ಸೋಮವಾರ, ಮೇ 23, 2011

ಕವಿಕಿರಣ - 01-12-2009ರ ಸಂಚಿಕೆ




ಆತ್ಮೀಯರೇ,
                 'ಕವಿಕಿರಣ'ದ 01-12-2009ರ ಸಂಚಿಕೆಯ ಪ್ರತಿ ಇದೋ ನಿಮ್ಮ ಮುಂದೆ ಇಟ್ಟಿದೆ. ನಿಮ್ಮ ಸಲಹೆ, ಸೂಚನೆ, ಪ್ರತಿಕ್ರಿಯೆಗೆ ಸ್ವಾಗತ.
-ಕ.ವೆಂ.ನಾಗರಾಜ್.
*****************

-ರಕ್ಷಾಪುಟ -1-
**************

ಮೂಢ ಉವಾಚ
      ಅದರದು ಮನ ಕುಹಕಿಗಳ ಕುಟುಕಿಗೆ|
     ಬೆದರದು ತನು ಪಾತಕಿಗಳ ಧಮಕಿಗೆ||
     ಮುದುಡುವುದು ಮನವು ಕದಡುವುದು|
     ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||
                             - ಕ.ವೆಂ.ನಾ.
* * * *


ಸಂಪಾದಕರು:     ಕ.ವೆಂ. ನಾಗರಾಜ್,
     ನಂ.೨೩೫೪, ನಾಗಾಭರಣ, ೭ನೆಯ ಅಡ್ಡರಸ್ತೆ.
     ೨ನೆಯ ಮುಖ್ಯರಸ್ತೆ, ಶಾಂತಿನಗರ,
     ಹಾಸನ - ೫೭೩೨೦೧. (ಖಾಯಂ ವಿಳಾಸ).

E mailÀ: kavi_nraj@yahoo.com

ಪ್ರಸ್ತುತದ ತಾತ್ಕಾಲಿಕ ವಿಳಾಸ:
      ನಂ.೫೬, ಸೌಪರ್ಣಿಕಾ, ೪ನೆಯ ಅಡ್ಡರಸ್ತೆ,
     ರಾಜೇಂದ್ರನಗರ, ಶಿವಮೊಗ್ಗ - ೫೭೭೨೦೧.
     ಮೊಬೈಲ್ ದೂ: ೯೪೪೮೫ ೦೧೮೦೪.


ಸಹಸಂಪಾದಕರು:
     ಕವಿ ವೆಂ. ಸುರೇಶ್,                                                 
     ಸೌಪರ್ಣಿಕಾ, ೩ನೆಯ ಮುಖ್ಯ ರಸ್ತೆ, ೩ನೆಯ       
     ಅಡ್ಡರಸ್ತೆ, ಅಕ್ಕಮಹಾದೇವಿ ಪಾರ್ಕ್ ಹತ್ತಿರ,   
     ಬಸವೇಶ್ವರ ನಗರ, ಶಿವಮೊಗ್ಗ - ೫೭೭೨೦೪.
     ಮೊಬೈಲ್ ದೂ: ೯೪೪೮೯ ೩೨೮೬೬.
E mail: bsr_kavisuresh@yahoo.co.in


ಪ್ರಕಾಶಕರು:
     ಕವಿ ಪ್ರಕಾಶನ, ಶಿವಮೊಗ್ಗ.

* * * *
ಪತ್ರಿಕೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಲೇಖಕರದ್ದೇ ಹೊರತು ಪತ್ರಿಕೆಯದಲ್ಲ.
***********

ಕವಿ ಮನೆತನದ ಮಂಗಳನಿಧಿಗೆ ವಂತಿಕೆ ನೀಡಿದ ಮಹನೀಯರು
೨೦೦೯ನೆಯ ಸಾಲು (೩೦-೧೧-೦೯ರ ವರೆಗೆ)

ಶ್ರೀ/ ಶ್ರೀಮತಿಯರಾದ:
೧. ಕವಿ ಮನೆತನದ ಓರ್ವ ಹಿರಿಯರು              ರೂ ೬೦೦೦
೨. ಹೆಚ್.ಎಸ್. ಪುಟ್ಟರಾಜು, ಜಾವಗಲ್                 ೫೦೦೦
೩. ಸುಬ್ಬಲಕ್ಷ್ಮಮ್ಮಸುಬ್ಬರಾವ್,ಬೆಂಗಳೂರು            ೫೦೦೦
೪. ಕ.ವೆಂ. ನಾಗರಾಜ್, ಹಾಸನ                             ೮೨೦
೫. ಕವಿ ವೆಂ. ಸುರೇಶ, ಶಿವಮೊಗ್ಗ                          ೫೦೦
೬. ಕೆ. ಶ್ರೀಕಂಠ, ಬೆಂಗಳೂರು                                ೫೦೦
ಒಟ್ಟು                                                            ೧೭೮೨೦ 


ವೆಚ್ಚದ ವಿವರ೧. ಮುದ್ರಣ ವೆಚ್ಚ                                        ರೂ.೬೪೦೦
೨. ಅಂಚೆ ವೆಚ್ಚ, ಇತ್ಯಾದಿ                                        ೩೯೫
ಒಟ್ಟು                                                               ೬೭೯೫ 


ಜಮಾ ಖರ್ಚು ವಿವರ
(೦೧-೦೬-೦೯ರಿಂದ ೩೦-೧೧-೦೯ರವರೆಗೆ)
೦೧-೦೬-೦೯ರಲ್ಲಿದ್ದಂತೆ ಪ್ರಾರಂಭಶಿಲ್ಕು              ರೂ.೩೧೬೬೦
ಸಂಗ್ರಹ (೦೧-೦೬-೦೯ರಿಂದ ೩೦-೧೧-೦೯ ರವರೆಗೆ)     ೭೦೦೦
ಬಡ್ಡಿ ಮೊಬಲಗು                                                     ೪೮೪
ಒಟ್ಟು                                                                 ೩೯೧೪೪
ವೆಚ್ಚ                                                                   ೬೭೯೫
ಆಖೈರು ಶಿಲ್ಕು (೩೦-೧೧-೦೯ ರಲ್ಲಿದ್ದಂತೆ)            ೩೨೩೪೯ 

* * * *
ರಕ್ಷಾಪುಟಗಳು ೧,೩ ಮತ್ತು ೪:
ಕೆಳದಿಯರಸರ ಎರಡನೆಯ ರಾಜಧಾನಿಯಾಗಿದ್ದ
ಇಕ್ಕೇರಿಯ  ಅಘೋರೇಶ್ವರ ದೇವಾಲಯದ  ದೃಶ್ಯಗಳು.


-ರಕ್ಷಾಪುಟ-2-
********************
 
 ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ
     ದಿ. ಕವಿ ವೆಂಕಟಸುಬ್ಬರಾಯರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹತ್ತು ವರ್ಷಗಳ ಹಿಂದಿನ ಪ್ರಸಂಗ: ನಾನು ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ನನ್ನ ಕಾಲು ಮುಟ್ಟಿ ನಮಸ್ಕರಿಸಿದ ಪ್ರಸಂಗ ನೆನಪಿನಲ್ಲಿ ಉಳಿದಿದೆ. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ನನ್ನ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ನಾನು ನನ್ನ ಸ್ವಭಾವಕ್ಕೆ ವಿರುದ್ಧವಾಗಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದುದರಿಂದ ಸಂಬಂಧಗಳು ಉಳಿದುಕೊಂಡಿರುವುದು ನನ್ನ ವೈಯಕ್ತಿಕ ಅನುಭವ.
     ಅಡಿಗಡಿಗೆ ಕಾಡಿ ಶಿರನರವ ತೀಡಿ|
     ಮಿಡಿದಿಹುದು ಉಡಿಯೊಳಗಿನ ಕಿಡಿಯು||
     ಗಡಿಬಿಡಿಯಲಡಿಯಿಡದೆ ತಡೆತಡೆದು|
     ಸಿಡಿನುಡಿಯ ನೀಡು ಸಿಹಿಯ ಮೂಢ||

     ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣೀಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ.      ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
     

     Doing good to others is virtue (Dharma); injuring others is sin. Strength and manliness are virtue; weakness and cowardice are sin. Independence is virtue; dependence is sin. Loving others is virtue; hating others is sin. Faith in God and one’s own Self is virtue; doubt is sin. Know that talking ill of others in private is a sin. You must wholly avoid it. Many things may occur to the mind, but it gradually makes a mountain of a molehill if you try to express them. Everything is ended if you forgive and forget.”
     ಆದ್ದರಿಂದ ಮರೆಯೋಣ; ಮರೆತು ಚೆನ್ನಾಗಿರೋಣ.
                                       ನಿಮ್ಮವನು,
                              -ಕ.ವೆಂ. ನಾಗರಾಜ್.

*****


ಪತ್ರಿಕೆಯ ಸಂಚಿಕೆಗಳನ್ನು ಸಂಗ್ರಹಿಸಿಡಿ    
 ಕವಿ ಕುಟುಂಬಗಳ ಕುರಿತು ಅಮೂಲ್ಯ ಮಾಹಿತಿಗಳು ಪ್ರತಿ ಸಂಚಿಕೆಯಲ್ಲೂ ಇರುವುದರಿಂದ ಎಲ್ಲಾ ಸಂಚಿಕೆಗಳನ್ನು ಕವಿ ಕುಟುಂಬಗಳವರು ಕುಟುಂಬದ ದಾಖಲೆಯಾಗಿ ಸಂರಕ್ಷಿಸಿಡಲು ಕೋರಿದೆ. ಮುಂದಿನ ಪೀಳಿಗೆಗೂ ಇದು ಉಪಯುಕ್ತವಾಗಲಿದೆ.
*****
ಗಮನಕ್ಕೆ
     ಕವಿಕಿರಣದ ಸದುದ್ದೇಶ, ಸದಾಶಯಗಳಿಗೆ ಪೂರಕವಾದ ಕಥೆ , ಕವನ, ಲೇಖನ, ಇತ್ಯಾದಿಗಳಿಗೆ ಆಹ್ವಾನವಿದೆ. ಸಕಾಲದಲ್ಲಿ ಕಳುಹಿಸಿಕೊಡಲು ಕೋರಿದೆ. ಸೀಮಿತ ಪುಟಸಂಖ್ಯೆಗಳ ಕಾರಣ ಕಿರುಬರಹಗಳಿಗೆ ಆದ್ಯತೆಯಿದೆ.

**************
ಪ್ರಾಯೋಜಕತ್ವ     

 ಪತ್ರಿಕೆಯ ಸಂಚಿಕೆಗಳನ್ನು ಪ್ರಾಯೋಜಿಸಲು ಅವಕಾಶವಿದೆ. ರೂ. ೬೦೦೦/- ಮತ್ತು ಮೇಲ್ಪಟ್ಟು ಮೊಬಲಗು ನೀಡಿದಲ್ಲಿ ಅವರನ್ನು ಸಂಚಿಕೆಯ ಪ್ರಾಯೋಜಕರೆಂದು ಪರಿಗಣಿಸಿ ಪತ್ರಿಕೆಯಲ್ಲಿ ಅವರ ಕುಟುಂಬದ ಪೂರ್ಣ  ಪುಟದ ಭಾವಚಿತ್ರ ಪ್ರಕಟಿಸಿ ಸ್ಮರಿಸಲಾಗುವುದು. ಪ್ರಾಯೋಜಕರು ಮುಂದೆ ಬರಲು ಕೋರಿದೆ.
**
ಈ ಸಂಚಿಕೆಯ ಪ್ರಾಯೋಜಕರು:
ಹೆಸರು ಪ್ರಕಟಣೆ ಬಯಸದ ಸಹೃದಯರು ಮತ್ತು ಕುಟುಂಬ, ಬೆಂಗಳೂರು.
**
ಮುಂದಿನ ಸಂಚಿಕೆಯ ಪ್ರಾಯೋಜಕರು:
ನೀವೇ ಇರಬಹುದೆ?

* * * * *
ಮೆರುಗು
ತಾಳ್ಮೆ, ಸಹನೆಗಳು ವ್ಯಕ್ತಿತ್ವಕ್ಕೆ ಮೆರುಗು ನೀಡುವ ಗುಣಗಳು. ಇವುಗಳಿಲ್ಲದವರು ತಾವೂ ನೆಮ್ಮದಿಯಾಗಿರುವುದಿಲ್ಲ; ಇತರರನನ್ನೂ ನೆಮ್ಮದಿಯಾಗಿರಲು ಬಿಡುವುದಿಲ್ಲ.
*************

Printed and published by K.V.Suresh at Kavi prakashana, Sowparnika, 3rd Cross, 3rd Main, Basaveshwaranagar, Shimoga-577204 on behalf of the owner K.V.Nagaraj, No.56, Sowparnika, 4th Cross, Rajendranagar, Shimoga-577204;   Editor:                 K.V. Nagaraj.

-ಪುಟಗಳು 1-3-
*************************


ಕೆಳದಿ ಕವಿಮನೆತನದ ಪೂರ್ವಜರು
ನವರಸಕವಿ ಕೆಳದಿ ಸುಬ್ಬಾಭಟ್ಟ
-ಡಾ: ಕೆಳದಿ ವೆಂಕಟೇಶ್ ಜೋಯಿಸ್

     ಕೆಳದಿ ಕವಿ ಮನೆತನದಲ್ಲಿ ಹೆಸರಾದ ಪ್ರಮುಖರಲ್ಲಿ ಲಿಂಗಣ್ಣ, ವೆಂಕಣ್ಣ ಇವರುಗಳ ಜೊತೆಗೆ ಕವಿ ಸುಬ್ಬಾಭಟ್ಟನೂ ಒಬ್ಬನು. ಕೆಳದಿ ಕಾಲದಲ್ಲಿ ಇಬ್ಬರು ಸುಬ್ಬ ಕವಿಗಳು ಬರುತ್ತಾರೆಂದೂ ಸುಬ್ಬ ಕವಿಯ ಕುರಿತು ಸಾಕಷ್ಟು ಚರ್ಚೆಯಿದೆ. ಯಕ್ಷಗಾನ ಪ್ರಸಂಗಗಳು ಹಾಗೂ ಅವುಗಳ ಕರ್ತೃಗಳ ಕುರಿತು ವಾದವಿವಾದವಿದೆ. ಡಾ:ಕೋಟ ಶಿವರಾಮ ಕಾರಂತರೂ, ಶ್ರೀ ಕುಕ್ಕಿಲ ಕೃಷ್ಣಭಟ್ಟರೂ ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ. ಅದರಲ್ಲಿ ಯಕ್ಷಗಾನ ನಾಟಕಗಳ ಕರ್ತೃಗಳ ಬಗ್ಗೆ ಮುಖ್ಯವಾಗಿ ಸುಬ್ಬ ಎಂಬುವನ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಸಿರುವುದಿದೆ. ಕೆಳದಿ ಪೀಳಿಗೆಯ ಸುಬ್ಬ ಮತ್ತು ಪಾರ್ತಿ ಸುಬ್ಬ ಎಂಬುವವರು ಒಬ್ಬರೇ ಅಥವಾ ಬೇರೆ ಬೇರೆಯವರೆ ಎಂಬುದು ಇಲ್ಲಿ ನಡೆದ ವಾದ. ಇವರಿಬ್ಬರ ತಂದೆ ತಾಯಿಯವರು ಬೇರೆ ಬೇರೆ. ಇವರು ರಚಿಸಿರುವ ಕೃತಿಗಳು, ಇವರ ಆಶ್ರಯದಾತರು ಬೇರೆ ಎಂಬುದು ಸಾಬೀತಾಗಿದೆ.

     ಕೆಳದಿ ಕವಿಗಳಲ್ಲಿ ವೆಂಕ, ಸುಬ್ಬರು ಹೆಚ್ಚು ಚರ್ಚೆಗೆ ಒಳಗಾಗಿದ್ದಾರೆ. ಶ್ರೀ ಶಿವರಾಮ ಕಾರಂತರು ಮೈರಾವಣ ಕಾಳಗದ ಕತೃವಾದ ಅಜಪುರದ ಸುಬ್ಬನಲ್ಲಿ, ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತಗಳನ್ನು ಬರೆದ ಕೆಳದಿಯ ಸುಬ್ಬನನ್ನೂ, ಐರಾವತ, ಶ್ರೀ ಕೃಷ್ಣಲೀಲೆ, ಕುಶಲವರ ಕಾಳಗಗಳನ್ನು ಬರೆದ ಅನಾಮಧೇಯ ಎನಿಸಿದ್ದ ಕುಕ್ಕಿಲರ ಪಾರ್ತಿಸುಬ್ಬನನ್ನೂ ಸೇರಿಸಿ ಒಬ್ಬ ಸುಬ್ಬನನ್ನು ಎತ್ತಿಹಿಡಿದಿರುವುದಿದೆ.  ಆದರೆ ಮೇಲಿನ ಪ್ರಸಂಗಗಳ ಕತೃಗಳು ಮೂವರು ಆಗಿಹೋಗಿದ್ದಾರೆ. ಅವರಲ್ಲಿ ಆಡುವಳ್ಳಿಯ ಸುಬ್ರಹ್ಮಣ್ಯ, ಕೆಳದಿಯ ಸುಬ್ಬ ಮತ್ತು ಪಾರ್ತಿ ಸುಬ್ಬ.
     ಪಾರ್ತಿ ಸುಬ್ಬ ಅಥವಾ ಹಂಪೆಯಾತ್ಮನ ಕುರಿತು ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ವೆಂಕಾರ್ಯನ ಕುರಿತು ಹೆಚ್ಚಿನ ಮಾಹಿತಿ ದೊರೆಯುತ್ತದೆ. ಈತ ಬಾಲ ವಾಲ್ಮೀಕಿ ಎಂದು ಖ್ಯಾತನಾಗಿದ್ದ ಪ್ರಧಾನಿ  ಅಥವಾ ಮಹಾಮಂತ್ರಿ ಆಗಿದ್ದನೆಂದು ಕಂಡು ಬರುತ್ತದೆ. ಈತನು ಕೆಳದಿಯ ಹಿರಿಯ ಬಸವಪ್ಪನಾಯಕನ ಆಸ್ಥಾನದಲ್ಲಿದ್ದನೆಂದು ಡಾ: ಶಿವರಾಮ ಕಾರಂತರ ಅಭಿಪ್ರಾಯ. ಆದರೆ ಕವಿ ಚರಿತ್ರೆಗಾರರ ಅಭಿಪ್ರಾಯ ಆಧರಿಸಿ ಕುಕ್ಕಿಲರು ಕ್ರಿ. ಶ. ೧೭೬೩ರ ಅನಂತರದಲ್ಲಿ ಕೆಳದಿಯನ್ನು ಆಳಿದ ಹೈದರಾಲಿಯ ಮಂತ್ರಿ ಆಗಿರಬಹುದೆಂದು ಹೇಳುತ್ತಾರೆ.  ರುಕ್ಮಿಣೀ ಸ್ವಯಂವರ ಪ್ರಸಂಗದ ಕೊನೆಯಲ್ಲಿ ಹೇಳಿರುವ ಮಾತುಗಳಿಂದ ಈತನು ಕೆಳದಿಯ ಭೂರಮಣನಾದ ಬಸವೇಂದ್ರನ ಆಶ್ರಯದಲ್ಲಿದ್ದ ಕವಿ ವೆಂಕಣಾರ್ಯ ಮತ್ತು  ಅವನ ಪತ್ನಿ ದೇವಮ್ಮ ಅವರ ಹಿರಿಯ ಮಗ ಚೆನ್ನಯ್ಯನ ತಮ್ಮ ಸುಬ್ಬ ಎಂಬುದು ಸ್ಪಷ್ತವಾಗುತ್ತದೆ. ಇವನು ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತ ಎಂಬ ಎರಡು ಪಸಂಗಗಳ ಕರ್ತೃ.
     ಪಾರಿಜಾತ ಮತ್ತು ರುಕ್ಮಿಣೀ ಸ್ವಯಂವರಗಳನ್ನು ಬರೆದ ಕೆಳದಿ ಸುಬ್ಬ ಮತ್ತು ಹನುಮದ್ರಾಮಾಯಣವನ್ನು ಬರೆದ ಆಡುವಳ್ಳಿ ಸುಬ್ಬ ಬೇರೆಬೇರೆಯವರು. ಇವನ ತಂದೆ ವೆಂಕಾರ್ಯ. ಈ ವೆಂಕಾರ್ಯನು ತನ್ನ ಕೃತಿಗಳಲ್ಲಿ ತನ್ನ ತಂದೆ ಲಿಂಗಪ್ಪನನ್ನು ಸ್ಮರಿಸಿದ್ದಾನೆಯೇ ಹೊರತು ಆಶ್ರಯದಾತನ ಹೆಸರು ಹೇಳಿಲ್ಲ. ಸಿಕ್ಕಿರುವ ಕೃತಿಗಳಲ್ಲಿ ಕೆಲವು ಗರಿಗಳು ಕಳೆದು ಹೋಗಿರುವುದರಿಂದ ಹೇಳಿದ್ದರೂ ಹೇಳಿರಬಹುದೆನಿಸುತ್ತದೆ. ಇವನ ಮಗ ಕೆಳದಿ ಸುಬ್ಬನು ತನ್ನ ರುಕ್ಮಿಣೀ ಸ್ವಯಂವರದ ಅಂತ್ಯದಲ್ಲಿ 'ಧಾರಿಣಗೆ ಪಶ್ಚಿಮದಿ ಶೋಭಿಪ| ವಾರಿನಿಧಿಯನಾಳ್ವ ಕೆಳದಿಯ| ಭೂರಮಣ ಬಸವೇಂದ್ರನಂಘ್ರೀಯ ಸೇರಿ ಬಾಳ್ವ ವೆಂಕಣಾರ್ಯನ ಮಗ ತಾನು' ಎಂದು ಹೇಳಿಕೊಂಡಿರುವುದರಿಂದ ಈ ವೆಂಕನಿಗೆ ಕೆಳದಿಯ ಕಿರಿಯ ಬಸವಪ್ಪ ನಾಯಕನ ಆಶ್ರಯವಿದ್ದುದು ಸ್ಪಷ್ಟವಾಗಿ ತಿಳಿಯುತ್ತದೆ.

     ರುಕ್ಮಿಣೀ ಸ್ವಯಂವರ, ಪಾರಿಜಾತ ಬರೆದ ಕೆಳದಿ ಸುಬ್ಬನು ಕೆಳದಿಯ ಕವಿ ಮನೆತನಕ್ಕೆ ಸೇರಿದವನು. ಕವಿ ಸುಬ್ಬ ಅಥವಾ ಸುಬ್ಬಾಭಟ್ಟ ಎಂದು ಕರೆಯಲ್ಪಡುತ್ತಿದ್ದ ಈತನು ಕೆಳದಿ ಸಾಮ್ರಾಜ್ಯದ ಕಡೆಯ ದಿನಗಳಲ್ಲಿದ್ದವನು. ಆಗಲೇ ಸಾಮ್ರಾಜ್ಯ ಕೊನೆಗೊಂಡ ನಂತರ ರಾಜಾಶ್ರಯ ಇಲ್ಲದೆ ಜನರ ನಡುವೆ ಆಶ್ರಯ ಪಡೆದುಕೊಂಡವನಿವನು. ಈತನು ಯಕ್ಷಗಾನ ಪಸಂಗವನ್ನು ರಚಿಸುವುದರ ಜೊತೆಗೆ ನಟನೆಯನ್ನೂ, ಭಾಗವತಿಗೆಯನ್ನೂ ರೂಢಿಸಿಕೊಂಡು ತನ್ನ ಬದುಕನ್ನು ಸಾಗಿಸಿದಂತೆ ಕಂಡು ಬರುತ್ತದೆ. ಈತನ ಎರಡು ಕೃತಿಗಳಲ್ಲಿ ರುಕ್ಮಿಣಿ ಸ್ವಯಂವರವನ್ನು ಕೆಳದಿಯ ಅರಸು ಮನೆತನ ಅಸ್ತಿತ್ವದಲ್ಲಿದ್ದಾಗ ರಚಿಸಿರುವಂತೆ ಕಂಡು ಬರುತ್ತದೆ. ಪಾರಿಜಾತವನ್ನು ಕೆಳದಿ ರಾಜ್ಯ ಪತನಾ ನಂತರ ರಚಿಸಿರಬೇಕು.  ರುಕ್ಮಿಣೀ ಸ್ವಯಂವರ ಪ್ರಸಂಗ ಕೃತಿಯಲ್ಲಿ ತನ್ನ ವಿಷಯವನ್ನು ಹೇಳುವ ಸಂಬಂಧದಲ್ಲಿ ತನ್ನ ಆಶ್ರಯದಾತ ಬಸವೇಂದ್ರ ಅಂದರೆ ಕಿರಿಯ ಬಸವಪ್ಪ ನಾಯಕನನ್ನು ಸ್ಮರಿಸಿದ್ದಾನೆ. ಇದು ಪಾರಿಜಾತ ಪ್ರಸಂಗದಲ್ಲಿ ಕಂಡುಬರುವುದಿಲ್ಲ. ಇದರ ಆಧಾರದಿಂದ ಇವನ ಕಾಲವನ್ನು ಕ್ರಿ. ಶ. ೧೭೬೦ ಎಂದು ಹೇಳಬಹುದು.
     ರುಕ್ಮಿಣೀ ಸ್ವಯಂವರ, ಪಾರಿಜಾತ  ಈ ಎರಡು ಪ್ರಸಂಗಗಳಿಗೆ ಭಾಗವತದಿಂದಲೇ ವಸ್ತುವನ್ನು ಆರಿಸಿಕೊಂಡಿದ್ದಾನೆ. ಇವುಗಳಲ್ಲಿ ಶೃಂಗಾರದ ಜೊತೆಗೆ ವೀರರಸವನ್ನೂ ಅಳವಡಿಸಿದ್ದಾನೆ. ಇಲ್ಲಿ ರುಕ್ಕ್ಮ, ಜೈದ್ಯಪತಿ ಮೊದಲಾದವರ ಗರ್ವಭಂಗವಾಗಿದ್ದರೆ, ಅಲ್ಲಿ ದೇವೇಂದ್ರನ ಅಹಂಕಾರ ಅಳಿದುದನ್ನು ಹೇಳುತ್ತದೆ.  ನರಕಾಸುರನ ವಧೆಯಗಿದೆ. ರುಕ್ಮಿಣೀ ಸ್ವಯಂವರಕ್ಕಿಂತ ಪಾರಿಜಾತ ಉತ್ತಮ ಕಲಾಕೃತಿ.
ರುಕ್ಮಿಣೀ ಸ್ವಯಂವರ:  
    ಈ ಯಕ್ಷಗಾನ ಕೃತಿಯ ಆರಂಭದಲ್ಲಿ ಕವಿಯು  ಗಣಪ, ಶಿವ, ಮುಕಾಂಬಿಕೆ ವಿಷ್ಣು, ಲಕ್ಷ್ಮೀ, ಬ್ರಹ್ಮ, ಶಾರದೆ ಇವರುಗಳ ಜೊತೆಗೆ ದೇವ ಗುರು ಪ್ರಾರ್ಥನೆ ಮಾಡುವುದರೊಂದಿಗೆ ಪ್ರಸಂಗವನ್ನು ಪ್ರಾರಂಭಿಸುತ್ತಾನೆ.  ದ್ವಾರಕಿಯ  ಕೃಷ್ಣ ತನ್ನ ಅಣ್ಣ ಬಲರಾಮನ ನೆರವಿನಿಂದ ಕೂಡಿನಪುರಕ್ಕೆ ಬಂದು ಅಲ್ಲಿನ ಅರಸನ ಮಗಳು ರುಕ್ಮಿಣಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುತ್ತಾನೆ. ರುಕ್ಮಿಣಿಯ ತಂದೆ ಭೀಷ್ಮಕನು ತನ್ನ ಮಗಳ ಇಚ್ಛೆ ಪೂರ್ಣವಾಗಲು ನೆರವಾಗುತ್ತಾನೆ. ಕೃಷ್ಣನೊಡನೆ ಅವಳ ಲಗ್ನವನ್ನು ವಿರೋಧಿಸಿದ ಅವಳ ಅಣ್ಣ ರುಕ್ಮ ಚೈದ್ಯರಾಜನಿಗೆ ಕೊಡಲು ಯತ್ನಿಸಿ ವಿಫಲನಾಗುತ್ತಾನೆ. ಕೃಷ್ಣನಿಂದ ರುಕ್ಮನ ಗರ್ವಭಂಗವಾಗುತ್ತದೆ. ಇದರಲ್ಲಿ ಕುಂಡಿನಪುರದಿಂದ ಕನ್ಯೆ ರುಕ್ಮಿಣಿಯ ದೌತ್ಯವನ್ನು ಹೊತ್ತು ದ್ವಾರಕಿಗೆ ಬಂದ ವಿಪ್ರನೊಬ್ಬನ ಪಾತ್ರ ಸೃಷ್ಟಿ ಚೆನ್ನಾಗಿದೆ. ಅವನು ತಂದೊಪ್ಪಿಸಿದ ಪತ್ರಸಾರ ಗಮನಿಸುವಂತಿದೆ.
ಪಾರಿಜಾತ:   

  ರುಕ್ಮಿಣೀ ಸ್ವಯಂವರದಂತೆ ಇದರಲ್ಲಿಯೂ ಆರಂಭದಲ್ಲಿ ತನ್ನ ಇಷ್ಟದೇವತೆಯದ ದೇವಕಿಯಣುಗನ ಪ್ರಾರ್ಥನೆಯ ನಂತರ ಗಣಪ, ಶಿವ, ಮೂಕಾಂಬಿಕೆಯರನ್ನು ಸ್ಮರಿಸಿ ದ್ವಿಪದಿಯಲ್ಲಿ
     ಪಾರಿಜಾತವ ತಂದು ರಂಜಿಸಿದ ಕಥೆಯ|
    ಸಾರವನು ಕುಟಜಾದ್ರಿ ಸದನ ವಾಸಿನಿಯ||
     ಕೃಪೆಯಿಂದ ಪೇಳ್ವೆ ನಾ ಯಕ್ಷಗಾನದಲಿ|
     ವಿಪುಳಮತಿಯುತರಿದ ಕೇಳಿ ಲಾಲಿಸಲಿ||
ಎಂದು ತನ್ನ ವಿನಯವನ್ನು ಮೆರೆದಿದ್ದಾನೆ.

     ಕೃಷ್ಣ ದ್ವಾರಕಿಯಲ್ಲಿದ್ದಾಗ ಒಂದು ದಿನ ನಾರದನ ಆಗಮನವಾಗುತ್ತದೆ. ಅರ್ಘ್ಯ ಪಾದ್ಯಾದಿಗಳನ್ನಿತ್ತ  ಕೃಷ್ಣ, ಅವರನ್ನು ಉಪಚರಿಸುತ್ತಾನೆ. ದೇವಮುನಿಯಿಂದ ಪಡೆದ ಪಾರಿಜಾತವನ್ನು ಕೃಷ್ಣ ರುಕ್ಮಿಣಿಗೆ ಮುಡಿಸುತ್ತಾನೆ. ದೂತಿಯೊಬ್ಬಳು ಸತ್ಯಭಾಮೆಯಲ್ಲಿ ವಿಷಯ ತಿಳಿಸಿದಾಗ ಅವಳಲ್ಲಿ ಸವತಿ ಮಾತ್ಸರ್ಯ ಬುಸುಗುಟ್ಟುತ್ತದೆ. ಕೃಷ್ಣ ಬರುವ ವೇಳೆಗೆ ಸಕಲಾಸ್ತ್ರಗಳನ್ನೂ ಸಿದ್ಧ ಪಡಿಸಿಕೊಳ್ಳುತ್ತಾಳೆ ಭಾಮೆ. ಆ ಸಂದರ್ಭದ  ಸಂಭಾಷಣೆ ಸ್ವಾರಸ್ಯವಾಗಿದೆ.
ಕೃಷ್ಣ-ಸತ್ಯಭಾಮೆಯರ ಸಂಭಾಷಣೆ:

ರಾಗ: ಸೌರಾಷ್ಟ್ರ,                          ಏಕತಾಳ
ಕೃಷ್ಣ: ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲು ತೆರೆಯೆ||
ಭಾಮೆ: ದ್ವಾರದಿ ದನಿಯನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು||
ಕೃಷ್ಣ: ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ||
ಭಾಮೆ: ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ||
ಕೃಷ್ಣ: ಕ್ರೂರ ಕಾಳಿಂಗನ ಪೆಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ||
ಭಾಮೆ: ಧೀರ ನೀನಾದರೆ ಪಾವನಾಡಿಸಿಕೊಂಡು                ಗಾರುಡಿಗಾರ ಹೋಗಯ್ಯ||
ಕೃಷ್ಣ: ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ||
ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ||
ಕೃಷ್ಣ: ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ||
ಭಾಮೆ: ಆದರೊಳ್ಳಿತು ಘೋರಾರಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ||
ಕೃಷ್ಣ: ಕಾಂತೆ ಕೇಳಾದರೇಳು ವೃಷಭವ ಕಟ್ಟಿ ನೀಲಕಾಂತೆಯ ತಂದವ ಕಾಣೆ||
ಭಾಮೆ: ಅಂತಾದರೊಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ||
ಕೃಷ್ಣ: ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ||
     ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ||

 ಉಡದೆ, ಉಣ್ಣದೆ, ಬರಿದೆ ಮಂಚದಲ್ಲಿ ಮಲಗಿದ್ದ ಪತ್ನಿಯನ್ನು ಸಂತೈಸಿ, ಅವಳ ಮುನಿಸಿನ ಕಾರಣವನ್ನು ತಿಳಿದ  ಕೃಷ್ಣ ನಿನಗೆ ಸುಮವೊಂದನೀವುದಾವಚಂದ ಎನುತವಳಿಗಿತ್ತೆ; ನಿನಗೆ ವೃಕ್ಷವನೆ ತಂದೀವೆ- ಎನ್ನುತ್ತಾನೆ.
     ಅಷ್ಟರಲ್ಲಿ ನರಕಾಸುರನ ಹಾವಳಿ ಹೆಚ್ಚಿ, ಅವನ ಉಪಟಳವನ್ನು ಕೊನೆಗಾಣಿಸಬೇಕೆಂದು ದೇವೇಂದ್ರ ಶ್ರೀ ವಿಷ್ಣುವಿನಲ್ಲಿ ಬಿನ್ನಹ ಮಾಡಿಕೊಂಡಿರುತ್ತಾನೆ. ಕಾಕತಾಳೀಯವೆನಿಸುವಂತೆ ಎರಡು ಕಾರ್ಯಗಳು ಒಮ್ಮೆಲೇ ಕೂಡಿದಂತಾಗಿ ಕೃಷ್ಣ ಗರುಡನ ಬೆನ್ನೇರಿ ಭಾಮೆಯೊಡನೆ ಇಂದ್ರ ಲೋಕದತ್ತ ಧಾವಿಸುತ್ತಾನೆ. ಹಾದಿಯಲ್ಲಿ ಪ್ರಾಗ್ಜೋತಿಷಪುರ ಗೋಚರಿಸುತ್ತದೆ. ಅಲ್ಲಿ  ಕೃಷ್ಣ ಒಳಹೊಕ್ಕು ಮುರ, ನರಕಾಸುರ ಮೊದಲಾದ ರಕ್ಕಸರನ್ನು ಸಂಹರಿಸಿ ಕಂಟಕ ನಿವಾರಣೆ ಮಾಡುತ್ತಾನೆ. ದೇವಲೋಕದಲ್ಲಿ ದೇವ ದಂಪತಿಗಳಿಗೆ ಅಭೂತ ಪೂರ್ವ ಸ್ವಾಗತ ಲಭಿಸುತ್ತದೆ. ಆದರೆ ಸತ್ಯಭಾಮೆ ಕೃಷ್ಣನ ಮಾತನ್ನೂ ಲೆಕ್ಕಿಸದೆ ಅಲ್ಲಿದ್ದ ಪಾರಿಜಾತದ ವೃಕ್ಷವನ್ನು ಬೇರು ಸಹಿತ ಕಿತ್ತು ಗರುಡನ ಹೆಗಲಿಗೇರಿಸುತ್ತಾಳೆ. ಅದರಸಲುವಾಗಿ ಇಂದ್ರನೊಡನೆ ಯುದ್ಧ ನಡೆದು ಇಂದ್ರನ ಗರ್ವಭಂಗವಾಗುತ್ತದೆ; ಲೋಕ ಕಲ್ಯಾಣವಾಗುತ್ತದೆ. ಈ ಕಥೆಯ ವಸ್ತುವನ್ನು ಎತ್ತಿಕೊಂಡು ರಸ ಪೂರ್ಣವಾದೊಂದು ಯಕ್ಷಗಾನವನ್ನು ಕವಿ ರಚಿಸಿದ್ದಾನೆ. ಕೆಳದಿ ಸುಬ್ಬನ ಪಾಂಡಿತ್ಯ ಪದರ್ಶನಕ್ಕೆ  ಇದೊಂದು ಉತ್ತಮ ನಿದರ್ಶನ ಚೂರ್ಣಿಕೆಯಗಿದೆ.
     ಡಾ ಸಾ.ಶಿ. ಮರುಳಯ್ಯನವರು ಹೇಳುವಂತೆ ಕೆಳದಿ ಸುಬ್ಬನ ಎರಡೂ  ಪ್ರಸಂಗಗಳಲ್ಲಿ ಭಕ್ತಿಯ ಭಾಗೀರಥಿ ನಿರರ್ಗಳವಾಗಿ ಹರಿದಿದ್ದಾಳೆ. ಅಲ್ಲಿನ ಪ್ರಮುಖ ರಸಗಳಾದ ಶೃಂಗಾರ, ಹಾಸ್ಯ, ಕರುಣ, ವೀರಗಳ ಜೊತೆ ಜೊತೆಯಲ್ಲಿ ಭಕ್ತಿರಸವೂ ಪ್ರವಹಿಸಿದೆ. ತನ್ನ ಕುಲದೇವತೆ ಕೊಲ್ಲೂರು ಮೂಕಾಂಬಿಕೆಯನ್ನು ಕುರಿತ ಅವನ ಭಕ್ತಿಗೀತೆಯೊಂದಿಗೆ ಮಂಗಳ ಹಾಡಬಹುದು.  ಒಟ್ಟಿನಲ್ಲಿ ಕವಿ ಸುಬ್ಬ ಅಥವಾ ಸುಬ್ಬಾಭಟ್ಟ  ಕೆಳದಿ ಕವಿ ಮನೆತನದ ಮತ್ತೊಂದು ಕುಸುಮ. ಈತನೂ ಲಿಂಗಣ್ಣ ಕವಿಯಂತೆ ಸಂಪನ್ನ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ.
*****
ಮನವಿ    

     ಇದು ಕವಿ ವಂಶಸ್ಥರ ಕುಟುಂಬದ ಹಾಗೂ ಬಂಧು ಬಳಗದವರ ಪತ್ರಿಕೆಯಾಗಿದ್ದು, ಈ ಪತ್ರಿಕೆಗೆ ಕುಟುಂಬದವರೇ ಆಧಾರ. ಈಗಾಗಲೇ ನಿರ್ಧಾರವಾಗಿರುವಂತೆ ಪ್ರತಿ ಕುಟುಂಬದ ಪ್ರತಿ ಘಟಕದಿಂದ ವಾರ್ಷಿಕ ರೂ. ೫೦೦/- ಅನ್ನು ವಂತಿಕೆಯಾಗಿ ಸಂಗ್ರಹಿಸಲು ಉದ್ದೇಶಿಸಿದ ವಿಷಯ ತಿಳಿದದ್ದೇ ಆಗಿದೆ.  ಈ ಹಣವನ್ನು ಪತ್ರಿಕೆಗೆ ಮಾತ್ರವಲ್ಲದೆ ಕುಟುಂಬಗಳ ವಾರ್ಷಿಕ ಸಮ್ಮೇಳನ ನಡೆಸಲು ಯಾರೂ ಮುಂದೆ ಬರದಿದ್ದ ಸಂದರ್ಭದಲ್ಲಿ ಸಹ ಬಳಸಲು ಉದ್ದೇಶಿಸಿರುವುದರಿಂದ ಎಲ್ಲರ ಸಹಕಾರ ಕೋರಿದೆ. ವಾರ್ಷಿಕವಾಗಿ ರೂ. ೫೦೦/- ನೀಡುವುದು ಕಷ್ಟವಾಗಲಾರದಾದರೂ, ಇಷ್ಟೇ ಕೊಡಬೇಕೆಂದು ಒತ್ತಾಯವಿರುವುದಿಲ್ಲ. ವಂತಿಕೆ ಸಂಗ್ರಹಕ್ಕೆ ಯಾರನ್ನೂ ನಿಯೋಜಿಸಿರುವುದಿಲ್ಲ. ದಯವಿಟ್ಟು ಪ್ರತಿ ಕುಟುಂಬದವರೂ ಸ್ವಯಂ ಪ್ರೇರಿತರಾಗಿ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಪಾವತಿಸುವುದು. ಪಾವತಿಗೆ ರಸೀದಿ ನೀಡಲಾಗುವುದು.
     ಕವಿಮನೆತನದ ಹೆಣ್ಣು ಮಕ್ಕಳು ಸೇರಿರುವ ಬಳಗದ ಕುಟುಂಬಗಳವರು ಹಾಗೂ ಹಿತೈಷಿಗಳು ಸ್ವ ಇಚ್ಛೆಯಿಂದ ಸಹಕಾರ ನೀಡಿದಲ್ಲಿ ಸ್ವಾಗತವಿದೆ.
     ಸಂಗ್ರಹವಾದ ಮೊಬಲಗನ್ನು ಶ್ರೀ ಸಾ.ಕ. ಕೃಷ್ಣಮೂರ್ತಿ ಮತ್ತು ಶ್ರೀ ಕವಿಸುರೇಶರ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ೨ನೆಯ ಹಂತದ ಸಿಂಡಿಕೇಟ್ ಬ್ಯಾಂಕ್‌ನ ಶಾಖೆಯಲ್ಲಿ ಜಂಟಿ ಖಾತೆಯಲ್ಲಿ  ಜಮಾ ಇರಿಸಿ, ಸಮಿತಿ ನಿರ್ಧಾರ ಪಡೆದು ವೆಚ್ಚ ಮಾಡಲಾಗುವುದು. ಖಾತೆಸಂ. ೦೪೭೮೨೦೧೦೦೩೭೬೫೦   ಆಗಿದ್ದು, ಈ ಖಾತೆಗೆ ನೇರವಾಗಿ ಜಮಾ ಮಾಡಲೂ ಅವಕಾಶವಿದೆ. ಆದಾಯ- ವೆಚ್ಚದ ವಿವರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.. ಪರಿಶೀಲನೆಗೂ ಅವಕಾಶವಿದೆ.
     ಸಂಗ್ರಹವಾಗುವ ಮೊಬಲಗು ಸದುದ್ದೇಶಕ್ಕೆ/ ಸಮಾಜಕಾರ್ಯಕ್ಕೆ ಮಾತ್ರ ಬಳಕೆಯಾಗುವುದರಿಂದ ಮನೆಗಳಲ್ಲಿ ಶುಭಕಾರ್ಯ ನಡೆಯುವ ಮತ್ತು  ಇತರ ಸಂದರ್ಭಗಳಲ್ಲಿ ಹಾಗೂ ಹಿರಿಯರ ನೆನಪಿಗಾಗಿ ಮಂಗಳನಿಧಿ ಹೆಸರಿನಲ್ಲಿ ಸಹ ದೇಣಿಗೆ ನೀಡಬಹುದು.

***************
-ಪುಟಗಳು 4-6-

***************
ಹಿರಿಯ ಚೇತನದ ಕಣ್ಮರೆ

     ಸಮಕಾಲೀನ ಕವಿ ಮನೆತನದ ಕುಟುಂಬಗಳ ಪೈಕಿ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶ್ರೀಯುತ ಕವಿ ವೆಂಕಟ ಸುಬ್ಬರಾಯರು ತಮ್ಮ ೮೫ನೆಯ ವಯಸ್ಸಿನಲ್ಲಿ ದಿನಾಂಕ ೧೪-೦೭-೨೦೦೯ರಂದು ವಿಧಿವಶರಾದರೆಂದು ತಿಳಿಸಲು ವಿಷಾದವಾಗುತ್ತದೆ. ಕಳೆದ ೫ ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದ, ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಶಿರಸ್ತೇದಾರರಾಗಿದ್ದ ಶ್ರೀಯುತರು ದಕ್ಷ ಆಡಳಿತ, ಶಿಸ್ತು, ಸ್ವಾಭಿಮಾನ  ಮತ್ತು ಸಮಯಪಾಲನೆಗೆ ಹೆಸರಾಗಿದ್ದರು. ಮಿತಭಾಷಿಯಾಗಿದ್ದ ಇವರು ಜೀವಿತಾವಧಿಯಲ್ಲಿ ಕೆಟ್ಟ ಮಾತುಗಳನ್ನಾಡಿದ್ದನ್ನು ಕೇಳಿದವರಿಲ್ಲ. ಕೆಳದಿ ಕವಿ ಮನೆತನದ ಕುಟುಂಬಗಳು ಪರಸ್ಪರ ಒಗ್ಗೂಡಿ ಇವರ ಮಾರ್ಗದರ್ಶನದಲ್ಲಿ ವಾರ್ಷಿಕ ಸಮ್ಮೇಳನಗಳು ನಡೆದ ಬಗ್ಗೆ ಅವರಿಗೆ ಸಂತೋಷವಾಗಿತ್ತು. ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಸದಾ ಅವರ ಆಶೀರ್ವಾದವಿತ್ತು. ಪತ್ನಿ ಸೀತಮ್ಮ, ಮಕ್ಕಳು ನಾಗರಾಜ  (ಪತ್ರಿಕೆಯ ಸಂಪಾದಕ), ಸುರೇಶ (ಸಹ ಸಂಪಾದಕ), ಲಲಿತಾಂಬಾ, ಶ್ರೀಧರ, ಅನಂತರವರು ಸೇರಿದಂತೆ ಅಪಾರ ಬಂಧು ಬಳಗದವರ ದು:ಖದಲ್ಲಿ ಕವಿಕಿರಣ ಬಳಗ ಭಾಗಿಯಾಗಿದ್ದು ಅಗಲಿದ ಹಿರಿಯ ಚೇತನಕ್ಕೆ ಶಾಂತಿ ಕೋರುತ್ತದೆ. **********************
ಮಿನಿಕಥೆ

ತೊಳಲಾಟ
    ಅವನು ಆಹಾರ ಇಲಾಖೆಯಲ್ಲಿ ಫುಡ್‌ಇನ್ಸ್‌ಪೆಕ್ಟರ್ ಆಗಿದ್ದ. ಸಾಕಷ್ಟು ಕಮಾಯಿ ಬರುವ ಆ ಹುದ್ದೆಯಲ್ಲಿದ್ದರೂ ಅವನೊಬ್ಬ ನೀತಿ ನಿಯತ್ತಿನ ಪ್ರಾಣಿಯಾಗಿದ್ದು ಲಂಚಕ್ಕೆ ಕೈ ಒಡ್ಡುತ್ತಿರಲಿಲ್ಲ. ಹಾಗೆಂದು ಅವನ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವೇನಾಗಿರಲಿಲ್ಲ. ಕೆಳಮಧ್ಯಮ ವರ್ಗಕ್ಕೆ ಸೇರಿಸಬಹುದಾದ ಕುಟುಂಬ ಅವನದು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಸ್ವಭಾವದ ಅವನಿಗೆ ತಿಂಗಳ ಕೊನೆಯ ಭಾಗದಲ್ಲಿ ಇನ್ನೂ ಸಂಬಳ ಬರಲು ಎಷ್ಟು ದಿನ ಎಂದು ಲೆಕ್ಕ ಹಾಕಬೇಕಾಗುತ್ತಿತ್ತು. ಇಂತಹುದೇ ಒಂದು ದಿನ ಆತ ಒಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ತಪಾಸಣೆಗೆ ಹೋದ. ಅಂಗಡಿಯ ಮಾಲಿಕನ ಲೆಕ್ಕಪತ್ರಗಳನ್ನು ನೋಡಿ ಹೊರಡುವ ಸಂದರ್ಭದಲ್ಲಿ ಅವನ ಸ್ವಭಾವದ ಅರಿವಿದ್ದ ಮಾಲೀಕ 'ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಲಂಚ ಅಲ್ಲ. ಮನೆಗೆ ಹಣ್ಣು ತೆಗೆದುಕೊಂಡು ಹೋಗಿ ಸ್ವಾಮಿ' ಎಂದು ಐವತ್ತು ರೂಪಾಯಿ ಕೊಡಬಂದಾಗ ಬೇಡ ಎಂದರೂ ಬಲವಂತವಾಗಿ ಆತನ ಜೇಬಿಗೆ ಹಾಕಿದ. ಅವನಿಗೆ ಹಣದ ಅಗತ್ಯವಿತ್ತು. ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿತ್ತು. ಹಾಗಾಗಿ ಸುಮ್ಮನೆ ಹೊರಬಂದ. ಜೇಬಿನಲ್ಲಿ ಹಣವಿದೆ. ಯಾತಕ್ಕಾದರೂ ಉಪಯೋಗಕ್ಕೆ ಆಗುತ್ತದೆ ಎಂದು ಅನ್ನಿಸುತ್ತಿದ್ದರೂ ಅವನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಸರಿಯಾಗಿ ಊಟ ಸೇರಲಿಲ್ಲ. ರಾತ್ರಿ ನಿದ್ದೆಯೂ ಬರಲಿಲ್ಲ. ಬಹಳಷ್ಟು ಯೋಚಿಸಿ ಆ ಹಣ ಹಿಂತಿರುಗಿಸಲು ನಿರ್ಧರಿಸಿದ ಮೇಲಷ್ಟೇ ಅವನಿಗೆ ನಿದ್ದೆ ಬಂದಿದ್ದು. ಬೆಳಿಗ್ಗೆ ಬೇಗ ಎದ್ದು ಸ್ನಾನ, ತಿಂಡಿ ಮುಗಿಸಿ ಹೋದರೆ ಅಂಗಡಿಯ ಬಾಗಿಲು ಇನ್ನೂ ತೆರೆದಿರಲಿಲ್ಲ. ಮಾಲೀಕನಿಗೆ ಕಾಯುತ್ತಾ ಅಂಗಡಿಯ ಕಟ್ಟೆಯ ಮೇಲೆ ಕುಳಿತಿದ್ದ. ಸ್ವಲ್ಪ ಸಮಯದ ನಂತರ ಬಂದ ಮಾಲೀಕ ಫುಡ್ ಇನ್ಸ್‌ಪೆಕ್ಟರ್ ಅಂಗಡಿಯ ಬಳಿ ಕಾಯುತ್ತಿದ್ದುದನ್ನು ನೋಡಿ ಗಾಬರಿಗೊಂಡ. ಏನೋ ಗ್ರಹಚಾರ ಕಾದಿದೆ ಅಂದುಕೊಂಡವನಿಗೆ ಅವನು ಐವತ್ತು ರೂಪಾಯಿ ಹಿಂತಿರುಗಿಸಿ 'ನೀವು ಹಣ ಕೊಟ್ಟಾಗ ನನ್ನ ಮನಸ್ಸು ಚಂಚಲವಾಯಿತು. ಇನ್ನೊಮ್ಮೆ ದಯವಿಟ್ಟು ಈ ರೀತಿ ಮಾಡಬೇಡಿ' ಎಂದು ಹೇಳಿ ವಾಪಸು ನಿರಾಳ ಮನಸ್ಸಿನಲ್ಲಿ ಹಿಂತಿರುಗಿದ. ಅಂಗಡಿಯವನೂ ನಿಟ್ಟುಸಿರು ಬಿಟ್ಟ.
-ರಾಜು.
*****

ಲಿಂಗಣ್ಣ ಕವಿಯ
ಕೆಳದಿ ನೃಪವಿಜಯ

ಗದ್ಯಾನುವಾದ: ಕೆ. ಗುಂಡಾಜೋಯಿಸ್



ಪ್ರಥಮಾಶ್ವಾಸಂ-೩-
ನೋಡಿ ನಗುವಬಲೆಯರ ಪ
ಲ್ಗಾಡಿಯನಭಿವೀಕ್ಷಿಸುತ್ತೆ ಪರಿಪಕ್ವಲಸ
ದ್ದಾಡಿಮಿಯ ಬೀಜಮೆನುತೆಡೆ
ಯಾಡುತೆ ಕಾಲ್ದೆಗೆಯುತಿರ್ಪುವಾ ಕೀರಂಗಳ್     | ೨೪ |
   
ಆ ಗಿಳಿಗಳನ್ನು ನೋಡಿ ನಗುವ ಹೆಂಗಸರ ಹಲ್ಲಿನ ಚೆಂದವನ್ನು ಕಂಡು ಮಾಗಿದ ದಾಳಿಂಬೆ ಬೀಜ ಎಂದು ಭಾವಿಸಿ ಆ ಗಿಳಿಗಳು ಸುತ್ತಾಡಿ ಓಡಿ ಹೋಗುತ್ತವೆ.
ವ|| ಮತ್ತಮದಲ್ಲದಾ ದೇಶದೊಳ್
ಪೊಸ ಪೂಗಳ ರಸದಿಕ್ಷು
ಪ್ರಸರದ ಪಾಲ್ಗಳ ಸುನಾರಿಕೇಳಫಲಾಂಭೋ
ವಿಸರದ ಪರಿಕಾಲ್ಗಳನುಡು
ಪಸಮೂಹದೆ ಪಾಯ್ವುದಲ್ಲಿ ಪಾಂಥಸಮಾಜಂ     | ೨೫ |
    

 ಮತ್ತೆ ಅದಲ್ಲದೆ ಆ ದೇಶದಲ್ಲಿ ಹೊಸ ಹೂವುಗಳ ಮಕರಂದ, ಕಬ್ಬಿನಹಾಲು, ಎಳನೀರು ಇವುಗಳ ಕಾಲುವೆಯನ್ನು ಅಲ್ಲಿನ ದಾರಿಗರು ತೆಪ್ಪದ ಮೂಲಕ ದಾಟುತ್ತಾರೆ!
ಬಾಳೆಯಬಟ್ಟಗಂಬಗಳಿನಿಕ್ಷುಗಳೊಳ್ದೊಲೆಯಿಂದಮಂಬುರು
ಣ್ಣಾಳದ ಜಂತೆಯಿಂ ಪೊಸತಳಿರ್ವಸೆಯಿಂ ಹಿಮವಾರಿಪೂರ್ಣಕುಂ
ಭಾಳಿಯಿನಚ್ಚ ಮಲ್ಲಿಗೆಯ ಕುಚ್ಚದೆ ಬಾಳದ ಪಂದಲಿಂ ಪ್ರಪಾ ಶಾಲೆಗಳಧ್ವದೊಳ್ ಸ್ಮರವಿವಾಹಗೃಹಂಗಳೊಲಾ ವಿರಾಜಿಕುಂ                                                    | ೨೬ |
  

   ಆ ನಾಡಿನಲ್ಲಿ ಅರವಟ್ಟಿಗೆಗಳು ಮನ್ಮಥನ ಮದುವೆಯ ಮನೆಯ ಹಾಗೆ ಶೋಭಿಸುತ್ತವೆ. ಅವುಗಳ ಮುಂದೆ ಬಾಳೆಯ ಉರುಟಾದ ಕಂಬಗಳು, ಕಬ್ಬಿನ ತೊಲೆ, ತಾವರೆದಂಟಿನ ಜಂತೆ, ಹೊಡ ಚಿಗುರಿನ ಹಸೆ (ಚಾಪೆ), ತಣ್ಣೀರು ತುಂಬಿದ ಕೊಡಗಳು, ಮಲ್ಲಿಗೆಯ ಕುಚ್ಚು, ಲಾಮಂಚದ ಚಪ್ಪರ ಇವುಗಳು ಶೋಭಿಸುತ್ತಿವೆ.
ವ|| ಮತ್ತಮಲ್ಲಿ
ನೀರೆರೆವರ ತೋಳ್ಮೊದಲಿಂ
ಗೇರಿರೆ ಕುಡಿವರಿದು ದಿಟ್ಟಿ ಸರಿಸದ ಪೊಯ್ನೀ
ರ್ಧಾರೆ ಪೊರಸೂಸೆ ಪಾಂಥ
ರ್ನೀರೆಯರಂ ಬಾಂಗೆ ಬಾಯಬಿಟ್ಟುರೆ ನಗಿಪರ್   | ೨೭ |

ವ|| ಮತ್ತೂ ಕೂಡ ಆ ಅರವಟ್ಟಿಗೆಯಲ್ಲಿ
     ಕೈಗೆ ನೀರು ಎರೆಯುವ ಹೆಂಗಸಿನ ತೋಳಿನ ಬುಡಕ್ಕೆ ನೀರು ಕುಡಿಯುವ ದಾರಿಗನ ದೃಷ್ಟಿಯು ಮೇಲೇರಿದ್ದರಿಂದ, ಗಮನಿಸದೆ ಅವನ ಬೊಗಸೆಯ ನೀರು ಚೆಲ್ಲಿ ಹೋಗುತ್ತಿತ್ತು. ಹೀಗೆ ದಾರಿಗರು ಆಕಾಶವನ್ನು ನೋಡುತ್ತಾ ಬಾಯ್ದೆರೆಯುತ್ತಿದ್ದರು. ಅವರನ್ನು ಕಂಡು ಹೆಂಗಸರು ನಗುತ್ತಿದ್ದರು.

ಕುಂದದೆ ನೀರೆರೆವಳ ಸು
ಯ್ಮಂದಸ್ಮಿತರೋಚಿ ಮುಸುಕಿ ಪರಿಮಳಿಸುತೆ ಬೆ
ಳ್ವೊಂದಿರೆ ಕುಡಿನೀರ್ ತನುಗಿದು
ಚಂದನರಸಮೆಂದು ಪೂಸಬಗೆವರ್ ಪಾಂಥರ್    | ೨೮ |
    

 ನೀರು ಹೊಯ್ಯುವವಳ ಮುಗುಳುನಗೆಯ ಕಾಂತಿ ಬೆರೆತಿದ್ದರಿಂದ ಪರಿಮಳಿಸಿ, ಬೆಳ್ಳಗಾದ ಕುಡಿಯುವ ನೀರನ್ನು ಕಂಡು, ಇದು ಮೈಗೆ ಹಚ್ಚುವ ಶ್ರೀಗಂಧದ ಲೇಪವೆಂದು ದಾರಿಗರು ಹಚ್ಚಿಕೊಳ್ಳಲು ಬಯಸುತ್ತಿದ್ದರು.
ವ||ಇಂತನವರತಮಶೇಷಸುಖಸಂಪತ್ಸಮಾಜದಿಂದಾದೇಶಂ ವಿರಾಜಿಸುತ್ತುಮಿರಲ್
ಅದರೊಳ್ ಮೈಮೆಯಿನೆಸೆವಾ
ತ್ರಿದಶ ತರಂಗಿಣಿಗಮಧಿಕಮೆನಿಸುವ ವರದಾ
ನದಿಮೂಲಮೊಪ್ಪುಗುಂ ತ
ನ್ನದಿಯುತ್ತರತಟದೊಳರ್ಧಯೋಜನದೆಡೆಯೊಳ್| ೨೯ |
    

 ವ|| ಹೀಗೆ ಎಲ್ಲಾ ರೀತಿಯಿಂದಲೂ ಸುಖ, ಸಂಪತ್ತು, ಸಮೂಹಗಳಿಂದ ಆ ದೇಶವು ಯಾವಾಗಲೂ ಮೆರೆಯುತ್ತಿರುವಾಗ
     ಆ ನಾಡಿನಲ್ಲಿ ದೇವಗಂಗೆಗಿಂತಲೂ ಮಿಗಿಲಾದ ವರದಾನದಿಯ ಮೂಲಸ್ಥಾನವು ಶೋಭಿಸುತ್ತಿದೆ. ಆ ನದಿಯ ಉತ್ತರ ದಡದ ಅರ್ಧಯೋಜನದಲ್ಲಿ

ಆ ಕರ್ಣಾಟಕ ದೇಶದ
ಭೂಕಾಂತೆಯ ವಕ್ತ್ರಪದ್ಮಮೆನೆ ರಾಜಿಸುಗುಂ
ಶ್ರೀಕರಮೆನಿಸಿಯಜಸ್ರಂ
ನಾಕವನಿಳಿಕೈದ ಕೆಳದಿಯೆಂದೆನಿಪ ಪುರಂ       | ೩೦ |
    

 ಕರ್ಣಾಟಕ ದೇಶದ ಭೂಮಿ ಎಂಬ ಅಂಗನೆಯ ಮುಖಕಮಲವೆಂಬಂತೆ ಕೆಳದಿ ಎಂಬ ಪಟ್ಟಣವು ಸ್ವರ್ಗಕ್ಕೆ ಮಿಗಿಲಾಗಿ ಯಾವಾಗಲೂ ಸಂಪದ್ಭರಿತವಾಗಿ  ಮೆರೆಯುತ್ತಿದೆ.
ಶ್ರೀಮತ್ಕೆಳೆದಿಯ ಪೊಳಲೊಳ್
ಹೈಮವತೀರಮಣನೆಸೆವ ಲಿಂಗಾಕೃತಿಯಿಂ
ರಾಮೇಶ್ವರಾಖ್ಯೆಯಂ ತಳೆ
ದಾ ಮಹಿಯೊಳ್ ಪುತ್ತದಲ್ಲಿ ನೆಲೆಸಿರುತಿರ್ದಂ      | ೩೧
|

ಕೆಳದಿಯ ಪಟ್ಟಣದಲ್ಲಿ ಪಾರ್ವತೀರಮಣನಾದ ಶಿವನು ಲಿಂಗಾಕೃತಿಯಿಂದ ರಾಮೇಶ್ವರ ಎಂಬ ಹೆಸರನ್ನು ತಳೆದು ಹುತ್ತದಲ್ಲಿ ವಾಸಿಸುತ್ತಿದ್ದನು.
ಆ ಪುರದ ಮುಂತಣಿಳೆಯ ಸ
ಮೀಪಕೊಳೊತ್ತಾಗಿ ಚೆಲ್ವ ಪಳ್ಳಿಯ ಬಯಲೆಂ
ಬಾ ಪಳ್ಳಿ ಕೃಷಿಕಜನಸ
ದ್ಯ್ವಾಪಾರನಿಳಿಂಪವಲ್ಲಯಾರಾಜಿಸುಗುಂ       | ೩೨ |
    

ಆ ಪಟ್ಟಣದ ಮುಂದುಗಡೆ ಹತ್ತಿರದಲ್ಲಿಯೇ ಹಳ್ಳಿಬಯಲು ಎಂಬ ಹಳ್ಳಿ ಇದೆ. ಅಲ್ಲಿ ರೈತರ ಸಮೂಹ ಶೋಭಿಸುತ್ತದೆ.
ಮಿಸುಪಾ ಪಳ್ಳಿಯ ಬಯಲೆಂ
ದೆನಿಪೂರಿನ ಮೂಲಿ ಬಸವಪಂ ಕೃಷಿಕರ್ಮಾ
ಭ್ಯನುಪಗತಜೀವನಂ ತಾ
ನೆನಿಸಿ ವಿರಾಜಿಸುತುಮಿರ್ದನದರೊಳಜಸ್ರಂ       | ೩೩ |
   

  ಆ ಹಳ್ಳಿಯ ಬಯಲಿನಲ್ಲಿ ಮೂಲನಿವಾಸಿಯಾದ ಬಸವಪ್ಪನೆಂಬುವನು ಬೇಸಾಯವೇ ತನ್ನ ಜೀವನವೆಂದು ಭಾವಿಸಿ ಯಾವಾಗಲೂ ಕೃಷಿತತ್ಪರನಾಗಿದ್ದನು.
ವ|| ಮತ್ತಮದಲ್ಲದಾ ಬಸವಪಂ ಪರಶಿವಮೂರ್ತಿ ಸ್ವರೂಪ ಬಸವೇಶ್ವರಾಂಶೀಭೂತನಪ್ಪ ಕಾರಣ ಪುರುಷನುಂ ಲಿಂಗಾಂಗ ಸಂಬಂಧಿ ಷಟ್ಸ್ಥಲ ಜ್ಞಾನಾನುಸಂಧಾನ ಮಹಾನುಭವ ಪ್ರಾಜ್ಞನುಂ, ನಿರುಪಮ ನಿರಾಭಾರಿ ವೀರಶೈವ ಸದಾಚಾರಾಚರಣಸಂಪನ್ನನುಂ, ಶ್ರೀ ಗುರುಲಿಂಗಜಂಗಮ ಪದಾಂಬುಜಸೇವಾತತ್ಪರಾಮಲಚಿತ್ತನುಮೆನಿಸಿ ವಿರಾಜಿಸುತಿರ್ದನಂತುಮಲ್ಲದೆಯುಂ    
 ಅಲ್ಲದೆ ಆ ಬಸವಪ್ಪನು ಪರಮಶಿವಮೂರ್ತಿ ಸ್ವರೂಪನಾದ ಬಸವೇಶ್ವರನ ಅಂಶದ ಕಾರಣಪುರುಷನೂ ಷಟ್ ಸ್ಥಲಜ್ಞಾನವುಳ್ಳ ಪ್ರಾಜ್ಞನೂ, ಅಸಮಾನನೂ, ನಿಸ್ಪೃಹನೂ ವೀರಶೈವ ಸದಾಚಾರದಿಂದ ಕೂಡಿದವನೂ ಗುರುಲಿಂಗಜಂಗಮರ ಪಾದಸೇವೆಯಲ್ಲಿಯೇ ನೆಟ್ಟಮನಸ್ಸುಳ್ಳವನೂ ಆಗಿ ಮೆರೆಯುತ್ತಿದ್ದನು.
ಹರಪದಪಯೋಜಭೃಂಗಂ
ಸುರುಚಿರ ಶಿವಶರಣಸಂಗಮಪಗತಭಂಗಂ
ದುರಿತಧ್ವಾಂತಚಯಾಹ
ಸ್ಕರನೆಂದಿಳೆ ಪೊಗಳೆ ಬಸವಪಂ ರಾಜಿಸಿದಂ      | ೩೪ |
    

 ಆ ಬಸವಪ್ಪನನ್ನು ಶಿವನ ಪಾದಕಮಲದ ದುಂಬಿ ಎಂದೂ, ಶಿವಶರಣರ ಜೊತೆಗಾರನೆಂದೂಭಂಗರಹಿತನೆಂದೂ, ಪಾಪದ ಕತ್ತಲುಗಳನ್ನೋಡಿಸುವ ಸೂರ್ಯನೆಂದೂ ಲೋಕವು ಕೊಂಡಾಡುತ್ತಿತ್ತು.
ಅನುಪಮ ತದ್ಬಸವಪನಂ
ಗನೆ ವಿಲಸಿತ ಬಸವಮಾಂಬೆ ವಿಶ್ರುತ ಸೀಮಂ
ತಿನಿಯರಧಿದೇವಿಯತಿ ಪಾ
ವನತರ ಸಚ್ಚರಿತೆಯೆನಿಸಿ ರಾರಾಜಿಸಿದಳ್       | ೩೫ |
   

 ಆ ಬಸವಪ್ಪನ ಹೆಂಡತಿಯಾದ ಬಸವಮಾಂಬೆಯು ಸ್ತ್ರೀಯರ ಅಧಿದೇವಿ; ಹಾಗೂ ಅತ್ಯಂತ ಪವಿತ್ರವಾದ ಒಳ್ಳೆಯ ನಡತೆಯುಳ್ಳವಳೂ ಆಗಿ ರಾರಾಜಿಸಿದ್ದಳು.
ರತಿರೂಪಿನೊಳೊಪ್ಪುವರುಂ
ಧತಿ ಪತಿಭಕ್ತಿಯೊಳೆ ಜಾಣ್ಮೆಯೊಳ್ನೂತನ ಭಾ
ರತಿ ನಿರ್ಮಲಮತಿ ಶೋಭಾ
ವತಿಯೆಂದಿಳೆ ಪೊಗಳೆ ತದ್ಯುವತಿ ಕರಮೆಸೆದಳ್ |೩೬ |
    

ಅವಳು ರೂಪಿನಲ್ಲಿ ರತಿ, ಪತಿಭಕ್ತಿಯಲ್ಲಿ ಅರುಂಧತಿ, ಜಾಣತನದಲ್ಲಿ ಸರಸ್ವತಿ, ನಿರ್ಮಲವಾದ ಬುದ್ಧಿಯುಳ್ಳವಳು, ಶೋಭೆಯಿಂದ ಕೂಡಿದವಳು ಎಂದು ಜಗತ್ತು ಹೊಗಳುವಂತೆ ಮೆರೆಯುತ್ತಿದ್ದಳು.
ಆ ಪುಣ್ಯಸ್ತ್ರೀಯುದರ
ಶ್ರೀಪಾರಾವಾರದೊಳ್ಸುಧಾಕರನೆನೆ ಸ
ದ್ರೂಪಂ ನಿರುಪಮಸುಗುಣಕ
ಲಾಪಂ ಚೌಡಪನೆನಿಪ್ಪ ಸುತನುದಯಿಸಿದಂ        | ೩೭ |
   

  ಆ ಪುಣ್ಯಸ್ತ್ರೀಯ ಗರ್ಭಾಂಬುದಿಯಲ್ಲಿ ಚಂದ್ರನೆಂಬಂತೆ ಒಳ್ಳೆಯ ರೂಪವುಳ್ಳವನೂ ಹಾಗೂ ಒಳ್ಳೆಯ ಗುಣವಂತನೂ ಆದ ಚೌಡಪ್ಪನೆಂಬ ಮಗನು ಹುಟ್ಟಿದನು.
ಇಂದುವಿನೊಡನುಜ್ಜ್ವಲಿಸುವ
ಮಂದಾರಂ ಜನಿಸಿದಂತೆ ತಚ್ಚೌಡಪ ಭೂ
ಚಂದೆರನೊಡನುರು ಭದ್ರಪ
ನೆಂದೆಂಬ ಕುಮಾರನೊಗೆದು ರಾರಾಜಿಸಿದಂ      | ೩೮ |
    

 ಚಂದ್ರನ ಜೊತೆಯಲ್ಲಿ ಮಂದಾರ ವೃಕ್ಷ ಹುಟ್ಟಿದಂತೆ ಆ ಚೌಡಪ್ಪನ ಬಳಿಕ ಭದ್ರಪ್ಪನೆಂಬ ಮಗನು ಹುಟ್ಟಿದನು.
ಆ ಪರತರ ಬಸವಪಕುಲ
ದೀಪರ್ಭೂಮಹಿತ ಚೌಡಪಂ ಭದ್ರಪನೆಂ
ಬಾ ಪುಣ್ಯಪುರುಷರುಜ್ಜ್ವಲ
ರೂಪಾನ್ವಿತರೆನಿಸಿ ಮೆರೆದರಿನಶಶಿಗಳವೋಲ್      | ೩೯ |
    

 ಆ ಬಸವಪ್ಪನ ಮನೆತನದ ಕುಲದೀಪಕರಾದ ಆ ಚೌಡಪ್ಪ ಭದ್ರಪ್ಪ ಎಂಬ ಪುಣ್ಯಪುರುಷರು ಸೂರ್ಯಚಂದ್ರರಂತೆ ಉಜ್ವಲರೂಪದಿಂದ ಕೂಡಿ ಮೆರೆಯುತ್ತಿದ್ದರು.
ಅವರೀಶನಾಣ್ತೆಯಿಂ ಜನ
ನಿಹವನುದ್ಧರಿಸೆ ಬುವಿಯೊಳೊಗೆದತಿಮಹಿಮಾ
ರ್ಣವರತಿ ಕಾರಣಪುರುಷ
ರ್ಶಿವಮತತತ್ತ್ವಜ್ಞರೆಂದು ಬಲ್ಲವರುಸಿರ್ವರ್       | ೪೦ |
    

ಅವರಿಬ್ಬರೂ ಶಿವನ ಆಜ್ಞೆಯಿಂದ ಜನಸಮೂಹವನ್ನು ಉದ್ಧರಿಸುವುದಕ್ಕಾಗಿ ಭೂಮಿಯಲ್ಲಿ ಹುಟ್ಟಿದ ಮಹಾಮಹಿಮರು, ಕಾರಣಪುರುಷರು, ಶಿವಮತದ ತತ್ವವನ್ನು ಬಲ್ಲವರು ಎಂದು ಬಲ್ಲವರೆಲ್ಲಾ ಕೊಂಡಾಡುತ್ತಿದ್ದರು.
ವ|| ಇಂತೆಸೆವ ಕುಮಾರರೊಗೆದ ನಂತರಮಾ ಬಸವಪಂ ಭಾಗ್ಯಾಭಿವೃದ್ಧಿಯಂ ಪಡೆದು ಸಂತಸವಡುತ್ತೆ ಕುಮಾರರ್ಗೆ ಯೌವನೋದಯಮಾಗಲೊಡನೆ ಸತ್ಕುಲಸಂಭವೆಯರಪ್ಪ ಕನ್ಯಾರತ್ನಂಗಳಂ ವಿವಾಹಮಂ ರಚಿಸಿ ಕತಿಪಯ ದಿವಸಮಿರ್ದು ಶಿವಸಾಯುಜ್ಯವನೈದಲೊಡನೆ ತತ್ಪತ್ನಿಯಪ್ಪ ಬಸವಮಾಂಬಿಕೆಯಾ ಪುತ್ರರೀರ್ವರಂ ಪೋಷಿಸಲಿವರ್ಗಳ್ ದಿನದಿನದೊಳ್ ವರ್ಧಿಷ್ಣುಗಳಾಗಿ ಪಳ್ಳಿವಯಲ ಗ್ರಾಮದೊಳ್ ಸ್ವಪಿತ್ರಾರ್ಜಿತಕೃಷ್ಯಾರಂಭಾದಿ ವ್ಯಾಪಾರದ್ವಾರದಿಂ ಪರಮಾಭಿವೃದ್ಧಿಯಂ ಪಡೆದು ಪಟುತರ ಭುಜಬಲಶಾಲಿಗಳೆನಿಸಿ ವಿರಾಜಿಸುತಿರ್ದ ನಂತರದೊಳ್   
  ಹೀಗೆ ಶೋಭಿಸುವ ಕುಮಾರರು ಹುಟ್ಟಿದ ಬಳಿಕ ಆ ಬಸವಪ್ಪನು ಭಾಗ್ಯಾಭಿವೃದ್ಧಿಯನ್ನು ಪಡೆದು ಸಂತೋಷಪಡುತ್ತಾ ಕುಮಾರರಿಗೆ ಯೌವನೋದಯವಾಗಲು ಸತ್ಕುಲದಲ್ಲಿ ಹುಟ್ಟಿದ ಕನ್ಯಾರತ್ನಗಳನ್ನು ಮದುವೆ ಮಾಡಿಸಿದನು. ಕೆಲವು ದಿನಗಳಲ್ಲಿ ಬಸವಪ್ಪನು ಶಿವಸಾಯುಜ್ಯವನ್ನು ಹೊಂದಿದನು. ಆಮೇಲೆ ಅವನ ಪತ್ನಿಯಾದ ಬಸವಮಾಂಬಿಕೆಯು ಆ ಇಬ್ಬರು ಮಕ್ಕಳನ್ನು ಕಾಪಾಡುತ್ತಿದ್ದಳು. ಆ ಇಬ್ಬರೂ ದಿನದಿನವೂ ಅಭಿವೃದ್ಧಿ ಹೊಂದುತ್ತಾ ಹಳ್ಳಿಬಯಲು ಗ್ರಾಮದಲ್ಲಿ ತಮ್ಮ ಪಿತ್ರಾರ್ಜಿತವಾದ ಕೃಷಿ ವ್ಯವಸಾಯ, ವ್ಯಾಪಾರಗಳಿಂದ ಹೆಚ್ಚು ಅಭಿವೃದ್ಧಿಯನ್ನು ಹೊಂದಿ ಹೆಚ್ಚಿನ ಭುಜಬಲ ಸಮರ್ಥರೆನಿಸಿ ಶೋಭಿಸುತ್ತಿದ್ದರು. ಆಮೇಲೆ
ವರವೀರಶೈವಕುಲಶೇ
ಖರ ಬಸವಪಪುತ್ರ ಚೌಡಪಂ ಶ್ರೀ ರಾಮೇ
ಶ್ವರಕೃಪೆಯಿಂ ತತ್ಕೆಳೆದಿಯ
ಪುರವರ ಸಿಂಹಾಸನಕ್ಕಧೀಶ್ವರನಾದಂ             | ೪೧ |
  

   ವೀರ ಶೈವಕುಲಕ್ಕೆ ಅಲಂಕಾರಪ್ರಾಯನಾದ ಬಸವಪ್ಪನ ಮಗ ಚೌಡಪ್ಪನು ಶ್ರೀರಾಮೇಶ್ವರನ ದಯೆಯಿಂದ ಆ ಕೆಳದಿಯ ಪಟ್ಟಣದ ಸಿಂಹಾಸನಕ್ಕೆ ಒಡೆಯನಾದನು.
(ಮುಂದುವರೆಯುವುದು)                   
* * * * *

ಅಮೃತ ವಾಣಿ
     ಮಾನವನು ಯಾವಾಗಲೂ ಉತ್ತಮವಾದ ಭಾವನೆಗಳನ್ನು ಮಾತ್ರ ಹೊಂದಿರಬೇಕು. ಮತ್ತೊಬ್ಬರಿಗೆ ಕೆಡುಕನ್ನು ಮಾಡಲು ಆಸಕ್ತನಾಗಿರುವವನು ಕೊನೆಗೆ ತನಗೇ ಕೆಡುಕನ್ನು ತಂದುಕೊಳ್ಳುತ್ತಾನೆ.
**
     ದೇವರು ಕೊಟ್ಟ ಶರೀರ ಮತ್ತು ಮನಸ್ಸನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ಅದೇ ದೊಡ್ಡ ಅಪರಾಧ.
**
      ಎಲ್ಲರಿಗೆ ಎಲ್ಲವೂ ತಿಳಿದಿರುವುದಿಲ್ಲ. ಆದ್ದರಿಂದ ನಮಗೆ ಎಲ್ಲವೂ ಗೊತ್ತಿದೆ ಎಂಬ ಅಹಂಕಾರ ಇರಬಾರದು. ಅಹಂಕಾರವೇ ಮನುಷ್ಯನನ್ನು ಪಾಪಕಾರ್ಯಕ್ಕಿಳಿಸುವುದು.
**
     ಯಾವನಾದರೂ ವ್ಯಕ್ತಿ ಜೀವನದಲ್ಲಿ ಕೇವಲ ಸ್ವಾರ್ಥಕ್ಕೆ ಅವಕಾಶ ಕೊಟ್ಟು ಬಾಳಿದರೆ ಅವನನ್ನು ಯಾರೂ ನೆನೆಯುವುದಿಲ್ಲ.
-ಪರಮಪೂಜ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಸ್ವಾಮಿಗಳು,
ಶ್ರೀ ಶೃಂಗೇರಿ ಶಾರದಾ ಪೀಠ.
*************
ಮನಃಶಾಂತಿ
     ನಿನಗೆ ಮನಃಶಾಂತಿ ಬೇಕಿದ್ದೇ ಆದಲ್ಲಿ ಇನ್ನೊಬ್ಬರಲ್ಲಿ ತಪ್ಪು ಹುಡುಕದಿರು. ನಿನ್ನ ಲೋಪಗಳನ್ನು ಮೊದಲು ಕಂಡುಕೊಂಡು ಸರಿಪಡಿಸಿಕೊ. ಮನಃಶಾಂತಿ ನಿನ್ನದಾಗುವುದು.
-ಮಾತೆ ಶಾರದಾ ದೇವಿ
***************
ಪುಟಗಳು -7-10 -
***************
ಶ್ರೀ ಶಂಕರಾಚಾರ್ಯರು
ಕೊಲ್ಲೂರಿನಲ್ಲಿ ಮಾಡಿದ ಪವಾಡ

-ದಿ. ಶ್ರೀಮತಿ ರತ್ನಮ್ಮ ಸುಂದರರಾವ್


      ಶ್ರೀಶೈಲದಿಂದ ಹೊರಟ ಆಚಾರ್ಯರು ಗೋಕರ್ಣ ಕ್ಷೇತ್ರಕ್ಕೆ ಬಂದರು. ಅಲ್ಲಿ ಈಶ್ವರನ ಆತ್ಮಲಿಂಗವನ್ನೂ, ತಾಮ್ರಗೌರೀ ಸಹಿತನಾದ ಮಹಾಬಲೇಶ್ವರನನ್ನೂ ಕಂಡು ಪುನೀತರಾದರು. ಆ ಕ್ಷೇತ್ರದಲ್ಲಿಯೂ ಅದ್ವೈತ ತತ್ವಗಳ ಪ್ರಚಾರ ಯಥಾವತ್ತಾಗಿ ನಡೆಯಿತು. ಆ ಕ್ಷೇತ್ರದಿಂದ ಹೊರಟ ಆಚಾರ್ಯರು ಪಶ್ಚಿಮ ಘಟ್ಟಗಳ ಅಂಚಿನಲ್ಲೇ ಹೊರಟು ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಕೊಲ್ಲೂರು ಕ್ಷೇತ್ರಕ್ಕೆ ಬಂದರು.     ಮೂಕಾಸುರನೆಂಬ ರಾಕ್ಷಸನನ್ನು ಕೊಂದು ಮೂಕಾಂಬಿಕಾ ಎಂಬ ಹೆಸರಿನಿಂದ ಪ್ರಖ್ಯಾತಳಾದ ಅದಿಶಕ್ತಿಯು ನೆಲೆಸಿರುವ ಕ್ಷೇತ್ರವೇ ಕೊಲ್ಲೂರು. ಭವ್ಯವಾದ ದೇವಾಲಯದಲ್ಲಿ ಮೂಕಾಂಬಿಕೆ ನೆಲೆಸಿದ್ದಾಳೆ. ಆಚಾರ್ಯರು ಮೂಕಾಂಬಿಕಾ ದೇವಿಯನ್ನು ಸಂದರ್ಶಿಸಿದುದೇ ಅಲ್ಲದೆ ಅಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿ, ಕ್ಷೇತ್ರದ ಮಹಿಮೆಯನು ಮತ್ತಷ್ಟು ಹೆಚ್ಚಿಸಿದರು. ಅನೇಕ
ಸ್ತೋತ್ರಗಳನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ದೇವಿಯನ್ನು ಕಂಡು ಕೃತಾರ್ಥರಾದ ಆಚಾರ್ಯರು ಅನಂತರ ದೇವಾಲಯದಿಂದ ಹೊರಗೆ ಹೊರಟರು. ದ್ವಾರಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣ ದಂಪತಿಗಳು ತಮ್ಮ ಮಗುವನ್ನು ಮುಂದಿಟ್ಟುಕೊಂಡು ರೋದಿಸುತ್ತಿದ್ದರು. ಆ ಮಗು ಸತ್ತುಹೋಗಿತ್ತು.
     ದೇವಾಲಯದಿಂದ ಹೊರಬಂದ ಆಚಾರ್ಯರನ್ನು ಆ ದಂಪತಿಗಳು ನೋಡಿದರು. ತೇಜಸ್ಸಿನಿಂದ ಕೂಡಿದ ಅವರ ಮುಖವನ್ನು ಕಂಡೊಡನೆ ಆ ದಂಪತಿಗಳು ಈತನಾರೋ ಮಹಾತ್ಮನೇ ಇರಬೇಕು ಎಂದು ಆಲೋಚಿಸಿ ಅವರ
ಬಳಿಗೆ ಬಂದರು. ಸತ್ತುಹೋಗಿದ್ದ ತಮ್ಮ ಮಗುವನ್ನು ಆಚಾರ್ಯರ ಪಾದಗಳ ಬಳಿ ಇಟ್ಟು "ಮಹಾತ್ಮರೇ, ನಿಮ್ಮನ್ನು ನೋಡಿದರೆ ದೈವಾಂಶ ಪುರುಷನ್ನು ಕಂಡಂತೆಯೇ ಭಾಸವಾಗುತ್ತದೆ. ನೀವಾದರೂ ಈ ಮಗುವನ್ನು ಬದುಕಿಸಿಕೊಡಿ. ಇದುವರೆಗೆ ಹದಿಮೂರು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ಬೆಂದು ಹೋಗಿದ್ದೇವೆ" ಎಂದು ಅಂಗಲಾಚಿದರು. ಆ ದಂಪತಿಗಳ ದುಃಖದಲ್ಲಿ ಆಚಾರ್ಯರೂ ಒಂದು ಕ್ಷಣ ಭಾಗಿಯಾದರು. ಬಳಿಕ ಅವರನ್ನು ಈರೀತಿ ಪ್ರಶ್ನಿಸಿದರು: "ಸಾವು ಎಂದರೇನು? ಮಗು ಇಲ್ಲೇ ಇದೆಯಲ್ಲಾ?!"     "ಇದು ಮಗುವಿನ ಕಳೇಬರ. ಅದರ ಪ್ರಾಣ ಹೋಗಿ ಎಷ್ಟೋ ಹೊತ್ತಾಗಿದೆ" ಎಂದು ಆ ದಂಪತಿಗಳು ಹೇಳಿದರು.  ಆಚಾರ್ಯರು ಪುನಃ ಕೇಳಿದರು: "ಹಾಗಾದರೆ ನೀವು ಇದುವರೆಗೆ ವಿಶ್ವಾಸದಿಂದ ಮುದ್ದಿಸುತ್ತಿದ್ದುದು ಇಲ್ಲಿರುವ ಈ ದೇಹವನ್ನೋ, ಹೊರಟುಹೋದ ಆ ಪ್ರಾಣವನ್ನೋ?" ಆಚಾರ್ಯರ ಪ್ರಶ್ನೆಗೆ ಏನುತ್ತರ ಕೊಡಬೇಕೆಂದು ಆ ದಂಪತಿಗಳಿಗೆ ತೋಚಲಿಲ್ಲ. ಆಚಾರ್ಯರು ಪುನಃ ಕೇಳಿದರು: "ದೇಹವನ್ನೇ ನೀವು ಮುದ್ದಿಸುತ್ತಿದ್ದಾದರೆ ಈಗಲೂ ಮುದ್ದಿಸಬಹುದು. ಪ್ರಾಣವನ್ನು ನೀವು ಮುದ್ದಿಸುತ್ತಿದ್ದಾದರೆ ಅದು ಆಗಲೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ಇದಕ್ಕೇಕೆ ನೀವು ದುಃಖಿಸಬೇಕು?"     ಆಚಾರ್ಯರ ತತ್ವೋಪದೇಶ ಆ ದಂಪತಿಗಳ ಮನಸ್ಸನ್ನು ಮುಟ್ಟಲಿಲ್ಲ. ಕ್ಷಣಕ್ಷಣಕ್ಕೂ ಪುತ್ರಶೋಕ ಹೆಚ್ಚುತ್ತ ಅವರನ್ನು ದಹಿಸುತ್ತಿತ್ತು.
------------------------------------------------------------
     ದಿ. ಶ್ರೀಮತಿ ರತ್ನಮ್ಮ ಸುಂದರರಾಯರು ಕೆಳದಿ ಕವಿಮನೆತನದ ಧೀಮಂತ ವ್ಯಕ್ತಿತ್ವದ ದಿ. ಎಸ್.ಕೆ. ಲಿಂಗಣ್ಣಯ್ಯನವರ ಮಕ್ಕಳಲ್ಲಿ ಒಬ್ಬರು. ಇವರ ಪತಿ ಶ್ರೀ ಬ.ನ. ಸುಂದರರಾಯರೂ ಸಹ ಕರ್ನಾಟಕ ಕಂಡ ಖ್ಯಾತ ಸಾಹಿತಿಗಳಲ್ಲಿ ಒಬ್ಬರು. ಇವರು ೧೯೬೯ರಲ್ಲಿ ರಚಿಸಿದ ಶ್ರೀ ಶಂಕರ ಕಥಾಮೃತ ೧೯೮೯ರ ವೇಳೆಗೆ ಆರು ಮುದ್ರಣಗಳನ್ನು ಕಂಡ ಅನುಪಮ ಕೃತಿ. ಶ್ರೀ ಶಂಕರಾಚಾರ್ಯರ ಜೀವನದ ಘಟನೆಗಳನ್ನು ಆಧರಿಸಿ ಕಥಾರೂಪದಲ್ಲಿ ಹೊರತಂದಿರುವುದು ವಿಶೇಷ.
ಅಂತಹ ಒಂದು ಕಥೆಯನ್ನು ನಿಮ್ಮ ಮುಂದಿಟ್ಟಿದೆ.            -ಸಂ.
-----------------------------------------------------------
 ಆಗ ಆಚಾರ್ಯರು ಆ ಕ್ಷೇತ್ರದೇವತೆಯಾದ ಮೂಕಾಂಬಿಕೆಯನ್ನೇ ಸ್ತುತಿಸಿ ಆ ಮಗುವನ್ನು ಬದುಕಿಸಿದರು. ಮಗು ಕಣ್ಣು ಬಿಟ್ಟು ಕೈಕಾಲುಗಳನ್ನಾಡಿಸಿತು. ಅದು ಕಣ್ಣು ಬಿಡುವ ಹೊತ್ತಿಗೆ ಆಚಾರ್ಯರ ತತ್ವೋಪದೇಶ ಆ ತಾಯಿ ತಂದೆಗಳ ಒಳಗಣ್ಣನ್ನು ತೆರೆಯುವಂತೆ ಮಾಡಿತ್ತು. ಈ ಸಂಸಾರವೇ ನಶ್ವರವೆಂಬ ಭಾವನೆ ಅವರಲ್ಲಿ ಮೂಡಿ ಅವರ ಮನಸ್ಸು ವೈರಾಗ್ಯದತ್ತ ಸಾಗತೊಡಗಿತ್ತು. ಆ ದಂಪತಿಗಳು ಅಡಿಗಡಿಗೆ ಆಚಾರ್ಯರಿಗೆ ವಂದಿಸುತ್ತ - "ಮಹಾತ್ಮರೇ, ನಿಮ್ಮ ಉಪದೇಶ ಕೇಳಿ ನಮ್ಮ ಮನಸ್ಸು ಪರಿವರ್ತನೆಯಾಗಿದೆ. ಈ ಸಂಸಾರದ ಸುಖವು ಸಾಕು. ನಮ್ಮನ್ನೂ ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಬೇಕು" ಎಂದು ಪ್ರಾರ್ಥಿಸಿಕೊಂಡರು.
ಅದಕ್ಕೆ ಆಚಾರ್ಯರು ಒಪ್ಪಲಿಲ್ಲ. "ಗೃಹಸ್ಥರಾಗಿರುವ ನೀವು ಗೃಹಸ್ಥಾಶ್ರಮದ
ಧರ್ಮಕ್ಕನುಗುಣವಾಗಿ ನಡೆಯಬೇಕು. ಸಂಸಾರದಲ್ಲಿ ಒದಗುವ ಕಷ್ಟ ಸುಖಗಳಿಗೆ ಎದೆಗುಂದದೆ ಧೈರ್ಯವಾಗಿ ಅವುಗಳನ್ನು ಎದುರಿಸಿ ಗೃಹಸ್ಥಾಶ್ರಮದ ಧರ್ಮಗಳನ್ನು ಅನುಸರಿಸಿ ನಡೆಯುವದರಿಂದಲೇ ನಿಮಗೆ ಸದ್ಗತಿಯುಂಟಾಗುವುದು" ಎಂದು ಆ ದಂಪತಿಗಳಿಗೆ ಬುದ್ಧಿವಾದ ಹೇಳಿ
ಆಶೀರ್ವದಿಸಿದರು.   ಅನಂತರ ಆಚಾರ್ಯರ ಪ್ರಯಾಣ ಮುಂದುವರೆಯಿತು.
***






************************

ಕೆಳದಿ ಕವಿ ಮನೆತನದ ಸಮಕಾಲೀನರು
ಕವಿ ನಾಗರಾಜ ಭಟ್ಟ - ಸಾವಿತ್ರಮ್ಮ

     ನಿರುಪದ್ರವಿ ಎಂಬ ಪದಕ್ಕೆ ಅನ್ವರ್ಥಕವಾದವರು ಕವಿ ಮನೆತನದ ಎಂಟನೇ ತಲೆಮಾರಿನ ಕಷ್ಟ ಸಹಿಷ್ಣು ಕವಿ ನಾಗರಾಜ ಭಟ್ ಕುಟುಂಬ. ಬಡತನವನ್ನೇ ಹಾಸಿ- ಹೊದ್ದು- ಉಂಡುಟ್ಟು ಅದರಲ್ಲೇ ಸುಖವನ್ನು ಕಂಡು ಆರಕ್ಕೆ ಕೈ ಚಾಚದೇ ಮೂರಕ್ಕೆ ಇಳಿಯದೆ ಸಮಚಿತ್ತದಿಂದ, ಸಮಭಾವದಿಂದ ಸದಾ ಸ್ಥಿತಪ್ರಜ್ಞರಾಗಿ ಬದುಕನ್ನು ಸವೆಸುತ್ತಿರುವ ನಾಗರಾಜ ಭಟ್ ಕುಟುಂಬ ವಿಶಿಷ್ಟವಾದುದು.
     ಕವಿ ನಾಗರಾಜ ಭಟ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ಗ್ರಾಮದಲ್ಲಿ ೧೯೪೧ರ ಏಪ್ರಿಲ್ ೧೦ರಂದು ಶಿವಭಟ್ - ಕೋಮಲಾಬಾಯಿ ದಂಪತಿಗೆ ಏಕೈಕ ಪುತ್ರನಾಗಿ ಜನಿಸಿದರು. ಇವರು ಸುಮಾರು ೧೦ ವರ್ಷದವರಿದ್ದಾಗ ತಂದೆ ಶಿವಭಟ್ ಪರಂಧಾಮವನ್ನೈದಿದರು. ಪುಟ್ಟ ಬಾಲಕನನ್ನು ಸಾಕುತ್ತಾ ಕೋಮಲಾಬಾಯಿ ಕೆಳದಿಯಲ್ಲೇ ಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಸಾಗರ ಸಮೀಪದ ಶ್ರೀ ವರದಹಳ್ಳಿಯ ಅಂದಿನ ಶ್ರೀಗಳಾದ ಮತ್ತು ಅಪಾರ ಭಕ್ತವೃಂದ ಹೊಂದಿರುವ ಶ್ರೀ ಶ್ರೀ ಶ್ರೀಧರಸ್ವಾಮಿಗಳು ನಾಗರಾಜನಿಗೆ ಬ್ರಹ್ಮೋಪದೇಶ ಮಾಡಿದರು.
     ಬಡತನದಲ್ಲಿದ್ದ ಕುಟುಂಬಕ್ಕೆ ಸ್ಥಿತಿವಂತರಿಂದ ಊಟಕ್ಕೆ ಸಹಾಯವಾಗುತ್ತಿತ್ತು. ಕೋಮಲಾಬಾಯಿಯವರು ಅವರಿವರ ಮನೆಯಲ್ಲಿ ಚಟ್ನಿಪುಡಿ, ಮೆಣಸಿನಪುಡಿ, ಚಕ್ಕುಲಿ, ಕೋಡುಬಳೆ, ಅಡುಗೆ ಕೆಲಸ ಇತ್ಯಾದಿಗಳನ್ನು ಮಾಡುತ್ತಾ ಅಷ್ಟಿಷ್ಟು ಸಂಪಾದನೆ ಮಾಡಿ ಹೊಟ್ಟೆ ಹೊರೆಯುತ್ತಿದ್ದರು.
     ಶಾಲಾ ವಿದ್ಯಾಭ್ಯಾಸಕ್ಕೆ ಪರೀಕ್ಷೆ ಶುಲ್ಕ ಕಟ್ಟಲಾಗದೆ ಎಸ್ಸೆಸ್ಸೆಲ್ಸಿಯನ್ನು ಅರ್ಧಕ್ಕೇ ಮೊಟಕುಗೊಳಿಸಿದ ನಾಗರಾಜ ಪರಿಚಯವಿದ್ದ ಸಾಗರ ತಾಲ್ಲೂಕು ಗೌತಮಪುರದ ಗಾಡಿ ಸುಬ್ರಾಯಭಟ್ಟರ ಮನೆಯಲ್ಲಿ ವೇದಾಭ್ಯಾಸಕ್ಕೆ ನಿಂತರು. ಎಂಟು ಹೆಣ್ಣು ಮಕ್ಕಳು ಇದ್ದ ತುಂಬಿದ ಕುಟುಂಬದ ಸುಬ್ರಾಯಭಟ್ಟರು ಗಂಡು ಮಕ್ಕಳಿಲ್ಲದ ಕಾರಣ ನಾಗರಾಜನನ್ನು ಸ್ವಂತ ಮಗನಂತೆ ಕಂಡು ಅವನಿಗೆ ವೇದಾಭ್ಯಾಸ ಕಲಿಸಿ ಪೌರೋಹಿತ್ಯಕ್ಕೆ ಅಣಿಗೊಳಿಸಿದರು. ಹೀಗೇ ಸಾಗುತ್ತಿದ್ದ ಜೀವನದಲ್ಲಿ ನಾಗರಾಜನಿಗೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಸೇವೆ ಮಾಡುವ ಯೋಗ ಬಂದಿತು. ಗೌತಮಪುರಕ್ಕೆ ಬ್ರಾಂಚ್ ಪೋಸ್ಟಾಫೀಸು ಬಂದಾಗ ಅದನ್ನು ನೋಡಿಕೊಳ್ಳುವ ಕೆಲಸ ೧೯೫೯ನೇ ಸೆಪ್ಟೆಂಬರ್ ೧೧ ರಂದು ನಾಗರಾಜನ ಪಾಲಿಗೆ ಬಂತು. ಸುಮಾರು ನಾಲ್ಕಾರು ವರ್ಷ ಕೆಲಸ ಮಾಡಿದ ನಂತರ ನಾಗರಾಜನಿಗೆ ಪೋಸ್ಟ್ ಮ್ಯಾನ್ ಆಗಿ ಕೆಲಸಕ್ಕೆ ತೆಗೆದುಕೊಂಡು ಜೋಗ್ ಫಾಲ್ಸ್ ಗೆ ವರ್ಗಾವಣೆ ಮಾಡಲಾಯಿತು. ಅಲ್ಲಿಯೇ ಕೆಲಸ ನಿರ್ವಹಿಸಿಕೊಂಡು ಜೊತೆಗೆ ಅಲ್ಲಿನ ಈಶ್ವರ ದೇವಾಲಯದ ಅರ್ಚಕರಾದ ವೇದಬ್ರಹ್ಮ ಶ್ರೀ ಜಾವಗಲ್ ಸತ್ಯನಾರಾಯಣ ಜೋಯಿಸರ ಬಳಿಯೂ ವೇದ ಕಲಿತು ಈಶ್ವರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
----------------------------------------------------------------
     ಈ ಪರಿಚಯ ಲೇಖನವನ್ನು ಬರೆದ ಶ್ರೀ ಕೆಳದಿ ರಾಮಮೂರ್ತಿಯವರು ಶ್ರೀ ನಾಗರಾಜಭಟ್ಟರ ಚಿಕ್ಕಪ್ಪ ಶ್ರೀ ಕೃಷ್ಣಭಟ್ಟರ ಮಗ. ನಾಗರಾಜಭಟ್ಟರ ನಿಕಟ ಪರಿಚಯವಿರುವವರು. ಶ್ರೀ ರಾಮಮೂರ್ತಿಯವರ ಕುಟುಂಬ ಸಹ ಆದರಾತಿಥ್ಯ ಮಾಡುವಲ್ಲಿ ಎತ್ತಿದ ಕೈ ಆಗಿದ್ದಾರೆ. ಈ ಎರಡು ಕುಟುಂಬಗಳವರು ಕೆಳದಿಯಲ್ಲಿ ದಿನಾಂಕ ೨೫-೧೨-೨೦೦೭ ರಂದು ಸ್ಮರಣೀಯವಾಗಿ ನಡೆದ ಕೆಳದಿ ಕವಿ ಮನೆತನದವರ ಹಾಗೂ ಬಂಧು ಬಳಗದವರ ಎರಡನೆಯ ವಾರ್ಷಿಕ ಸಮಾವೇಶ ಪ್ರಾಯೋಜಿಸಿದ್ದರು. ವೃತ್ತಿಯಲ್ಲಿ ಅರ್ಚಕರಾಗಿರುವ ಶ್ರೀ ರಾಮಮೂರ್ತಿಯವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.                         -ಸಂ.
ಲೇಖಕರ ವಿಳಾಸ:      ಕೆಳದಿ ರಾಮಮೂರ್ತಿ, ಅರ್ಚಕರು, ಕೆಳದಿ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ..  ದೂರವಾಣಿ:೯೪೪೮೯೩೨೭೫೯.
ಶ್ರೀ ನಾಗರಾಜಭಟ್ಟರ ವಿಳಾಸ::     ನಿವೃತ್ತ ಪೋಸ್ಟ್ ಮಾಸ್ಟರ್  ರವಿವರ್ಮ ಬೀದಿ, ಶಿವಮೊಗ್ಗ.. ದೂರವಾಣಿ:   ೯೫೮೧೮೨-೨೭೭೨೬೬.

------------------------------------------------------
     ಜಾವಗಲ್ ಸತ್ಯನಾರಾಯಣ ಭಟ್ಟರ ತಂದೆ ನರಸಿಂಹ ಭಟ್ಟರಿಗೆ ನಾಲ್ವರು ಪತ್ನಿಯರು. ಸತ್ಯನಾರಾಯಣಭಟ್ಟರು ಹಿರಿಯ ಪತ್ನಿಯ ಮಗ. ಎರಡನೆ ಮತ್ತು ಮೂರನೆಯ ಪತ್ನಿಯರಿಗೆ ಮಕ್ಕಳಿರಲಿಲ್ಲ. ನಾಲ್ಕನೆಯ ಪತ್ನಿ ನಾಗಮ್ಮರಿಗೆ ಓರ್ವ ಪುತ್ರ ಮತ್ತು ಮೂವರು ಪುತ್ರಿಯರಿದ್ದು ಸಾವಿತ್ರಿ ಜೇಷ್ಠ ಪುತ್ರಿ. ವಟಸಾವಿತ್ರಿ ಹುಣ್ಣಿಮೆ ದಿನ ೧೯೪೯ರ ಜೂನ್ ೧ರಂದು ಹುಟ್ಟಿದ್ದರಿಂದ ಆಕೆಗೆ ಸಾವಿತ್ರಿ ಎಂದು ನಾಮಕರಣ ಮಾಡಿದ್ದರು. ನರಸಿಂಹಭಟ್ಟರು ವಿಧಿವಶರಾದ ನಂತರ ಸಾವಿತ್ರಿ ಅಣ್ಣ ಸತ್ಯನಾರಾಯಣ ಭಟ್ಟರ ಆಶ್ರಯಕ್ಕೆ ಬಂದಿದ್ದರು. ಹೋಗಿ ಬಂದು ಮಾಡುವಾಗ ಸಾವಿತ್ರಿಯನ್ನು ನೋಡಿದ ನಾಗರಾಜ ವಿವಾಹಾಪೇಕ್ಷೆ ವ್ಯಕ್ತಪಡಿಸಿದರು. ಉಭಯತ್ರರೂ ಸಮ್ಮತಿಸಿ ೧೯೬೭ ಜೂನ್ ೧ ರಂದು ಜೋಗದ ಈಶ್ವರ ದೇವಾಲಯದಲ್ಲಿ ವಿವಾಹ ಮಾಡಿಕೊಡಲಾಯಿತು. ವಿವಾಹಾನಂತರ ನಾಗರಾಜ ಭಟ್ಟರಿಗೆ ಕೊಪ್ಪಕ್ಕೆ ವರ್ಗವಾಯಿತು. ಕೊಪ್ಪದಲ್ಲಿ ಎರಡು ವರ್ಷ, ತೀರ್ಥಹಳ್ಳಿಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ವರ್ಗಾವಣೆ ಮೇಲೆ ಸಾಗರಕ್ಕೆ ಬಂದರು. ಸಾಗರದಲ್ಲಿದ್ದಾಗ ತಾಯಿ ಇಹಲೋಕ ತ್ಯಜಿಸಿದಾಗ ಅಂತ್ಯ ಸಂಸ್ಕಾರವನ್ನೂ ಸಹ ಸಾಲ ಮಾಡಿ ಮಾಡಿದ್ದರು. ಸಾಗರದಿಂದ ಗುಮಾಸ್ತರಾಗಿ ಬಡ್ತಿ ನೀಡಿ ಅವರನ್ನು ಬೀದರ್ ಜಿಲ್ಲೆ ಹುಮನಾಬಾದ್‌ಗೆ ವರ್ಗ ಮಾಡಿದರು. ಅಲ್ಲಿ ನಾಲ್ಕು ವರ್ಷದ ಸೇವೆ ನಂತರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಗರದಲ್ಲಿ ಎಂಟು ತಿಂಗಳು, ಕುದುರೆಮುಖದಲ್ಲಿ ಎರಡು ವರ್ಷ, ಬಾಳೆಹೊನ್ನೂರಿನ ಬಳಿಯ ಕಾಫಿ ರಿಸರ್ಚ್ ಸ್ಟೇಶನ್ ನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ೧೯೮೫ರಲ್ಲಿ ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಛೇರಿಗೆ ಬಂದವರು ಅಲ್ಲಿ ದೀರ್ಘ ಮತ್ತು ಪೂರ್ಣ ಸೇವೆ ಸಲ್ಲಿಸಿ ೨೦೦೧ರ ಏಪ್ರಿಲ್ ೩೦ ರಂದು ೩೬ ವರ್ಷಗಳ ಸೇವೆಗೆ ಮಂಗಳ ಹಾಡಿದರು.

     ನಾಗರಾಜಭಟ್ಟರ ಪತ್ನಿ ಬುದ್ಧಿವಂತರು. ಕಾಸಿಗೆ ಕಾಸು ಕೂಡಿಸುವ, ಪ್ರಾಮಾಣಿಕ ಮನೋಭಾವ ಹೊಂದಿದವರಾಗಿದ್ದರು. ಸದಾ ಮೂಗಿನ ಮೇಲೆ ಸಿಟ್ಟು. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ, ಶತ್ರುಗಳನ್ನೂ ಆದರಿಸುವವರು ಹಾಗೂ ಅತಿಥಿ ಸತ್ಕಾರದಲ್ಲಿ ಸೈ ಎನಿಸಿಕೊಂಡವರು. ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದಲ್ಲದೆ ಅವರನ್ನು ಹಾದಿ ತಪ್ಪದಂತೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಗಂಡನ ಗಳಿಕೆಯಲ್ಲೇ ಅಷ್ಟಿಷ್ಟು ಉಳಿಸಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ದುಂದು ವೆಚ್ಚದಿಂದ ಸದಾ ದೂರ. ಹಾಗೆಯೇ ಇಂಥದ್ದು ಬೇಕು ಎಂದು ಕೇಳಿದವರಲ್ಲ. ನಾಗರಾಜಭಟ್ಟರು ಶಾಂತ ಸ್ವಭಾವದವರು. ವ್ಯಕ್ತಿಗತ ಸ್ವಭಾವದಲ್ಲಿ ಭಿನ್ನತೆ ಇದ್ದರೂ ಇಬ್ಬರದು ಅನುಪಮ ಸಾಂಗತ್ಯ, ಅನುರೂಪ ದಾಂಪತ್ಯ.
     ನಾಗರಾಜ ಭಟ್ - ಸಾವಿತ್ರಮ್ಮರವರಿಗೆ ಒಬ್ಬ ಮಗ ಶಿವಪ್ರಸಾದ ಹಾಗೂ ಮೂವರು ಹೆಣ್ಣು ಮಕ್ಕಳು - ಪ್ರತಿಭಾ, ಪದ್ಮ ಮತ್ತು ಪೂರ್ಣಿಮಾ. ಹಿರಿಯ ಮಗ ಶಿವಪ್ರಸಾದ ಪ್ರಸ್ತುತ ಕಾರವಾರದಲ್ಲಿ ಕಡಲವಾಣಿ  ಎಂಬ ಪತ್ರಿಕೆಯ ಸಂಪಾದಕನಾಗಿದ್ದಾನೆ. ಅನುರೂಪಳಾದ ಮತ್ತು ಹೊಂದಿಕೊಂಡು ಹೋಗುವ ಪತ್ನಿ ಸೌಮ್ಯ. ಇವರಿಗೆ ಒಬ್ಬಳು ಮಗಳು ಶ್ರೀಮಾತಾ ಮತ್ತು ಒಬ್ಬ ಮಗ ಶ್ರೀನಿಧಿ ಇದ್ದಾರೆ. ಪ್ರತಿಭಾ ಮತ್ತು ಪೂರ್ಣಿಮಾರಿಗೆ ವಿವಾಹವಾಗಿದೆ. ಪ್ರತಿಭಾಳ ಪತಿ ಸುಬ್ರಾಯ ಹೆಗಡೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಪುತ್ರಿ ಸಿಂಧು. ಎರಡನೆಯ ಮಗಳು ಪದ್ಮಳಿಗೆ ನೆಫ್ರಾಟಿಕ್ ಸಿಂಡ್ರೋಮ್ ಎಂಬ ಕಾಯಿಲೆ ಬಂದು ಸುಮಾರು ೧೫ ವರ್ಷಗಳ ಕಾಲ ಚಿಕಿತ್ಸೆ ಕೊಡಿಸಬೇಕಾಯಿತು. ಈ ಸಂದರ್ಭದಲ್ಲಿ ಅವರು ಅನುಭವಿಸಿದ ಪಾಡು ಅಷಿಷ್ಟಲ್ಲ. ಪದ್ಮ ಈಗ ಮನೆಯಲ್ಲೇ ಇದ್ದು ತಾಯಿಗೆ ಮನೆಕೆಲಸದಲ್ಲಿ ನೆರವಾಗುತ್ತಿದ್ದಾಳೆ. ಪೂರ್ಣಿಮಾಳನ್ನು ಹೊಸನಗರ ತಾಲ್ಲೂಕು ಗರ್ತಿಕೆರೆ ಸಮೀಪದ ಕಡೇಗದ್ದೆಯ ಸತ್ಯನಾರಾಯಣರಾವ್‌ರ ಪುತ್ರ ಗಣೇಶಮೂರ್ತಿಗೆ ಕೊಟ್ಟು ವಿವಾಹವಾಗಿದ್ದು ಅವರಿಗೆ ಸುಹಾಸ್ ಎಂಬ ಮಗನಿದ್ದಾನೆ.
     ತಮ್ಮ ಸೇವಾವಧಿಯಲ್ಲಿ ಯಾವುದೇ ರೀತಿಯ ಕಳಂಕ ಹೊತ್ತುಕೊಳ್ಳದೆ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ನಾಗರಾಜಭಟ್ಟರ ಹಿರಿಮೆ. ಈಗ ಪೌರೋಹಿತ್ಯ ಕಾರ್ಯ ಮುಂದುವರೆಸಿಕೊಂಡು ಬಂದಿದ್ದಾರೆ. ಆರ್ಥಿಕವಾಗಿ ಭಗವಂತ ಅಷ್ಟಿಷ್ಟು ಕೊಟ್ಟಿದ್ದಾನೆ. ಮತ್ತಷ್ಟಕ್ಕೆ ಕೈಚಾಚದೆ ಇದ್ದಷ್ಟರಲ್ಲೇ ನಾಗರಾಜ ಭಟ್ಟರ ಕುಟುಂಬ ಸರಳ ಜೀವನ ನಡೆಸುತ್ತಿದೆ.
- ಕೆಳದಿ ರಾಮಮೂರ್ತಿ.

******************

ಕವಿ ನಾಗರಾಜಭಟ್ಟರ ಮಗ ಕೆ.ಎನ್. ಶಿವಪ್ರಸಾದರ
ಕವಿ ಸಂಜಾತನಕ್ಕರೆಯ ರಗಳೆಯ ಉಧೃತ ಭಾಗ:


     ಕವಿಕುಲ ಸಂಜಾತ ನಾಗರಾಜ ಭಾರ್ಯೆ ಸಾವಿತ್ರಿ ಗರ್ಭಾಂಬುಧಿಯಲ್ ಉದ್ಭವಿತ, ಸೌಮ್ಯ ಸುಮಬಾಲೆಯಂ ಪರಿಗ್ರಹಿತ, ಮುಕ್ತಾ ಭ್ರಾತ ಶ್ರೀಮಾತಾ ಜನ್ಮದಾತ, ಪರಂಗಿ ಭಾಷಾ ವೃತ್ತ ಪತ್ರಿಕೆಯಲ್ ಕಜ್ಜ ನಿವರ್ತಿತ, ಕವಿ ಪುಂಗವೋತ್ತಮ ಲಿಂಗಣನಾಶೀರ್ವಚನದಿಂ ಕಾವ್ಯ ರಚಿಸಿರ್ಪ ಈ ಶಿವಪ್ರಸಾದನೆಂಬಾತನಂ ಸಲುವರ್ ಕೆಳದಿ ರಾಮೇಶ್ವರನಲ್ತೇ ಇನ್ನಾರೈ ಬಂಧುಗಳೇ. . .?
. . .
ರಚಿಪೆನಾ ಕಾವ್ಯಂಗಳ, ಭವಿತವ್ಯದಿ ಮಹಾಕಜ್ಜಂಗಳನುಂ ಒಪ್ಪದೊಳಿಟ್ಟು ಅನುಪ್ರಾಸ ಛಂದಗಳ, ಹೆಣೆದಲಂಕಾರಗಳ, ಮಾತ್ರೆ-ಮಾಣಿಕ್ಯಂಗಳಮ ಸ್ಫುರಿಸಿ, ಸೃಜಿಸಿ ನವರಸದಲ್ ಬೆರೆಸಿ ಭಾವಾರ್ಥಗಳ ಭಕುತಿಯೋಳಂಜಲಿಬದ್ಧನಾಗಿ ರಾಮೇಶ್ವರಂಗೆ ಭಕ್ತಿಯೊಳ್ ವಶನಾಗಿ, ಶಕ್ತಿಸಂಯುತನಾಗಿ ಅನವರತ . . .
. . .
ಈ ಮಹದಜಾಂಡದೋಳ್ ಬೆಸೆದಿರ್ಪ ಕರುನಾಡಿನ್ ಜನ್ಮಾಡರ್ಪು ಈಯಲ್ಕೆ, ಕನ್ನಡಾಚ್ಚುಳಾಯಿತ ಆನ್ ಕಾವ್ಯವಂ ರಚಿಸಲ್ಕೆ ಆದಿರ್ಪುದೇಕೈ?॒ ಶ್ರೀ ಕೆಳದಿ ರಾಮೇಶ್ವರನರುಳ್ ಎನಗಿರಲ್ಕೆ ಪೇಷ್ಯಂಡ ಪ್ರಮಾಣ ಸೇವೆಯಿಂ ಸವೆಪೆನ್ನ ಬಾಳ್ವೆಯಂ, ನಿಯತಿಯ ಭಯಮಿಲ್ಲ ಸುರತಿಯಾಸೆಯು ಇಲ್ಲ, ಅಂತ್ಯೇಷ್ಟಿಯೋಳ್ ಮೊದಲು ಆನೊಂದು ಮಹಾಕಾವ್ಯವಂ ರಚಿಪೆನೆಂಬೋ ಶಪಥಂಗೈಯ್ವೆನಾ. .
*****


ಮಾತು
ಮಾತು ಬಾರದ ನಾನು ಎಲ್ಲಿದ್ದರೇನು, ಹೇಗಿದ್ದರೇನು?
ಮತಿಯ ನಾಗೆಟ್ಟು ಏನೋ ಅರಸುತಿಹೆನು
ಮತ್ತೆ ಮತ್ತೆ ನಾ ಮರೆತು ಮರುಗುತಿಹೆನು
ಮನದ ಮಡಿಕೆಯ ಮಾತು ಮರೆಯಾಗಿಸುವೆಯಾ ನೀನು


-ಕೆ. ಶ್ರೀಕಾಂತ್, (ಕವಿಶ್ರೀ), ಬೆಂಗಳೂರು.
****************

ಮುನ್ನಡೆದಿದೆ ಚಿಗುರು !
ನಿರ್ಭೀತ, ನಿಶ್ಚಿಂತ, ನಿರಾತಂಕ ! !
ಬೆನ್ನ ಹಿಂದಿರೆ ಆಸರೆಯ ಬೇರು !
ಅನುಭವದ ಎರಕ, ಮಾರ್ಗದರ್ಶಕ ! !



ಆಯ್ದ ಆಹ್ವಾನಿತ ಚಿತ್ರಕವನ:
ಗೆಳೆಯರು
     ಬೇಸರ ನೀಗಲು ಕಥೆಯನು ಹೇಳುವೆ
     ಬರುವೆಯ ನನ್ನೊಡನೆ?
     ಗೆಳೆಯರು ಇಲ್ಲದ ಚಿಂತೆಯೆ ಇಲ್ಲ
     ನೀಬರಲು ನನ್ನೊಡನೆ !

- ಅನ್ನಪೂರ್ಣಾ ಶ್ರೀಧರ್, ಬೆಂಗಳೂರು.
(ಬಂದ ಇತರ ಕವನಗಳು ಚಿತ್ರಕ್ಕೆ ಹೊಂದಾಣಿಕೆಯಾಗದ ಕಾರಣ ಪ್ರಕಟಿಸಿಲ್ಲ.)
*****
ಇಷ್ಟವಿರುವವರನ್ನು ಪ್ರೀತಿಸುವುದು ದೊಡ್ಡ ವಿಷಯವೇನಲ್ಲ; ಇಷ್ಟವಿಲ್ಲದವರನ್ನೂ ಪ್ರೀತಿಸುವುದು ದೊಡ್ಡತನ.
-
ಗಾಂಧೀಜಿ.
*****



                              ಬೆರಗು ಕಂಗಳ ಬಾಲೆ ಶ್ರೀಮಾತಾ


                                           ತಾಯಿ: ಸೌಮ್ಯ           ತಂದೆ: ಕೆ.ಎನ್. ಶಿವಪ್ರಸಾದ್

                                                ಅಕ್ಷಯ: 'ನನ್ನ ಹಲ್ಲು ಫಳ ಫಳ'

                       ತಾಯಿ: ಎನ್. ಬಿಂದು,   ತಂದೆ: ಕೆ.ವಿ. ರಾಘವೇಂದ್ರ, ಬೆಂಗಳೂರು.
**************************

ಹರಿತ್ಸ-ಗೋತ್ರ

     ಸಂಸ್ಕೃತ ಭಾಷೆಯಲ್ಲಿ ಗೋತ್ರ ಎನ್ನುವ ಪದದ ಅರ್ಥ ಮನೆತನ ಅಥವಾ ವಂಶ ಪರಂಪರೆ ಎಂದು. ಬ್ರಾಹ್ಮಣ ಜಾತಿಯಲ್ಲಿ ಗೋತ್ರ ಎನ್ನುವುದು ವಂಶದ ಮೂಲ ಪುರುಷ ಅಥವಾ ಕುಟುಂಬದ ಯಜಮಾನನಿಂದ ಬಂದದ್ದು. ಪ್ರತಿಯೊಂದು ಗೋತ್ರವೂ ಒಬ್ಬ ಪ್ರಖ್ಯಾತ ಋಷಿಯ ಹೆಸರನ್ನು ಹೊಂದಿ ಆ ಋಷಿಯನ್ನು ವಂಶದ ಮೂಲ ಪುರುಷನೆಂದು ಒಪ್ಪಿಕೊಂಡಿದೆ. ಪ್ರತಿಯೊಂದು ಗೋತ್ರವೂ ಸ ಅಥವ ಅಸ ಎನ್ನುವ ಅಂತ್ಯ ಪ್ರತ್ಯಯದಲ್ಲಿ ಸಂಬೋಧಿಸಲ್ಪಡುತ್ತದೆ.
     ಬ್ರಾಹ್ಮಣ ಜಾತಿಯಲ್ಲಿದ್ದ ಬೇರೆ ಬೇರೆ ಗುಂಪು ಅಥವ ಪಂಗಡಗಳನ್ನು ಕ್ರಮವಾಗಿ ವಿಂಗಡಿಸುವುದರ ಮೂಲಕ ಮೊಟ್ಟ ಮೊದಲ ಪ್ರಯತ್ನವಾಗಿ ಗೋತ್ರದ ಕಲ್ಪನೆ ಹುಟ್ಟಿಕೊಂಡಿತು. ಪ್ರಾರಂಭದಲ್ಲಿ ಕುಲೀನ ವಂಶದವರು ಪ್ರಖ್ಯಾತ ಋಷಿಗಳ ಹೆಸರಿನೊಂದಿಗೆ ತಮ್ಮನ್ನು ಆ ಋಷಿಗಳ ವಂಶಜರೆಂದು ಗುರುತಿಸಿಕೊಳ್ಳುವುದರ ಮೂಲಕ ಗೋತ್ರಗಳು  ಹುಟ್ಟಿಕೊಂಡವು. (ಉದಾ: ಆಂಗೀರಸ, ಅತ್ರಿ, ಗೌತಮ, ಕಶ್ಯಪ, ಭೃಗು, ವಶಿಷ್ಠ, ಕುತ್ಸ, ಭಾರಧ್ವಾಜ). ಇವರಲ್ಲಿ ಮೊದಲ ಏಳು ಋಷಿಗಳನ್ನು ಪ್ರಧಾನವಾಗಿ ಗಣನೆಗೆ ತೆಗೆದುಕೊಂಡು ಅವರನ್ನು ಸಪ್ತ ಋಷಿಗಳೆಂದು ಗುರುತಿಸಿದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ವಿಶ್ವಾಮಿತ್ರನು ಮೂಲದಲ್ಲಿ ಕ್ಷತ್ರಿಯನಾಗಿದ್ದು, ನಂತರ ತಪಸ್ಸು, ಸಾಧನೆಗಳಿಂದ ಋಷಿಯಾಗಿ, ನಂತರ ಬ್ರಹ್ಮರ್ಷಿಯಾದ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಬ್ರಾಹ್ಣಣ ಜಾತಿಯಲ್ಲಿದ್ದ ಬೇರೆ ಬೇರೆ ಪಂಗಡ ಅಥವ ಗುಂಪುಗಳನ್ನು ವಿಂಗಡಿಸಿ, ವಂಶದ ಪರಂಪರೆಗೆ ಅನುಗುಣವಾಗಿ ಆಯಾ ಋಷಿಯ ಮೂಲದವರೆಂದು ಗುರುತಿಸಿಕೊಳ್ಳುವ ಪರಿಪಾಠ ಬೆಳೆಯಿತು.
     ಪ್ರಧಾನ ಋಷಿಗಳ ಪರಂಪರೆಯ ಮೂಲದಿಂದ ಬಂದವರನ್ನು ನಂತರ ಪ್ರತ್ಯೇಕ ಪಂಗಡವಾಗಿ ವರ್ಗೀಕರಿಸಲಾಯಿತು. ಅದಕ್ಕೆ ಅನುಗುಣವಾಗಿ ಪ್ರಮುಖ ಗೋತ್ರಗಳನ್ನು ಗಣಗಳಾಗಿ ವರ್ಗೀಕರಿಸಿ, ನಂತರ ಪ್ರತಿಯೊಂದು ಗಣವನ್ನೂ ಮತ್ತೆ ವರ್ಗೀಕರಿಸಿ ಕುಟುಂಬಗಳಾಗಿ ವಿಂಗಡಿಸಲಾಯಿತು.
     ನಿರ್ದಿಷ್ಠ ಗಣ ಅಥವ ಉಪಗಣವನ್ನು ಸ್ಥಾಪಿಸಿದ ಮೂಲಪುರುಷ ಅಥವ ಋಷಿಯ ವಂಶದವನೆಂದು ಪ್ರತಿಯೊಬ್ಬ ಬ್ರಾಹ್ಮಣನೂ ಅಧಿಕಾರಯುತವಾಗಿ ಘೋಷಿಸಿಕೊಳ್ಳುತ್ತಾನೆ. ಇದರ ಪ್ರಕಾರ ಒಬ್ಬ ಋಷಿಯಿಂದ ಸ್ಥಾಪಿಸಲ್ಪಟ್ಟ ಗಣ ಅಥವ ಉಪಗಣವನ್ನೇ ಈಗ ಸಾಮಾನ್ಯವಾಗಿ ಗೋತ್ರ ಎಂದು ಕರೆಯುವುದು.     
____________________________________________
     ಈ ಲೇಖನವನ್ನು ಬರೆದಿರುವ ಶ್ರೀ ಬೆಳವಾಡಿ ಅಶ್ವತ್ಥನಾರಾಯಣರವರು ಧಾರ್ಮಿಕ  ಆಚಾರ-ವಿಚಾರಗಳ ಬಗ್ಗೆ ಹೆಚ್ಚು ತಿಳಿದವರಾಗಿದ್ದಾರೆ. ವೇದ ಪುರಾಣಗಳ ಕುರಿತು ಅಭ್ಯಸಿಸಿದ್ದಾರೆ. ಹಾಸನದಿಂದ ಪ್ರಕಟವಾಗುತ್ತಿರುವ ವಿಪ್ರವಾಹಿನಿ ಪತ್ರಿಕೆಯಲ್ಲಿ ಋಷಿ ಮುನಿಗಳ ಪರಿಚಯಾತ್ಮಕ ಲೇಖನಗಳನ್ನು ಧಾರಾವಾಹಿಯಾಗಿ ಬರೆದಿರುವ ಇವರನ್ನು ಹರಿತ್ಸರ ಕುರಿತು ಲೇಖನ ಬರೆದುಕೊಡಲು ಕೋರಲಾಗಿ ಅವರು ಮಾಹಿತಿ ಸಂಗ್ರಹಕ್ಕಾಗಿ ಬಹಳ ಶ್ರಮಪಟ್ಟು ಈ ಲೇಖನ ಸಿದ್ಧಪಡಿಸಿಕೊಟ್ಟಿದ್ದಾರೆ. ವಿವಿಧ ಮೂಲಗಳಿಂದ ಪಡೆದ ಮಾಹಿತಿ ಆಧರಿಸಿ ಈ ಲೇಖನ ಬರೆಯಲಾಗಿದ್ದು ಡಾ. ಹೆಚ್.ಎಸ್. ಗೋಪಾಲಕೃಷ್ಣಮೂರ್ತಿ, ಎಂ.ಎಸ್ಸಿ. ಪಿ.ಹೆಚ್.ಡಿ., ಬೆಂಗಳೂರು, ಶ್ರೀಮತಿ ಹೆಚ್.ಎನ್. ಇಂದಿರಾ ಸೂರ್ಯಪ್ರಕಾಶ, ಬಿ.ಎಸ್ಸಿ., ಎಂ.ಎ.(ಆಂಗ್ಲ), ಬೆಂಗಳೂರು ಇವರನ್ನು ವಿಶೇಷ ಮಾಹಿತಿ ಸಹಕಾರ ನೀಡಿದ್ದಕ್ಕಾಗಿ ಹಾಗೂ ಇಂಗ್ಲಿಷಿನ ಮಾಹಿತಿ ಕನ್ನಡೀಕರಿಸಿಕೊಟ್ಟದ್ದಕ್ಕಾಗಿ ಶ್ರೀ ಬಿ.ಎಲ್. ಲಕ್ಷ್ಮೀನಾರಾಯಣ, ಹಾಸನ ಇವರನ್ನು ಲೇಖಕರು ಸ್ಮರಿಸಿದ್ದಾರೆ.                   -ಸಂ.                                                  
ಲೇಖಕರ ವಿಳಾಸ:                 ಬೆಳವಾಡಿ ಅಶ್ವತ್ಥನಾರಾಯಣ, ನಿವೃತ್ತ ಆರಕ್ಷಕ ನಿರೀಕ್ಷಕರು (ನಿಸ್ತಂತು), ನಂ. ಇ.ಡಬ್ಲ್ಯು.ಎಸ್. ೭೯೫ (ಮಹಡಿ), ಇಪ್ಪತ್ತನೇ ಅಡ್ಡರಸ್ತೆ, ಕುವೆಂಪುನಗರ,       ಹಾಸನ - ೫೭೩೨೦೧.   ಸ್ಥಿರ ದೂರವಾಣಿ: ೦೮೧೭೨-೨೩೩೪೩೦
_____________________________________
     ಹರಿತ್ಸನು ಸೂರ್ಯವಂಶದಲ್ಲಿ ಜನಿಸಿದ ಒಬ್ಬ ಪ್ರಖ್ಯಾತ ರಾಜ. ಹರಿತ್ಸ ಗೋತ್ರದಲ್ಲಿ ಜನಿಸಿದ ಬ್ರಾಹ್ಮಣರೆಲ್ಲಾ ಹರಿತ್ಸ ವಂಶಜರು. ಆಂಗೀರಸ, ಅಂಬರೀಶ, ಯುವನಾಶ್ವರು(ಯೌವನಾಶ್ವ) ಹರಿತ್ಸ ಗೋತ್ರದ ಪ್ರವರ್ತಕ ಋಷಿತ್ರಯರು. ಅಂಬರೀಶ ಮತ್ತು ಯುವನಾಶ್ವ (ಯೌವನಾಶ್ವ)ರೂ ಸಹ ಸೂರ್ಯವಂಶದಲ್ಲಿ ಜನಿಸಿದ ಪ್ರಖ್ಯಾತ ರಾಜರುಗಳು ಹಾಗೂ ಶ್ರೀರಾಮನ ಪೂರ್ವಜರೆಂದು ಶ್ರೀರಾಮನ ವಂಶಾವಳಿಯಿಂದ ತಿಳಿದು ಬರುವ ಸಂಗತಿ.

     ಅಂಬರೀಶನ ಮಗ ಮಂಧಾತ್ರಿ ಮತ್ತು ಅವನ ಮಗ ಯುವಾನಶ್ವ (ಯೌವನಾಶ್ವ). ಯುವನಾಶ್ವನ ಮಗನೇ ಹರಿತ್ಸ. ಇವರುಗಳ ಸಂತತಿಯೇ ಆಂಗೀರಸ - ಹರಿತ್ಸರು ಎಂದು ವಿಷ್ಣು ಪುರಾಣದಲ್ಲಿ ಉಲ್ಲೇಖಿತವಾಗಿದೆ.     ವಿಷ್ಣು ಪುರಾಣದ ಪ್ರಕಾರ ಹರಿಶ್ಚಂದ್ರನು ತ್ರಿಶಂಕುವಿನ ಮಗ. ಅವನ ಮಗ ರೋಹಿತಾಶ್ವ. ರೋಹಿತಾಶ್ವನ ಮಗನೇ ಹರಿತ್ಸ. ಅವನ ಮಗ ಚುಂಚು. ಅವನಿಗೆ ವಿಜಯ ಮತ್ತು ಸುದೇವ ಎಂಬ ಹೆಸರಿನ ಇಬ್ಬರು ಮಕ್ಕಳು. ಇದರಲ್ಲಿ ತಿಳಿಸಿರುವ ಹರಿತ್ಸರು ಪರಂಪರೆಯಲ್ಲಿ ದ್ವಿತೀಯ ತಲೆಮಾರಿನವರು.
     ಸೂರ್ಯವಂಶದ ರಾಜನಾದ ಯುವಾನಶ್ವ (ಯೌವನಾಶ್ವ)ನ ಮಗ ಹರಿತ್ಸ ಇಕ್ವಾಕುವಿನ ಸಂತಾನ. ಅವನ ಸಂತತಿಯವರೇ ಹರಿತ್ಸ - ಆಂಗೀರಸರು. ಲಿಂಗಪುರಾಣದಲ್ಲಿ ಹೇಳಿರುವಂತೆ ಯುವಾನಶ್ವನ (ಯೌವನಾಶ್ವ) ಮಗನೇ ಹರಿತ್ಸ. ಅವನ ಮಕ್ಕಳೇ ಹರಿತ್ಸರು. ಅವರು ಕ್ಷತ್ರಿಯ ವಂಶದಲ್ಲಿ ಜನಿಸಿ ನಂತರ ದ್ವಿಜರಾದ ಆಂಗೀರಸ ಋಷಿಗಳ ಅನುಯಾಯಿಗಳಾಗಿದ್ದರು. ಅಥವ ವಾಯುವಿನ ಪ್ರಕಾರ ಕ್ಷತ್ರಿಯ ಪರಂಪರೆಯಲ್ಲಿ ಜನಿಸಿ ದ್ವಿಜತ್ವಕ್ಕೆ ಏರಿ ಬ್ರಹ್ಮಜ್ಞಾನಿಗಳಾದ ಆಂಗೀರಸರ ಮಕ್ಕಳಾಗಿದ್ದರು. ಬಹುಶಃ ಇದರ ಅರ್ಥ ಕ್ಷತ್ರಿಯನಾಗಿ ಜನಿಸಿದ ಹರಿತ್ಸನನ್ನು ಆಂಗೀರಸರು ದ್ವಿಜತ್ವಕ್ಕೆ ಏರಿಸಿರಬೇಕು.

     ಇತರೇ ಕೃತಿಗಳಲ್ಲಿ ಹೇಳಿರುವಂತೆ, ಹರಿತ್ಸ ಎನ್ನುವ ಹೆಸರು ಒಬ್ಬ ಋಷಿಗೆ ಸಂಬಂಧಿಸಿದ್ದು ಅವನು ಚ್ಯವನನ ಮಗನೆಂದೂ ನೀತಿಸಂಹಿತೆಯ ಗ್ರಂಥವು ಅವನಿಂದ ರಚಿಸಲ್ಪಟ್ಟಿದೆ ಎಂಬ ಅಂಶ ತಿಳಿದು ಬರುತ್ತದೆ.
     ಹರಿತ್ಸನು ತನ್ನ ನೀತಿ ಸಂಹಿತೆಯ ಮೂಲ ಪ್ರತಿಯನ್ನು ಗದ್ಯ ರೂಪದಲ್ಲಿ ರಚಿಸಿದ್ದಾನೆ. ಆದರೆ ಆ ಮೂಲ ಪ್ರತಿಯು ಲಭ್ಯವಿಲ್ಲದ ಕಾರಣ ಈಗ ಪ್ರಚಲಿತವಿರುವ ಸಂಹಿತೆಯು ಮೂಲ ಪ್ರತಿಯ ಸಾರಾಂಶ ರೂಪದಲ್ಲಿದೆ. ನೀತಿ ಸಂಹಿತೆ ಛಂದೋಬದ್ಧತೆಯನು ಹಿಂದೂ ಧರ್ಮೀಯರು ಸಾಮಾನ್ಯವಾಗಿ ಆಚಾರ ಅಥವ ಧರ್ಮದ ಪ್ರಮಾಣವೆಂದು ಪರಿಗಣಿಸಿದ್ದಾರೆ. ಆನಾದರಣೀಯವೆನಿಸುವ ಯಾವ ನೈಸರ್ಗಿಕ ನಿಯಮಗಳೂ ಈ ನೀತಿ ಸಂಹಿತೆಯಲ್ಲಿ ಕಂಡು ಬರುವುದಿಲ್ಲ. ಈ ನೀತಿ ಸಂಹಿತೆಯು ಏಳು ಅಧ್ಯಾಯಗಳನ್ನು ಹಿಂದಿದ್ದು ನೂರಾ ತೊಂಬತ್ತನಾಲ್ಕು ದ್ವಿಪದಿಯ ಶ್ಲೋಕಗಳನ್ನು ಒಳಗೊಂಡಿದೆ.
     ರಾಜ ಅಂಬರೀಶ ಮತ್ತು ಋಷಿ ಮಾರ್ಕಂಡೇಯ ಇವರಿಬ್ಬರ ನಡುವೆ ನಡೆದ ಸಂವಾದ ಪ್ರಶ್ನೋತ್ತರ ರೂಪದಲ್ಲಿದ್ದು ವಿವಿಧ ಜಾತಿಯವರು ಅನುಸರಿಸಬೇಕಾದ ನೀತಿ ಅಥವ ಜಾತಿ ಧರ್ಮದ ಬಗ್ಗೆ ಅಂಬರೀಶನು ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಮಾರ್ಕಂಡೇಯ ಋಷಿಯು ಪೂರ್ವಾಚರಣೆಯಲ್ಲಿದ್ದ ನೀತಿ- ಜಾತಿ ಧರ್ಮಗಳ ಬಗ್ಗೆ ಹರಿತ್ಸ ಮತ್ತು ಋಷಿಗಳ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಾನೆ.
     ಹರಿತ್ಸನಿಂದ ರಚಿಸಲ್ಪಟ್ಟ ನೀತಿಸಂಹಿತೆ ಗ್ರಂಥದ ಪ್ರಾರಂಭದ ಉಕ್ತಿಯ ಪ್ರಕಾರ ಹರಿತ್ಸ ಮತ್ತು ಮಾರ್ಕಂಡೇಯ ಋಷಿಯ ನಡುವೆ ಪ್ರಶ್ನೋತ್ತರ ರೂಪದಲ್ಲಿ ನಡೆದ ಸಂವಾದ ಸ್ಪಷ್ಟವಾಗುತ್ತದೆ. ಹರಿತ್ಸನು ತನ್ನ ನೀತಿ ಸಂಹಿತೆಯನ್ನು ಗದ್ಯ ರೂಪದಲ್ಲಿ ರಚಿಸಿರುವುದು ವೇದ್ಯವಾಗುತ್ತದೆ. ಹರಿತ ಸಂಹಿತೆಯೆಂದು ಕರೆಉಲ್ಪಡುವ ಈ ಗ್ರಂಥವು ಸಹಜವಾಗಿ ಪದ್ಯರೂಪದ ಗ್ರಂಥವಾಗಿ ಮಾರ್ಕಂಡೇಉ ಋಷಿಯಿಂದ ರಚಿಸಲ್ಪಟ್ಟಿದೆ. ಹರಿತ್ಸನಿಂದ ರಚಿಸಲ್ಪಟ್ಟ ಗದ್ಯರೂಪದ ಮೂಲ ಪ್ರತಿಯ ವಿವರಗಳ ಸಾರಾಂಶವನ್ನೆಲ್ಲಾ ಸಂಗ್ರಹಿಸಿ ಮಾರ್ಕಂಡೇಯ ಋಷಿಯು ಶ್ಲೋಕಗಳಲ್ಲಿ ರಚಿಸಿದ್ದಾನೆ.
     ತತ್ವಜ್ಞಾನಿ, ವೇದಾಂತಿ, ವಿಶಿಷ್ಠಾದ್ವೈತದ ಪ್ರವರ್ತಕರಾದ ಶ್ರೀ ರಾಮಾನುಜರು ಹರಿತ್ಸ ಗೋvದವರು. ಶ್ರೀ ವೈಷ್ಣವರು ಶ್ರೀ ರಾಮಾನುಜರನ್ನು ಅವರ ಪರಂಪರೆಯ ಮೂರನೇ ಹಾಗೂ ಪ್ರಮುಖ ಆಚಾರ್ಯರೆಂದು ಪರಿಭಾವಿಸುತ್ತಾರೆ.
      ಆಂಗೀರಸ - ಅಂಬರೀಶ - ಯುವಾನಶ್ವ(ಯೌವನಾಶ್ವ)                                         ಪ್ರವರದ ಹರಿತ್ಸ ಗೋತ್ರದ ವಂಶ ಪರಂಪರೆಯು ಸಹಸ್ರಾರು ವರ್ಷಗಳ ಇತಿಹಾಸವನ್ನು ಸ್ಪಷ್ಟವಾಗಿ ವಿವರಿಸುತ್ತದೆ.
-ಬೆಳವಾಡಿ ಅಶ್ವತ್ಥನಾರಾಯಣ
*****
HARITHA
From Wikipedia, the free encyclopedia

     Harit (Harita) Rishi was a sage of the Lakulish cult and was a devotee of Lord Shiva (Shri Eklingji). Harita was also the guru who taught Bappa Rawal of Guhilot (later to called Sisodia) the four cardinal duties for the service of the state:

1.     To follow the principles of Manav Dharma and preserve Vedic culture.
2.     To serve all God’s creations as a service to God, the creator of all life.
3.     To endeavour constantly to keep the human soul awakened and alive, in order that human beings would value the Dignity of Man.
4.     To help recognize Man’s special status in the hierarchy of God’s creations- the eternal principles underlying cosmic creation.
.
*****


ಕೆಳದಿ ಕವಿಮನೆತನದವರ ಪ್ರವರ
     ಕೆಳದಿ ಕವಿ ಮನೆತನದವರು ಹರಿತಸ ಗೋತ್ರಕ್ಕೆ ಸೇರಿದವರಾಗಿದ್ದು ಅವರು ಹೇಳುವ ಪ್ರವರ ಈ ರೀತಿ ಇರುತ್ತದೆ:
    
 ಆಂಗೀರಸ ಅಂಬರೀಶ, ಯೌವನಾಶ್ವ ತ್ರಯಾಋಷಯ ಪ್ರವರಾನ್ವಿತ ಹರಿತಸ ಗೋತ್ರ ಬೋಧಾಯನ ಸೂತ್ರ ಯಜುಃ:ಶಾಖಾ ಅಧ್ಯಾಯಿ . . . . . . . . . . . . . . ಶರ್ಮ ಅಹಂಭೋ ಅಭಿವಾದಯೇ

ಅರ್ಥ:  ಹರಿತಸ ಗೋತ್ರಕ್ಕೆ ಸೇರಿದ, ಮೂವರು ಋಷಿಗಳಾದ ಆಂಗೀರಸ, ಅಂಬರೀಶ, ಯೌವನಾಶ್ವರ ವಂಶದವನಾದ, ಯಜುರ್ವೇದದ ಬೋಧಾಯನ ಸೂತ್ರವನ್ನು ಪಾಲಿಸುವವನಾದ ನಾನು . . . . . . . . . . . . . ಶರ್ಮ ನಮಸ್ಕರಿಸುತ್ತೇನೆ.
*****

ಬ್ರಾಹ್ಮಣನೆಂದರೆ . . .
     ಬ್ರಾಹ್ಮಣ ನಾಮ ಪದವಾದರೆ ಬ್ರಾಹ್ಮಣ್ಯ ಗುಣವಾಚಕ. ಯಾರು ಬ್ರಾಹಣ್ಯವನ್ನು ಅರಿಯಲು ಮತ್ತು ಅನುಭವಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೋ ಅಂತಹವರು ಮಾತ್ರ ಬ್ರಾಹ್ಮಣರು. ಕೇವಲ ಹುಟ್ಟಿನಿಂದ, ನಂತರ ಕೆಲವು ಸಂಪ್ರದಾಯಗಳನ್ನು ಅನುಸರಿಸುವುದರಿಂದ, ಹಣೆಯ ಮೇಲೆ ಕೆಲವು ಚಿನ್ಹೆಗಳನ್ನು ಹಾಕಿಕೊಳ್ಳುವುದು, ಸಂಧ್ಯಾವಂದನೆ, ಪೂಜೆ, ಇತ್ಯಾದಿ ಸಂಸ್ಕಾರಗಳನ್ನು ಮಾಡುವಷ್ಟರಿಂದಲೇ ಬ್ರಾಹ್ಮಣ್ಯವನ್ನು ಪಡೆಯಲು ಸಾಧ್ಯವಿಲ್ಲ. ಈ ಪ್ರಪ್ರಾಥಮಿಕ ಸಂಪ್ರದಾಯಗಳು ಅಗತ್ಯ. ಆದರೆ ಅಷ್ಟರಿಂದಲೇ ವಿಕಾಸ ಸಾಧ್ಯವಿಲ್ಲ. ಇದರ ಬಗೆಗೆ ಸಾಧಕರು, ಸಿದ್ಧಪುರುಷರು ಹಿಂದೆ ಸಮಾಜಕ್ಕೆ ತಮ್ಮ ತಮ್ಮ ಅನುಭವಗಳನ್ನು ತಿಳಿಸಿಕೊಡುತ್ತಾ ಮುಂದಿನ ಸಮಾಜಕ್ಕೆ ಮಾರ್ಗದರ್ಶನ ಮಾಡಿಕೊಡುತ್ತಿದ್ದರು.
            - ಎಚ್. ಆರ್. ಸಂಪತ್ ಕುಮಾರನ್,
ಸರ್ವೋದಯ ಕಾರ್ಯಕರ್ತರು,೧೪೧೦, ಸರ್ವೋದಯ ಸದನ,ಸೌತ್ ಎಂಡ್ ಎ ರಸ್ತೆ, ಜಯನಗರ, ೯ನೆ ಬ್ಲಾಕ್, ಬೆಂಗಳೂರು.-೫೬೦೦೬೯.
(ಇವರ 'ಗೋತ್ರ, ಪ್ರವರ, ಸೂತ್ರ, ಶಾಖಾ  ವಿಚಾರ ಸೂಚಿ' ಪುಸ್ತಕದಿಂದ)
*****


ಅನಿಸಿಕೆ
 ನಾವು - ನಮ್ಮವರು ಕಾರ್ಯಕ್ರಮ
       ಬಂಧು ಬಾಂಧವರ ಸಂಗಮ
     ಸುಂದರ ಕ್ಷಣಗಳು ವಿಹಂಗಮ
     ಮನದ ಮಾತಿಗಿಲ್ಲ ಅಂತಿಮ
     ಹಿಂದಿನ ವಿಷಯಗಳ ಸಂಗ್ರಾಮ
     ಮುಂದಿನ ಪೀಳಿಗೆಯ ಉಗಮ
     ಯೋಜನೆಗಳು ಮೂಡಲು ಸಕ್ರಮ
     ನೆಮ್ಮದಿ ದೊರೆಯುವ ಆಶ್ರಮ
     ಮಧುರ ಭಾವನೆಗಳ ಸಮಾಗಮ
     ಸರಳ ಸುಂದರ ಕಾರ್ಯಕ್ರಮ
     ವಿಚಾರ ವಿನಿಮಯದ ಘಮಾ ಘಮ

-ಹೇಮಾ ಮಾಲತೇಶ, ಶಿವಮೊಗ್ಗ
*****

ಮಾಹಿತಿಗೆ
     ಈ ಸಂಚಿಕೆಯನ್ನು ಶ್ರೀ ಹೆಚ್. ಎಸ್. ನಟರಾಜ, ಬೆಂಗಳೂರು ಇವರು ಪ್ರಾಯೋಜಿಸಿರುವುದಿಲ್ಲ. ಅವರು ಮುಂಬರುವ ದಿನಗಳಲ್ಲಿ ಸಂಚಿಕೆಯೊಂದನ್ನು ಪ್ರಾಯೋಜಿಸಲಿದ್ದಾರೆ. ಈ ಸಂಚಿಕೆಯನ್ನು ತಮ್ಮ ಹೆಸರನ್ನು ಪ್ರಕಟಿಸಬಾರದೆಂಬ ಕೋರಿಕೆಯೊಂದಿಗೆ ಬೆಂಗಳೂರಿನ ಸಹೃದಯರೊಬ್ಬರು ಪ್ರಾಯೋಜಿಸಿದ್ದಾರೆ. ಇವರಿಗೆ ವಂದನೆಗಳು.
*****


'ಕವಿಕಿರಣ'ದ ಮುಂದಿನ ಸಂಚಿಕೆ ಜೂನ್, ೨೦೧೦ರಲ್ಲಿ ಪ್ರಕಟವಾಗಲಿದೆ. ಎಂದಿನಂತೆ ಎಲ್ಲರ ಪ್ರೋತ್ಸಾಹ, ಸಹಕಾರ ನಿರೀಕ್ಷಿಸಿದೆ.                                -ಸಂ.
******************

ಸುದ್ದಿ - ಕಿರಣ
ಪ್ರಬಂಧ ಮಂಡನೆ:     
  ದಿನಾಂಕ ೧೦-೧೦-೦೯ರಂದು ಬಾಳೆಹೊನ್ನೂರಿನಲ್ಲಿ ಜರುಗಿದ ಕರ್ನಾಟಕ ಇತಿಹಾಸ ಅಕಾಡೆಮಿಯ ವಿದ್ವತ್ ಸಭೆಯಲ್ಲಿ ಕೆಳದಿ ಗುಂಡಾಜೋಯಿಸರು ಅಲಹಾಬಾದಿನಲ್ಲಿ ಲಭಿಸಿದ ಕೆಳದಿ ಗೌರಿವರ ಹಸ್ತಪ್ರತಿ ಕುರಿತು ಹಾಗೂ ಡಾ. ಕೆಳದಿ ವೆಂಕಟೇಶ ಜೋಯಿಸರು ಭದ್ರಪ್ಪನಾಯ್ಕನ ಅಪ್ರಕಟಿತ ದಾಖಲೆ ಎಂಬ ಪ್ರಬಂಧ ಮಂಡಿಸಿದರು. ಬೆಂಗಳೂರು ವಿ.ವಿ.ಯ ಆಶ್ರಯದಲ್ಲಿ ಕರ್ನಾಟಕ ಇತಿಹಾಸ ಪರಿಷತ್ ಸಮ್ಮೇಳನದಲ್ಲಿ ಇಕ್ಕೇರಿ ದೇವಾಲಯದ ಮೇಲೆ ಪರಶುರಾಮಬಾವು ದಾಳಿ, ಹೊಸಳ್ಳಿಯಲ್ಲಿ ನಡೆದ ಇತಿಹಾಸ ಪುನರ್ ಮಿಲನ ಸಮ್ಮೇಳನದಲ್ಲಿ ಕೆಳದಿನೃಪವಿಜಯದಲ್ಲಿ ವಿಜಯನಗರ ಇತಿಹಾಸ ಮೊದಲಾದ ಪ್ರಬಂಧವನ್ನು ವೆಂಕಟೇಶ್ ಜೋಯಿಸ್ ಮಂಡಿಸಿದ್ದಾರೆ.
ತೇರ್ಗಡೆ:
ಅದ್ವೈತ ವೇದಾಂತ ವಿದ್ವಾನ್, ಜ್ಯೋತಿಷವಿಭೂಷಣ, ಜ್ಯೋತಿಷಪ್ರವರ, ಕೃಷ್ಣ ಯಜುರ್ವೇದ ಕ್ರಮಪಾಠೀ, ಹಿಂದಿ ರಾಷ್ಟ್ರಭಾಷಾ ವಿಶಾರದ, ಹಿಂದಿರತ್ನ ಕೆಳದಿ ಕೃಷ್ಣಜೋಯಿಸ್, ಎಂ.ಎ., ಬಿ.ಎಡ್, ಪಿ.ಹೆಚ್.ಡಿ ರವರು ೨೦೦೮-೦೯ರಲ್ಲಿ ಮುಜರಾಯಿ ಇಲಾಖೆ ವತಿಯಿಂದ ನಡೆದ ಆಗಮ ಪ್ರವರ ವಿದ್ವತ್ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
     ಡಾ. ಕೆ. ವೆಂಕಟೇಶಜೋಯಿಸರ ಮಗಳು ಕವನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೊದಲದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ.

ಶುಭ ವಿವಾಹ:   
         ದಿ. ೧೬-೧೦-೨೦೦೯ ರಂದು ಬೆಂಗಳೂರಿನ ಶ್ರೀ ಕೆ.ವಿ. ಪಾಂಡುರಂಗ ಮತ್ತು ಶ್ರೀಮತಿ ಬಿ.ಜಿ. ಸೌಭಾಗ್ಯರವರ ಪುತ್ರಿ ಚಿ.ಸೌ. ಮಾನಸಳ ವಿವಾಹ ಬೆಂಗಳೂರಿನ ಶ್ರೀ ಆರ್.ಎನ್. ಶ್ರೀಕಂಠ ಮತ್ತು ಶ್ರೀಮತಿ ಲೀಲಾವತಿರವರ ಪುತ್ರ ಚಿ. ಶರದ್ ವಸಿಷ್ಠ. ಎಸ್.ರೊಂದಿಗೆ ಬೆಂಗಳೂರಿನ ಬಸವನಗುಡಿಯಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆಯಿಂದ ನಡೆಯಿತು.

(ತಿಳಿದ ಮತ್ತು ತಿಳಿಸಲಾದ  ಸುದ್ದಿಗಳನ್ನು ಮಾತ್ರ ಪ್ರಕಟಿಸಿದೆ. -ಸಂ.)***
ಸ್ವೀಕರಿಸಿದ ಕೃತಿಗಳು:೧.ಕನ್ನಡದ ತುತ್ತೂರಿ, ಮಕ್ಕಳ ಕವನ ಸಂಕಲನ- ಲೇ: ಮಾರ್ಪಳ್ಳಿ ಆರ್. ಮಂಜುನಾಥ್; ಪ್ರ: ಶ್ರೀ ಮಹಾಗಣಪತಿ ಪ್ರಕಾಶನ, ಶಿವಮೊಗ್ಗ; ಪು: ೬೦. ಬೆಲೆ: ರೂ.೩೦.೦೦.
೨. ನಾಸ್ತಿಮೂಲಂ ಅನೌಷಧಮ್-೧ (ಔಷಧವಲ್ಲದ ಸಸ್ಯವಿಲ್ಲ)- ಔಷದೀಯ ಸಸ್ಯಗಳು ಮತ್ತು ಉಪಯೋಗಗಳ ಪರಿಚಯ- ಸಂಕಲನ ಮತ್ತು ಪ್ರಕಟಣೆ; ಪ್ರಸ್ತುತ ಪ್ರತಿಷ್ಠಾನ (ರಿ), ಬೆಂಗಳೂರು ಶಿವಮೊಗ್ಗ ಶಾಖೆ - ಶ್ರೀ ಸದ್ಗುರು ಆಯುರ್ವೇದ ಚಿಕಿತ್ಸಾ ಕೇಂದ್ರ, ಗಾಂಧಿನಗರ, ಶಿವಮೊಗ್ಗ; ಸಹಯೋಗ: ಸೌಪರ್ಣಿಕಾ ಫಾರಂ ಮತ್ತು ವನೌಷಧಿ ಕೇಂದ್ರ, ದೋಗಿಹಳ್ಳಿ, ಬೀರೂರು, ಚಿಕ್ಕಮಗಳೂರು ಜಿಲ್ಲೆ. ಪು: ೬೪, ಬೆಲೆ: ರೂ.೬೦/-.
***
   ಕವಿ ಪ್ರಕಾಶನದ ಪ್ರಕಟಣೆಗಳು
೧. ಹಳೇ ಬೇರು - ಹೊಸ ಚಿಗುರು - ಕವಿ ವಂಶಸ್ಥರ ಸ್ಥೂಲ ಪರಿಚಯ ಮತ್ತು ವಂಶಾವಳಿ -     ಲೇ:   ಕವಿ ವೆಂ. ಸುರೇಶ್,ಪು: ೧೨೬. ಬೆಲೆ: ರೂ. ೧೨೫/-
೨. Karmayogi – Kalavallabha S.K. LINGANNAIYA – a concise biography of Sri S.K. Lingannaiya – Author: Kavi Suresh. P:114. Price: Rs. 80/-

೩. ಉತ್ಕೃಷ್ಟದೆಡೆಗೆ - ಲೇಖನಗಳ ಸಂಗ್ರಹ -             ಲೇ: ಕವಿ ವೆಂ. ಸುರೇಶ್,  ಪು:೯೮, ಬೆಲೆ: ರೂ. ೭೫/-
೪. ಕವಿಸಂಪರ್ಕವಾಹಿನಿ (ದೂರವಾಣಿಕೈಪಿಡಿ) -            ಸಂ. ಕವಿ ಸುರೇಶ್,         ಪು:೨೬, ಬೆಲೆ: ರೂ.೧೫/-
೫. ಕವಿ ಸುಬ್ರಹ್ಮಣ್ಯಯ್ಯ
- ಒಂದು ಜೀವಗೀತೆ -(ವ್ಯಕ್ತಿಚಿತ್ರಣ)-   ಲೇ: ಕ. ವೆಂ. ನಾಗರಾಜ್, ಹಾಸನ. ಪು.೬೦, ಬೆಲೆ: ರೂ.೪೦/-.
*****

****************

ವೀಕ್ಷಣೆಗೆ ಧನ್ಯವಾದಗಳು.    -ಸಂಪಾದಕ.
**************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ