿಗಳಿಗೂ ಅವರ ಕುಟುಂಬದ ಎಲ್ಲರಿಗೂ ದೇವರು ಸನ್ಮಂಗಳವನ್ನುಂಟುಮಾಡಲಿ ಎಂಬುದು ಕವಿಕಿರಣ ಬಳಗದ ಹಾರೈಕೆ.
-ಸಂದರ್ಶನ ಮತ್ತು ಪ್ರಸ್ತುತಿ:
ಕ.ವೆಂ. ನಾಗರಾಜ್.
******
ಮೂಕಮ್ಮನ ಪ್ರೀತಿಯ ತಮ್ಮ ರಾಮು
-ಕೆಳದಿ ಗುಂಡಾಜೋಯಿಸ್
ನಮ್ಮ ತಂದೆಯವರು ಕೇವಲ ೫೨ ವರ್ಷಗಳಾಗಿದ್ದಾಗಲೇ ಸ್ವರ್ಗಸ್ಥರಾದುದು ನಮಗೆಲ್ಲಾ ಆಘಾತವುಂಟುಮಾಡಿತ್ತು. ನನಗೆ ಆಗ ಕೇವಲ ೧೬ ವರ್ಷ ವಯಸ್ಸು. ಈ ಸಂದರ್ಭದಲ್ಲಿ ನಮ್ಮ ತಾಯಿಯ ಮಲತಾಯಿ ಲಕ್ಷ್ಮಮ್ಮ, ಕೃಷ್ಣಮಾವ, ಸುಬ್ಬಿ ಚಿಕ್ಕಮ್ಮ ಕೆಳದಿಗೆ ಬಂದು ನಮ್ಮನ್ನು ಸಮಾಧಾನ ಪಡಿಸಿದ್ದರು. ಈ ಸಂದರ್ಭದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾದ ನನ್ನನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಾವ ರಾಮುವಿನ ಸಹಪಾಠಿಯಾಗಿರಲು ನಮ್ಮ ತಾಯಿ ಬೆಂಗಳೂರಿಗೆ ಕಳಿಸಿಕೊಟ್ಟರು. ನಮ್ಮ ಚಿಕ್ಕಪ್ಪ ಬ.ನ. ಸುಂದರರಾಯರ ಪ್ರಯತ್ನದಿಂದ ಸುಪ್ರಸಿದ್ಧ ಕೋಟೆ ಹೈಸ್ಕೂಲಿನಲ್ಲಿ ಪ್ರವೇಶ ಸಿಕ್ಕಿತು. ಇಲ್ಲಿಂದಲೇ ರಾಮು ಮಾವನೊಂದಿಗೆ ವಿದ್ಯಾಭ್ಯಾಸದ ಸಹಬಾಳ್ವೆ ಆರಂಭವಾಯಿತು.
- - - - - - - - - - - - - - - - - - - - - - - - - - - - - - - -
ಇತಿಹಾಸ ಸಂಶೋಧನಾ ಕಾರ್ಯದಲ್ಲಿ ಹೆಸರು ಮಾಡಿರುವ ಲೇಖಕ ಶ್ರೀ ಗುಂಡಾಜೋಯಿಸರು ಹಾಗೂ ಅವರ ಅಕ್ಕನ ಮಗ ಶ್ರೀ ಎಸ್.ಕೆ. ರಾಮರಾವ್ ಇಬ್ಬರೂ ಒಟ್ಟಿಗೇ ವಿದ್ಯಾಭ್ಯಾಸ ಮಾಡಿದ್ದು ಆ ಕುರಿತು ನೆನಪುಗಳನ್ನು ಲೇಖಕರು ಇಲ್ಲಿ ಮೆಲುಕು ಹಾಕಿದ್ದಾರೆ. ಕೆಳದಿ ಸಂಶೋಧನಾ ಕೇಂದ್ರದ ಬೆಳವಣಿಗೆಗೆ ಶ್ರೀ ರಾಮರಾಯರ ಕೊಡುಗೆ ಅಪಾರವಾಗಿದೆ. ಕವಿ ಸುರೇಶ್ ರಚಿಸಿರುವ Karmayogi kalavallabha S.K.Lingannaiayya ಎಂಬ ಪುಸ್ತಕದಲ್ಲಿ ಶ್ರೀ ರಾಮರಾಯರ ತಂದೆ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರ ಸಾಧನೆಗಳನ್ನು ಪರಿಚಯಿಸಲಾಗಿದ್ದು ಓದಬೇಕಾದ ಕೃತಿಯಾಗಿದೆ . -ಸಂ.
ಲೇಖಕರ ವಿಳಾಸ: ಕೆಳದಿ ಗುಂಡಾ ಜೋಯಿಸ್, ಕೆಳದಿ ಅಂಚೆ, ಸಾಗರ ತಾಲ್ಲೂಕು. ದೂ: ೦೮೧೮೩ ೨೬೦೧೪೦.
ಶ್ರೀ ಎಸ್.ಕೆ. ರಾಮರಾಯರ ವಿಳಾಸ: ನಂ. ೧೯, ೨ನೆಯ ಮುಖ್ಯ ರಸ್ತೆ, ಕೆ.ಇ.ಬಿ. ಲೇ ಔಟ್, ವಿವೇಕಾನಂದನಗರ, ಕತ್ರಿಗುಪ್ಪೆ, ಬನಶಂಕರಿ ೩ನೆಯ ಹಂತ, ಬೆಂಗಳೂರು - ೫೬೦೦೬೫
ದೂ: ೦೮೦-೨೬೬೯೭೨೩೬, ಮೊ: ೯೯೮೦೧ ೪೬೧೬೨.
- - - - - - - - - - - - - - - - - - - - - - - - - - - - - - - - -
ರಾಮುವನ್ನು ಕುರಿತು ನಮ್ಮ ತಂದೆಯವರು ಅವನು ತಂದೆಯವರ ಪ್ರೀತಿಯ ಮಗನಾಗಿದ್ದನೆಂದು ಉದ್ಗರಿಸಿದ್ದ ನೆನಪು. ಚಿಕ್ಕಂದಿನಲ್ಲಿಯೇ ತಂದೆಯ ಅಗಲುವಿಕೆಯಿಂದ ಅವನಿಗೆ ಆಘಾತವಾಗಿರಬೇಕು. ಅವನು ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ತನ್ನ ತಂದೆಯ ಸಾಧನೆಗಳ ಬಗ್ಗೆ ರಾಮುಗೆ ಅಪಾರವಾದ ಗೌರವ ಮತ್ತು ಪೂಜ್ಯ ಭಾವನೆಯಿತ್ತು.
ರಾಮುವಿನ ಹಲವಾರು ಸದ್ಗುಣಗಳನ್ನು ನಾನು ಅವಲೋಕಿಸಿದ್ದೇನೆ. ಅವನು ನಿರಾಡಂಬರಿಯಾಗಿದ್ದು ಕೀರ್ತಿಕಾಮನೆಗಳಿಗೆ ಬಲಿ ಬಿದ್ದವನಲ್ಲ. ನಾನು ಎಂಬ ಅಹಂಭಾವವಂತೂ ನಾನು ಅವನಲ್ಲಿ ಕಂಡಿಲ್ಲ.
ರಾಮುವಿಗೆ ಬಹು ಕಾಲದಿಂದಲೂ ಮಾನಸಿಕ ಕೊರತೆಯೊಂದು ಬಾಧಿಸುತ್ತಿದ್ದುದನ್ನು ಗಮನಿಸಿದ್ದೆ. ತನ್ನ ತಂದೆಯವರ ಅಪೂರ್ವ ಸಾಧನೆಗಳು ಪ್ರಚಾರಕ್ಕೆ ಬರಲಿಲ್ಲವಲ್ಲಾ ಎಂಬ ನೋವು ಒಂದೆಡೆಯಾದರೆ ಪಳೆಯುಳಿಕೆಗಳ ಮುಂದಿನ ರಕ್ಷಣೆಯೂ ಮನಸ್ಸಿನಲ್ಲಿ ಕೊರೆಯುತ್ತಿತ್ತೇನೋ! ಅದೇನು ಪ್ರೇರಣೆಯಾಯಿತೋ ಏ.ಆರ್.ಕೃ., ನಿಟ್ಟೂರು, ಡಿವಿಜಿರವರು ಅವಲೋಕಿಸಿದ್ದ ಓಲೆಗರಿ ಕಟ್ಟುಗಳನ್ನು ತನ್ನ ಅಕ್ಕನ ಮನೆಯಲ್ಲಿರಿಸಲು ಹಾಗೂ ಇದರ ಮುಂದಿನ ಸದುಪಯೋಗಕ್ಕಾಗಿ ನನ್ನೊಂದಿಗೆ ಕಳುಹಿಸಿಕೊಟ್ಟನು. ಇದರಿಂದ ಚಿತ್ರಕಲೆಯಿಂದಾರಂಭಿಸಿ ಸಾಹಿತ್ಯಲೋಕದಲ್ಲಿ ಎಸ್.ಕೆ. ಲಿಂಗಣ್ಣಯ್ಯನವರ ಕೀರ್ತಿ ದೇಶ ವಿದೇಶಗಳಲ್ಲಿ ಪಸರಿಸಿದ್ದು ಮುಂದಿನ ಪೀಳಿಗೆಗೆ ರಕ್ಷಿಸಲು ವಿದ್ವಾಂಸರ ಕೃತಜ್ಞತೆಗೆ ಪಾತ್ರವಾದಂತಾಗಿದೆ. ರಾಮು ಇವುಗಳನ್ನು ತನ್ನ ಅಕ್ಕನ ಮೇಲಿನ ಅಭಿಮಾನದಿಂದ ನಮಗೆ ಒದಗಿಸಿದ್ದು ನಮ್ಮ ಭಾಗ್ಯವೆಂದೇ ಹೇಳಬೇಕು. ಈ ಕಟ್ಟಿನಲ್ಲಿದ್ದ ಕೆಳದಿ ಲಿಂಗಣ್ಣ ಮತ್ತು ವೆಂಕಣ್ಣ ಕವಿಯ ಅಪಾರ ಜ್ಞಾನ ಸಂಪತ್ತುಗಳು ಕೆಳದಿ ಸಂಶೋಧನಾಲಯದಿಂದ ಪ್ರಕಟವಾಗಿರುವುದನ್ನು ಕಾಣಬಹುದು. ಇದೇ ರೀತಿಯಲ್ಲಿ ನಮ್ಮ ತಾತ ಹಾಗೂ ರಾಮೂನ ತಂದೆಯ ಕಲಾ ಸಾಹಿತ್ಯ ಸಾಧನೆಗಳೂ ಪ್ರಕಟವಾಗಿರುವುದನ್ನು ಕಂಡು ರಾಮೂನ ಹೃದಯ ಎಷ್ಟು ಸಂತೋಷಪಟ್ಟಿದೆಯೋ ಊಹಿಸುವುದು ಅಸಾಧ್ಯ. ಕೆಳದಿ ಸಂಶೋಧನಾಲಯ ರಾಮುವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಒತ್ತಿ ಹೇಳಬೇಕಾಗಿಲ್ಲವಷ್ಟೆ? ತನ್ನ ತಂದೆಯವರು ರಚಿಸಿದ ವಾಯುಸ್ತುತಿ, ಮಾರುತಿ ಕಲಾಕೃತಿಗಳು ಎಲ್ಲರಿಗೂ ತಲುಪುವಂತಾಗಲೆಂದು ತಗಲಿದ ವೆಚ್ಚವನ್ನೂ ಭರಿಸಿದ್ದು ಅವರ ಆತ್ಮಕ್ಕೆ ಎಷ್ಟು ತೃಪ್ತಿ ತಂದಿತೋ ಬಲ್ಲವರಾರು? ಪಿತೃ ಋಣವನ್ನು ರಾಮು ಈ ರೀತಿಯಲ್ಲಿ ತೀರಿಸಿದ್ದಾನೆ. ರಾಮು ನನಗೆ ಇಂತಹ ಪಳೆಯುಳಿಕೆಗಳನ್ನು ನೀಡದೇ ಇದ್ದಿದ್ದರೆ ತಾತನವರ ಹೆಸರು ಹಾಗೂ ಕೆಳದಿ ಸಂಶೋಧನಾ ಕೇಂದ್ರ ಪ್ರವೃದ್ಧಮಾನಕ್ಕೇರುವುದು ಅಸಾಧ್ಯವಿತ್ತೋ ಏನೋ! ಇದು ಕೆಳದಿ ಶ್ರೀ ರಾಮೇಶ್ವರನ ಮಹಿಮೆಯೇ ಸರಿ. ಈ ಕಾರಣದಿಂದ ಕೆಳದಿ ಲಿಂಗಣ್ಣಕವಿ ಪೀಳಿಗೆಗೆ ಸೇರಿದವರೆಲ್ಲರೂ ರಾಮುಗೆ ಕೃತಜ್ಞತೆ ಸಲ್ಲಿಸುವುದು ಕರ್ತವ್ಯವೆಂದರೆ ಉತ್ಪ್ರೇಕ್ಷೆಯಾಗಲಾರದು.
ನಾನೂ ರಾಮೂ ಓದುತ್ತಿದ್ದಾಗ ಇಂಗ್ಲಿಷ್ ಪಠ್ಯಭಾಗದಲ್ಲಿರುವ ಪದವೊಂದನ್ನು ಒಪರ್ಚುನಿಟಿ ಎಂಬುದಾಗಿ ನಾನು ಉದ್ಗರಿಸಿದ್ದುದನ್ನು ರಾಮು ಆಪರ್ಚುನಿಟಿ ಎಂದು ತಿದ್ದಿಕೊಳ್ಳಲು ಸೂಚಿಸಿದ್ದನು. ಆ ಸಂದರ್ಭದಲ್ಲಿ ರಾಮುವಿನ ಮೇಲೆ ನನಗೆ ಮತ್ಸರ ತಲೆ ಹಾಕಿತ್ತು. ಒಪರ್ಚುನಿಟಿಯೇ ಸರಿಯೆಂದು ನಮ್ಮ ಇನ್ನೊಬ್ಬ ಮಾವನೊಂದಿಗೆ ಹೇಳಿದಾಗ ಅವರು ಇದನ್ನು ಯಾರು ಹೇಳಿಕೊಟ್ಟರು ಎಂದು ಕೇಳಬೇಕೇ? ಮತ್ಸರದಿಂದ ರಾಮು ಹೇಳಿಕೊಟ್ಟನೆಂದು ನಾನು ಸುಳ್ಳು ಹೇಳಿದೆ. ಇದರಿಂದ ಆಗಿದ್ದ ಪರಿಣಾಮ ಈಗಲೂ ನನ್ನ ಮನಸ್ಸು ಕೊರಗುತ್ತಿದೆ. ಮತ್ಸರವು ಬಾಂಧವ್ಯದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದು ಉದಾಹರಣೆ.
ರಾಮು ಹುಬ್ಬಳ್ಳಿಯಲ್ಲಿ ಕೆಲಸದಲ್ಲಿದ್ದಾಗ ಅವನೊಂದಿಗೆ ಅನೇಕ ಕಾಲವಿದ್ದೆನು. ಅವನ ಪುಸ್ತಕ ಭಂಡಾರದಲ್ಲಿ ಸುಧಾ ಆದಿಯಾಗಿ ಕಸ್ತೂರಿ ಮುಂತಾದ ಸಂಚಿಕೆಗಳನ್ನು ಒಟ್ಟಾಗಿ ಜೋಡಿಸಿ ಪುಸ್ತಕ ಬೈಂಡ್ ಮಾಡಿಸಿದ್ದುದನ್ನು ಕಂಡು ನನಗೆ ಅಮಿತಾನಂದವಾಯಿತು. ನನ್ನ ಸಂಶೋಧನಾ ಕಾರ್ಯಗಳಿಗೆ ಅಗತ್ಯವಾದ ಆಕರಗಳ ಸಂಗ್ರಹಗಳನ್ನು ರಾಮುನ ಜ್ಞಾನಭಂಡಾರದಿಂದಲೇ ಪಡೆದುದನ್ನು ಕೃತಜ್ಞತೆಯಿಂದಲೇ ಸ್ಮರಿಸುತ್ತೇನೆ.
ಉಪ್ಪು- ಹುಳಿ-ಖಾರಗಳನ್ನು ತಿನ್ನುವ ಪ್ರತಿ ಚೇತನದಲ್ಲಿಯೂ ಉತ್ತಮ ನಡವಳಿಕಯೊಂದಿಗೆ ಕನಿಷ್ಠ ನಡವಳಿಕೆಗಳೂ ಇರುವುದು ಸಹಜ. ಈ ಹಿನ್ನೆಲೆಯಲ್ಲಿ ರಾಮು ನನ್ನ ಮೇಲೆ ಕೋಪಿಸಿಕೊಂಡಿದ್ದನ್ನು ಒಂದೆರಡು ಬಾರಿ ಹುಬ್ಬಳ್ಳಿಯಲ್ಲಿದ್ದಾಗ ಕಂಡುಕೊಂಡಿದ್ದೇನೆ. ಈ ಇಳೀ ವಯಸ್ಸಿನಲ್ಲಿ ರಾಮು ರಾಮಕೃಷ್ಣಾಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಇವುಗಳನ್ನೆಲ್ಲಾ ವರ್ಜಿಸಿರುವುದನ್ನು ಕಂಡಿದ್ದೇನೆ. ಸರಳ ಜೀವಿ ಹಾಗೂ ತುಂಬಾ ಕಷ್ಟ ಜೀವಿಯೂ ಆಗಿದ್ದ ರಾಮು ಈಗ ನಿವೃತ್ತಿ ಜೀವನವನ್ನು ಆಧ್ಯಾತ್ಮಿಕವಾಗಿ ಕಳೆಯುತ್ತಿದ್ದಾನೆ. ಅವನು ಕೆಳದಿಗೆ ಬಂದು ತನ್ನ ಅಕ್ಕನನ್ನು ಆಗಾಗ್ಯೆ ಕಂಡು ಮಾತನ್ನಾಡಿಸಿಕೊಂಡು ಹೋಗುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ತನಗೆ ಮಾನಸಿಕ ತೊಂದರೆಯಾದಾಗಲೆಲ್ಲಾ ಕೆಳದಿಗೆ ಬಂದು ಅಕ್ಕನೊಂದಿಗೆ ಶಾಂತಿ ಸಮಾಧಾನವನ್ನು ಪಡೆದು ಹೋಗುತ್ತಿದ್ದನು.
ಬೆಂಗಳೂರಿನಲ್ಲಿ ಕಳೆದ ನನ್ನ ವಿದ್ಯಾಭ್ಯಾಸದ ಕಾಲದಲ್ಲಿ ಪ್ರೀತಿಯ ಮಾವ ರಾಮುನೊಂದಿಗೆ ಸಹಪಾಠಿ - ಅಳಿಯ - ವಿದ್ಯಾರ್ಥಿಯಾಗಿ ಕಳೆದ ಕಾಲ ಅವಿಸ್ಮರಣೀಯವಾದುದು. ಆಗ ರೇಷನ್ ಕಾಲ; ನನಗೆ ಹಾಗೂ ರಾಮೂಗೆ ಆಗಾಗ್ಯೆ ತುಂಬ ಹಸಿವು ಕಾಡುತ್ತಿತ್ತು. ನಾವಿಬ್ಬರೂ ಹಸಿವು ತಾಳಲಾರದೆ ನಮ್ಮ ಚಿಕ್ಕಮ್ಮ ಸರಸ್ವತೀ ಗುಂಡೂರಾವ್ ಮನೆಗೆ ಹೋಗುತ್ತಿದ್ದೆವು. ಚಿಕ್ಕಮ್ಮನು ನಮ್ಮ ಸ್ಥಿತಿಯನ್ನು ಕಂಡು ಮರುಗುತ್ತಾ ನಮಗಾಗಿ ಬಡಿಸಿ ಹಸಿವಾದಾಗ ಸಂಕೋಚ ಪಡದೇ ಇಲ್ಲಿಗೇ ಬರತಕ್ಕದ್ದು ಎಂದು ನಮಗೆ ಹೇಳಿದ್ದು ಈಗಲೂ ನನ್ನ ಕಿವಿಯಲ್ಲಿ ಧ್ವನಿಸುತ್ತಿದೆ. ವಿಶ್ವೇಶ್ವರಪುರದ ರಾಮು ಮನೆಯಾದ ರೋಷನ್ ಬಾಗ್ ಎದುರಿನಲ್ಲಿ ಚಿಕ್ಕಪ್ಪಯ್ಯ ಎಂಬುವವನ ನೆಲಗಡಲೆ ಅಂಗಡಿಯಿತ್ತು. ಹಸಿವಾದಾಗ ಏನಾದರೂ ತಿನ್ನಿರಿ ಎಂದು ಸರಸ್ವತಿ ಚಿಕ್ಕಮ್ಮ ನಮಗೆ ನೀಡುತ್ತಿದ್ದ ಪುಡಿಗಾಸನ್ನು ನೆಲಗಡಲೆಯನ್ನು ಯಥೇಚ್ಛವಾಗಿ ಅವನಲ್ಲಿಯೇ ಕೊಂಡು ಹಸಿವನ್ನು ನೀಗಿಸಿಕೊಳ್ಳುತ್ತಿದ್ದೆವು.
ನಮ್ಮ ತಾತ ಲಿಂಗಣ್ಣಯ್ಯ (ರಾಮು ತಂದೆ) ಖ್ಯಾತ ಚಿತ್ರ ಕಲಾವಿದರು. ಇವರ ಹಿರಿಯ ಹೆಂಡತಿಯ ಮಗಳು ನಮ್ಮ ಅಮ್ಮ. ರಾಮು ದ್ವಿತೀಯ ಪತ್ನಿಯಲ್ಲಿ ಜನಿಸಿದ ನಮ್ಮ ತಾಯಿಯ ಮಲತಮ್ಮ. ನಮ್ಮ ತಾಯಿಗಂತೂ ತಮ್ಮ ಚಿಕ್ಕಮ್ಮನ ಮೇಲೆ ಅಪಾರ ಪ್ರೀತಿ ಗೌರವಗಳು. ಮಲಮಕ್ಕಳು, ತಮ್ಮ, ತಂಗಿಯರ ಮೇಲಂತೂ ಮಲಮಕ್ಕಳೆಂಬ ಅಸೂಯೆ ಮಾತ್ಸರ್ಯಗಳೇ ಇಲ್ಲದೆ ನಮ್ಮ ತಾಯಿಯ ಅಂತ್ಯದವರೆಗೂ ಬದುಕಿ ಬಾಳಿದ್ದು ಈಗ ಇತಿಹಾಸ.
ನನ್ನ ರಾಮುವಿನ ಅಂತಃಕರಣಾ ಬಾಂಧವ್ಯಕ್ಕೆ ರಾಮುವಿನ ಅಕ್ಕನ ಹಿರಿತನವೇ ಸಾಕ್ಷಿ. ತನ್ನ ತಂದೆಯವರ ಹೆಸರನ್ನು ರಾಮು ತನ್ನ ಅಕ್ಕನ ಮುಖಾಂತರ ಸಮಾಜಕ್ಕೆ ಶಾಶ್ವತವಾಗಿರಿಸಲು ಸೇವೆ ಸಲ್ಲಿಸಿ ಸಮಾಜದ ಋಣ ತೀರಿಸಿದ್ದಾನೆ. ಜನ್ಮಾಂತರವಿದ್ದರೆ ಮುಂದಿನ ಜನ್ಮದಲ್ಲಿ ನನಗೆ ರಾಮೂನೆ ಸೋದರಮಾವನಾಗಿ ಜನಿಸಲಿ ಎಂದು ಕೆಳದಿ ಶ್ರೀ ರಾಮೇಶ್ವರನಲ್ಲಿ ನನ್ನ ಪ್ರಾರ್ಥನೆ.
**********
ಲಾಂಗೂಲಚಾಲನಮಧಶ್ಚರಣಾವಪಾತಂ
ಭೂಮೌ ನಿಪತ್ಯ ವದನೋದರದರ್ಶನಂ ಚ |
ಶ್ವಾ ಪಿಂಡದಸ್ಯ ಕುರುತೇ ಜಗಪುಂಗವಸ್ತು ಧೀರಂ
ವಿಲೋಕಯತಿ ಚೌಟುಶತ್ಐಶ್ಚ ಭುಂಕ್ತೇ || -[ನೀತಿ ಶತಕ].
ತನಗೊಂದು ತುತ್ತು ಹಾಕುವವನ ಮುಂದೆ ನಾಯಿ ಬಾಲವಾಡಿಸುತ್ತೆ, ಕಾಲ ಮೇಲೆ ಉರುಳಾಡುತ್ತದೆ, ಹೊಟ್ಟೆ ತೋರಿಸುತ್ತದೆ. ಆದರೆ, ಗಜರಾಜನಾದರೋ ಠೀವಿಯಿಂದ ನೋಡುತ್ತಾ ನಿಲ್ಲುತ್ತಾನೆ. ನೂರು ಸಾರಿ ಹುರಿದುಂಬಿಸಿದ ಮೇಲೆಯೇ ತಿನ್ನುತ್ತಾನೆ.
****************ಕೆಳದಿ ವೆಂಕಣ್ಣಕವಿ ವಿರಚಿತ
ಹಸೆಗೆ ಕರೆಯುವ ಹಾಡು
ರಾಗ: ಸುರುಟಿ, ತಾಳ: ಆದಿ
ಗಿರಿರಾಜಕುಮಾರಿ | ದೇವಿ |
ಪರಮ ಮಂಗಲಗೌರಿ
ಪರಮ ಪಾವನೆ ಶ್ರೀ ಹರಿ ಸೋದರಿ
ಸುರರಿಪು ಮಧುಕೈಟಭ ಸಂಹಾರಿ
ಶ್ರೀಕರಿ ಗೌರಿ | ಹಸೆಗೇಳು ಹಸೆಗೇಳು ||೧||
ಕುಂಭಸಂಭವವಿನುತೆ | ದೇವಿ |
ಶಾಂಭವಿ ಶುಭಚರಿತೆ
ಜಂಭಭೇದಿ ಮುಖ ಸುರವರಪೂಜಿತೆ
ಕಂಬುಕಂಠಿ ಶುಭಗುಣಗಣ ಶೋಭಿತೆ
ಲೋಕೈಕಮಾತೆ | ಹಸೆಗೇಳು ಹಸೆಗೇಳು ||೨||
ಸರಸಿಜದಳನಯನೆ | ದೇವಿ |
ಸರಸಕುಂದರದನೆ
ಸರ್ವಮಂಗಳೆ ಸರ್ವಾಭರಣೆ
ಸುರಮುನಿ ಪರಿಭಾವಿತ ಶುಭಚರಣೆ
ಕರಿರಾಜಗಮನೆ | ಹಸೆಗೇಳು ಹಸೆಗೇಳು ||೩||
ಶರನಿಥಿಗಂಭೀರೆ | ದೇವಿ |
ಸರಸಮೋಹನಾಕಾರೆ
ಕರುಣಸಾಗರೆ ಕನಕಾಂಬರಧರೆ
ಪರಿಪಾಲಿತ ನಿರ್ಜರ ಪರಿವಾರೆ
ಮಣಿಮಯಹಾರೆ | ಹಸೆಗೇಳು ಹಸೆಗೇಳು ||೪||
ಪನ್ನ ಗನಿಭವೇಣಿ | ದೇವಿ |
ಸನ್ನುತೆ ರುದ್ರಾಣಿ
ಕನ್ನಡಿಗದಪಿನ ಶಿವೆ ಶರ್ವಾಣಿ
ಲೋಕೈಕ ಜನನಿ | ಹಸೆಗೇಳು ಹಸೆಗೇಳು ||೫||
ನಗರಧರಪರಿಪಾಲೆ | ದೇವಿ |
ಸುಗುಣೆ ಗಾನಲೋಲೆ
ಅಗಣಿತಮಹಿಮಾಸ್ಪದೆ ಶುಭ ಶೀಲೆ ಶೀಲೆ
ಮೃಗಮದ ತಿಲಕ ವಿರಾಜಿತ ಪಾಲೆ
ಕುಂಕುಮನಿಟಿಲೆ | ಹಸೆಗೇಳು ಹಸೆಗೇಳು ||೬||
ಪಂಕಜ ಸಮಪಾಣಿ | ಶ್ರೀ ಹರಿ
ಣಾಂಕ ವದನೆ ವಾಣಿ
ಅಂಕಿತಮಣಿಗಣ ಭೂಷಣ ಭೂಷಣಿ
ಶಂಕರೀ ಕೆಳದಿಪುರವಾಸಿನಿ
ಪಾರ್ವತಿ ಕಲ್ಯಾಣಿ | ಹಸೆಗೇಳು ಹಸೆಗೇಳು ||೭||
*********
ಕೃಪೆ: ಕೆಳದಿ ವೆಂಕಣ್ಣ ಕವಿಯ ಕೀರ್ತನೆಗಳು
ಸಂ: ಕೆಳದಿ ಗುಂಡಾಜೋಯಿಸ್.
ಬೆಂಗಳೂರು ವಿ.ವಿ. ಪ್ರಕಟಣೆ.
****************
ಅಂತರ್ಜಾಲದಲ್ಲಿ ಕೆಳದಿ ಕವಿಮನೆತನ
ಶಿವಮೊಗ್ಗದ ಕವಿ ಸುರೇಶ್ ಕೆಳದಿ ಕವಿಮನೆತನ ಎಂಬ ಅಂತರ್ಜಾಲದ ತಾಣ ತೆರೆದಿದ್ದು ಇದು ಸಮುದಾಯದ ತಾಣವಾಗಿದೆ. ಕವಿಕುಟುಂಬಗಳವರು ಮತ್ತು ಬಂಧುಬಳಗದವರು ಸಹಲೇಖಕರಾಗಿ ಈ ತಾಣದಲ್ಲಿ ಭಾಗವಹಿಸಲು ಆಹ್ವಾನ ನೀಡಿರುತ್ತಾರೆ. ಇದೊಂದು ಒಳ್ಳೆಯ ಪ್ರಯತ್ನವಾಗಿದ್ದು ಎಲ್ಲಾ ಆಸಕ್ತರೂ ಸಕ್ರಿಯರಾಗಿ ಪಾಲ್ಗೊಂಡು ಕೆಳದಿ ಕವಿಮನೆತನದ ಬಗ್ಗೆ ಹೆಚ್ಚು ಮಾಹಿತಿಗಳನ್ನು ಒದಗಿಸಲು ಮತ್ತು ಆ ಮೂಲಕ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆ ನೀಡಲು ವಿನಂತಿಸಲಾಗಿದೆ. ಈಗಾಗಲೇ ಹಲವರು ಸಹಲೇಖಕರಾಗಿ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ. ಈ ತಾಣ ವೀಕ್ಷಿಸಲು
http://keladikavimanetana.blogspot.com/ಗೆ ಭೇಟಿ ಕೊಡಬಹುದು.
ವೀಕ್ಷಿಸಬಹುದಾದ ಇತರ ತಾಣಗಳು:
ಕವಿ ಸುರೇಶರ
ಕ.ವೆಂ.ನಾಗರಾಜರ
ಕವಿಸುರೇಶ್ ಮತ್ತು ಕವಿನಾಗರಾಜ್ ಸಹಲೇಖಕರಾಗಿರುವ ಹರಿಹರಪುರ ಶ್ರೀಧರರ
ಕವಿಕುಟುಂಬಗಳ ಮತ್ತು ಬಂಧುಗಳ ಸದಸ್ಯರುಗಳು ಹೊಂದಿರುವ ತಾಣಗಳ ವಿವರ ತಿಳಿಸಿದಲ್ಲಿ ಪತ್ರಿಕೆಯಲ್ಲಿ ಪ್ರಕಟಪಡಿಸಲಾಗುವುದು.
*********************
ಯುಕ್ತಾಯುಕ್ತ ಫಲಗಳು
ಯುಕ್ತಃ ಕರ್ಮಫಲಂ ತ್ಯಕ್ತಾ ಶಾಂತಿಮಾಪ್ನೋತಿ ನೈಷ್ಠಿಕೋಮ್ |
ಅಯುಕ್ತಃ ಕಾಮಕಾರೇಣ ಫಲೇ ನಿಬದ್ಧ್ಯತೇ || (ಭಗವದ್ಗೀತಾ 5-12)
ಕವಿಕಿರಣ - ಪ್ರತಿಫಲನಅಯುಕ್ತಃ ಕಾಮಕಾರೇಣ ಫಲೇ ನಿಬದ್ಧ್ಯತೇ || (ಭಗವದ್ಗೀತಾ 5-12)
ಸಮಾಹಿತಚಿತ್ತನಾಗಿ, ಕರ್ಮಫಲವನ್ನು ಬಿಟ್ಟು ಕರ್ಮಗಳನ್ನು ಮಾಡುತ್ತಿದ್ದರೆ ಅಂಥವನು ಶಾಶ್ವತವಾದ ಶಾಂತಿಯನ್ನು ಹೊಂದುತ್ತಾನೆ. ಆದರೆ ಕಾಮಪ್ರೇರಿತನಾಗಿ, ಫಲಕ್ಕೆ ದಾಸನಾಗಿ, ಅಸಮಾಹಿತನಾಗಿ ಕರ್ಮಗಳನ್ನು ಮಾಡುತ್ತಿದ್ದರೆ ಅಂಥವನು ಸಂಸಾರಕೂಪದಲ್ಲಿಯೇ ಬಿದ್ದು ದುಃಖವನ್ನು ಅನುಭವಿಸುತ್ತಾನೆ.
*****************ಕವಿಕಿರಣ ಪತ್ರಿಕೆ ಸಂಚಿಕೆಯಿಂದ ಸಂಚಿಕೆಗೆ ಉತ್ತಮಗೊಳ್ಳುತ್ತಾ ಹೋಗುತ್ತಿದೆ. ಶುಭವಾಗಲಿ.
-ಹೆಚ್.ಎಸ್. ಪುಟ್ಟರಾಜು, ಜಾವಗಲ್
ಕಳಚಿದ ಕೊಂಡಿಗಳನ್ನು ಕೂಡಿಸಬಲ್ಲುದು
ಕಳಚಿದ ಕೊಂಡಿಗಳನ್ನು ಕೂಡಿಸುವ ಕೆಲಸದಲ್ಲಿ ಕೆಳದಿ ಕವಿ ಕುಟುಂಬದ ಮುಖಪತ್ರಿಕೆ ಕವಿಕಿರಣದ ಪಾತ್ರ ಉಲ್ಲೇಖನೀಯ. ಪ್ರಸ್ತುತ ಪ್ರವರ್ಧಮಾನಕ್ಕೆ ಬರುತ್ತಲಿರುವ ಅಣುರೂಪಿ ಕುಟುಂಬದ ವ್ಯವಸ್ಥೆಯಿಂದಾಗಿ ರಕ್ತಸಂಬಂಧ ಹಾಗೂ ಅಂತಹ ರಕ್ತಸಂಬಂಧೀ ಅನುಸಂಧಾನಗಳ ಅವತರಣಿಕೆಯೇ ಅವಸಾನಿಸುತ್ತಿರುವ ಸಂದಿಗ್ಧ ಸಮಯದಲ್ಲಿ ಕವಿಕಿರಣದಂತಹ ಕುಟುಂಬದ ಪತ್ರಿಕೆಯ ಮೂಲಕ ಸಂಬಂಧಗಳ ಜೋಡಣೆಯಲ್ಲಿ ನಿರತರಾಗಿರುವ ಕವಿ ಕುಟುಂಬದ ಸದಸ್ಯರ ಪ್ರಯತ್ನ ಸ್ತುತ್ಯರ್ಹ.
ಹತ್ತು ತಲೆಮಾರಿನಷ್ಟು (ದಾಖಲಿಸಲ್ಪಟ್ಟಿದ್ದು) ಹಳೆಯದಾದ ಹಾಗೂ ಹಿರಿದಾದ ಅತ್ಯಮೋಘ ಕೆಳದಿಯ ಕವಿ ಕುಟುಂಬದ ಬೇರುಗಳನ್ನು ಶೋಧಿಸಿ, ಪ್ರಸ್ತುತ ದೊರಕಿರುವ ಎಲ್ಲ ಕೊಂಡಿಗಳನ್ನು ಒಟ್ಟುಗೂಡಿಸಿ ಸುಭದ್ರ ಸಂಬಂಧದ ಸರಪಳಿಯನ್ನು ನಿರ್ಮಿಸಿರುವುದೂ ಅಲ್ಲದೆ, ಆ ಸರಪಳಿಯ ಎಲ್ಲ ಕೊಂಡಿಗಳ ಕಾರ್ಯ ಚಟುವಟಿಕೆಗಳನ್ನು, ಸಾಧನೆ-ಸಮಾವೇಶಗಳನ್ನು ಕವಿಕಿರಣದಂತಹ ಕುಟುಂಬ ಪತ್ರಿಕೆಯ ಮೂಲಕ ದಾಖಲಿಸುತ್ತಿರುವ ಬಗೆಯೇ ಒಂದು ರೋಚಕ ಪ್ರಕ್ರಿಯೆಯಾಗಿ ಕಂಡು ಬರುತ್ತಿದೆ. ಸಂಚಿಕೆಯಲ್ಲಿ ಒಡಮೂಡಿ ಬರುತ್ತಿರುವ ಎಲ್ಲಾ ಲೇಖನಗಳೂ ಒಂದು ಕಡೆ ಕವಿಕುಟುಂಬದ ಹಿರಿಮೆಯನ್ನು ಹೊರಸೂಸುತ್ತವಾದರೆ ಮತ್ತೊಂದೆಡೆ ಸಂಬಂಧಗಳ ಸೇತುವೆಯನ್ನು ಕಟ್ಟಬಹುದಾದ ಮಾರ್ಗೋಪಾಯಗಳನ್ನೂ ತೆರೆದಿಡುತ್ತವೆ. ಕೆಳದಿ ಕುಟುಂಬದ ಹಿರಿ ಕವಿಗಳ ಕೃತಿಗಳನ್ನು ಪರಿಚಯಿಸುತ್ತಿರುವುದಂತೂ ಸಾರಸ್ವತ ಕನ್ನಡ ಕಾವ್ಯಲೋಕಕ್ಕೊಂದು ಅಯಾಚಿತ ಕೊಡುಗೆ.
ಕವಿಕಿರಣ ಇನ್ನೂ ಹೆಚ್ಚು ಆಕರ್ಷಕವಾಗಿ ಹಾಗೂ ಸಾಹಿತ್ಯಿಕ ಮೌಲ್ಯಗಳಿಂದೊಡಗೂಡಿ ನಿರಂತರವಾಗಿ ಒಡಮೂಡಿ ಬರಲಿ ಎಂದು ಹಾರೈಸುವೆ.
-ಪ್ರೊ. ಎನ್. ದಿವಾಕರರಾವ್, ನಿರ್ದೇಶಕರು (ಮಾ.ಸಂ.ಅ.), ಜೆ.ಎನ್.ಎನ್. ತಾಂತ್ರಿಕ ವಿದ್ಯಾಲಯ, ಶಿವಮೊಗ್ಗ.ಯಾವ ವ್ಶೆದ್ಯರೂ ಮಾಡದ ಚಿಕಿತ್ಸೆಯನ್ನು ಆಪ್ತ ಸಮಾವೇಶ ಮಾಡಬಲ್ಲುದು
ನಮ್ಮ ಸುತ್ತಮುತ್ತಲಿನ ಜನರ ಮಾತುಕತೆಯ ಸ್ಯಾಂಪಲ್ ನೋಡಿ - ಕಾರು, ಬಂಗ್ಲೆ, ಚಿನ್ನದ ಸರ-ಬಳೆ, ಟಿವಿ, ಫ್ರಿಜ್ಜು ... ಜೊತೆಗೆ ಬಿಪಿ, ಷುಗರ್, ಕ್ಯಾನ್ಸರ್, ಡಯಾಲಿಸಿಸ್, ಹಾರ್ಟ್ ಸರ್ಜರಿ,..., ನನ್ನ ಮಗ ಸಾಫ್ಟ್ ವೇರ್ ಇಂಜನಿಯರ್, ನನ್ನ ಮಗಳು ಡಾಕ್ಟರ್,, ಲವ್ ಮಾಡಿದ್ರಂತೆ, ಇಂಟರ್ ಕ್ಯಾಸ್ಟ್ ಮದುವೆಯಂತೆ, ವೃದ್ಧ ಅಪ್ಪ, ಅಮ್ಮ ವೃದ್ಧಾಶ್ರಮ ಸೇರಿದ್ರಂತೆ,... ಸಾಮಾನ್ಯವಾಗಿ ಇದಕ್ಕೆ ಹೊರತಾದ ಮಾತುಕತೆ ಅಪರೂಪ ಅಲ್ವಾ? ನಮ್ಮ ಆರೋಗ್ಯ ಹದಗೆಟ್ಟು ಹಾಳಾಗಿ ಹೋಗಿದ್ದರೂ ಟಿವಿ, ಇಂಟರ್ ನೆಟ್ ನೋಡಿಕೊಂಡು ಮಕ್ಕಳು ರಾಕ್ಷಸರಂತೆ ಬೆಳೆಯುತ್ತಿದ್ದರೂ ತೆಪ್ಪಗೆ ಮೌನವಾಗಿ ಕುಳಿತಿರುವ ನಮ್ಮ ಸಮಾಜದ ದುಸ್ಥಿತಿ ಕಂಡು ದುಃಖವಾಗುತ್ತೆ. ಒಂದು ರೀತಿಯ ನಿರಾಶಾಭಾವ ಮೂಡುತ್ತದೆ. ನಮ್ಮ ಸಮಾಜದ ಕತೆ ಇಷ್ಟೇನಾ ಅನ್ನಿಸುತ್ತದೆ.
ಆದರೆ ಕವಿಕಿರಣದಂತಹ ಪ್ರಯತ್ನಗಳನ್ನು ನೋಡಿದರೆ ಎಲ್ಲೋ ಒಂದು ಕಡೆ ಆಶಾಕಿರಣ ಮೂಡುತ್ತದೆ. ಮನೆತನದ ಸೊಗಡನ್ನು ಉಳಿಸಿ ಬೆಳೆಸುವ ನಿಮ್ಮೆಲ್ಲರ ಶ್ರಮ ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ. ಎಷ್ಟೇ ಸಿರಿವಂತಿಕೆ ಇದ್ದರೂ ಅದನ್ನು ಸಂತಸದಿಂದ ಅನುಭವಿಸಲು ನಮ್ಮವರೆನ್ನುವವರು ನಮ್ಮೊಡನೆ ಇರಬೇಕು. ವರ್ಷದಲ್ಲಿ ಒಮ್ಮೆಯಾದರೂ ಒಂದೆರಡು ದಿನಗಳು ನಮ್ಮ ನಮ್ಮ ಸ್ವಂತ ವ್ಯವಹಾರಗಳನ್ನು ಬದಿಗಿರಿಸಿ ಎಲ್ಲವನ್ನೂ ಮರೆತು ನಮ್ಮವರೆನ್ನಿಸಿದ ಎಲ್ಲರೊಡನೆ ಕುಣಿದು ಕುಪ್ಪಳಿಸಬೇಕು. ಇಂದು ಎಲ್ಲಡೆ ಕಾಣುವ ಟೆನ್ಶನ್‌ಗಳಿಗೆ ಇದೊಂದೇ ಪರಿಹಾರ. ಮುಂದಿನ ಕವಿಮನೆತನದ ಸಮಾವೇಶದಲ್ಲಿ ನಾನು ಡಾಕ್ಟರ್, ನಾನು ಉದ್ಯಮಿ, ನಾನು ಶ್ರೀಮಂತ, ನಾನು ಬಡವ, ನಾನು ಡಾಕ್ಟರೇಟ್ ಮಾಡಿದವನು, ನಾನು ಗುಮಾಸ್ತ, ಇತ್ಯಾದಿ ಎಲ್ಲವನ್ನೂ ಬದಿಗಿರಿಸಿ ಎಲ್ಲರೊಂದಿಗೆ ಬೆರೆತು ನಮ್ಮನ್ನು ನಾವು ಮರೆತಾಗ ನಿಜವಾಗಲೂ ಸಮಾವೇಶಕ್ಕೆ ಅರ್ಥ ಬರುತ್ತದೆ, ಮುಂದಿನ ಸಮಾವೇಶವನ್ನು ಎಲ್ಲರೂ ಎದುರು ನೋಡುವಂತಾಗುತ್ತದೆ.
-ಹರಿಹರಪುರ ಶ್ರೀಧರ,ಚಿಂತನಶೀಲ ಲೇಖಕ, ಹಾಸನ.
****************
ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ
ಶಂ ತನೋತು ತೇ ಸರ್ವದಾ ಮುದಂ ||
ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು ||
ಪ್ಮಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ |
ಬಾಳ ತೇರಿಗೆ . . ನವ್ಯ ನಡೆಯಿದು||
ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ||
ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ||
ಪುಟ್ಟ ಗೌರಿಗೆ . . ಜನ್ಮದಿನವಿದು!
ಬಾಳ ತೇರಿಗೆ . . ನವ್ಯ ನಡೆಯಿದು||
(ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).
ಸುದ್ದಿ - ಕಿರಣ
**********************ಮಕ್ಕಳ ಜನ್ಮ ದಿನ - ಹೀಗೊಂದು ಬದಲಾವಣೆ ಬರಲಿ
ಚಿನ್ಮಯ ಮಿಷನ್ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸದ ಸಂದರ್ಭದಲ್ಲಿ ಹಂಚಲಾದ ಕರಪತ್ರದಲ್ಲಿ ಜನ್ಮದಿನದ ಗೀತೆ ಎಂದು ಈ ಕೆಳಗೆ ತಿಳಿಸಿರುವದನ್ನು ಪ್ರಕಟಿಸಲಾಗಿತ್ತು. ಮಕ್ಕಳ ಜನ್ಮದಿನದಂದು ಇದನ್ನು ಹಾಡಬಹುದೆಂದು ಸೂಚಿಸಲಾಗಿತ್ತು.
ಜನ್ಮದಿನಮಿದಂ ಅಯಿ ಪ್ರಿಯ ಸಖೇಶಂ ತನೋತು ತೇ ಸರ್ವದಾ ಮುದಂ ||
ಪ್ರಾರ್ಥಯಾಮಹೇ ಭವ ಶತಾಯುಷೀ
ಈಶ್ವರಸ್ಸದಾ ತ್ವಾಂ ರಕ್ಷತು ||
ಪ್ಮಣ್ಯಕರ್ಮಣಾ ಕೀರ್ತಿಮರ್ಜಯ
ಜೀವನಂ ತವ ಭವತು ಸಾರ್ಥಕಂ |
'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುವ ಅಂಧಾನುಕರಣೆ ಬೆಳೆಸಿಕೊಂಡಿರುವ ನಾವು ಮಕ್ಕಳಿಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಮೇಣದ ಬತ್ತಿಗಳನ್ನು ಹಚ್ಚಿ ಕೇಕಿನ ಮೇಲೆ ಇಟ್ಟು ಉಫ್ ಎಂದು ಆರಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಆಲೋಚಿಸಬೇಡವೇ? ಮೇಣದ ಬತ್ತಿಗಳನ್ನು ಆರಿಸುವುದರ ಸಂಕೇತ ಬಹುಷಃ ಇಷ್ಟು ವರ್ಷ ಕಳೆಯಿತು ಎಂದಿರಬಹುದೇ? ಬದಲಾಗಿ ಮಕ್ಕಳಿಗೆ ತೈಲದ ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಶೃಂಗರಿಸಿ ಹಬ್ಬದ ಅಡಿಗೆ ಮಾಡಿ ಮನೆ ಮಂದಿ ಸಂಭ್ರಮಿಸಬಹುದಲ್ಲವೇ? ಜ್ಯೋತಿ ಆರಿಸುವ ಬದಲಿಗೆ ಮಗುವಿನ ಕೈಯಲ್ಲೇ ದೀಪ ಬೆಳಗಿಸಬಹುದು. ನೆಂಟರಿಷ್ಟರು, ಸ್ನೇಹಿತರು, ಓರಗೆಯ ಮಕ್ಕಳನ್ನು ಆಹ್ವಾನಿಸಿ ಸಾಯಂಕಾಲದಲ್ಲಿ ಮಗುವಿಗೆ ಆರತಿ ಮಾಡಿ ಸಿಹಿ ಹಂಚಬಹುದು. ಹ್ಯಾಪಿ ಬರ್ತ್ ಡೇ ಹಾಡುವ ಬದಲಿಗೆ ಸಂಸ್ಸೃತದ ಮೇಲೆ ತಿಳಿಸಿದ ಹಾಡನ್ನಾಗಲೀ ಅಥವ ಕನ್ನಡದ ಈ ಕೆಳಕಂಡ ಹಾಡನ್ನಾಗಲೀ ಹಾಡಬಹುದಲ್ಲವೇ?
ಪುಟ್ಟ ಗೌರಿಗೆ . . ಜನ್ಮದಿನವಿದು|ಬಾಳ ತೇರಿಗೆ . . ನವ್ಯ ನಡೆಯಿದು||
ದೇವ ಕಾಯಲಿ . . ಆಯು ನೀಡಲಿ|
ಜನರು ಹರಸಲಿ . . ಬಾಳು ಬೆಳಗಲಿ||
ಸತ್ಯಧರ್ಮದಿ . . ಸಕಲಸಂಪದ|
ಶಾಂತಿ ನೆಮ್ಮದಿ . . ಸುಖವ ನೀಪಡಿ||
ಪುಟ್ಟ ಗೌರಿಗೆ . . ಜನ್ಮದಿನವಿದು!
ಬಾಳ ತೇರಿಗೆ . . ನವ್ಯ ನಡೆಯಿದು||
(ಪುಟ್ಟ ಗೌರಿ ಎಂಬ ಸ್ಥಳದಲ್ಲಿ ಸಂಬಂಧಿಸಿದ ಮಗುವಿನ ಹೆಸರು ಸೇರಿಸಿ ಹಾಡಬಹುದು).
ಈ ಸಂಭ್ರಮವನ್ನು ಬಡ ಮತ್ತು ಅನಾಥ ಮಕ್ಕಳಿಗೆ ಊಟೋಪಚಾರ ಮಾಡುವ ಮೂಲಕ ಅಥವಾ ಉತ್ತಮವಾದ ಸಮಾಜಕಾರ್ಯದಲ್ಲಿ ತೊಡಗಿರುವ ಸೇವಾ ಸಂಸ್ಥೆಗೆ ಧನ ಸಹಾಯ ಮಾಡುವ ಮೂಲಕವೂ ಆಚರಿಸಬಹುದು. ಮಗುವಿನ ಕೈಯಲ್ಲೇ ಇದನ್ನು ಮಾಡಿಸಿದರೆ ಮಗುವಿಗೆ ಸತ್ ಸಂಸ್ಕಾರ ನೀಡಿದಂತೆಯೂ ಆಗುವುದು. ಸಹೃದಯರು ಈ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಬಹುದಲ್ಲವೇ?
************
ಅನಘಳ ಆನಂದ
ತಾಯಿ: ಯಶಸ್ವಿನಿ ತಂದೆ: ಹೆಚ್,ಜೆ.ಸುಬ್ರಹ್ಮಣ್ಯ, ಬೆಂಗಳೂರು
*****
ದಿ. ಕವಿ ಸುಬ್ರಹ್ಮಣ್ಯಯ್ಯನವರ ಹಾಸ್ಯ ಪ್ರವೃತ್ತಿ
ದಿ. ಕವಿ ಸುಬ್ರಹ್ಮಣ್ಯಯ್ಯನವರು ಸಮಯ, ಸಂದರ್ಭಗಳಿಗೆ ಅನುಗುಣವಾಗಿ ಪ್ರಾಸಬದ್ಧವಾಗಿ ಹಾಸ್ಯಮಯವಾಗಿ ಮಾತನಾಡುತ್ತಿದ್ದುದು ಎಲ್ಲರಿಗೂ - ವಿಶೇಷವಾಗಿ ಮಕ್ಕಳಿಗೆ- ಇಷ್ಟವಾಗುತ್ತಿತ್ತು. ಚಳಿಗಾಲದಲ್ಲಿ ಒಲೆಯ ಮುಂದೆ ಬಿಸಿ ಕಾಯಿಸಿಕೊಳ್ಳುತ್ತ ಮುದುರಿಕೊಂಡು ಕುಳಿತಿದ್ದರೆ ಚಳಿ ಚಳಿ ಎಂಬುದು ಮುದುಕಾ . . . ಮಕ್ಕಳ ಕೊರಳಿಗೆ ಪದಕಾ. . ಎಂದು ಹಾಡುತ್ತಿದ್ದರು. ಮಕ್ಕಳು ಆಟವಾಡುತ್ತಿದ್ದಾಗ ಯಾರಾದರೂ ಬಿದ್ದರೆ ಶಿವನೇ.. ಎಂದು ಹಣೆಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. ಬಿದ್ದ ಮಗು ಅವರತ್ತ ನೋಡಿದಾಗ ಅವರು ತಾವು ಹೇಳಿದ್ದು ಆ ಮಗುವಿಗಲ್ಲ ಎಂಬಂತೆ ಶಿವನೀ, ಅಜ್ಜಂಪುರ, ತರೀಕೆರೆ, ಬೀರೂರು, ಕಡೂರು ಎಂದು ಬಸ್ ಕಂಡಕ್ಟರ್ ಹೇಳುವಂತೆ ಹೇಳುತ್ತಿದ್ದರು. ಮಕ್ಕಳು ಬಾಯಿ ಬಿಟ್ಟುಕೊಂಡು ನೋಡುತ್ತಾ ಇದ್ದರೆ 'ಕಾಲು ಜಾರಿದರೆ ಅಂಡೂರು' ಎಂದು ಮುಗಿಸುತ್ತಿದ್ದರು. ಎಲ್ಲಾ ಮಕ್ಕಳೂ ಗೊಳ್ಳೆಂದು ನಗುತ್ತಿದ್ದರು. ಬಿದ್ದ ಮಗುವೂ ನೋವು ಮರೆತು ನಗುತ್ತಿತ್ತು.
*****
ಉತ್ಕರ್ಷದ ದಿಕ್ಕು
ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ| ಧಿಯೋ ಯೋನಃ ಪ್ರಚೋದಯಾತ್|| (ಯಜು. ೩೬.೩)
[ಸವಿತುಃ ದೇವಸ್ಯ] ಸೃಜನಕರ್ತೃವೂ, ಪ್ರೇರಕನೂ ಆದ, ಪ್ರಕಾಶಮಯ ಪ್ರಭುವಿನ [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಣೀಯವಾದ ಪಾಪಭಸ್ಮಕಾರಿಯಾದ ತೇಜಸ್ಸನ್ನು [ಧೀಮಹಿ] ಧ್ಯಾನಿಸುತ್ತೇವೆ, ಧರಿಸುತ್ತೇವೆ. [ಯಃ] ಆ ಸ್ವಾಮಿಯು [ನಃ ಧಿಯಃ] ನಮ್ಮ ಬುದ್ಧಿಗಳನ್ನು ಹಾಗೂ ಕರ್ಮಗಳನ್ನು [ಪ್ರಚೋದಯಾತ್] ಪ್ರೇರಿಸಲಿ.
*******
ಭದ್ರಂ ಕರ್ಣೇಭಿಃ ಶೃಣುಯಾಮ||
(ಯಜು. ೨೫.೩೧)
ಮಂಗಳಕರವಾದುದನ್ನೇ ಕಿವಿಯಿಂದ ಕೇಳೋಣ
ಆತ್ಮನಿಗೆ ಹೊರಜಗತ್ತಿನ ಸುದ್ದಿಗಳನ್ನು ಮುಟ್ಟಿಸುವುದು, ಅಂತೆಯೇ ಆತ್ಮನ ಪ್ರತಿಕ್ರಿಯೆಗಳನ್ನು ಹೊರಜಗತ್ತಿಗೆ ತಲುಪಿಸುವುದೂ ಶರೀರ - ಇಂದ್ರಿಯಗಳ ನಿರಂತರ ಕರ್ಮ. ಶರೀರೇಂದ್ರಿಯಗಳ ಮೂಲಕ ಶ್ರೇಷ್ಠವಾದ ವಿಚಾರಗಳು ಒಳ ಹೊಕ್ಕರೆ ಆತ್ಮನಲ್ಲಿರಬಹುದಾದ ಕೊಳೆ, ದುಷ್ಟ ಸಂಸ್ಕಾರಗಳು ನಶಿಸುತ್ತವೆ. ಆತ್ಮ ಶುದ್ಧವಾದಂತೆಲ್ಲಾ ಆತ್ಮ ಬಲ, ಆತ್ಮ ಶಕ್ತಿ ಹೆಚ್ಚುತ್ತದೆ. ಆತ್ಮನ ಪ್ರತಿಕ್ರಿಯೆಗಳು ಶ್ರೇಷ್ಠವಾಗಿ ಶರೀರೇಂದ್ರಿಯಗಳ ಮೂಲಕ ಹೊರಹೊಮ್ಮುತ್ತದೆ. ಹೆಚ್ಚಿದ ಆತ್ಮ ಬಲ ಆನಂದವನ್ನು ಅನುಭವಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಆನಂದಕ್ಕಾಗಿಯೇ ಅಲ್ಲವೆ ಪ್ರತಿ ಜೀವಿಯೂ ತಡಕಾಡುತ್ತಿರುವುದು?
ಆದ್ದರಿಂದ ಮಂಗಳಕರವಾದುದನ್ಮ್ನ ಕೇಳೋಣ, ಮಂಗಳಕರವಾದುದನ್ನೇ ನೋಡೋಣ, ಧೃಢವಾದ ಶರೀರೇಂದ್ರಿಯಗಳನ್ನು ಸತ್ಕರ್ಮಗಳಲ್ಲೇ ತೊಡಗಿಸಿಕೊಳ್ಳುತ್ತಾ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳೋಣ.
ಮಂಗಳ - ಶ್ರೇಷ್ಠ - ಸತ್ಕರ್ಮ ತನ್ನ ಹಿತ ಸಾಧನೆಯೊಂದಿಗೆ ಇತರ ಸಹಜೀವಿಗಳ ಹಿತವನ್ನೂ ಸಾಧಿಸುವುದು.
*******
ಧನ್ಯಾಸ್ತೇ ಪುರುಷಶ್ರೇಷ್ಠಾ ಯೇ ಬುದ್ಧ್ಯಾ ಕೋಪಮುತ್ಥಿತಂ |
ನಿರುಂಧಂತಿ ಮಹಾತ್ಯಾನೋ ದೀಪ್ತಮಗ್ನಿಮಿವಾಂಭಸಾ ||
ಕ್ರುದ್ಧಃ ಪಾಫಂ ನ ಕುರ್ಯಾತ್ ಕಃ ಕ್ರುದ್ಧೋ ಹನ್ಯಾದ್ಗುರೂನಪಿ |
ಕ್ರುದ್ಧಃ ಪರುಷಯಾ ವಾಚಾ ನರಃ ಸಾಧೂನಧಿಕ್ಷಿಪೇತ್ ||
ವಾಚ್ಯಾ ವಾಚ್ಯಂ ಪ್ರಕುಪಿತೋ ನ ವಿಚಾನಾತಿ ಕರ್ಹಿಚಿತ್ |
ನಾಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಾಂ ವಿದ್ಯತೇ ಕ್ವಚಿತ್ ||
(ವಾ.ರಾ. ಸುಂ.ಕಾಂಡ. 55.4-6)
ಯಾವ ಮಾನವ ಶ್ರೇಷ್ಠರಾದ ಮಹಾತ್ಮರು ಉರಿಯುವ ಬೆಂಕಿಯನ್ನು ನೀರಿನಿಂದ ಆರಿಸುವಂತೆ, ಉಕ್ಕೇರಿ ಬಂದ ಕೋಪವನ್ನು ಬುದ್ಧಿಯಿಂದ ತಡೆಗಟ್ಟುತ್ತಾರೋ ಅವರೇ ಧನ್ಯರು. ಕೋಪಗೊಂಡ ಯಾವನು ತಾನೇ ಪಾಪ ಮಾಡುವುದಿಲ್ಲ? ಕೋಪಗೊಂಡವನು ತಾಯಿ, ತಂದೆ ಮತ್ತು ಆಚಾರ್ಯರನ್ನೂ ಸಹ ಕೊಂದುಬಿಡುವನು. ಕೋಪಗೊಂಡ ಮಾನವನು ಸತ್ಪುರುಷರನ್ನೂ ಸಹ ಕಠೋರವಾದ ಮಾತುಗಳಿಂದ ಧಿಕ್ಕರಿಸಿ ಮಾತನಾಡುವನು. ಕೋಪಗೊಂಡವನಿಗೆ ಯಾವ ಮಾತು ಆಡಲು ತಕ್ಕದ್ದು, ಯಾವುದು ತಕ್ಕದ್ದಲ್ಲ ಎಂಬ ಅರಿವೂ ಸಹ ಇರುವುದಿಲ್ಲ. ಕೋಪಗೊಂಡವನ ಪಾಲಿಗೆ ಮಾಡಬಾರದ ಕಾರ್ಯವಿಲ್ಲ, ಆಡಬಾರದ ಮಾತೂ ಇಲ್ಲ.
************************
ನಿರುಂಧಂತಿ ಮಹಾತ್ಯಾನೋ ದೀಪ್ತಮಗ್ನಿಮಿವಾಂಭಸಾ ||
ಕ್ರುದ್ಧಃ ಪಾಫಂ ನ ಕುರ್ಯಾತ್ ಕಃ ಕ್ರುದ್ಧೋ ಹನ್ಯಾದ್ಗುರೂನಪಿ |
ಕ್ರುದ್ಧಃ ಪರುಷಯಾ ವಾಚಾ ನರಃ ಸಾಧೂನಧಿಕ್ಷಿಪೇತ್ ||
ವಾಚ್ಯಾ ವಾಚ್ಯಂ ಪ್ರಕುಪಿತೋ ನ ವಿಚಾನಾತಿ ಕರ್ಹಿಚಿತ್ |
ನಾಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಾಂ ವಿದ್ಯತೇ ಕ್ವಚಿತ್ ||
(ವಾ.ರಾ. ಸುಂ.ಕಾಂಡ. 55.4-6)
ಯಾವ ಮಾನವ ಶ್ರೇಷ್ಠರಾದ ಮಹಾತ್ಮರು ಉರಿಯುವ ಬೆಂಕಿಯನ್ನು ನೀರಿನಿಂದ ಆರಿಸುವಂತೆ, ಉಕ್ಕೇರಿ ಬಂದ ಕೋಪವನ್ನು ಬುದ್ಧಿಯಿಂದ ತಡೆಗಟ್ಟುತ್ತಾರೋ ಅವರೇ ಧನ್ಯರು. ಕೋಪಗೊಂಡ ಯಾವನು ತಾನೇ ಪಾಪ ಮಾಡುವುದಿಲ್ಲ? ಕೋಪಗೊಂಡವನು ತಾಯಿ, ತಂದೆ ಮತ್ತು ಆಚಾರ್ಯರನ್ನೂ ಸಹ ಕೊಂದುಬಿಡುವನು. ಕೋಪಗೊಂಡ ಮಾನವನು ಸತ್ಪುರುಷರನ್ನೂ ಸಹ ಕಠೋರವಾದ ಮಾತುಗಳಿಂದ ಧಿಕ್ಕರಿಸಿ ಮಾತನಾಡುವನು. ಕೋಪಗೊಂಡವನಿಗೆ ಯಾವ ಮಾತು ಆಡಲು ತಕ್ಕದ್ದು, ಯಾವುದು ತಕ್ಕದ್ದಲ್ಲ ಎಂಬ ಅರಿವೂ ಸಹ ಇರುವುದಿಲ್ಲ. ಕೋಪಗೊಂಡವನ ಪಾಲಿಗೆ ಮಾಡಬಾರದ ಕಾರ್ಯವಿಲ್ಲ, ಆಡಬಾರದ ಮಾತೂ ಇಲ್ಲ.
************************
ನೆನಪಿಡಿ
ದೇಹವು ಕೇವಲ ಒಂದು ಜಡ ಸಾಧನವೆಂಬುದನ್ನು ನೆನಪಿಡಿ. ದೇಹದ ಒಳಗಿರುವ ನಿಮ್ಮ ಅಂತರಂಗವೇ ನಿಜವಾದ ನೀವು, ಅದನ್ನು ಉಪೇಕ್ಷಿಸದಿರಿ.
-ಸ್ವಾಮಿ ವಿವೇಕಾನಂದ.
*****
ಸುದ್ದಿ - ಕಿರಣ
ನಾಮಕರಣ: ಬೆಂಗಳೂರಿನ ಶ್ರೀ ಬಿ.ವಿ. ಹರ್ಷ ಮತ್ತು ಶ್ರೀಮತಿ ಸಿಂಧುರವರ ಮಗುವಿಗೆ ಬೆಂಗಳೂರಿನ ಬನಶಂಕರಿ ೨ನೆ ಹಂತದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ದಿನಾಂಕ ೦೩-೦೬-೨೦೧೦ರಂದು ನಡೆದ ಸಂಭ್ರಮದ ಸಮಾರಂಭದಲ್ಲಿ ಸಮ್ಯಕ್ ಎಂದು ಹೆಸರಿಡಲಾಯಿತು.
ಹುಟ್ಟುಹಬ್ಬ: ಸಮರ್ಥನ್ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್ ರವರು ವಿಕಲಚೇತನರು ಮತ್ತು ಬಡ ಮಕ್ಕಳಿಗಾಗಿ ಹೆಚ್.ಎಸ್.ಆರ್. ಲೇಔಟ್‌ನಲ್ಲಿ ನಡೆಸುತ್ತಿರುವ ವಸತಿಶಾಲೆಯ ೨೦೦ ಮಕ್ಕಳು ಮತ್ತು ೨೦ ಸಿಬ್ಬಂದಿ ವರ್ಗದವರಿಗೆ ಹಬ್ಬದ ಊಟದ ವ್ಯವಸ್ಥೆ ಮಾಡುವ ಮತ್ತು ಅವರೊಂದಿಗೆ ಊಟ ಮಾಡುವ ಮೂಲಕ ಬೆಂಗಳೂರಿನ ಶ್ರೀ ಕೆ.ವಿ.ರಾಘವೇಂದ್ರ ಮತ್ತು ಶ್ರೀಮತಿ ಎನ್. ಬಿಂದುರವರು ತಮ್ಮ ಮಗಳು ಆರ್. ಅಕ್ಷಯಳ ನಾಲ್ಕು ವರ್ಷ ತುಂಬಿದ ಹುಟ್ಟುಹಬ್ಬವನ್ನು ದಿನಾಂಕ ೧೪-೦೬-೨೦೧೦ರಂದು ಆಚರಿಸಿದರು
ಶುಭ ವಿವಾಹ: ಶಿವಮೊಗ್ಗದ ಶ್ರೀ ಡಿ. ನಾಗೇಶರಾವ್ ಮತ್ತು. ಶ್ರೀಮತಿ ಜಯಲಕ್ಷ್ಮಿರವರ ಮಗ ಚಿ.ರಾ. ಸುದರ್ಶನ.ನಾ.ಕಸಬೆರವರ ವಿವಾಹ ಬೆಂಗಳೂರಿನ ಶ್ರೀ ಎಂ.ಆರ್. ನರೇಂದ್ರಬಾಬು ಮತ್ತು ದಿ. ಶಾರದಾರವರ ಮಗಳು ಚಿ.ಸೌ. ಭವತಾರಿಣಿಯೊಂದಿಗೆ ಬೆಂಗಳೂರು ಬಸವನಗುಡಿಯ ಬೆಣ್ಣೆ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ದಿನಾಂಕ ೨೦-೦೬-೨೦೧೦ರಂದು ಸಂಭ್ರಮದಿಂದ ನಡೆಯಿತು.
ಶುಭ ವಿವಾಹ: ಬೆಂಗಳೂರಿನ ಶ್ರೀ ಕೆ.ಶ್ರೀಕಂಠ ಮತ್ತು ಶ್ರೀಮತಿ ಉಷಾರವರ ಪುತ್ರಿ ಚಿ.ಸೌ. ಸಿಂಧೂಳ ವಿವಾಹ ಬೆಂಗಳೂರಿನ ಶ್ರೀ ಕೆ.ಸಿ.ಪ್ರಕಾಶ್ ಮತ್ತು ಶ್ರೀಮತಿ ಲಲಿತಾರವರ ಮಗ ಚಿ.ರಾ. ಕೆ.ಪಿ. ಮಂಜುನಾಥ ರೊಂದಿಗೆ ದಿನಾಂಕ ೨೪-೦೬-೨೦೧೦ರಂದು ಬೆಂಗಳೂರಿನ ರಾಜಾಜಿನಗರದ ನಂದಿ ಕನ್ವೆನ್ಶನ್ ಹಾಲ್‌ನಲ್ಲಿ ಸಂಭ್ರಮದಿಂದ ನೆರವೇರಿತು.
ವಾರ್ಷಿಕ ಪುಣ್ಯತಿಥಿ: ದಿ. ಕವಿ ವೆಂಕಟಸುಬ್ಬರಾಯರು ದೈವವಶರಾಗಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕ ಕರ್ಮಕ್ರಿಯಾದಿಗಳನ್ನು ಕೂಡಲಿಯಲ್ಲಿ ೧,೨ ಮತ್ತು ೩-೮-೧೦ರಂದು ಸರಳವಾಗಿ ನಡೆಸಲಾಯಿತು.
ನಾಮಕರಣ: ಬೆಂಗಳೂರಿನಲ್ಲಿರುವ ಶ್ರೀ ಹೆಚ್.ಜೆ. ಸುಬ್ರಹ್ಮಣ್ಯ ಮತ್ತು ಶ್ರೀಮತಿ ಎನ್. ಯಶಸ್ವಿನಿರವರ ಮಗುವಿಗೆ ಮೈಸೂರಿನ ಕುವೆಂಪುನಗರದಲ್ಲಿರುವ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಸಭಾಂಗಣದಲ್ಲಿ ನಡೆದ ಸಂಭ್ರಮದ ಸಮಾರಂಭದಲ್ಲಿ ಅನಘ ಎಂದು ಹೆಸರಿಸಲಾಯಿತು.
ಕಾರ್ಯ ಕ್ಷೇತ್ರ ಬದಲಾವಣೆ: ಇದುವರೆಗೆ ವಿಪ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕ.ವೆಂ. ನಾಗರಾಜರ ಪುತ್ರ ಚಿ. ಎನ್. ವಿನಯ ಈಗ ಪ್ರತಿಷ್ಠಿತ ಜಿ.ಎಮ್. ಸಂಸ್ಥೆಯಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಕಾರ್ಯ ಮಾಡುತ್ತಿದ್ದಾನೆ.
ರಾಜ್ಯಕ್ಕೇ ಪ್ರಥಮ: ಕರ್ನಾಟಕ ಸೆಕೆಂಡರಿ ಪರೀಕ್ಷಾ ಮಂಡಳಿಯವರು ೨೦೧೦ರಲ್ಲಿ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ಶಿವಮೊಗ್ಗದ ಶ್ರೀ ಕವಿ ಸುರೇಶ್ ಮತ್ತು ಶ್ರೀಮೆತಿ ರೇಣುಕಾರವರ ಪುತ್ರ ಚಿ. ಬಿ.ಎಸ್.ಆರ್. ದೀಪಕ್ ವಯಲಿನ್ ವಾದನದಲ್ಲಿ ರಾಜ್ಯಕ್ಕೇ ಪ್ರಥಮ ರಾಂಕ್ ಪಡೆದು ತೇರ್ಗಡೆ ಹೊಂದಿದ್ದಾನೆ. ಅವನ ಪ್ರಶಿಕ್ಷಣದಲ್ಲಿರುವ ತಂಗಿ ಕು.ಬಿ.ಎಸ್.ಆರ್.ಅಂಬಿಕಾ ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಪ್ರತಿಷ್ಠಿತ ಶಿಷ್ಯವೇತನವನ್ನು ತನ್ನ ವಯಲಿನ್ ಅಭ್ಯಾಸಕ್ಕಾಗಿ ಪಡೆದಿರುತ್ತಾಳೆ. ಇಬ್ಬರಿಗೂ ಅಭಿನಂದನೆಗಳು.
ತೇರ್ಗಡೆ: ಡಾ. ಕೆಳದಿ ಕೃಷ್ಣಜೋಯಿಸರವರು ೨೦೧೦ನೆಯ ಮಾರ್ಚಿಯಲ್ಲಿ ಸರ್ಕಾರದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿಯಿಂದ ನಡೆದ ಕೃಷ್ಣ ಯಜುರ‍್ವೇದ ಸಲಕ್ಷಣ ಘನಾಂತ ವಿದ್ವತ್ ಉತ್ತಮ ವೇದ ಪರೀಕ್ಷೆಯಲ್ಲಿ ಮೊದಲನೆಯ ದರ್ಜೆ ವೈಶಿಷ್ಠ್ಯ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಅವರಿಗೆ ಅಭಿನಂದನೆಗಳು.
( ತಿಳಿದ ಮತ್ತು ತಿಳಿಸಲಾದ ಸುದ್ದಿಗಳನ್ನು ಪ್ರಕಟಿಸಿದೆ. -ಸಂ.)
******************
ಓದಿದ್ದಕ್ಕೆ ಧನ್ಯವಾದಗಳು. ತಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.
-ಸಂಪಾದಕ.
******************