ಗುರುವಾರ, ಜೂನ್ 23, 2011

ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ

ಆತ್ಮೀಯರೇ,
                 ಇದೊಂದು ವಿಶೇಷ ಕೊಡುಗೆ. ಕೆಳದಿ ಕವಿಮನೆತನದವರ ಮತ್ತು ಬಂಧು-ಬಳಗದವರ ಮೂರನೆಯ ಸಮಾವೇಶ ಬೆಂಗಳೂರಿನಲ್ಲಿ ನಡೆದ ಸಂದರ್ಭದಲ್ಲಿ ಬಿಡುಗಡೆಯಾದ ಕವಿ ನಾಗರಾಜರ ಕೃತಿ 'ಕವಿ ಸುಬ್ರಹ್ಮಣ್ಯಯ್ಯ - ಒಂದು ಜೀವಗೀತೆ' ಪುಸ್ತಕವನ್ನು ಈ ತಾಣದಲ್ಲಿ ಪ್ರಕಟಿಸಿದೆ. ಲೇಖಕರ ಅಜ್ಜನವರಾದ ಕವಿ ಸುಬ್ರಹ್ಮಣ್ಯಯ್ಯನವರು ಕವಿಮನೆತನದ ಏಳನೆಯ ಪೀಳಿಗೆಗೆ ಸೇರಿದವರು. ಇವರ ಜೀವನ ಚರಿತ್ರೆ ಈಗ ನಿಮ್ಮ ಮುಂದಿದೆ. ನಿಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳಿಗೆ ಸ್ವಾಗತ.
ನಿಮ್ಮವ.
-ಕ.ವೆಂ. ನಾಗರಾಜ್.
***********************************







******************

ಕವಿ ಸುಬ್ರಹ್ಮಣ್ಯಯ್ಯ - ಕೆಳದಿ ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದವರು. ಬಹುಮುಖ ಪ್ರತಿಭಾನ್ವಿತರಾಗಿದ್ದರೂ ಎಲೆಮರೆಯ ಕಾಯಿಯಂತೆ ಬಾಳಿದ ಇವರ ವ್ಯಕ್ತಿ ಚಿತ್ರಣ. ಲೇಖಕ ಇವರ ಮೊಮ್ಮಗ.

ಕೃತಿಯ ಸ್ವಾಮ್ಯ           : ಲೇಖಕರದು.

ಪ್ರಥಮ ಮುದ್ರಣ          : ೨೦೦೮.

ಪುಟಗಳು               : ೫೬ + ೪ = ೬೦

ನಿಜಬೆಲೆ                :  ?

ಸಾಂಕೇತಿಕ ಬೆಲೆ           :  ರೂ. ೪೦.೦೦

ಡಿಟಿಪಿ ಮತ್ತು
ಲಘು ರೇಖಾಚಿತ್ರಗಳು:      :  ಕ.ವೆಂ. ನಾಗರಾಜ್, ಹಾಸನ.


ಮುದ್ರಕರು               :  ರಾಯಲ್ ಪ್ರಿಂಟರ‍್ಸ್, ಶಿವಮೊಗ್ಗ.

ಪ್ರಕಾಶನ                 :  ಕವಿ ಪ್ರಕಾಶನ, ಶಿವಮೊಗ್ಗ.
*********************
ಮೊದಲಿಗೆರಡು ತೊದಲು

     ಕರ್ನಾಟಕದ ಚರಿತ್ರೆಯಲ್ಲಿ ವೈಭವದಿಂದ ಬಾಳಿದ ಕೆಳದಿ ಧರ್ಮ ಸಂಸ್ಥಾನದ ಇತಿಹಾಸ ಮಹತ್ತರವಾದುದು. ಕೆಳದಿ ಸಂಸ್ಥಾನದಲ್ಲಿ ಆಸ್ಥಾನ ಕವಿಯಾಗಿದ್ದ ಕವಿ ಲಿಂಗಣ್ಣ ರಚಿಸಿದ ಕೆಳದಿ ನೃಪವಿಜಯ ಐತಿಹಾಸಿಕವಾಗಿ ಮಹತ್ವ ಪಡೆದಿದ್ದು, ಕೆಳದಿ ಇತಿಹಾಸ ಆಧ್ಯಯನದ ವಿದ್ಯಾರ್ಥಿಗಳಿಗೆ ಪ್ರಮುಖ ಆಕರ ಗ್ರಂಥವಾಗಿದೆ. ಇವರಿಂದಾಗಿಯೇ ಈತನ ವಂಶಸ್ಥರಿಗೆ ಕವಿಮನೆತನದವರು ಎಂದು ಹೆಸರು ಬಂದಿದ್ದು, ಇವರು ರಚಿಸಿದ ದಕ್ಷಾಧ್ವರ ವಿಜಯ ಮತ್ತು ಶಿವಪೂಜಾ ದರ್ಪಣ ಸಹ ಅಮೂಲ್ಯ ಕೃತಿಗಳು.
     ಕವಿ ಲಿಂಗಣ್ಣನ ವಂಶಜರಾದ ವೆಂಕ ಕವಿಯ ನರಹರಿ ವಿಜಯ, ಕೀರ್ತನೆಗಳು, ಸುಬ್ಬಾಭಟ್ಟರ ರುಕ್ಮಿಣಿ ಸ್ವಯಂವರ ಮತ್ತು ಪಾರಿಜಾತ ಎಂಬ ಯಕ್ಷಗಾನ ರಚನೆಗಳು ವಿದ್ವಾಂಸರ ಮನಗೆದ್ದಿವೆ. ಐದನೆಯ ತಲೆಮಾರಿನ ಕವಿ ಕೃಷ್ಣಪ್ಪ ರಚಿಸಿದ ಕೆಳದಿ ನೃಪವಿಜಯದ ಗದ್ಯಾನುವಾದ, ಕೆಳದಿ ರಾಯಪದ್ಧತಿ ಎಂಬ ಪದ್ಯಗ್ರಂಥದ ಬಗ್ಗೆ ಕೆಳದಿಯ ಡಾ.ಗುಂಡಾಜೋಯಿಸರ ಸಂಶೋಧನೆ ಬೆಳಕು ಚೆಲ್ಲಿದೆ.
     ಕವಿ ಮನೆತನದ ಏಳನೆಯ ಪೀಳಿಗೆಗೆ ಸೇರಿದ ಕವಿ ಸುಬ್ರಹ್ಮಣ್ಯಯ್ಯನವರ ಬಗ್ಗೆ ಅವರ ಮೊಮ್ಮಗನಾದ ನಾನು ತಿಳಿದಷ್ಟು ಮಟ್ಟಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ. ನನ್ನ ತಾತ ಆಶು ಕವಿತೆ ರಚನಾ ಸಾಮರ್ಥ್ಯ ಹೊಂದಿದ್ದು ಸಮಯ ಸಂದರ್ಭಗಳಿಗೆ ತಕ್ಕಂತೆ ಹಾಸ್ಯಭರಿತ ಚುಟುಕುಗಳನ್ನು ಸೃಷ್ಟಿಸಿ ಹೇಳುತ್ತಿದ್ದರು. ಅವರು ಅದ್ಭುತ ಹಾಸ್ಯಗಾರರಾಗಿದ್ದು ಅವರು ಮಾಡುತ್ತಿದ್ದ ಹಾಸ್ಯಗಳಿಗೆ ಮನಸ್ಸಿಗೆ ಮುದ ನೀಡುವ, ಕಷ್ಟ ಮರೆಸಿ ಕಹಿ ಪ್ರಸಂಗಗಳನ್ನು ತಿಳಿಗೊಳಿಸುವ ಶಕ್ತಿ ಇತ್ತು. ದೌರ್ಭಾಗ್ಯವಶಾತ್ ಅವರು ಅದನ್ನು ಬರೆದಿಡಲಿಲ್ಲ. ಕೇಳಿದ್ದವರೂ ಸಹ ಆ ಕಾರ್ಯ ಮಾಡಲಿಲ್ಲ. ಅದನ್ನೆಲ್ಲಾ ಬರವಣಿಗೆಯಲ್ಲಿ ಮಾಡಿದ್ದಿದ್ದರೆ ಒಂದು ಬೃಹತ್ ಹಾಸ್ಯ ಸಂಪುಟವಾಗಿ ಜನಪ್ರಿಯವಾಗುತ್ತಿದ್ದುದರಲ್ಲಿ ಅನುಮಾನವಿಲ್ಲ.
    ನನಗೆ ೧೫ ವರ್ಷಗಳಾಗುವವರೆಗೆ ತಾತ ಬದುಕಿದ್ದು ಅವರು ಕಾಲನಲ್ಲಿ ಲೀನವಾದ ಸಮಯದಲ್ಲಿ ನಾನು ಚಿತ್ರದುರ್ಗದಲ್ಲಿ ಪ್ರೌಢsಶಾಲೆಯಲ್ಲಿ ಕಲಿಯುತ್ತಿದ್ದೆ. ತಾತನ ಸಂಧ್ಯಾಕಾಲ ನನ್ನ ಬಾಲ್ಯಕಾಲವಾಗಿದ್ದು, ನಾನು ಬಾಲ್ಯದಲ್ಲಿ ಕಂಡ ತಾತನ ಬಗ್ಗೆ ಹಿರಿಯರು, ತಿಳಿದವರು ಹೇಳಿದ ಸಂಗತಿಗಳನ್ನು ನನ್ನ ದೃಷ್ಟಿಕೋನದಲ್ಲಿ ಕ್ರೋಢೀಕರಿಸಿ ದಾಖಲಿಸುವ ಪ್ರಯತ್ನವಿದು.   ನನ್ನ ತಾತ  ದೊಡ್ಡ ಸಾಧಕನೇನಲ್ಲ.  ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬಾಳಿದವರು. ವಿಪರ್ಯಾಸವೆಂದರೆ ಬಾಲ್ಯದ ದಿನಗಳ ಬಗ್ಗೆ ತನ್ನ ಮಗನಿಗೇ  ಅಂದರೆ ನಮ್ಮ ತಂದೆಗೇ ಏನನ್ನೂ ತಿಳಿಸಿಲ್ಲ; ಅವರನ್ನು ಬಂಧುಗಳ ಮನೆಗೆ ಕರೆದೊಯ್ದಿಲ್ಲ; ಪರಿಚಯಿಸಿಲ್ಲ. ಇದಕ್ಕೆ ಅವರದೇ ಆದ ಕಾರಣಗಳಿರಬಹುದು.
     ಸುಬ್ರಹ್ಮಣ್ಯಯ್ಯನವರ ಬಗ್ಗೆ ಪೂರ್ಣವಾಗಿ ತಿಳಿದವರು ಯಾರೂ ಇಲ್ಲ. ಹೀಗಾಗಿ ನನ್ನ ತಾತನ ಕಥೆ  ಒಂದು   ನೆನಪಿನ   ದೋಣಿಯ ಪಯಣ ವಾಗಿದ್ದು, ಅಂಬಿಗರಾಗಿ ನನ್ನ ತಂದೆ ವೆಂಕಟಸುಬ್ಬರಾವ್, ತಾಯಿ ಸೀತಮ್ಮ, ಅತ್ತೆ ಸೀತಾಲಕ್ಷ್ಮಮ್ಮ್ಮ, ಕೆಳದಿಯ ಗುಂಡಾಜೋಯಿಸ್, ಕೊಪ್ಪದ ವೆಂಕಟಪತಿ, ಮೂಕಮ್ಮನವರ ಮಗಳು ಜಾನಕಮ್ಮ, ಸಾ.ಕ. ಕೃಷ್ಣಮೂರ್ತಿ, ಮುಂತಾದವರು ಪಯಣದ ದಾರಿ ತೋರಿದ್ದಾರೆ. ತಿಳಿಸಬಹುದಾಗಿರುವ ವಿವರಗಳು ನಮ್ಮ ಮಕ್ಕಳು, ಮೊಮ್ಮಕ್ಕಳಿಗೂ ತಿಳಿಯಲಿ, ಇಂತಹ ತಿಳಿಸುವ ಕಾರ್ಯವನ್ನು ಅವರೂ ಮುಂದೆ ಮಾಡಲಿ ಎಂಬ ಕಾರಣವೇ ಈ ಬರಹದ ಉದ್ದೇಶ. ನನ್ನ ತಮ್ಮ ಸುರೇಶ ಕೆಲವು ಅಮೂಲ್ಯ ದಾಖಲೆಗಳನ್ನು ನೀಡಿದ್ದು ಅವನ ಸಹಕಾರಕ್ಕಾಗಿ ಅಭಿನಂದಿಸುತ್ತೇನೆ. ಸುಬ್ರಹ್ಮಣ್ಯಯ್ಯನ ಮರಿಮಕ್ಕಳು ಬಿಂದು ಮತ್ತು ವಿನಯ ಈ ಪ್ರಕಟಣೆಯ ವೆಚ್ಚ ಭರಿಸಿದ್ದು ಅವರೂ ಅಭಿನಂದನಾರ್ಹರಾಗಿದ್ದಾರೆ.
     ತಾತನ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಾಗ, ಈ ಕಾರಣಕ್ಕಾಗಿ ಕೆಳದಿ, ಸಾಗರ, ಕೊಪ್ಪ, ಬೆಂಗಳೂರುಗಳಿಗೆ ಹೋಗಿ ವಿಚಾರಿಸಿದಾಗ ನನಗೆ ಆದ ಅನುಭವಗಳನ್ನು ವ್ಯಕ್ತ ಪಡಿಸುವುದು ಕಷ್ಟ. ವಸ್ತುಶಃ ಮಾನಸಿಕವಾಗಿ ನಾನು ಹಳೆಯ ಕಾಲಮಾನದೊಳಗೇ ಇದ್ದೆ ಎಂದು ಮಾತ್ರ ಹೇಳಬಹುದು.     ಇದು ಕವಿ ಸುಬ್ರಹ್ಮಣ್ಯಯ್ಯನ ಜೀವನ ಚರಿತ್ರೆ .  . . . . ಹೌದು ಎಂದರೆ ಹೌದು, ಅಲ್ಲ ಎಂದರೆ ಅಲ್ಲ. . . ಏಕೆಂದರೆ ಪೂರ್ಣ ವಿವರ ಇದರಲ್ಲಿಲ್ಲ. ತಾತನ ಮೊದಲ ಮೊಮ್ಮಗನಾಗಿ ತಾತನ ಪ್ರೀತಿ, ಆಶೀರ್ವಾದಗಳನ್ನು ಪಡೆದ, ಅನುಭವಿಸಿದ  ಭಾಗ್ಯ ನನ್ನದು. ತಿಳಿದ, ಕೇಳಿದ ಸಂಗತಿಗಳನ್ನು ಒಂದು ಅನುಕ್ರಮಣಿಕೆಯಲ್ಲಿ ಪೋಣಿಸಿ ನಿಮ್ಮ ಮುಂದಿಟ್ಟಿದ್ದೇನೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ. ಸುಬ್ಬೂತಾತನ ಜೀವನದ ಝಲಕ್ . . . ಇಗೋ, ನಿಮ್ಮ ಮುಂದೆ . . . 
                                            - ಕ.ವೆಂ. ನಾಗರಾಜ್.

*******************


***********************

೧. ಮಾಸದನೆನಪು

     ಸುಮಾರು ೫೦ ವರ್ಷಗಳ ಹಿಂದಿನ ಸಂಗತಿ. ಬೇಸಿಗೆಯ ರಜೆಯಲ್ಲಿ ಶಿವಮೊಗ್ಗದ ತಾತನ ಮನೆಯಲ್ಲಿ ಆಟವಾಡಿ ಕಾಲಕಳೆಯಲು ಬಂದಿದ್ದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕನನ್ನು ತಾತ ತಾನು ಕೆಲಸ ಮಾಡುತ್ತಿದ್ದ ಕಛೇರಿಗೂ ಕರೆದುಕೊಂಡು ಹೋಗುತ್ತಿದ್ದ. ಕಛೇರಿಯ ಆವರಣದಲ್ಲಿ ಆಟವಾಡಿಕೊಂಡು ತಾತನ ಪಕ್ಕದಲ್ಲಿದ್ದ ಮರದ ದೊಡ್ಡ ಪೆಟ್ಟಿಗೆಯ ಮೇಲೆ ಕುಳಿತುಕೊಂಡು ತಾತ ಕೊಟ್ಟ ಕಾಗದಗಳಿಂದ ರಾಕೆಟ್, ದೋಣಿ, ಮುಂತಾದುವನ್ನು ಮಾಡಿ ತಾತನಿಗೂ ತೋರಿಸಿ ಖುಷಿ ಪಡುತ್ತಿದ್ದ ಬಾಲಕನನ್ನು ಮಾತನಾಡಿಸುತ್ತಿದ್ದ ಸಹೋದ್ಯೋಗಿಗಳಿಗೆ, ಇತರರಿಗೆ ಇವನು ನನ್ನ ಮೊಮ್ಮಗ; ತುಂಬಾ ಬುದ್ಧಿವಂತ, ಜಾಣ ಎಂದು ತಾತ ಪರಿಚಯಿಸುತ್ತಿದ್ದ.  ತಾತನ ಹೊಗಳಿಕೆಯಿಂದ ಉಬ್ಬಿದ ಬಾಲಕ ಕಾಗದದಲ್ಲಿ ಹೊಸದಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಿದ್ದ.   ಸಂಜೆ ಮರಳಿ ಹೋಗುವಾಗ ಮೊಮ್ಮಗನನ್ನು ಗೋಪಿ ಹೋಟೆಲ್‌ಗೆ ಕರೆದುಕೊಂಡು ಹೋಗಿ


ನಿನಗೆ ಏನು ಬೇಕು ಎಂದು ಕೇಳಿ ಮೊಮ್ಮಗ ಬಯಸಿದ ಜಾಮೂನು, ಮೈಸೂರು ಪಾಕು, ಇತ್ಯಾದಿ ಕೊಡಿಸುತ್ತಿದ್ದ. ಮಗು ತಿನ್ನುತ್ತಿದ್ದಾಗ ಅವನನ್ನೇ ಹೃದಯ ತುಂಬಿಕೊಳ್ಳುವಂತೆ ನೋಡುತ್ತಿದ್ದ  ತಾತನ ಕಂಗಳ ಪ್ರೀತಿಯ ಆಳ ಬಾಲಕನಿಗೆ ಈಗ ಅರ್ಥವಾಗಿದೆ. ಏಕೆಂದರೆ ಆ ಬಾಲಕನೇ ಈಗ ತಾತನಾಗಿದ್ದಾನೆ. ಆತನ ಎರಡು ವರ್ಷದ ಮೊಮ್ಮಗಳು ಅಕ್ಷಯ ಮುದ್ದು ಮುದ್ದಾಗಿ ರಾಜೂ ತಾತಾ ಎಂದು ಕರೆದಾಗ ಕರಗಿ ಹೋಗಿಬಿಡುತ್ತಾನೆ. ನಿಮ್ಮ ಊಹೆ ಸರಿ. ಈ ಲೇಖಕನೇ ಆ ಬಾಲಕ. ಆ ತಾತನೇ ಕವಿ ಸುಬ್ರಹ್ಮಣ್ಯಯ್ಯ.

ತಾತನ ಮನೆ

     ಈಗ ಹೊಸಮನೆ ಬಡಾವಣೆ ಎಂದು ಕರೆಯಲಾಗುತ್ತಿರುವ ಪ್ರದೇಶದಲ್ಲಿ ಶಿವಶಂಕರ್ ಮೋಟಾರ್ ಗ್ಯಾರೇಜ್ ಎದುರಿಗೆ ರಸ್ತೆಗೆ ಹೊಂದಿಕೊಂಡಂತೆ ಸುಮಾರು ೧೫೦ x  ೧೫೦ ಅಡಿ ವಿಸ್ತೀರ್ಣದ ದೊಡ್ಡ ನಿವೇಶನದ ಒಂದು ಭಾಗದಲ್ಲಿ ತಾತನ ಮನೆಯಿತ್ತು. ನಾಡ ಹೆಂಚಿನ ಸಾಧಾರಣ ಮನೆ; ಬಿದಿರು ದಬ್ಬೆಗಳನ್ನು ಕಟ್ಟಿ ಮಣ್ಣಿನ ಸಾರಣೆ ಮಾಡಿ ಸುಣ್ಣ ಹಚ್ಚಿದ ಗೋಡೆಗಳು; ಸಗಣಿ ಸಾರಿಸಿದ ನೆಲ; ದೊಡ್ಡ ಅಂಗಳ; ಮನೆಯ ಪಕ್ಕದಲ್ಲಿ ಮನೆಗೆ ಹೊಂದಿಕೊಂಡಂತೆ ಸುಮಾರು  ೩ ಅಡಿ ಅಗಲ ೨೦ ಅಡಿ ಉದ್ದದ ಮಣ್ಣಿನ ಕಟ್ಟೆಯಿದ್ದು ಅದನ್ನೂ ಸಗಣಿ ಸಾರಣೆ ಮಾಡಲಾಗುತ್ತಿತ್ತು. ಮನೆಯ ಸುತ್ತಲೂ ಹೂವು, ಹಣ್ಣು, ತರಕಾರಿ ಬೆಳೆಯುತ್ತಿದ್ದ ಕೈತೋಟ; ಮನೆಯೊಳಗೆ ಕಬ್ಬಿಣದ ಸರಪಳಿಯಿಂದ ಕಟ್ಟಿದ್ದ ನಾಲ್ಕು ಮಕ್ಕಳು ಒಟ್ಟಿಗೆ ಕೂರಬಹುದಾಗಿದ್ದ ಒಂದು ದೊಡ್ಡ ಮರದ ತೊಟ್ಟಿಲು ಇದ್ದು ಅದನ್ನು ನಾವು ಉಯ್ಯಾಲೆಯಂತೆ ಬಳಸುತ್ತಿದ್ದುದು; ವಿದ್ಯುತ್ ಸಂಪರ್ಕವಿಲ್ಲದ ಮನೆ; ಸೂರ್ಯಾಸ್ತವಾಗುತ್ತಿದ್ದಂತೆ ಹಚ್ಚಲಾಗುತ್ತಿದ್ದ ಸೀಮೆಎಣ್ಣೆ ಲಾಟೀನುಗಳು, ಬುಡ್ಡಿಗಳು; ತಾತನೊಂದಿಗೆ ಮನೆಯಲ್ಲಿದ್ದ ಅತ್ತೆ ಸೀತಮ್ಮ, ನಶ್ಯ ಹಾಕುತ್ತಿದ್ದ ಮತ್ತು ಕೇರಂ ಚೆನ್ನಾಗಿ ಆಡುತ್ತಿದ್ದ ಮಾವ ಕೃಷ್ಣಮೂರ್ತಿ, ಅವರ ಮಕ್ಕಳು ಪದ್ಮ, ಸತ್ಯ, ಚಂದ್ರು, ಗೋಪಾಲ, ಪ್ರಭಾವತಿ, ಗಾಯತ್ರಿಯರು, ಜೊತೆಗೆ ನನ್ನ ತಂಗಿ ಲಲಿತಾ, ತಮ್ಮಂದಿರು ಸುರೇಶ, ಶ್ರೀಧರ, ಅನಂತ - ಎಲ್ಲರೂ ಸೇರಿದರೆ ಮಕ್ಕಳದೇ ರಾಜ್ಯ. ನಾನೇ ದೊಡ್ಡವನಾಗಿದ್ದರಿಂದ ಸಹಜವಾಗಿ ನಾನೇ ಲೀಡರ್. ಗಲಾಟೆ ಜಾಸ್ತಿಯಾದಾಗ, ಪರಸ್ಪರ ಜಗಳವಾಡಿದಾಗ ಹಿರಿಯರಿಂದ ಬೈಸಿಕೊಳ್ಳುತ್ತಿದ್ದುದು, ಪೆಟ್ಟು ಬೀಳುತ್ತಿದ್ದುದು ದೊಡ್ಡವನಾದ ನನಗೇ. ನನ್ನ ತಂದೆ ನನಗೆ ಬೈದರೆ, ಹೊಡೆದರೆ ನನ್ನ ತಾತ ಅವರನ್ನು ಗದರಿಸುತ್ತಿದ್ದುದು ನನಗೆ ಖುಷಿ ಕೊಡುತ್ತಿತ್ತು. ಚೌಕಾಭಾರ, ಪಗಡೆ, ಚನ್ನಾಮಣೆ, ಕೈಲಾಸ ಪರಮಪದಸೋಪಾನ(ಹಾವು ಏಣಿ ಆಟ), ಇತ್ಯಾದಿ ಆಟಗಳಲ್ಲದೆ ಮಕ್ಕಳು ಸಾಮಾನ್ಯವಾಗಿ ಆಡುವ ಎಲ್ಲಾ ಆಟಗಳು, ನಾನು ಹೆಚ್ಚು ಸಮಯ ಕಳೆಯುತ್ತಿದ್ದ ಮನೆಯ ಮುಂದಿನ ದೊಡ್ಡ ಸೀಬೆಮರ, ಮನೆಮಂದಿಯೆಲ್ಲಾ ಒಟ್ಟಿಗೆ ಹೋಗಿ ನೋಡುತ್ತಿದ್ದ ಚಲನಚಿತ್ರಗಳು, ರಜೆ ಮುಗಿಸಿ ನಾವು ಹೊರಡುವಾಗ ಅಳುತ್ತಾ ಬೀಳ್ಕೊಡುತ್ತಿದ್ದ ಮನೆಮಂದಿ, . . . . . . ಒಂದೇ . . ಎರಡೇ . . . ಇಂತಹ ಹಲವಾರು ಸಂಗತಿಗಳು ಈಗಲೂ ಮನದಾಳದಲ್ಲಿ ಅಚ್ಚಳಿಯದೆ ಉಳಿದಿದೆ.
      ತಾತ ಎಲ್ಲಾ ಮೊಮ್ಮಕ್ಕಳನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನನ್ನನ್ನು ಒಂದು ಕೈಯಲ್ಲಿ ಮತ್ತು ನನ್ನ ತಂಗಿ ಲಲಿತಳನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ಹೋಟೆಲ್‌ಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸುತ್ತಿದ್ದುದೂ ಉಂಟು. ಉಳಿದ ಮೊಮ್ಮಕ್ಕಳು ಚಿಕ್ಕವರಾದ್ದರಿಂದ ಅವರಿಗೆ ಬರುವಾಗ ಮಿಠಾಯಿ, ಮುಂತಾದುವನ್ನು ತಂದು ನಮ್ಮ ಕೈಯಲ್ಲೇ ಕೊಡಿಸುತ್ತಿದ್ದರು. ತಾತನ ಮನೆ ಮೊದಲಿದ್ದಂತೆ ಈಗ ಇಲ್ಲ. ಬಹಳ ಬದಲಾಗಿದೆ. ಗೋಪಿ ಹೋಟೆಲ್ ಸಹ ಈಗಿಲ್ಲ. ಆದರೆ ಆ ಹೋಟೆಲ್ ಕಾರಣದಿಂದ ಬಂದ ಗೋಪಿ ಸರ್ಕಲ್ ಎಂಬ ಹೆಸರು ಈಗಲೂ ಉಳಿದಿದೆ.   ಆ ಬಾಲ್ಯದ ದಿನಗಳನ್ನು ನೆನೆಸಿಕೊಳ್ಳುತ್ತಿದ್ದರೆ ಅಂದಿನ ಆಟ-ಪಾಠ, ಗೆಳೆಯರು, ಬಂಧುಗಳು, ಅಕ್ಕರೆ ತೋರಿದ ಹಿರಿಯರು ಎಲ್ಲವೂ ನೆನಪಾಗಿ ಗತಕಾಲದಲ್ಲಿ ಮುಳುಗಿ ಹೋಗಿ ಒಂದು ಅನಿರ್ವಚನೀಯ ಆನಂದದ ಅನುಭೂತಿಯುಂಟಾಗುತ್ತದೆ.  


         ಸುಬ್ರಹ್ಮಣ್ಯಯ್ಯನವರ ಕಾಲಾನಂತರದಲ್ಲಿ ನಾಡಹೆಂಚು ತೆಗೆಸಿ ಮಂಗಳೂರು ಹೆಂಚು ಹಾಕಿಸಿ ಸಣ್ಣಪುಟ್ಟ ರಿಪೇರಿ
                                            ಮಾಡಿದ ನಂತರದಲ್ಲಿನ ಮನೆಯ ದೃಶ್ಯಗಳು.


                      ಅಜ್ಜಿಯ ಒತ್ತಾಸೆಯಿಂದ ಕಟ್ಟಿದ ಮನೆ ಈಗ ಹೀಗಿದೆ. ಮುಂಭಾಗದಿಂದ ಚಿತ್ರ ತೆಗೆಯಲು ಸ್ಥಳವಿರದ ಕಾರಣ ಪಕ್ಕದ ಕಟ್ಟಡದ ಮೇಲಿನಿಂದ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಈ ಮನೆಯಲ್ಲಿ ಮಗಳು ಸೀತಾಲಕ್ಷ್ಮಮ್ಮ ವಾಸವಿದ್ದು, ಮುಂಭಾಗದಲ್ಲಿ ಇವರ ಮಕ್ಕಳು ಸತ್ಯನಾರಾಯಣ ಮತ್ತು ಚಂದ್ರಶೇಖರ ಮನೆಗಳನ್ನು ಕಟ್ಟಿಕೊಂಡಿದ್ದಾರೆ.
**********************************

 ೨. ಸಾಗರದ ಚಿಗುರು
     ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿನ ಒಂದು ದೊಡ್ಡ ಮನೆ; ೧೮ನೆಯ ಶತಮಾನದ ಆರಂಭದಲ್ಲಿ ಆ ಮನೆಯಲ್ಲಿ ವಾಸವಿದ್ದವರು ಕವಿ ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳು. ಕನ್ನಡನಾಡಿನ ಹೆಮ್ಮೆಯ ಕೆಳದಿ ಸಾಮ್ರಾಜ್ಯದ ಅರಸರುಗಳ ವಂಶ ಪರಂಪರೆಯನ್ನು ಕುರಿತು ರಚಿಸಲಾಗಿರುವ ಶ್ರೇಷ್ಠ ಐತಿಹಾಸಿಕ ಕಾವ್ಯ ಗ್ರಂಥ ಕೆಳದಿ ನೃಪವಿಜಯ ರಚಿಸಿದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕೆಳದಿ ಕವಿ ಮನೆತನದ ಮೊದಲನೆಯ ಪೀಳಿಗೆ ಎಂದು ಲೆಕ್ಕಕ್ಕೆ ತೆಗೆದುಕೊಂಡರೆ ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳು ಕವಿ ಮನೆತನದ ಐದನೆಯ ಪೀಳಿಗೆಗೆ ಸೇರುತ್ತಾರೆ.
     ಕೃಷ್ಣಪ್ಪನ ತಂದೆ ವೆಂಕಣ್ಣ (ವೆಂಕಕವಿ/ವೆಂಕಭಟ್ಟ) ಪ್ರತಿಭಾಸಂಪನ್ನನಾಗಿದ್ದು ನೃಸಿಂಹಾವತಾರಕ್ಕೆ ಸಂಬಂಧಿಸಿದ ನರಹರಿ ವಿಜಯ ಎಂಬ ಕಾವ್ಯ ರಚಿಸಿದ್ದು, ಇದರಲ್ಲಿ ಭಾಮಿನೀ ಷಟ್ಪದಿಯಲ್ಲಿರುವ ೮೫ ಪದ್ಯಗಳಿವೆ. ಗಣ ಸಹಸ್ರನಾಮ ಮತ್ತು ಪಾರ್ವತೀ ವಲ್ಲಭ ಶತಕ ಎಂಬ ಕೃತಿಗಳನ್ನೂ ರಚಿಸಿರುವ ವೆಂಕಣ್ಣ ಸಂಗೀತ ಶಾಸ್ತ್ರದಲ್ಲೂ ಸಹ ಹೆಸರು ಮಾಡಿದ್ದು, ಈತ ರಚಿಸಿದ ಹಲವಾರು ಕೀರ್ತನೆಗಳು ಇರುವ ತಾಡವೋಲೆಗಳು ದೊರೆತಿದ್ದು ಕೆಳದಿ ಗುಂಡಾ ಜೋಯಿಸರು ಇದನ್ನು ಆಧರಿಸಿ ಕೆಳದಿ ವೆಂಕಣ್ಣಕವಿಯ ಕೀರ್ತನೆಗಳು ಎಂಬ ಪುಸ್ತಕವನ್ನು ಸಂಪಾದಿಸಿ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ೧೯೭೭ರಲ್ಲಿ ಪ್ರಕಟಿಸಿದ್ದಾರೆ.
     ನೂಲಿನಂತೆ ಸೀರೆ ಎಂಬಂತೆ ತಂದೆಗೆ ತಕ್ಕ ಮಗನಾಗಿದ್ದ ಕೃಷ್ಣಪ್ಪ ಕೆಳದಿ ಸಂಸ್ಥಾನದ ಚರಿತ್ರೆ ಎಂಬ ಹೆಸರಿನಲ್ಲಿ ಲಿಂಗಣ್ಣ ಕವಿಯ ಕೆಳದಿ ನೃಪವಿಜಯ ಕೃತಿಯ ಗದ್ಯಾನುವಾದ ಮಾಡಿದ್ದು ೧೯೧೮-೧೯ನೆಯ ವರ್ಷಗಳ ಮಲೆನಾಡು ಸಮಾಚಾರ ಪತ್ರಿಕೆಯಲ್ಲಿ ಪ್ರಕಟವಾಗಿದೆಯೆಂದು ದಿ. ಎ. ಆರ್. ಕೃಷ್ಣಶಾಸ್ತ್ರಿ ಗಳೇ ತಿಳಿಸಿದ್ದು, ಕೆಳದಿ ರಾಯ ಪದ್ಧತಿ ಎಂಬ ಒಂದು ಪದ್ಯ ಗ್ರಂಥವೂ ಇದ್ದು ಈ ಕೃತಿಯು ಬಂಗಾಳದ ಏಷ್ಯಾಟಿಕ್ ಲೈಬ್ರರಿಗೆ ದಿವಾನ್ ಪೂರ್ಣಯ್ಯನವರು ಕಳಿಸಿದ್ದಾಗಿ ಕೆಳದಿ ಗುಂಡಾ ಜೋಯಿಸರ ಸಂಶೋಧನೆಯಿಂದ ತಿಳಿದು ಬರುತ್ತದೆ.   
     ಕೃಷ್ಣಪ್ಪ - ಸುಬ್ಬಮ್ಮ ದಂಪತಿಗಳಿಗೆ ರಾಮಣ್ಣ, ವೆಂಕಣ್ಣ, ಲಿಂಗಣ್ಣ ಎಂಬ ಮೂವರು ಗಂಡು ಮಕ್ಕಳು, ಗಂಗೆ, ತುಂಗೆಯರೆಂಬ ಇಬ್ಬರು ಹೆಣ್ಣು ಮಕ್ಕಳು. ಸಾತ್ವಿಕ ಸ್ವಭಾವದ, ಧರ್ಮಭೀರುಗಳಾಗಿದ್ದ ಈ ದಂಪತಿಗಳು ಶಿಸ್ತುಬದ್ಧ ಜೀವನದಿಂದ ಮಕ್ಕಳಿಗೆ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಹಿರಿಯ ಮಗ ರಾಮಣ್ಣ ತನ್ನ ಪತ್ನಿ ನರಸಮ್ಮನೊಂದಿಗೆ ಕೆಳದಿಯಲ್ಲಿ ವಾಸವಿದ್ದರೆಂದು ಹೇಳಲಾಗಿದೆ. ಕೆಳದಿಯಲ್ಲಿದ್ದ ಜಮೀನುಗಳ ಉಸ್ತುವಾರಿಯನ್ನು ಇವರೇ ನೋಡಿಕೊಳ್ಳುತ್ತಿದ್ದರೆಂದೂ ಹೇಳಲಾಗಿದೆ. ಇವರಿಗೆ ನಾರಾಯಣ ಮತ್ತು ಶ್ರೀಕಂಠಯ್ಯ ಎಂಬ ಇಬ್ಬರು ಮಕ್ಕಳು. ನರಸಮ್ಮನ ಕಾಲಾನಂತರ ಸುಭದ್ರಮ್ಮನನ್ನು ಮದುವೆಯಾದ ಇವರಿಗೆ ಹುಚ್ಚೂರಾಯ ಎಂಬ ಮಗನಿದ್ದುದೂ ತಿಳಿದುಬರುತ್ತದೆ. ನಾರಾಯಣ - ಅನ್ನಪೂರ್ಣಮ್ಮ ದಂಪತಿಗಳಿಗೆ ಮಕ್ಕಳಿರಲಿಲ್ಲವೆಂದು ಹೇಳುತ್ತಾರೆ. ಶ್ರೀಕಂಠಯ್ಯ - ಭಾಗೀರತಮ್ಮ ದಂಪತಿಗಳಿಗೆ ಪದ್ಮಾವತಿ, ಜಯಮ್ಮ, ಶಾರದಾ, ಸರೋಜಾ ಮತ್ತು ವಿನೋದಾಬಾಯಿ ಎಂಬ ಐವರು ಹೆಣ್ಣು ಮಕ್ಕಳು ಮತ್ತು ರಂಗಸ್ವಾಮಿ, ರಂಗರಾವ್ ಎಂಬ ಇಬ್ಬರು  ಗಂಡು ಮಕ್ಕಳು. ಹುಚ್ಚೂರಾಯರಿಗೆ ಸಂಬಂಧಿಸಿದಂತೆ ಯಾವುದೇ ವಿವರ  ತಿಳಿಯಲಿಲ್ಲ.

     ಎರಡನೆಯ ಮಗ ವೆಂಕಣ್ಣನೇ ಕವಿ ಸುಬ್ರಹ್ಮಣ್ಯಯ್ಯನ ತಂದೆಯಾಗಿದ್ದು ಇವರ ಬಗ್ಗೆ ನಂತರ ಗಮನಿಸೋಣ. ಮಗಳು ಗಂಗಮ್ಮನನ್ನು ಕೆಳದಿ ಜೋಯಿಸ ಮನೆತನದ ಕೃಷ್ಣ ಜೋಯಿಸರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಇವರ ಮೊಮ್ಮಗನೇ ಕೆಳದಿಯ ಸುಪ್ರಸಿದ್ಧ ಸಂಶೋಧಕರಾಗಿರುವ ಚಿರಪರಿಚಿತ ಗುಂಡಾಜೋಯಿಸರು. ಇನ್ನೊಬ್ಬ ಮಗಳು ತುಂಗಮ್ಮನನ್ನು ಹೆಬೈಲಿನ ದೇವಪ್ಪನವರಿಗೆ ಕೊಟ್ಟು ವಿವಾಹವಾಗಿತ್ತು.
     ಕಿರಿಯ ಮಗ ಲಿಂಗಣ್ಣಯ್ಯ ಒಬ್ಬ ಮಹಾನ್ ಸಾಧಕ. ಬಹುಮುಖ ಸಾಧನೆಗಳನ್ನು ಮಾಡಿದ ಇವರು ಕವಿಮನೆತನದ ಹೆಗ್ಗಳಿಕೆ ಮುಂದು ವರೆಸಿದವರು. ಮಹಾನ್ ಚಿತ್ರಕಾರರಾಗಿದ್ದ ಇವರು ರಚಿಸಿರುವ ಹಲವಾರು ಶ್ರೇಷ್ಠ ಕೃತಿಗಳಲ್ಲಿ ಕೆಲವನ್ನು ಕೆಳದಿಯ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿಯೂ ನೋಡಬಹುದು. ಸಬ್ ರಿಜಿಸ್ಟ್ರಾರರಾಗಿ, ಸಾಹಿತಿಯಾಗಿ, ಕಲಾವಿದರಾಗಿ, ಮುದ್ರಣಾಲಯ ಸ್ಥಾಪಿಸಿ ಕೈಗಾರಿಕೋದ್ಯಮಿಯಾಗಿ, ದಕ್ಷ ಆಡಳಿತಗಾರರಾಗಿ ಹಲವು ರಂಗಗಳಲ್ಲಿ ಹೆಸರು ಮಾಡಿದ ಇವರ ಜೀವನ ಚರಿತ್ರೆಯನ್ನು ಕವಿ ಸುರೇಶ ತಮ್ಮ ಕರ್ಮಯೋಗಿ ಕಲಾವಲ್ಲಭ ಎಸ್. ಕೆ. ಲಿಂಗಣ್ಣಯ್ಯ ಎಂಬ    ಪುಸ್ತಕದಲ್ಲಿ ಸುಂದರವಾಗಿ ದಾಖಲಿಸಿದ್ದಾರೆ.   ಲಿಂಗಣ್ಣಯ್ಯನವರಿಗೆ   ಜಾನಕಮ್ಮ ಮತ್ತು ಅವರ ನಂತರ ಲಕ್ಷ್ಮಮ್ಮ ಎಂಬ ಪತ್ನಿಯಿದ್ದು, ಇವರಿಗೆ ಮೂವರು ಗಂಡು ಮಕ್ಕಳು ಮತ್ತು ಎಂಟು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ದಿ.ಸಾ.ಕ. ನಾರಾಯಣರಾವ್, ಸಾ.ಕ. ಕೃಷ್ಣಮೂರ್ತಿ, ಸಾ.ಕ. ರಾಮರಾವ್, ಹೆಣ್ಣು ಮಕ್ಕಳಾದ ದಿ.ಮುತ್ತಮ್ಮ, ದಿ.ಮೂಕಮ್ಮ, ದಿ.ಜಾನಕಮ್ಮ, ದಿ.ಸರಸ್ವತಮ್ಮ, ಸುಬ್ಬಲಕ್ಷ್ಮಮ್ಮ, ದಿ.ರತ್ನಮ್ಮ, ಪದ್ಮಾವತಮ್ಮ, ಗಿರಿಜಮ್ಮ ಎಲ್ಲರೂ ಪ್ರತಿಭಾಸಂಪನ್ನರೇ. (ಇವರುಗಳ ಕುಟುಂಬಗಳ ಸದಸ್ಯರುಗಳು ಹೆಚ್ಚಿನವರು ಬೆಂಗಳೂರಿನಲ್ಲಿ ಪ್ರಸ್ತುತ ವಾಸವಿದ್ದಾರೆ.) ಲಿಂಗಣ್ಣಯ್ಯ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಹೋದವರು ನಂತರದಲ್ಲಿ ನೌಕರಿ, ಇತ್ಯಾದಿ ಕಾರಣಗಳಿಂದಾಗಿ ಸಾಗರದ ಹೊರಗೆ ಇರುತ್ತಿದ್ದುದೇ ಹೆಚ್ಚು.
     ಎರಡನೆಯ ಮಗ ವೆಂಕಣ್ಣನಿಗೆ ಈಗಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ವಾಸವಾಗಿದ್ದ ಹಾಲುಗಾರು* ವಂಶಸ್ಥ ವೆಂಕಟಸುಬ್ಬಯ್ಯ - ಶೇಷಮ್ಮ ದಂಪತಿಗಳ ಮಗಳು ಲಕ್ಷ್ಮಮ್ಮನನ್ನು ತಂದುಕೊಂಡು ಜರುಗಿದ ವಿವಾಹದ ತರುವಾಯ ಸಾಗರದ ಮನೆಯಲ್ಲಿ ಸುರಳೀತ ಜೀವನ ನಡೆಯುತ್ತಿತ್ತು. (*ಹಾಲುಗಾರು - ಕೊಪ್ಪ ತಾಲ್ಲೂಕಿನ ಒಂದು ಗ್ರಾಮ).  ಮದುವೆಯಾದ ವರ್ಷ ಒಂದೆರಡರಲ್ಲಿ ೧೯೦೪ರಲ್ಲಿ ಜನಿಸಿದ ಮಗುವಿಗೆ  ಅಕ್ಕರೆಯಿಂದ ಇಟ್ಟ ಹೆಸರು ಸುಬ್ರಹ್ಮಣ್ಯ. ಈ ಮಗುವೇ ಮುಂದೆ ಕವಿ ಸುಬ್ರಹ್ಮಣ್ಯಯ್ಯನಾಗಿ ಬೆಳೆದದ್ದು. ಮುದ್ದಿನಿಂದ ಕರೆಯುತ್ತಿದ್ದ ಹೆಸರು ಸುಬ್ಬಣ್ಣ. ನಂತರದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಸುಂದರಿ ಎಂದು ನಾಮಕರಣ ಮಾಡಿ ಮಕ್ಕಳ ಬಾಲಲೀಲೆಗಳನ್ನು ಕಂಡು ಹಿರಿಯರು ಸಂತಸ ಪಡುತ್ತಿದ್ದರು.


       ಕವಿ ಸುಬ್ರಹ್ಮಣ್ಯಯ್ಯ ಜನಿಸಿದ ಸಾಗರದ ಗಣಪತಿ ದೇವಸ್ಥಾನದ ಬೀದಿಯಲ್ಲಿರುವ ಮನೆ.
{ಈ ಮನೆಯಲ್ಲಿ ಈಗ ಶ್ರೀ ಕೇಶವರಾವ್ ಬಾಪಟ್ (ಚಿತ್ರದಲ್ಲಿರುವವರು)ಎನ್ನುವವರು ವಾಸವಾಗಿದ್ದು, ಇವರ ತಂದೆ ಶ್ರೀ ವೆಂಕೋಬರಾವ್    ಬಾಪಟ್ ರವರು ಮನೆಯನ್ನು ಕವಿಕುಟುಂಬದವರಿಂದ ಖರೀದಿಸಿದ್ದರೆಂದು ತಿಳಿದುಬರುತ್ತದೆ.}

********************************************

೩. ಅಪ್ಪಳಿಸಿದ ಆಘಾತ

     ಜೀವನದಲ್ಲಿ ಎಲ್ಲವೂ ಸರಿಯಿದೆ, ಸುಖಮಯವಾಗಿ ಬದುಕು ಸಾಗುತ್ತಿದೆ ಎನ್ನುವ ಸಂದರ್ಭದಲ್ಲಿ ಹೊಂಚು ಹಾಕಿ ಕಾಯುತ್ತಿದ್ದನೇನೋ ಎಂಬಂತೆ ಜವರಾಯನ ಕಾಲಛಾಯೆ ಕುಟುಂಬದ ಮೇಲೆರಗಿದುದು ವಿಧಿಯ ಅಣಕವೇ ಸರಿ. ಸುಬ್ಬಣ್ಣ ಆಗಿನ್ನೂ ಶಾಲೆಗೆ ಹೋಗಲು ಪ್ರಾರಂಭಿಸಿದ್ದನಷ್ಟೆ. ಇನ್ನೂ ಹುಡುಗಾಟದ ದಿನಗಳು. ಆಗ ಸಾಂಕ್ರಾಮಿಕ ಪ್ಲೇಗು ಮಾರಿಗೆ ಸಾಗರದ ಮೇಲೆ ಕಣ್ಣು ಬಿದ್ದು ಮನೆ ಮನೆಗಳಲ್ಲಿ ಸಾವಿನ ಆಕ್ರಂದನ ಕೇಳಿ ಬಂದಿತು. ಸುಬ್ಬಣ್ಣನ ಅಜ್ಜ ಕೃಷ್ಣಪ್ಪ, ಅಜ್ಜಿ ಸುಬ್ಬಮ್ಮ, ತಂದೆ ವೆಂಕಣ್ಣ, ತಾಯಿ ಲಕ್ಷ್ಮಮ್ಮ ಸೇರಿದಂತೆ ಕುಟುಂಬದ ಹಲವು ಸದಸ್ಯರು ಸ್ವಲ್ಪ ಕಾಲದ ಅಂತರದಲ್ಲಿ ಒಬ್ಬೊಬ್ಬರಾಗಿ ಬಾಳಿನ ಯಾತ್ರೆ ಮುಗಿಸಿದ್ದು, ಉಳಿದ ಇತರ ಸದಸ್ಯರುಗಳು ಅತೀವ ದುಃಖ ಹಾಗೂ ಕಷ್ಟಗಳನ್ನು ಎದುರಿಸಬೇಕಾಯಿತು. ಸುಬ್ಬಣ್ಣನ ತಂದೆ ಮೊದಲು ತೀರಿಹೋಗಿದ್ದು, ಕೆಲವು ತಿಂಗಳುಗಳ ನಂತರದಲ್ಲಿ ತಾಯಿ ಮೃತರಾದರೆಂದು ಹೇಳುತ್ತಾರೆ. ಪ್ರೀತಿ, ಅಕ್ಕರೆ, ರಕ್ಷಣೆಯ ಅಗತ್ಯದ ದಿನಗಳಲ್ಲೇ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹಾಗೂ ಪ್ರೀತಿಸುವ ಇತರ ಬಂಧುಗಳನ್ನು ಕಳೆದುಕೊಂಡ ಮಕ್ಕಳು ಅಕ್ಷರಶಃ ಅನಾಥರಾದರು. ದುಃಖವನ್ನು ತೋಡಿಕೊಳ್ಳಲೂ ಗೊತ್ತಾಗದ, ತೋಡಿಕೊಳ್ಳಲೂ ಯಾರೂ ಇರದೆ ಗರ ಬಡಿದಂತಾದ ಮಕ್ಕಳ ಸ್ಥಿತಿ ಊಹಾತೀತ, ಕಲ್ಪನಾತೀತ ಎಂದು ಮಾತ್ರ ಹೇಳಲು ಸಾಧ್ಯ.
     ವೆಂಕಣ್ಣನ ತಮ್ಮ ಎಸ್. ಕೆ. ಲಿಂಗಣ್ಣಯ್ಯನವರು ೧೯೨೦-೨೫ರಲ್ಲಿ ಬರೆದ ಪುಸ್ತಕವೊಂದರ  (ಚಿತ್ರಪಟ ಬರೆಯುವ ಕೈಪಿಡಿ)* ಮುನ್ನುಡಿಯಲ್ಲಿ ಈ ರೀತಿ ಬರೆದಿದ್ದಾರೆ:
". . . . ಈಗ ಒಂಬತ್ತು ವರ್ಷಗಳ ಮುಂಚೆ ಪ್ರಾರಬ್ಧವಶಾತ್ ನನ್ನ ಮಾತಾಪಿತೃಗಳು, ಭ್ರಾತೃ, ಪತ್ನಿ, ಪುತ್ರ ಮೊದಲಾದವರು ಕೊಂಚಕಾಲದಲ್ಲಿಯೇ ಗತಿಸಿಹೋಗಿ ಇದರಿಂದ ಮಹತ್ತರವಾದ ಕಷ್ಟವೂ, ದುಃಖವೂ ಪ್ರಾಪ್ತವಾದವು. ಸದಾ ವಿಷ್ಣುನಾಮಸ್ಮರಣೆಯೇ ದೊಡ್ಡದೆಂದು ನಂಬಿಕೊಂಡಿದ್ದರಿಂದ ಆ ಕಾಲದಲ್ಲಿ ಗುರೂಪದೇಶವಾಗಿದ್ದ ಜಲೇರಕ್ಷತು ವಾರಾಹಃ ಸ್ಥಲೇರಕ್ಷತು ವಾಮನಃ|| ಅಟವ್ಯಾಂ ನಾರಸಿಂಹಶ್ಚ ಸರ್ವತಃ ಪಾತು ಕೇಶವಃ|| ಎಂಬುದರಿಂದ ಅಪಾರವಾದ ಕಷ್ಟದಲ್ಲಿ ಶ್ರೀ ನರಸಿಂಹ ಸ್ಮರಣೆಯಾಗಬೇಕೆಂದು ಭಾವಿಸಿ ಪ್ರಹ್ಲಾದ ರಕ್ಷಕನಾದ ಶ್ರೀ ಲಕ್ಷ್ಮೀನರಸಿಂಹನ ಆಕಾರವನ್ನು ಧ್ಯಾನ ಮಾಡಿ ತತ್ಕಾಲದಲ್ಲಿ ನನಗೆ ತೋರಿದಂತೆ ಆ ಸ್ವಾಮಿಯ ಚಿತ್ರವನ್ನು ಬರೆಯಲಾರಂಭಿಸಿದೆನು. ಆ ಕೂಡಲೇ ನನ್ನ ಎಲ್ಲಾ ದುಃಖಗಳೂ ಮಾಯವಾದವು. ನರಸಿಂಹಸ್ವಾಮಿಯ ಆಕಾರವೇ ಆ ಪಟವು ಮುಗಿಯುವವರೆಗೂ ನನ್ನ ಮನಸ್ಸಿನಲ್ಲಿ ನೆಲೆಗೊಂಡು ನನ್ನನ್ನು ಪಾರು ಮಾಡಿತು. . ".
    ಇದರಿಂದಾಗಿ ೧೯೧೦ - ೧೫ರ ಸುಮಾರಿನಲ್ಲಿ ಬರಸಿಡಿಲಿನಂತೆ  ಕುಟುಂಬದ ಮೇಲೆ ಸಾವಿನ ಸರಮಾಲೆ ಎರಗಿರಬಹುದು ಎಂದು ಕಂಡು ಬರುತ್ತದೆ.

     ಜೀವನದಲ್ಲಿ ಏನನ್ನಾದರೂ ಸಾಧಿಸುವುದಿದ್ದಲ್ಲಿ ಸಾಮಾನ್ಯವಾಗಿ ಮಧ್ಯವಯಸ್ಸಿನಲ್ಲಿ ಆಗಬೇಕು. ಏನಾದರೂ ಸಾಧನೆ ಮಾಡಬಹುದಿದ್ದ ವಯಸ್ಸಿನಲ್ಲೇ ವೆಂಕಣ್ಣ ಗತಿಸಿದ್ದು, ಆತನನ್ನು ಗುರುತಿಸಲು ಸಾಧ್ಯವಾಗುವ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗದಿದ್ದುದು ಕಾಲಕ್ರಮೇಣ ಆತನ ನೆನಪು ಮಾಸಿಹೋಗಲು ಹಾಗೂ ಆತನ ಕುರಿತು ಹೆಚ್ಚು ತಿಳಿಯದಿರಲು ಕಾರಣವಾಗಿದೆ. ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬಂತೆ ಮಿಂಚಿ ಮರೆಯಾದ ಮುತ್ತಾತ ಮತ್ತು ಮುತ್ತಜ್ಜಿಯ ಆತ್ಮಗಳಿಗೆ ಶಾಂತಿ ಇರಲಿ.
--------------------------------------


*(ಕವಿ ಸುರೇಶರ Karmayogi kalavallabha S.K. Lingannaiya  ಪುಸ್ತಕದಿಂದ)
--------------------------------



**************************************
೪. ಕೊಪ್ಪಕ್ಕೆ ಸಾಗಿದ ಬಾಳಿನ ತೆಪ್ಪ

     ಇತ್ತ  ಕೊಪ್ಪದಲ್ಲಿ ಸುಬ್ಬಣ್ಣನ ಅಜ್ಜ (ತಾಯಿಯ ತಂದೆ) ವೆಂಕಟ ಸುಬ್ಬಯ್ಯ, ಅಜ್ಜಿ ಶೇಷಮ್ಮ ತಮಗಿದ್ದ ಒಬ್ಬಳೇ ಮಗಳು ಲಕ್ಷ್ಮಿಯನ್ನು ಕಳೆದುಕೊಂಡು ಮಮ್ಮಲ ಮರುಗಿದರು. ಅನಾಥರಾದ ಮೊಮ್ಮಕ್ಕಳ ಸ್ಥಿತಿ ಕಂಡು ಬಹಳಷ್ಟು ಚಿಂತಿಸಿ, ಮಗಳ ನೆನಪಿನಲ್ಲಿ ಮೊಮ್ಮಕ್ಕಳನ್ನು ಸಲಹಲು ನಿರ್ಧರಿಸಿದರು. ಸಾಗರಕ್ಕೆ ಬಂದು ಸಾವಿನ ಮನೆಯಲ್ಲಿ ಮಡುಗಟ್ಟಿದ್ದ ಶೋಕಕ್ಕೆ ಸಾಕ್ಷಿಯಾಗಿ, ಶೋಕದಲ್ಲಿ ಭಾಗಿಯಾಗಿ ತಾವೇ ನೊಂದಿದ್ದರೂ ಉಳಿದವರನ್ನು ಸಂತೈಸಿ ಮಕ್ಕಳನ್ನು ಕೊಪ್ಪಕ್ಕೆ ಕರೆದುಕೊಂಡು ಹೊರಟರು. ಅಜ್ಜ ಅಜ್ಜಿಯ ಕೈ ಹಿಡಿದುಕೊಂಡು ಬಂಧುಗಳನ್ನು ತಿರುತಿರುಗಿ ನೋಡುತ್ತಾ ಸಾಗರಕ್ಕೆ ವಿದಾಯ ಹೇಳಿದ ಮಕ್ಕಳನ್ನು ಆಗ ನೋಡಿದವರೆಲ್ಲರಿಗೂ ಕರುಳು ಕಿವುಚಿ ಬಂದಿತ್ತು. ಮನದಲ್ಲೇ ಶುಭ ಹಾರೈಸಿ ಬೀಳ್ಕೊಟ್ಟರು. ಪ್ರಕ್ಷುಬ್ಧ ಸಮುದ್ರದಲ್ಲಿ ಗಾಳಿಯ ಹೊಡೆತಕ್ಕೆ ಸಿಕ್ಕಿದ ದೋಣಿ ಗಾಳಿ ದೂಡಿದ ಕಡೆಗೆ ದಿಕ್ಕೆಟ್ಟು ಚಲಿಸಿದಂತೆ ಮಕ್ಕಳು -ಸುಬ್ಬಣ್ಣ ಮತ್ತು ಸುಂದರಿ- ಅಯೋಮಯ ಸ್ಥಿತಿಯಲ್ಲಿ ಸಾಗರ ಬಿಟ್ಟು  ಕೊಪ್ಪ ತಲುಪಿದರು. ಇಳಿ ವಯಸ್ಸಿನಲ್ಲಿ ಕಣ್ಣ ಮುಂದೆಯೇ ಬಾಳಿ ಬದುಕಬೇಕಾಗಿದ್ದ ಮಗಳು ದೇವರ ಪಾದ ಸೇರಿದ್ದು, ತಮಗೇ ಇನ್ನೊಬ್ಬರ ಆಶ್ರಯ ಅಗತ್ಯವಿರುವ ಸಮಯದಲ್ಲಿ ಮೊಮ್ಮಕ್ಕಳಿಗೆ ತಾವೇ ಆಶ್ರಯ ನೀಡಬೇಕಾಗಿ ಬಂದದ್ದು ವಿಧಿಯ ವಿಪರೀತಕ್ಕೆ ಸಾಕ್ಷಿ.
     ಕೊಪ್ಪ ಈಗ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದರೂ ಹಿಂದೆ ಕಡೂರು ಜಿಲ್ಲೆಗೆ ಸೇರಿ ಕೊಪ್ಪ-ಕಡೂರು ಎಂದು ಕರೆಯಲ್ಪಡುತ್ತಿತ್ತು. ಈಗ ಕಡೂರು ಸಹ ಒಂದು ತಾಲ್ಲೂಕು ಕೇಂದ್ರ. ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ಈ ಮೂರು ತಾಲ್ಲೂಕುಗಳೂ ಸಹ ದಟ್ಟ ಮಲೆನಾಡು ಪ್ರದೇಶಗಳಾಗಿದ್ದು, ಭೌಗೋಳಿಕವಾಗಿ ಹಾಗೂ ಜನರ ಸ್ವಭಾವಗಳ ದೃಷ್ಟಿಯಿಂದ ಹೇಳುವುದಾದರೆ ಒಂದಕ್ಕೊಂದು ಹೊಂದಾಣಿಕೆಯಾಗುವ ಸೋದರ ತಾಲ್ಲೂಕುಗಳೆಂದು ಧಾರಾಳವಾಗಿ ಹೇಳಬಹುದು. ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬುದು ಇತ್ತೀಚಿನವರೆಗೂ ಚಾಲ್ತಿಯಲ್ಲಿದ್ದ ಮಾತು.
     ಕೊಪ್ಪದ ಗಣಪರಸಯ್ಯನವರ ಮಗ ವೆಂಕಟಸುಬ್ಬಯ್ಯ ದೊಡ್ಡ ಜಮೀನುದಾರರು ಹಾಗೂ ಸ್ಥಿತಿವಂತರಾಗಿ ಬಾಳಿದವರು. ಪಿತ್ರಾರ್ಜಿತವಾಗಿ ಬಂದಿದ್ದ ಜಮೀನುಗಳ ಪೈಕಿ ಬಹಳಷ್ಟು ವಿಲೇವಾರಿಯಾದ ನಂತರ ವೆಂಕಟಸುಬ್ಬಯ್ಯನವರ ಹೆಸರಿನಲ್ಲಿ ಕೊಪ್ಪದಲ್ಲಿ ಸುಮಾರು ಎಂಟು ಎಕರೆ ತರಿ ಜಮೀನು, ಐದು ಎಕರೆ ಬಾಗಾಯಿತು, ಒಂದು ಎಕರೆ ಹೊಲ ಹಾಗೂ ಒಂದು ದೊಡ್ಡ ಅಂಕಣದ ಮನೆ ಉಳಿದಿತ್ತು. ಜಮೀನುಗಳನ್ನು ವಯಸ್ಸಿನ ಕಾರಣದಿಂದ ಸ್ವತಃ ನೋಡಿಕೊಳ್ಳುವುದು ಕಷ್ಟವಾಗಿದ್ದರಿಂದ ಗುತ್ತಿಗೆಗೆ ನೀಡಿದ್ದು, ಗುತ್ತಿಗೆ ಅವರು ಕೊಟ್ಟಷ್ಟು, ಇವರು ಪಡೆದಷ್ಟು ಎಂಬಂತೆ ಆಗಿದ್ದರೂ ಬರುತ್ತಿದ್ದ ಆದಾಯ ಕಡಿಮೆಯೇನೂ ಇರದೆ ಸಂಸಾರಕ್ಕೆ ತೊಂದರೆಯೇನೂ ಇರಲಿಲ್ಲ. ವಾಸದ ಮನೆ ದೊಡ್ಡದಾಗಿದ್ದು, ಒಳಭಾಗದಲ್ಲಿ ಅಡಿಕೆ ಸುಲಿಯಲು, ಕಾಯಿ ಸುಲಿಯಲು, ಬತ್ತ, ಇತ್ಯಾದಿಗಳನ್ನು ಶೇಖರಿಸಿಡಲು ಸಾಕಷ್ಟು ಸ್ಥಳಾವಕಾಶ ಇದ್ದಿತು. ಮನೆಯ ಮುಂದೆ ಮೈಲಿಕಲ್ಲು ಇದ್ದುದರಿಂದ ಆ ಮನೆ ಮೈಲಿಕಲ್ಲು ಮನೆ ಎಂದೇ ಹೆಸರಾಗಿತ್ತು.
     ಅಜ್ಜ ಅಜ್ಜಿಯರು ಮೊಮ್ಮಕ್ಕಳಿಗೆ ಹೊಸಬರಲ್ಲದಿದ್ದರೂ ಅಪ್ಪ ಅಮ್ಮರನ್ನು ಬಿಟ್ಟು ಹೊಸ ವಾತಾವರಣದಲ್ಲಿ ಹೊಂದಿಕೊಳ್ಳಲು ಮಕ್ಕಳಿಗೆ ಬಹಳ ಸಮಯವೇ ಹಿಡಿಯಿತು. ಮಕ್ಕಳನ್ನು ಕೊಪ್ಪದ ಶಾಲೆಗೆ ಸೇರಿಸಿದರು. ಓರಗೆಯ ಮಕ್ಕಳಿಗೆ ಅಪ್ಪ ಅಮ್ಮಂದಿರಿದ್ದು, ಅವರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಅವರ ಬೇಕು, ಬೇಡಗಳನ್ನು ನೋಡಿ ಕೊಳ್ಳುತ್ತಿದ್ದುದನ್ನು ಗಮನಿಸುತ್ತಿದ್ದ ಸುಬ್ಬಣ್ಣ, ಸುಂದರಿಯರು ತಮಗೆ ಅಪ್ಪ, ಅಮ್ಮ ಇಲ್ಲದಿದ್ದ ಬಗ್ಗೆ ಕೊರಗುತ್ತಿದ್ದು,   ಅನಾಥ ಭಾವದಿಂದ ಆಗಾಗ್ಗೆ ಖಿನ್ನರಾಗುತ್ತಿದ್ದರು. ಅಜ್ಜ, ಅಜ್ಜಿಯರ ಪ್ರೀತಿ ಈ ಕೊರಗನ್ನು ಕಡಿಮೆ ಮಾಡಿತ್ತಿತ್ತು. ಕೊಪ್ಪದ ಬಾಲ್ಯದ ದಿನಗಳ ವಿವರಗಳನ್ನು ಸುಬ್ರಹ್ಮಣ್ಯಯ್ಯ ಯಾರಿಗೂ ತಿಳಿಸಿಲ್ಲದ್ದರಿಂದ ಹಾಗೂ ವಿವರಗಳನ್ನು ತಿಳಿದವರು ಈಗ ಇಲ್ಲದಿರುವುದರಿಂದ ಈ ಬಗ್ಗೆ ಹೆಚ್ಚು ತಿಳಿಸಲಾಗುತ್ತಿಲ್ಲ. ಕೊಪ್ಪದಲ್ಲಿ ರೂ. ೮೦೦/- ಕಂದಾಯ ಕಟ್ಟುವಷ್ಟು ಜಮೀನಿತ್ತೆಂದೂ, ಓದುವಾಗ ಕಷ್ಟವಿತ್ತೆಂದೂ, ತಮಗೆ ಲೆಕ್ಕದಲ್ಲಿ ನೂರಕ್ಕೆ ನೂರು ಅಂಕ ಬರುತ್ತಿತ್ತೆಂದೂ ಅವರು ಹೇಳುತ್ತಿದ್ದರೆಂದು ಮಗಳು ಸೀತಾಲಕ್ಷ್ಮಮ್ಮ ನೆನಪಿಸಿಕೊಳ್ಳುತ್ತಾರೆ. ಸುಬ್ಬಣ್ಣ ಪ್ರೌಢಶಾಲೆಯವರೆಗೆ ವಿದ್ಯಾಭ್ಯಾಸ ಮಾಡಿರಬಹುದು.
     ಮಕ್ಕಳು ಪ್ರೌಢ ವಯಸ್ಸಿಗೆ ಬಂದ ನಂತರ ತಾವು ಕಣ್ಣು ಮುಚ್ಚುವುದರ ಒಳಗೆ ಅವರ ಮದುವೆ ಮಾಡಬೇಕೆಂದು ಬಯಸಿದಂತೆ ಇಬ್ಬರು ಮೊಮ್ಮಕ್ಕಳಿಗೂ ಮದುವೆ ಮಾಡಿದರು. ತಮ್ಮ ಸಂಬಂಧಿಗಳೇ ಆಗಿದ್ದ ಓಣಿಕೆರೆ ರಂಗರಾವ್‌ರವರ ಮಗಳು ಆನಂದಲಕ್ಷ್ಮಿಯೊಂದಿಗೆ ಸುಬ್ರಹ್ಮಣ್ಯಯ್ಯನ ವಿವಾಹ ನಡೆಯಿತು. ಹಾಲುಗಾರು ವಂಶಸ್ಥರಾಗಿದ್ದ ಓಣಿಕೆರೆ ರಂಗರಾವ್ ರವರು ಶೃಂಗೇರಿಯಲ್ಲಿ ಶಾಲಾ ತನಿಖಾಧಿಕಾರಿಯಾಗಿದ್ದರು. ಮೊಮ್ಮಗಳು ಸುಂದರಮ್ಮನನ್ನು ಹೊಳಲ್ಕೆರೆಯ ಶ್ರೀನಿವಾಸರಾಯರಿಗೆ ಕೊಟ್ಟು ವಿವಾಹ ಮಾಡಿದರು. ಕಾಲಾಂತರದಲ್ಲಿ ಸುಬ್ರಹ್ಮಣ್ಯ ತನ್ನ ತಂಗಿ ಸುಂದರಿಗೆ ಶ್ರೀರಂಗಪಟ್ಟಣದ ಸಮೀಪ ಸುಮಾರು ಒಂದು ಎಕರೆ ಜಮೀನನ್ನು ಅರಷಿಣ-ಕುಂಕುಮಕ್ಕಾಗಿ ಉಡುಗೊರೆಯಾಗಿ ನೀಡಿದ್ದರೆಂದು ಸುಂದರಮ್ಮ ನವರ ಮಗ ದಿ.ಸತ್ಯನಾರಾಯಣ ರಾವ್ ಹೇಳುತ್ತಿದ್ದರು. ಈ ಜಮೀನು ಅಜ್ಜ ವೆಂಕಟಸುಬ್ಬಯ್ಯನವರಿಂದ ಬಂದಿದ್ದ ಜಮೀನೇ ಅಥವಾ ತಂದೆ ವೆಂಕಣ್ಣನವರಿಗೆ ಸೇರಿದ್ದ ಜಮೀನೇ ಅಥವಾ ಸ್ವಯಾರ್ಜಿತವೇ ಎಂಬುದು ತಿಳಿಯುವುದಿಲ್ಲ.
     ಮೊಮ್ಮಕ್ಕಳ ಮದುವೆಯಾದ ಒಂದೆರಡು ವರ್ಷದಲ್ಲೇ ವೆಂಕಟಸುಬ್ಬಯ್ಯ, ಶೇಷಮ್ಮ ತೀರಿಕೊಂಡರೆಂದು ಹೇಳಲಾಗಿದ್ದು ಖಚಿತ ವಿವರ ಗೊತ್ತಿಲ್ಲ. ವೆಂಕಟಸುಬ್ಬಯ್ಯನವರ ಕಾಲಾನಂತರ ಅವರ ಸಮಸ್ತ ಆಸ್ತಿಗೆ ಸುಬ್ರಹ್ಮಣ್ಯ ಒಬ್ಬನೇ ಹಕ್ಕುದಾರನಾಗಿದ್ದರೂ ಇಲ್ಲೂ ದುರದೃಷ್ಟ ಬೆನ್ನು ಹತ್ತಿತ್ತು. ಎಲ್ಲಾ ಜಮೀನುಗಳು ಹಾಗೂ ಮನೆಯನ್ನು ಕೊಪ್ಪ ಬ್ಯಾಂಕಿಗೆ ಆ ಮೊದಲೇ ಆಧಾರ ಮಾಡಿ ಸಾಲ ಪಡೆಯಲಾಗಿದ್ದು, ಸಾಲ ಹಿಂತಿರುಗಿಸಲು ನೋಟೀಸುಗಳು ಬಂದಿದ್ದವು. ಸಾಲ ತೀರಿಸದೇ ಇದ್ದುದರಿಂದ ವೆಂಕಟಸುಬ್ಬಯ್ಯ ತೀರಿಕೊಂಡ ಕೂಡಲೇ ಜಮೀನುಗಳು ಮತ್ತು ಮನೆಯನ್ನು ಬ್ಯಾಂಕು ಹರಾಜು ಮೂಲಕ ವಿಲೇ ಮಾಡಿತು. ಈ ಜಮೀನುಗಳು ಮತ್ತು ಮನೆಯನ್ನು ಬೆಟಗೇರಿ ಕೃಷ್ಣಭಟ್ಟರು ಹರಾಜಿನಲ್ಲಿ ಕೊಂಡು ತಮ್ಮ ತಂಗಿಯ ಮಗ ಶ್ರೀನಿವಾಸರಾಯರಿಗೆ ಕೊಟ್ಟರು. ಮೈಲಿಕಲ್ಲು ಮನೆ ಎಂದು ಹೆಸರಾಗಿದ್ದ ಮನೆಗೆ ವಾಸ ಬಂದ ಶ್ರೀನಿವಾಸ ರಾಯರನ್ನು ಮೈಲಿಕಲ್ ಶ್ರೀನಿವಾಸರಾವ್ ಎಂದೇ ಗುರುತಿಸಲಾಗುತ್ತಿತ್ತು. ಈಗ ಈ ಮನೆಯಲ್ಲಿ ಶ್ರೀನಿವಾಸರಾಯರ ಮಕ್ಕಳ ಪೈಕಿ ಒಬ್ಬರಾದ ಮಾಲತೀಶರಾವ್ ವಾಸವಾಗಿದ್ದು ಎಲ್ಲಾ ಆಸ್ತಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಬಹಳ ಹಳೆಯ ಕಾಲದ ಮನೆಯಾದರೂ ಈಗಲೂ ಗಟ್ಟಿಮುಟ್ಟಾಗಿ ಹೊಸದಾಗಿ ಕಾಣುವಂತೆ ಮನೆಯನ್ನು ಚೊಕ್ಕಟವಾಗಿ, ಸುಂದರವಾಗಿ ಇಟ್ಟುಕೊಂಡಿರುವ ಮಾಲತೀಶರಾಯರನ್ನು ಅಭಿನಂದಿಸಲೇಬೇಕು. ಹರಾಜಿನಲ್ಲಿ ಬಂದ ಹಣದಲ್ಲಿ ಸಾಲ ಮತ್ತು ಬಡ್ಡಿ ಹಣ ಮುರಿದುಕೊಂಡು ಉಳಿದ ಅಲ್ಪ ಹಣ ಕೈಗೆ ಬಂದಿದ್ದು, ಸ್ವಲ್ಪ ಕಾಲ ಕೊಪ್ಪದಲ್ಲಿ ಬಾಡಿಗೆ ಮನೆಯಲ್ಲಿ ಸುಬ್ಬಣ್ಣ - ಆನಂದಲಕ್ಷ್ಮಿ ದಂಪತಿಗಳು ವಾಸವಾಗಿದ್ದರೆಂದು ಹೇಳಲಾಗಿದೆ.


     ಕೊಪ್ಪದಲ್ಲಿ  ಸುಬ್ರಹ್ಮಣ್ಯಯ್ಯನಿಗೆ  ಆಶ್ರಯ  ನೀಡಿದ  ಕೊಪ್ಪದ  ಅಜ್ಜ ವೆಂಕಟಸುಬ್ಬಯ್ಯನವರ ಮನೆ. ಮನೆಯ
ಮುಂದೆ  ಮೈಲಿಕಲ್ಲು  ಇದ್ದುದರಿಂದ    ಮೈಲಿಕಲ್ಲು ಮನೆ  ಎಂದು  ಹೆಸರಾಗಿದ್ದ  ಈ    ಮನೆ   ಹಾಗೂ
ಜಮೀನುಗಳು  ಸಾಲದ  ಬಾಕಿ   ಕಾರಣದಿಂದ   ಕೊಪ್ಪ  ಬ್ಯಾಂಕಿನಿಂದ  ಹರಾಜಿನಲ್ಲಿ   ಬೆಟಗೇರಿ ಕೃಷ್ಣಭಟ್ಟರ
ಪಾಲಾಯಿತು. ಪ್ರಸ್ತುತ ಈ ಮನೆ ಹಾಗೂ ಜಮೀನುಗಳು ಶ್ರೀ ಮಾಲತೀಶರಾವ್‌ರವರ ಹಕ್ಕು ಮತ್ತು ಸ್ವಾಧೀನದಲ್ಲಿದೆ.

ಕೊಪ್ಪದಲ್ಲಿ ಮಾಹಿತಿ ಸಂಗ್ರಹ ಮತ್ತು ಅಜ್ಜನ ಮನೆಯನ್ನು ನೋಡಲು ಸಹಕರಿಸಿದ ಕೊಪ್ಪದ ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್ ಶ್ರೀ ಹೆಚ್.ಎಸ್. ವೆಂಕಟಪತಿ ಮತ್ತು ಅಜ್ಜನ ಮನೆಯ ಈಗಿನ ಮಾಲಿಕರಾದ ಶ್ರೀ ಮಾಲತೀಶರಾವ್.

**********************************
೫. ದಾವಣಗೆರೆಗೆ ಪಯಣ

     ಸಾಗರದಲ್ಲಿ ಅನಾಥನಾಗಿ ಕೊಪ್ಪದಲ್ಲಿ ಅಜ್ಜ ಅಜ್ಜಿಯರ ಆಶ್ರಯದಲ್ಲಿ ಬೆಳೆದ ಸುಬ್ರಹ್ಮಣ್ಯನಿಗೆ ಕೊಪ್ಪದಲ್ಲಿದ್ದ ನೆಲೆಯೂ ಕೈತಪ್ಪಿತು. ಮದುವೆಯಾದ ಹೊಸದರಲ್ಲೇ ಪುನಃ ಹೊಸದಾಗಿ ಮೊದಲಿನಿಂದ ಸಂಸಾರ ಪ್ರಾರಂಭಿಸುವ ಸ್ಥಿತಿ ಬಂದೊದಗಿತ್ತು. ಪತ್ನಿ ಗರ್ಭಿಣಿಯಾಗಿದ್ದು ಹುಟ್ಟಿದ ಮೊದಲ ಎರಡು ಮಕ್ಕಳು ಸತ್ತು ಹುಟ್ಟಿದ್ದರಿಂದ  ದುಃಖ ಮತ್ತು ಆತಂಕದಲ್ಲಿದ್ದ ಸುಬ್ರಹ್ಮಣ್ಯ - ಆನಂದಲಕ್ಷ್ಮಿಯರು ಶೃಂಗೇರಿಗೆ ಹೋಗಿ ತಾಯಿ ಶಾರದೆಯನ್ನು ಬೇಡಿಕೊಂಡು, ಗುರುಗಳ ಆಶೀರ್ವಾದ ಪಡೆದು ಬಂದರು. ಆತಂಕದ ದಿನಗಳು ಕಳೆದು ಗಂಡು ಮಗು ಜನಿಸಿದಾಗ ದಂಪತಿಗಳು ಸಂಭ್ರಮಿಸಿದರು. ತಂದೆ ವೆಂಕಣ್ಣ ಹಾಗೂ ಆಶ್ರಯದಾತ ಅಜ್ಜನ ನೆನಪಿನಲ್ಲಿ ಮಗನಿಗೆ ವೆಂಕಟಸುಬ್ಬರಾಯ ಎಂದು ಹೆಸರಿಟ್ಟರು. ಸಂಸಾರ ಸಾಗಿಸಲು ಏನಾದರೂ ಉದ್ಯೋಗ ಮಾಡಲೇಬೇಕಾಗಿದ್ದು ಕಷ್ಟಪಟ್ಟು ಅವರಿವರ ನೆರವಿನಿಂದ ದಾವಣಗೆರೆಯ ನ್ಯಾಯಾಲಯದಲ್ಲಿ ನಕಲುಗಾರನ (ಕಾಪಿಯಿಸ್ಟ್) ಹುದ್ದೆ ಸಂಪಾದಿಸಿದರು. ಮೂರು ತಿಂಗಳ ಮಗುವಿನೊಂದಿಗೆ ಕೊಪ್ಪ ಬಿಟ್ಟು ದಾವಣಗೆರೆಗೆ ಬಂದು ಮುಂದಿನ ಬಾಳಿನ ಪಯಣಕ್ಕೆ ಅಣಿಯಾದರು.
     ದಾವಣಗೆರೆಯ ಜೀವನದ ಬಗ್ಗೆ ಮಗ ವೆಂಕಟಸುಬ್ಬರಾಯರು ಹೀಗೆ ಹೇಳುತ್ತಾರೆ:
     "ನಾನು ಎಸ್.ಎಸ್.ಎಲ್.ಸಿ.ವರೆಗೆ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಓದಿದೆ. ಬಹಳ ಬಡತನದ ಜೀವನ. ನನ್ನ ತಂದೆಗೆ ಕೋರ್ಟಿನಲ್ಲಿ ನಕಲು ನೀಡಿದ್ದಕ್ಕೆ ಒಂದು ನಕಲಿಗೆ ನಾಲ್ಕು ದುಡ್ಡು ಸಿಗುತ್ತಿದ್ದು, ಎರಡು ದುಡ್ಡನ್ನು ಅವರು ಇಟ್ಟುಕೊಂಡು ಎರಡು ದುಡ್ಡನ್ನು ಸರ್ಕಾರಕ್ಕೆ ಕಟ್ಟಬೇಕಾಗಿತ್ತು. ಅವರದು ಮೊದಲು ಪೆನ್ಷನ್ ಬರುವ ಕೆಲಸವಾಗಿರಲಿಲ್ಲ. ಎಷ್ಟೋ ವರ್ಷದ ಕೆಲಸದ ನಂತರ ಪೆನ್ಷನ್ ಬರುವ ಕೆಲಸವಾಗಿ ಆದೇಶವಾಗಿತ್ತು. ತಿಂಗಳಿಗೆ ಒಮ್ಮೆ ಸಂಬಳ ಬರುವ ಕೆಲಸವಲ್ಲದ್ದರಿಂದ ಬಂದ ಹಣ ಬಂದ ಹಾಗೆಯೇ ಖರ್ಚಾಗುತ್ತಿತ್ತು. ದಾವಣಗೆರೆಯ ಪ್ರಖ್ಯಾತ ದಾವಣಗೆರೆ ಕಾಟನ್ ಮಿಲ್ಸ್ ಮಾಲೀಕರಾದ ರಾಜನಹಳ್ಳಿ ಹನುಮಂತಪ್ಪ ನವರ ಮನೆಯ ಹತ್ತಿರದಲ್ಲೇ ಒಂದು ಸಣ್ಣ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಮನೆಯಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಪರೀಕ್ಷೆ ಸಮಯದಲ್ಲಿ ಬೀದಿ ದೀಪದ ಬೆಳಕಿನಲ್ಲಿ ಓದುತ್ತಿದ್ದೆ. ನನ್ನ ತಂಗಿಯರೂ ಪ್ರಾಥಮಿಕ ಶಾಲೆಗೆ ಸೇರಿದ್ದರು. ಎಷ್ಟೋ ಸಲ ಬಾಡಿಗೆ ಹಣ ಕೊಡಲೂ ತಂದೆಗೆ ಕಷ್ಟವಾಗುತ್ತಿತ್ತು. ಓದಲು ಬೇಕಾದ ಪುಸ್ತಕಗಳನ್ನು ತಂದುಕೊಡುವುದೂ ಕಷ್ಟವಾಗಿತ್ತು. ಮನೆ ಮನೆಗೆ ಪೇಪರ್ ಹಾಕಿ ಬಂದ ಹಣದಲ್ಲಿ ಕೆಲವು ಪುಸ್ತಕಗಳನ್ನು ಕೊಂಡಿದ್ದು ನೆನಪಿದೆ. ದಾವಣಗೆರೆ ಕಾಟನ್ ಮಿಲ್ಸ್ ಮಾಲೀಕ ಹನುಮಂತಪ್ಪನವರ ಮೊಮ್ಮಗ ಶ್ರೀನಿವಾಸ ಮೂರ್ತಿ (ರಾಮಶೆಟ್ಟರ ಮಗ) ನನ್ನ ಜೊತೆಯಲ್ಲೇ ಓದುತ್ತಿದ್ದು, ಅವನಿಗೆ ಮತ್ತು ಅವನ ತಂಗಿ ಸುನಂದಳಿಗೆ ಮನೆಪಾಠ ಹೇಳಿಸುತ್ತಿದ್ದರು. ನನಗೂ ಅವರ ಜೊತೆಯಲ್ಲಿ ಪಾಠ ಹೇಳಿಸಿಕೊಳ್ಳಲು ಶ್ರೀನಿವಾಸಮೂರ್ತಿಯ ಅಜ್ಜ ಹನುಮಂತಪ್ಪ ಅವಕಾಶ ಮಾಡಿಕೊಟ್ಟಿದ್ದು ಮರೆಯುವಂತಿಲ್ಲ. ೧೯೪೩ರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ತೇರ್ಗಡೆಯಾಗಿದ್ದು, ಆಗ ರಾಜನಹಳ್ಳಿ ಹನುಮಂತಪ್ಪನವರು ಸ್ವತಃ ನಮ್ಮ ಮನೆಗೆ ಬಂದು ಹುಡುಗ ಬುದ್ದಿವಂತ, ಅವನು ನನ್ನ ಮೊಮ್ಮಗನ ಜೊತೆಗೇ ಬೆಂಗಳೂರಿಗೆ ಕಾಲೇಜು ಓದಲಿ, ಎಲ್ಲಾ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ನನ್ನ ತಂದೆ ಅವರ ಎದುರಿಗೆ ಏನೂ ಹೇಳಲಿಲ್ಲ. ಅವರು ಹೋದ ನಂತರ ಕೆಲಸಕ್ಕೆ ಸೇರಿ ಆಸರೆಯಾಗಿರುತ್ತಾನೆ ಎಂದುಕೊಂಡರೆ, ಓದುತ್ತಾನಂತೆ ಎಂದು ಸಿಟ್ಟು ಮಾಡಿಕೊಂಡು ನನ್ನ ತಂದೆ ಬೆಂಗಳೂರಿಗೆ ಹೊರಟುಹೋದರು. ನನ್ನ ತಾಯಿ ಗೋಳಾಡುವುದನ್ನು ನೋಡಲಾರದೆ, ನಾನು ಎಂದೂ ನೋಡಿರದ ಬೆಂಗಳೂರಿಗೆ ನನ್ನ ತಂದೆಯನ್ನು ಹುಡುಕಿಕೊಂಡು ಹೋದೆ. ನನ್ನ ಅತ್ತೆಯ ಬಂಧುಗಳ ಪೈಕಿಯವರ ಅವೆನ್ಯೂ ರೋಡಿನಲ್ಲಿದ್ದ  ಸರಸ್ವತಿ ಪುಸ್ತಕ ಭಂಡಾರ ಹೆಸರಿನ ಅಂಗಡಿಯಲ್ಲಿ ಕುಳಿತಿದ್ದ ನನ್ನ ತಂದೆಯನ್ನು ಸಮಾಧಾನಿಸಿ ಮನೆಗೆ ಕರೆದುಕೊಂಡು ಬಂದೆ".

     "ಸಮೀಪದ ಹರಿಹರದಲ್ಲಿ ಆಗ ಮಿಲಿಟರಿ ಕ್ಯಾಂಪ್ ಇದ್ದು, ಯಾವುದಾದರೂ ಕೆಲಸ ಇದ್ದರೆ ಕೊಡಬೇಕೆಂದು ಅರ್ಜಿ ಹಾಕಿದ್ದೆ. ಅರ್ಜಿ ಹಾಕಿದ್ದ ಎರಡೇ ದಿನಕ್ಕೆ ಒಬ್ಬರು ಬ್ರಿಟಿಶ್ ಮಿಲಿಟರಿ ಅಧಿಕಾರಿ ಕುದುರೆ ಸವಾರಿಯಲ್ಲಿ ನನ್ನ ತಂದೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು 'ಮಿ. ಸುಬರಮನಿಯ, ವ್ಹೇರ್ ಈಸ್ ಯುವರ್ ಸನ್?' ಎಂದು ಕೇಳಿದಾಗ ನಾನು ಕೆಲಸಕ್ಕೆ ಅರ್ಜಿ ಹಾಕಿದ್ದ ವಿಷಯ ತಿಳಿದಿರದಿದ್ದ ನನ್ನ ತಂದೆ ಗಡ ಗಡ ನಡುಗಿ ಹೋಗಿದ್ದರು. ವಿಷಯ ತಿಳಿದ ಮೇಲೆ ಅವರಿಗೆ ಸಮಾಧಾನ ವಾಯಿತು. ಸಿವಿಲಿಯನ್ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ ನನಗೆ ಮಿಲಿಟರಿ ಕ್ಯಾಂಪ್‌ಗೆ ಅಗತ್ಯವಾದ ರೇಶನ್ ಸರಬರಾಜು ಮಾಡುವ ಕೆಲಸ. ಒಳ್ಳೆಯ ಸಂಬಳ ಸಿಗುತ್ತಿತ್ತು. ಆಗ ನಮ್ಮ ಮನೆಗೆ ಸಹ ರೇಶನ್ ಅನ್ನು ಜೀಪಿನಲ್ಲೇ ತೆಗೆದುಕೊಂಡು ಹೋಗಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಶಿವಮೊಗ್ಗದಲ್ಲೂ ಒಂದು ಮಿಲಿಟರಿ ಕ್ಯಾಂಪ್ ಇದ್ದು ಅಲ್ಲಿಗೆ ವರ್ಗ ಮಾಡಿಸಿಕೊಳ್ಳಲು ಶಿವಮೊಗ್ಗದ ಅಧಿಕಾರಿಗಳು ಒಪ್ಪಿದರೂ, ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದರಿಂದ ಬದಲಾವಣೆಗೆ ಹರಿಹರದ ಅಧಿಕಾರಿಗಳು ಒಪ್ಪಲಿಲ್ಲ. ನನ್ನ ತಂದೆಗೆ ನಾನು ಮಿಲಿಟರಿ ಸೇವೆ ಮಾಡುವುದು ಇಷ್ಟವಿರಲಿಲ್ಲ. 'ಅದು ಎಂದಿದ್ದರೂ ನಾಯಿಯ ತಲೆಯ ಮೇಲಿನ ಬುತ್ತಿ, ಕ್ಯಾಂಪ್ ಬೇರೆ ಕಡೆಗೆ ಹೋದಾಗ ನಿನ್ನ ಕೆಲಸ ಹೋಗುತ್ತದೆ, ಸರ್ಕಾರಿ ಕೆಲಸಕ್ಕೆ ಸೇರು' ಎಂದು ಹೇಳುತ್ತಿದ್ದರು. ಹೀಗಾಗಿ ಸೆಂಟ್ರಲ್ ರೆಕ್ರೂಟ್‌ಮೆಂಟ್ ಬೋರ್ಡ್‌ಗೆ ಅರ್ಜಿ ಹಾಕಿ ಆ ಮೂಲಕ  ೨೨-೦೬-೧೯೪೫ ರಲ್ಲಿ ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಗುಮಾಸ್ತನಾಗಿ ನೇಮಕವಾಗಿ ಕೆಲಸಕ್ಕೆ ಸೇರಿದೆ. ಮಿಲಿಟರಿಯಲ್ಲಿ ಒಳ್ಳೆಯ ಸಂಬಳ ಬರುತ್ತಿದ್ದರೂ ತುಂಬಾ ಕಡಿಮೆ ಸಂಬಳದ ಕೆಲಸಕ್ಕೆ ತಂದೆಯ ಒತ್ತಾಯಕ್ಕೆ ಸೇರಬೇಕಾಯಿತು. ಆ ಮೊದಲೇ ನನ್ನ ತಂದೆಗೆ ಶಿವಮೊಗ್ಗ ಕೋರ್ಟಿಗೆ ವರ್ಗವಾಗಿತ್ತು.
***********


***********************************************

೬. ಕರೆಯಿತು ಶಿವಮೊಗ್ಗ

     ಸಾಗರದಲ್ಲಿ ಅನಾಥರಾಗಿ, ಕೊಪ್ಪದಲ್ಲಿ ಆಶ್ರಯ ಕಂಡು, ದಾವಣಗೆರೆಗೆ ಉದ್ಯೋಗಕ್ಕಾಗಿ ಹೋದ ಸುಬ್ರಹ್ಮಣ್ಯನಿಗೆ ಸ್ವಂತ ಜಿಲ್ಲೆ ಶಿವಮೊಗ್ಗದಲ್ಲಿ ನೆಲೆಸಲು ಮನಸ್ಸಾಗಿ ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದಲ್ಲಿ ಅದೇ ನಕಲುಗಾರನ ಹುದ್ದೆಗೆ ವರ್ಗ ಮಾಡಿಸಿಕೊಂಡರು. ಶಿವಮೊಗ್ಗದ ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ ಒಂದು ಪುಟ್ಟ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಸಾಲಗಳ ಚಕ್ರಸುಳಿಯಲ್ಲಿ ಸಿಕ್ಕಿದ್ದ ಅವರು ಒಂದು ಸಾಲ ತೀರಿಸಲು ಮತ್ತೊಂದು ಮಗದೊಂದು ಸಾಲಗಳನ್ನು ಮಾಡುತ್ತಲೇ ಕೊನೆಯವರೆಗೂ ಆ ಸುಳಿಯಿಂದ ಹೊರಬರಲಾಗಲೇ ಇಲ್ಲ. ಕೆಲವು ಸಲ ಮನೆಯಲ್ಲಿದ್ದ ಪಾತ್ರೆ ಪಡಗಗಳು, ಆಭರಣಗಳನ್ನು ಸಹ ಸಾಲಕ್ಕಾಗಿ ವಿಲೇವಾರಿ ಮಾಡಿದ್ದರೆಂದು ತಿಳಿದುಬರುತ್ತದೆ. ತಂದೆಯ ಸಾಲ ಮಾಡುವ ಈ ಪ್ರವೃತ್ತಿಯಿಂದಾಗಿ ಮಗನಿಗೆ ಅಸಮಾಧಾನವಿತ್ತು. ಅವರು ತೀರಿಕೊಂಡಾಗ ಬಾಕಿಯಿದ್ದ ರೂ.೧೩೦೦೦/- ಸಾಲವನ್ನು ನನ್ನ ತಂದೆಯವರು ಹೆಚ್ಚಿನ ಪಾರ್ಟ್ ಟೈಮ್ ಕೆಲಸ ಮಾಡಿ ನಂತರದಲ್ಲಿ ತೀರಿಸಿದ್ದು ಗೊತ್ತಿದೆ.
ಮಕ್ಕಳ ಮದುವೆ
     ಮಗ ವೆಂಕಟಸುಬ್ಬರಾಯರು ತಮ್ಮ ಮದುವೆ ಬಗ್ಗೆ ಹೀಗೆ ಹೇಳುತ್ತಾರೆ:

     "ಹಳೇಬೀಡಿನ ಶ್ಯಾನುಭೋಗರಾಗಿದ್ದ ಹೆಚ್. ಪಿ. ಸುಬ್ಬರಾಯರು ಕೊಪ್ಪದ ಸಂಬಂಧಿಕರ ಮೂಲಕ ತಮ್ಮ ಬಗ್ಗೆ ತಿಳಿದು, ನನ್ನ ತಂದೆಯವರೊಂದಿಗೆ ಪತ್ರ ವ್ಯವಹಾರ ಮಾಡಿ ಶಿವಮೊಗ್ಗದ ತಮ್ಮ ಮನೆಗೆ ಬಂದಾಗ ನನ್ನ ತಂದೆ ಮತ್ತು ತಾಯಿ ಯಾತ್ರೆಗಾಗಿ ಕೊಲ್ಲೂರಿಗೆ ಹೋಗಿದ್ದರು. ಅವರು ಬಂದ ನಂತರ ಹೆಣ್ಣು ನೋಡುವುದಾಗಿ ತಿಳಿಸಿದರೂ, ನಾನು ಬಂದು ಒಂದು ಸಲ ನೋಡಿ ಬರಬೇಕೆಂದು ನಂತರ ದೊಡ್ಡವರೊಂದಿಗೆ ಮಾತನಾಡುವುದಾಗಿ ಒತ್ತಾಯ ಮಾಡಿದ್ದರಿಂದ ನಾನೊಬ್ಬನೇ ಅವರೊಂದಿಗೆ ಬೀರೂರಿನಲ್ಲಿದ್ದ ಅವರ ಮಗಳು ಸೀತಮ್ಮನನ್ನು ನೋಡಿಕೊಂಡು ಬಂದೆ. ನನ್ನ ತಂದೆ-ತಾಯಿ ವಾಪಸು ಬಂದ ಮೇಲೆ ವಿಷಯ ತಿಳಿಸಿದೆ. ನನ್ನ ತಂದೆಗೆ ಅವರ ಸಂಬಂಧದವರ ಕಡೆಯವರ ಹೆಣ್ಣು ತರಬೇಕೆಂದು ಮನಸ್ಸಿತ್ತು. ಆದರೆ ನಾನು ಸೀತಮ್ಮನನ್ನು ಒಪ್ಪಿದ್ದರಿಂದ ಆಕೆಯೊಂದಿಗೇ ನನ್ನ ಮದುವೆ ಹಳೇಬೀಡಿನಲ್ಲಿ ೨೩-೦೫-೧೯೪೯ ರಲ್ಲಿ ಆಯಿತು".

     ಮಗಳು ಸೀತಾಲಕ್ಷ್ಮಮ್ಮ ತಮ್ಮ ಮತ್ತು ತನ್ನ ತಂಗಿ ನಾಗರತ್ನಮ್ಮರ ಮದುವೆ ಬಗ್ಗೆ ಹೀಗೆ ಹೇಳುತ್ತಾರೆ:
     "ನನ್ನ ಮದುವೆ ನನ್ನ ತಂದೆಯ ಸೋದರಮಾವನ ಮಗ ಕೊಪ್ಪದ ಕೃಷ್ಣಮೂರ್ತಿಯೊಂದಿಗೆ ಆಯಿತು. ಮದುವೆಯ ಎರಡೂ ಖರ್ಚನ್ನು ಗಂಡಿನ ಕಡೆಯವರೇ ನೋಡಿಕೊಂಡರು. ೩೦೦ ರೂಪಾಯಿಯಲ್ಲಿ ನನ್ನ ಮದುವೆ ಮುಗಿಯಿತು. ನನ್ನ ಪತಿ ಕೊಪ್ಪದಲ್ಲಿ ಬಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ನನ್ನ ತಂದೆಯವರನ್ನು ನೋಡಿಕೊಳ್ಳಬೇಕಾಗಿದ್ದರಿಂದ ನಾನು ಶಿವಮೊಗ್ಗದಲ್ಲೇ ಉಳಿದುಕೊಂಡಿದ್ದೆ. ಅವರು ಬಂದು ಹೋಗಿ ಮಾಡುತ್ತಿದ್ದರು. ಒಂದು ವರ್ಷದ ನಂತರ ಅವರಿಗೆ ಕೋರ್ಟಿನಲ್ಲೇ ಅಟೆಂಡರ್ ಆಗಿ ಕೆಲಸ ಕೊಡಿಸಿದ್ದರಿಂದ ತಂದೆಯ ಮನೆಯಲ್ಲೇ ಉಳಿದೆವು.
     "ಶಿವಮೊಗ್ಗದಲ್ಲಿ ನಡೆದ ಮದುವೆಯ ಸಮಾರಂಭವೊಂದರಲ್ಲಿ ನನ್ನ ತಂಗಿ ನಾಗರತ್ನಳನ್ನು ನೋಡಿದ ಹೊಸನಗರ ತಾಲ್ಲೂಕು ಹುಂಚದಕಟ್ಟೆಯ ಕಮ್ಮಚ್ಚಿ ಸುಬ್ಬರಾಯರು ತಮ್ಮ ಮಗ ನಾರಾಯಣರಾಯರಿಗೆ ತಂದುಕೊಳ್ಳಲು ಬಯಸಿ ಪ್ರಸ್ತಾಪಿಸಿದರು. ಶೀಘ್ರವಾಗಿ ಮದುವೆಯೂ ಆಯಿತು. ಅವಳ ಮದುವೆಯ ಖರ್ಚನ್ನೂ ಕಮ್ಮಚ್ಚಿ ಸುಬ್ಬರಾಯರೇ ಭರಿಸಿದರು. ಹೆಣ್ಣು ಮಕ್ಕಳ ಮದುವೆ ವಿಚಾರದಲ್ಲಿ ಅಣ್ಣನೊಂದಿಗೆ ಚರ್ಚಿಸದೆ ಮುಂದುವರೆದ ಬಗ್ಗೆ  ನನ್ನ ತಂದೆಯ ಬಗ್ಗೆ ಅಣ್ಣನಿಗೆ ಅಸಮಾಧಾನವಿತ್ತು. ನಮ್ಮ ಇಬ್ಬರ ಮದುವೆ ಸಂದರ್ಭದಲ್ಲಿ ಲಗ್ನಪತ್ರಿಕೆ ಸಹ ಮಾಡಿಸಿರಲಿಲ್ಲ. ಅಂತಹ ತೀರಾ ಬಡತನದ ಮದುವೆ ನಮ್ಮದಾಗಿತ್ತು".

     ಮನೆಯಲ್ಲಿದ್ದ ಬಡತನದ ಸ್ಥಿತಿಯ ಬಗ್ಗೆ ಅರಿವಾಗಬೇಕಾದರೆ ಸೊಸೆ ಸೀತಮ್ಮ ಹೇಳುವುದನ್ನು ಕೇಳಬೇಕು:
     "ಮನೆಯಲ್ಲಿ ಕೆಲವು ಸಲ ಅಡುಗೆ ಮಾಡಲು ಏನೂ ಇರದೆ ಉಪವಾಸ ಇದ್ದ ದಿನಗಳೂ ಇದ್ದವು. ಒಂದು ಸಂದರ್ಭದಲ್ಲಿ ನನ್ನ ಅತ್ತೆಗೆ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದ ಸಂದರ್ಭದಲ್ಲಿ ಎಲ್ಲರೂ ಅವರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದರು. ನಾನು ಮದುವೆಯಾಗಿ ಬಂದ ಹೊಸತು. ಇಂತಹುದೆಲ್ಲಾ ನನಗೆ ಗೊತ್ತಿರಲಿಲ್ಲ. ಹಿಂದಿನ ದಿನ ಉಪವಾಸ ಇದ್ದಿದ್ದರಿಂದ ನನಗೆ ಬಹಳ ಹೊಟ್ಟೆ ಹಸಿಯುತ್ತಿತ್ತು. ಅಡಿಗೆ ಮನೆಯಲ್ಲಿ ಅಂದಿನ ದಿನಕ್ಕಾಗಿ ಮಾಡಿಟ್ಟಿದ್ದ ಮುದ್ದೆ ಇತ್ತು. ಹಸಿವು ತಡೆಯಲಾರದೆ ನಾನು ಮುಷ್ಟಿಯಲ್ಲಿ ಮುದ್ದೆ ತೆಗೆದುಕೊಂಡು ಯಾರಾದರೂ ನೋಡಿಯಾರೆಂದು ಅತ್ತ ಇತ್ತ ನೋಡುತ್ತಾ ಗಬಗಬ ತಿಂದೆ. ಗಾಬರಿ ಹಾಗೂ ಗಬಗಬ ತಿಂದಿದ್ದರಿಂದ ಉಸಿರು ಸಿಕ್ಕಿಹಾಕಿಕೊಂಡಂತಾಗಿ ಏದುಸಿರು ಬಿಡುತ್ತಿದ್ದೆ. ಆಮೇಲೂ ಮನೆಯವರು ಬಂದ ನಂತರ ಗೊತ್ತಾಗಿ ಏನಾದರೂ ಅಂದಾರೆಂಬ ಭಯ ಇತ್ತು. ಯಾರೂ ಏನೂ ಅನ್ನಲಿಲ್ಲ. ಆತಂಕದಲ್ಲೇ ಎಲ್ಲರೊಂದಿಗೆ ನಾನೂ ಊಟದ ಶಾಸ್ತ್ರ ಮಾಡಿದೆ.
     "ನನ್ನ ಮಾವನವರು ಯಾರೂ ನೋಡಬಾರದೆಂದು ಎಲ್ಲರೂ ಏಳುವುದಕ್ಕೆ ಮುಂಚೆ ಎದ್ದು ಒಂದು ಮಂಕರಿ ತೆಗೆದುಕೊಂಡು ಜೊತೆಗೆ ಕಿರಿಯ ಮಗಳು ನಾಗರತ್ನಳನ್ನು ಕರೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದ ಸಗಣಿಯನ್ನು ಅದರಲ್ಲಿ  ತುಂಬಿಕೊಂಡು ತಂದು ಅವರೇ ಬೆರಣಿ ತಟ್ಟುತ್ತಿದ್ದರು. ಸೌದೆಗೆ ಕಷ್ಟವಾದ್ದರಿಂದ ಅದನ್ನು ಸ್ನಾನಕ್ಕೆ ನೀರು ಕಾಯಿಸಲು ಉರುವಲಾಗಿ ಬಳಸುತ್ತಿದ್ದೆವು. ಅವರು ಸಗಣಿ ತರುವಾಗ ಮತ್ತು ಬೆರಣಿ ತಟ್ಟುವಾಗ ನನಗೆ ಏನು ಮಾಡಬೇಕೆಂದು ಗೊತ್ತಾಗದೆ ಭಯ ಮತ್ತು ಸಂಕೋಚದಿಂದ ಸುಮ್ಮನಿರುತ್ತಿದ್ದೆ".
     ಬೆಂಗಳೂರಿನಲ್ಲಿರುವ ಸುಬ್ರಹ್ಮಣ್ಯಯ್ಯನವರ ಚಿಕ್ಕಪ್ಪನ ಮಗ ಶ್ರೀ ಸಾ.ಕ. ಕೃಷ್ಣಮೂರ್ತಿಯವರು ತಿಳಿಸುವಂತೆ ಸುಬ್ರಹ್ಮಣ್ಯಯ್ಯ ಒಮ್ಮೊಮ್ಮೆ ವಿಶ್ವೇಶ್ವರ ಪುರಂನಲ್ಲಿದ್ದ ಅವರ ಮನೆಗೆ ಬಂದು ಅವರ ತಂದೆ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಲಿಂಗಣ್ಣಯ್ಯ ನವರು ಸ್ನಾನದ ನಂತರ ಪೂಜೆಗೆ ಹೂವು ಕೀಳಲು ಮನೆಯ ಮುಂದಿನ ಕೈತೋಟಕ್ಕೆ ಹೋದಾಗ ಸುಬ್ರಹ್ಮಣ್ಯಯ್ಯನವರೂ ಅವರ ಹಿಂದೆ ಓಡಾಡುತ್ತಾ ಹೂವು ಕೀಳುತ್ತಾ ಮಾತನಾಡುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಅವರ ತಂದೆ ಸಮಾಜದಲ್ಲಿ ಉನ್ನತ ಪ್ರಭಾವ ಹೊಂದಿದವರಾಗಿದ್ದು, ಗಂಭೀರ ಸ್ವಭಾವದವರಾಗಿದ್ದರಿಂದ ಸುಬ್ರಹ್ಮಣ್ಯಯ್ಯನವರಿಗೆ ಅವರ ಬಗ್ಗೆ ಭಯಮಿಶ್ರಿತ ಗೌರವಭಾವವಿತ್ತು. ಕೃಷ್ಣಮೂರ್ತಿಯವರ ತಂದೆ ಮೃತರಾದ ನಂತರ ಆಸ್ತಿ ವಿಚಾರದಲ್ಲಿ ತಮ್ಮ ಅಣ್ಣನವರೊಂದಿಗೆ ಸುಬ್ರಹ್ಮಣ್ಯಯ್ಯ ಚರ್ಚಿಸಿದ್ದಂತೆ ನೆನಪಿದ್ದು, ತಾವು ತುಂಬಾ ಚಿಕ್ಕವರಾಗಿದ್ದರಿಂದ ಆ ಕುರಿತು ಗಮನಿಸುತ್ತಿರಲಿಲ್ಲ ವೆಂದು ಹೇಳುತ್ತಾರೆ.
     ನಿವೃತ್ತ್ತಿಯ ನಂತರ ಸುಮಾರು ಎರಡು ವರ್ಷಗಳವರೆಗೆ ಇದ್ದ ನನ್ನ ತಾತ ಮಗ ಕೆಲಸ ಮಾಡುತ್ತಿದ್ದ ಊರಿಗೆ ಬಂದು ಹೋಗಿ ಮಾಡುತ್ತಿದ್ದರು. ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ, ವಿಶ್ರಾಂತಿಗಾಗಿ ತಿಂಗಳುಗಳ ಕಾಲ ಮಗನ ಮನೆಯಲ್ಲಿ ಇರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಹಕರಿಸುವ ಸೌಭಾಗ್ಯ ನನಗೆ ಸಿಕ್ಕುತ್ತಿತ್ತು.

                                ಕವಿ ಸುಬ್ರಹ್ಮಣ್ಯಯ್ಯನ ಮಗ ವೆಂಕಟಸುಬ್ಬರಾಯರು ಮತ್ತು ಸೊಸೆ ಸೀತಮ್ಮ


                              ಕವಿ ಸುಬ್ರಹ್ಮಣ್ಯಯ್ಯನ ಅಳಿಯ ದಿ. ನಾರಾಯಣ ಮತ್ತು ಮಗಳು ನಾಗರತ್ನಮ್ಮ

**************************************

೭. ಆನಂದಲಕ್ಷ್ಮಮ್ಮ
     ಹೆಸರು ಆನಂದಲಕ್ಷ್ಮಮ್ಮ ಆದರೂ ಆನಂದ ಮತ್ತು ಲಕ್ಷ್ಮಿಯನ್ನು ಬಾಳಿನಲ್ಲಿ ನನ್ನಜ್ಜಿ ಕಾಣಲಿಲ್ಲ. ಹಾಲುಗಾರು ವಂಶಸ್ಥರೂ, ಕೊಪ್ಪದ ವೆಂಕಟಸುಬ್ಬಯ್ಯನವರ ಸಂಬಂಧಿಗಳೂ ಆಗಿದ್ದ ಮೌದ್ಗಲ್ಯಸ ಗೋತ್ರದ ಓಣಿಕೆರೆ ರಂಗರಾಯರು ಶೃಂಗೇರಿಯಲ್ಲಿ ಶಾಲಾ ತನಿಖಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಮಗಳು ಆನಂದಲಕ್ಷ್ಮಿಯನ್ನು ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುಬ್ರಹ್ಮಣ್ಯನಿಗೆ ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಸ್ವಲ್ಪ ಸಮಯದಲ್ಲೇ ಸುಬ್ರಹ್ಮಣ್ಯನ ಅಜ್ಜ ಅಜ್ಜಿ ತೀರಿ ಹೋಗಿದ್ದಲ್ಲದೇ ಕೊಪ್ಪದ ಆಸ್ತಿ, ಮನೆಗಳೂ ಕೈ ಬಿಟ್ಟು ಹೋಗಿದ್ದು ಆಘಾತ ಉಂಟು ಮಾಡಿತ್ತು. ಇಂತಹ ಸ್ಥಿತಿಯಲ್ಲಿ ಎರಡು ಮಕ್ಕಳು ಹುಟ್ಟುವಾಗಲೇ ಬೆಳಕು ಕಾಣದೆ ಕಾಲನಲ್ಲಿ ಲೀನವಾದುದು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿದ್ದುದು ಸುಳ್ಳಲ್ಲ. ಜರ್ಝರಿತ ಮನದೊಂದಿಗೆ ದಂಪತಿಗಳು ಶೃಂಗೇರಿಗೆ ಹೋಗಿ ತಾಯಿ ಶಾರದೆಗೆ ಮೊರೆ ಹೋಗಿದ್ದಲ್ಲದೆ ಗುರುಗಳ ಕೃಪಾಭಿಕ್ಷೆಯನ್ನೂ ಬೇಡಿದರು. ಆ ನಂತರದಲ್ಲಿ ಜನಿಸಿದವರೇ ವೆಂಕಟಸುಬ್ಬರಾಯರು.
     ಅವರ ಕಷ್ಟ ಅಲ್ಲಿಗೇ ನಿಲ್ಲಲಿಲ್ಲ. ವೆಂಕಟಸುಬ್ಬರಾಯರ ನಂತರ ಮತ್ತೆ ಐವರು ಮಕ್ಕಳು ಬಾಲ್ಯಾವಸ್ಥೆಯಲ್ಲೇ ಜವರಾಯನ ಪಾಲಾದರು. ಅವರಲ್ಲಿ ಒಬ್ಬ ಮಗ ಶಂಕರ ಐದಾರು ವರ್ಷಗಳು ಇದ್ದು ಕಣ್ಣ ಮುಂದೆಯೇ ಕೊನೆಯುಸಿರೆಳೆದಾಗ ಅವರಿಗೆ ಸಹಿಸಲಾಗಲಿಲ್ಲ. ಆಗ ಬಾಣಂತಿ ಸನ್ನಿ (ಹಿಸ್ಟೀರಿಯ) ಹಾಗೂ ಸರಿಯಾಗಿ ಊಟ ತಿಂಡಿ ಮಾಡದೆ ರಕ್ತಹೀನತೆ (ಅನೀಮಿಯ) ಇತ್ಯಾದಿಗೆ ತುತ್ತಾಗಿ ಕೊನೆಯವರೆಗೂ ನರಳಿದರು. ನಂತರ ಜನಿಸಿದ ಇಬ್ಬರು ಹೆಣ್ಣು ಮಕ್ಕಳೇ ಸೀತಾಲಕ್ಷ್ಮಮ್ಮ ಮತ್ತು ನಾಗರತ್ನಮ್ಮ. ತಾಪತ್ರಯಗಳಿಂದ ರೋಸಿದ್ದ ಸುಬ್ರಹ್ಮಣ್ಯ ಮನೆಯನ್ನು ಬೇಗ ಬಿಟ್ಟು ತಡವಾಗಿ ಬರುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ, ಅವರ ನಿಗಾ, ಕಿತ್ತು ತಿನ್ನುತ್ತಿದ್ದ ಬಡತನ, ಸುಬ್ರಹ್ಮಣ್ಯನನ್ನು ಹುಡುಕಿಕೊಂಡು ಬರುತ್ತಿದ್ದ ಸಾಲಗಾರರನ್ನು ನಿಭಾಯಿಸುವುದರಲ್ಲಿ ಅವರಿಗೆ ಸಾಕು ಸಾಕಾಗುತ್ತಿತ್ತು.
     ಮಗ ವೆಂಕಟಸುಬ್ಬರಾಯರು ತಮ್ಮ ತಾಯಿಯ ಬಗ್ಗೆ ಹೇಳುವಾಗ ಭಾವಪರವಶರಾಗಿ ಹೀಗೆ ತಿಳಿಸುತ್ತಾರೆ:

     "ನನ್ನಮ್ಮ ಬಹಳ ಒಳ್ಳೆಯವರು. ಬಹಳ ಕಷ್ಟ ಅನುಭವಿಸಿದರು. ಸನ್ನಿ ಬಂದ ಸಂದರ್ಭಗಳಲ್ಲಿ, ತುಂಬಾ ದುಃಖದ ಸಂದರ್ಭಗಳಲ್ಲಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಬಿಡುತ್ತಿದ್ದರು. ಏನಾದರೂ ಮಾಡಿಕೊಂಡು ಬಿಟ್ಟಾರು ಎಂಬ ಭಯದಿಂದ ನಾನು ಕೋಣೆಯ ಬಾಗಿಲಿನ ಚಿಲಕಗಳನ್ನು ತೆಗೆದುಬಿಟ್ಟಿದ್ದೆ. ಅವರು ಬಾಗಿಲು ಹಾಕಿಕೊಂಡು ಯಾರೂ ಬರಬಾರದೆಂದು ಬಾಗಿಲಿಗೆ ಅಡ್ಡವಾಗಿ ಪೆಟ್ಟಿಗೆ ಮುಂತಾದುವನ್ನು ಇಡುತ್ತಿದ್ದರು. ಒಮ್ಮೆಯಂತೂ ತುಂಬಿದ ನೀರಿನ ಹಂಡೆಯನ್ನು ಎತ್ತಿ ತಂದಿಟ್ಟಿದ್ದರು. ಆಗ ಅವರ ಮೈಯಲ್ಲಿ ಅಷ್ಟು ಶಕ್ತಿ ಹೇಗೆ ಬರುತ್ತಿತ್ತೋ ದೇವರಿಗೇ ಗೊತ್ತು. ತಾವು ಉಪವಾಸ ಇದ್ದರೂ ನಮಗೆ ಏನನ್ನಾದರೂ ಮಾಡಿ ಕೊಡುತ್ತಿದ್ದರು.
     "ನಾನು ಮಿಲಿಟರಿ ಸೇವೆಯಲ್ಲಿದ್ದಾಗ ಬಂದ ಸಂಬಳದಿಂದ ನನ್ನಮ್ಮನಿಗೆ ಎರಡು ಎಳೆಯ ಚಿನ್ನದ ಅವಲಕ್ಕಿ ಸರ ಮಾಡಿಸಿಕೊಟ್ಟಿದ್ದೆ. ಬಾಡಿಗೆ ಮನೆಯ ಕಷ್ಟಗಳಿಂದ ನೊಂದಿದ್ದ ಅವರು ಗುಡಿಸಲಾದರೂ ಸರಿ, ಸ್ವಂತ ಮನೆ ಬೇಕು ಎಂದು ನನ್ನ ತಂದೆಗೆ ಹೇಳುತ್ತಿದ್ದರು. ನಾನು ಕೊಡಿಸಿದ್ದ ಸರ ಹಾಗೂ ತಮ್ಮ ಸ್ವಂತದ ಆಭರಣಗಳನ್ನು ಸೇರಿಸಿ ಮಾರಿ ಈಗ ಹೊಸಮನೆ ಬಡಾವಣೆ ಎಂದು ಕರೆಯಲಾಗುತ್ತಿರುವ ಭಾಗದಲ್ಲಿ ಒಂದು ದೊಡ್ಡ ನಿವೇಶನ ಖರೀದಿಸುವಂತೆ ಮಾಡಿ ಮನೆ ಕಟ್ಟಿಸಲು ಕಾರಣರಾದರು. ನನ್ನ ತಾಯಿಯವರೇ ನಮ್ಮದೇ ಆದ ಸ್ವಂತ ಮನೆ ಆಗಲು ಕಾರಣಕರ್ತರು. ಇದ್ದ ಹಳೆಯ ಮನೆಯ ಸುತ್ತಲಿನ ನಿವೇಶನಗಳನ್ನು ಈಗ ಮಾರಾಟ ಮಾಡಿದ್ದಾರೆ. ಮುಂಭಾಗದಲ್ಲಿ ನನ್ನ ತಂಗಿ ಸೀತಾಲಕ್ಷ್ಮಮ್ಮನ ಇಬ್ಬರು ಮಕ್ಕಳು ಸತ್ಯನಾರಾಯಣ ಮತ್ತು ಚಂದ್ರಶೇಖರ ಎರಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಬ್ಬರೂ ಅವರ ಅಜ್ಜಿಗೆ ಋಣಿಯಾಗಿರಬೇಕು. ಹಳೆಯ ಮನೆಯನ್ನು ಬದಲಾವಣೆ ಮಾಡಿದ್ದು ಆ ಮನೆ ನನ್ನ ತಂಗಿಯ ಸ್ವಾಧೀನದಲ್ಲಿದೆ.
     "೧೯೫೦ರ ಡಿಸೆಂಬರ್ ತಿಂಗಳಿನಲ್ಲಿ ನನಗೆ ಚಿತ್ರದುರ್ಗದ ಸಬ್ ಜಡ್ಜ್ ರವರ ನ್ಯಾಯಾಲಯಕ್ಕೆ ವರ್ಗವಾದ ಸಂದರ್ಭದಲ್ಲಿ ನನ್ನ ತಾಯಿ ಅರಿಷಿಣ ಕಾಮಾಲೆ ರೋಗದಿಂದ ಬಳಲುತ್ತಿದ್ದರು. ಆಗ ನನ್ನ ತಂಗಿಯರ ಸಹಾಯದಿಂದ ಹಬ್ಬದ ಅಡುಗೆ ಮಾಡಿಸಿ ನನಗೆ ಬಡಿಸಿ ನನ್ನನ್ನು ತುಂಬು ಹೃದಯದಿಂದ ತಲೆ ನೇವರಿಸಿ, ದೀರ್ಘಕಾಲ ಸುಖ ಸಂತೋಷಗಳಿಂದ ಸಂಸಾರದೊಂದಿಗೆ ಕೀರ್ತಿವಂತನಾಗಿ ಬಾಳು ಎಂದು ಆಶೀರ್ವದಿಸಿ ಕಳಿಸಿಕೊಟ್ಟರು. ಆ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಂದಿನಿಂದಲೂ ಅವರ ಆಶೀರ್ವಾದದಿಂದ, ನಮ್ಮ ಹಿರಿಯರ ಮತ್ತು ಭಗವಂತನ ದಯೆಯಿಂದ ಎಷ್ಟೇ ಕಷ್ಟ ಕಾರ್ಪಣ್ಯಗಳು ಬಂದರೂ ಎಲ್ಲವನ್ನೂ ಭಗವಂತನು ಪಾರು ಮಾಡಿರುವ ಸಂಗತಿ ನನಗೇ ಆಶ್ಚರ್ಯವಾಗಿ ಕಾಣುತ್ತದೆ. ನನ್ನ ತಾಯಿಯ ಆಶೀರ್ವಾದವೇ ನನಗೆ ಯಾವಾಗಲೂ ರಕ್ಷಾಕವಚವಾಗಿದೆ. ೪೦-೪೫ ವರ್ಷಗಳ ಚಿಕ್ಕ ವಯಸ್ಸಿನಲ್ಲೇ ನನ್ನ ತಾಯಿ ದೈವಾಧೀನರಾದರು".
     ಅತ್ತೆ ಆನಂದಲಕ್ಷ್ಮಮ್ಮನ ಬಗ್ಗೆ ಅವರ ಏಕಮಾತ್ರ ಸೊಸೆ ಸೀತಮ್ಮ ನೆನಪಿಸಿಕೊಳ್ಳುವುದು ಹೀಗೆ:
     "ನನ್ನ ಅತ್ತೆ ಬಹಳ ಒಳ್ಳೆಯ ಸ್ವಭಾವದವರು, ಸಂಪ್ರದಾಯಸ್ಥರು, ದೇವಿ ಆರಾಧಕರು. ನಾನು ಹುಟ್ಟಿ ಬೆಳೆದ ಮನೆಯಲ್ಲಿ ತುಂಬಾ ಜನರು, ಆಳು ಕಾಳುಗಳು ಇದ್ದು ಅಲ್ಲಿನ ವಾತಾವರಣವೇ ಬೇರೆ, ಇಲ್ಲಿನ ವಾತಾವರಣವೇ ಬೇರೆ ಆಗಿ ಗಾಬರಿಯಾಗಿತ್ತು. ರಾಗಿ ಮುದ್ದೆ, ರೊಟ್ಟಿ, ಜಾನುವಾರುಗಳಿಗೆ ಹುರುಳಿಗಳನ್ನು ಬೇಯಿಸಿ ಗೊತ್ತಿದ್ದ ನನಗೆ ಮಲೆನಾಡಿನ ಅಡುಗೆ ಗೊತ್ತಿರಲಿಲ್ಲ. ನನ್ನನ್ನು ಆಕಿ,ಈಕಿ ಎಂದು ಸಂಬೋಧಿಸುತ್ತಿದ್ದ ನನ್ನ ಅತ್ತೆ ನನಗೆ ಮಲೆನಾಡಿನ ಕಡೆಯ ಅಡುಗೆ, ತಿಂಡಿಗಳನ್ನು ಮಾಡುವುದನ್ನು ಹೇಳಿಕೊಟ್ಟರು. ಅವರು ತುಂಬಾ ರುಚಿಯಾಗಿ ಪದಾರ್ಥಗಳನ್ನು ಮಾಡುತ್ತಿದ್ದರು. ಅವರು ಶುಚಿತ್ವಕ್ಕೆ ತುಂಬಾ ಗಮನ ಕೊಡುತ್ತಿದ್ದರು. ಮಡಿ ಸಹ ಜಾಸ್ತಿ. ಅಡುಗೆ ಮಾಡಲು ಬಳಸುತ್ತಿದ್ದ ಸೌದೆಗೂ ನೀರು ಚಿಮುಕಿಸಿ ಉಪಯೋಗಿಸಬೇಕಾಗಿತ್ತು. ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದರು. ಆರೋಗ್ಯ ಸರಿಯಿಲ್ಲದಿದ್ದಾಗ ಆಕಿಗೆ ಆರಾಮಿಲ್ಲ ಎಂದು ಹೆಣ್ಣು ಮಕ್ಕಳಿಂದ ಅಡುಗೆ ಮಾಡಿಸುತ್ತಿದ್ದರು.
      "ಅವರು ಒಡವೆಗಳನ್ನು ಮಾರಿ ನಿವೇಶನ ಖರೀದಿಸಿ ಮನೆ ಕಟ್ಟಿಸದಿದ್ದರೆ ಸ್ವಂತ ಮನೆ ಆಗುತ್ತಲೇ ಇರಲಿಲ್ಲ. ಸನ್ನಿ ಬಂದ ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಅವರು ಸೌಮ್ಯವಾಗಿ ಇರುತ್ತಿದ್ದರು. ನನ್ನ ಮದುವೆಯಾಗಿ ಒಂದೆರಡು ವರ್ಷಗಳವರೆಗೆ ಮಾತ್ರ ಬದುಕಿದ್ದ ಅವರು ಮೊಮ್ಮಕ್ಕಳ ಮುಖ ನೋಡಲಿಲ್ಲ. ಅತ್ತೆಯ ತಾಯಿಯವರಿಗೆ ಯಾರೋ ಭವಿಷ್ಯ ಹೇಳಿ ಮಗಳು ಬೇಗ ಸಾಯುತ್ತಾಳೆ ಎಂದು ಹೇಳಿದ್ದರಂತೆ. ಮಗಳು ಅನಾರೋಗ್ಯದಿಂದ ನರಳುತ್ತಿದ್ದುದನ್ನು ನೋಡಿದ್ದ ಅವರು ತಮ್ಮ ಕಣ್ಣ ಮುಂದೆ ತಮ್ಮ ಮಗಳು ಸಾಯುವುದನ್ನು ನೋಡಬಾರದೆಂದು ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡರಂತೆ. ನನ್ನ ಅತ್ತೆಯಿಂದ ನಾನು ಜೀವನದ ಬಹಳಷ್ಟು ವಿಷಯಗಳನ್ನು ಕಲಿತೆ. ಕಷ್ಟಗಳನ್ನು ಎದುರಿಸುವ ರೀತಿ ತಿಳಿದೆ".
      ಪ್ರೀತಿಯ ಅಜ್ಜಿ, ನಿನ್ನ ಆತ್ಮಕ್ಕೆ ಶಾಂತಿ ಇರಲಿ. ನಿನ್ನ ಆಶೀರ್ವಾದದಿಂದಲೇ ನಿನ್ನ ಮೊಮ್ಮಕ್ಕಳು ಈಗ ಚೆನ್ನಾಗಿದ್ದಾರೆ. ಎಲ್ಲಾ ಮೊಮ್ಮಕ್ಕಳ ಪರವಾಗಿ ನಿನಗಿದು ಶ್ರದ್ಧಾಂಜಲಿ.

***********************************
೮. ಸುಬ್ರಹ್ಮಣ್ಯನ ಹೆಗ್ಗಳಿಕೆ

     ಇದೆಲ್ಲಾ ಸರಿ ರಾಯರೇ, ಸುಬ್ರಹ್ಮಣ್ಯಯ್ಯನ ವಿಶೇಷವೇನು ಎಂದು ಕೇಳುತ್ತೀರಿ ಎಂಬುದು ನನಗೆ ಗೊತ್ತು. ನಾನು ಈಗ ಆ ವಿಷಯಕ್ಕೇ ಬರುತ್ತಿದ್ದೇನೆ. ಸುಬ್ರಹ್ಮಣ್ಯಯ್ಯನ ಗುಣ, ಸ್ವಭಾವಗಳ ಬಗ್ಗೆ ತಿಳಿಸುವ ಮುನ್ನ ತಾತನ ಸ್ವಭಾವದ ಬಗ್ಗೆ ವಿಮರ್ಶಿಸಲು ನನ್ನ ಅರ್ಹತೆ ಬಗ್ಗೆ ಹೇಳಿಕೊಂಡುಬಿಡುತ್ತೇನೆ. ಕಂದಾಯ ಇಲಾಖೆಯ ಅಧಿಕಾರಿಯಾಗಿ ಹಲವಾರು ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಸಂದರ್ಭಗಳಲ್ಲಿ ನಾನು ಎಲ್ಲಾ ರೀತಿಯ ಎಲ್ಲಾ ಸ್ತರದ ಜನರ ನಡುವೆ ಬೆರೆತು ಅವರ ಗುಣ ಸ್ವಭಾವಗಳನ್ನು ಗಮನಿಸಿದ್ದೇನೆ. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ ಸಂದರ್ಭಕ್ಕೆ ಬಲಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೆಂಬ ನೆಲೆಯಲ್ಲಿ ಆರು ತಿಂಗಳು ಹಾಸನದ ಕಾರಾಗೃಹದಲ್ಲಿ ಬಂದಿಯಾಗಿ ಕಳ್ಳಕಾಕರು, ಸಮಾಜಘಾತಕರುಗಳೊಂದಿಗೆ ಕಳೆದಿದ್ದೇನೆ. ಇದರಿಂದಾಗಿ  ಸುಮಾರು ಎರಡು ವರ್ಷಗಳ ಕಾಲ ನೌಕರಿಯಿಂದ ಅಮಾನತ್ತಿಗೆ ಒಳಗಾಗಿದ್ದೇನೆ.  ನಂತರದಲ್ಲಿ ಹೊಳೆನರಸಿಪುರದ ಕಾರಾಗೃಹದ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುವ ಅವಕಾಶ, ಅರಕಲಗೂಡು, ಬೆಳ್ತಂಗಡಿ, ಪುತ್ತೂರು, ಕಡಬ, ಬಂಟ್ವಾಳ, ಶಿಕಾರಿಪುರ ತಾಲ್ಲೂಕುಗಳಲ್ಲಿ ತಾಲ್ಲೂಕು ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುವ ಅವಕಾಶಗಳನ್ನೂ ದೇವರು ಒದಗಿಸಿದ್ದಾನೆ. ಜನರ, ಸ್ನೇಹಿತರ, ಬಂಧುಗಳ ಬದಲಾಗುವ ಸ್ವಭಾವಗಳನ್ನು ಹತ್ತಿರದಿಂದ ಕಂಡಿದ್ದೇನೆ. ತಾತನ ಮೊದಲ ಮೊಮ್ಮಗನಾಗಿ ತಾತನ ಕೊನೆಯ ವರ್ಷಗಳಲ್ಲಿ ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ ತಾತನ ಬಗ್ಗೆ ನಾನು ನನ್ನ ಅಭಿಪ್ರಾಯ ಕೊಡಬಲ್ಲೆ.
     ತಾತನ ಬದುಕನ್ನು ಒಟ್ಟಾರೆಯಾಗಿ ನೋಡಿದರೆ ಕಂಡುಬರುವುದೆಂದರೆ ಉದ್ದಕ್ಕೂ ದುರದೃಷ್ಟವನ್ನು ಬೆನ್ನಿಗೆ ಅಂಟಿಸಿಕೊಂಡೇ ಬಂದ ಜೀವ ಅದು. ಬಾಲ್ಯಾವಸ್ಥೆಯಲ್ಲಿಯೇ ತಂದೆ, ತಾಯಿ, ಅಜ್ಜ, ಅಜ್ಜಿ, ಇತರರನನ್ನು ಕಳೆದುಕೊಂಡು ಮಮತೆವಂಚಿತನಾದುದು ಜೀವನದ ದೊಡ್ಡ ದುರಂತ. ಮೊದಲ ಗುರುಗಳು, ಭವಿಷ್ಯವನ್ನು ರೂಪಿಸಬೇಕಾದವರು ಇಲ್ಲವಾದಾಗ ನಾವಿಕನಿಲ್ಲದ ನೌಕೆಯಂತೆ ಹುಟ್ಟೂರು ಸಾಗರ ಬಿಟ್ಟು ಕೊಪ್ಪದ ಅಜ್ಜ ಅಜ್ಜಿಯ (ತಾಯಿಯ ತಂದೆ-ತಾಯಿಯರು) ಆಶ್ರಯದಲ್ಲಿ ಬೆಳೆಯಬೇಕಾಯಿತು. ತಂದೆಯ ಕಡೆಯ ಬಂಧುಗಳ  ಅಕ್ಕರೆ ತಪ್ಪಿಹೋಯಿತು. ಬಹುಷಃ ತಂದೆಯ ಕಡೆಯವರಿಂದ ಯಾವುದೇ ರೀತಿಯ ಸಹಾಯ, ಸಹಕಾರ ಸಿಕ್ಕಿದ ಬಗ್ಗೆ ತಿಳಿದುಬರುವುದಿಲ್ಲ. ವಿವಾಹವಾದ ಹೊಸದರಲ್ಲೇ ಕೊಪ್ಪದ ಅಜ್ಜನೂ ತೀರಿ ಹೋಗಿದ್ದರ ಜೊತೆಗೆ ಅವರ ಮನೆ, ಜಮೀನುಗಳು ಎಲ್ಲವೂ ಸಾಲಕ್ಕಾಗಿ ಬ್ಯಾಂಕಿನಿಂದ ಹರಾಜಾಗಿ ಎಲ್ಲಾ ಆಸ್ತಿಗೂ ಇವರೊಬ್ಬರೇ ಹಕ್ಕುದಾರರಾಗಿದ್ದರೂ ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದು ನಿಲ್ಲಬೇಕಾಗಿ ಬಂದಿದ್ದು ಆಘಾತಕಾರಿ ಸಂಗತಿ. ಪತ್ನಿಯೊಂದಿಗೆ ತಾನು ವಾಸವಾಗಿದ್ದ ದೊಡ್ಡ ಮನೆಯನ್ನು ಬಿಟ್ಟು ಕಣ್ಣೆದುರಿನಲ್ಲೇ ಬಾಡಿಗೆ ಮನೆಯಲ್ಲಿ ಇರಬೇಕಾಗಿ ಬಂದು ಕೈಯಲ್ಲಿ ಉಳಿದಿದ್ದ ಅಲ್ಪ ಹಣ ಮುಗಿಯುವುದರ ಒಳಗೆ ನೌಕರಿ ನೋಡಿಕೊಳ್ಳಬೇಕಾಗಿತ್ತು. ಪತ್ನಿಗೂ ತನ್ನ ಗಂಡನ ಸ್ಥಿತಿಯಿಂದ ಆತಂಕಕ್ಕೆ ಒಳಗಾಗಿ ಮೊದಲ ಎರಡು ಮಕ್ಕಳು ಸತ್ತು ಹುಟ್ಟಿದ್ದು ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿತ್ತು. ನಂತರ ಹುಟ್ಟಿದ ಮಗನಿಗೆ ಮೂರು ತಿಂಗಳಾಗಿದ್ದಾಗ ದಾವಣಗೆರೆಯಲ್ಲಿ ಕೋರ್ಟಿನಲ್ಲಿ ನೌಕರಿ ಸಿಕ್ಕಿದಾಗ ಕೊಪ್ಪ ಬಿಟ್ಟು ಸಂಸಾರ ದಾವಣಗೆರೆಗೆ ವಲಸೆ ಹೋಗಬೇಕಾಯಿತು.  ನಂತರದಲ್ಲೂ ಸತತವಾಗಿ ಐವರು ಮಕ್ಕಳು ಜವರಾಯನ ಪಾಲಾದರು. ಅದರಲ್ಲೂ ಒಬ್ಬ ಮಗ ಶಂಕರ ಐದಾರು ವರ್ಷಗಳ ಕಾಲ ಇದ್ದು ಹೋದಾಗ ದುಃಖ ಹೇಗೆ ತಡೆದಿರಬಹುದು ಗೊತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಪತ್ನಿ ಹಿಸ್ಟೀರಿಯ ಮತ್ತು ಅನೀಮಿಯಗಳಿಗೆ ತುತ್ತಾಗಿ ಕೊನೆಯವರೆಗೂ ನರಳಬೇಕಾಯಿತು. ಚಿಕ್ಕ ವಯಸ್ಸಿನಲ್ಲೇ ಅಂದರೆ ೪೦-೪೫ರ ವಯಸ್ಸಿನಲ್ಲೇ ಪತ್ನಿಯೂ ದೈವಾಧೀನಳಾದಳು. ಒಂದೇ, ಎರಡೇ . . ಸುಬ್ಬಣ್ಣ ಎದುರಿಸಿದ ಆಘಾತಗಳಿಗೆ ಕೊನೆಯಿರಲಿಲ್ಲ. ಮಮತೆ ವಂಚಿತ ಮಕ್ಕಳು ಸಮಾಜಘಾತುಕರಾಗಿ ಬೆಳೆಯುವುದು ಸಾಮಾನ್ಯ. ಆದರೆ ಜೀವನದಲ್ಲಿ ಇಷ್ಟೊಂದು ಆಘಾತಗಳು, ಕಷ್ಟ-ನಷ್ಟಗಳನ್ನು ಅನುಭವಿಸಿದ ನನ್ನ ತಾತ ಸಮಾಜಕಂಟಕರಾಗಿ ಪರಿವರ್ತಿತರಾಗದಿರುವುದಕ್ಕೆ ಪೂರ್ವ ಸಂಸ್ಕಾರದ ಬಲವೇ ಕಾರಣ. ನಿಜಕ್ಕೂ ಇದು ತಾತನ ಹೆಗ್ಗಳಿಕೆಯೇ ಸರಿ.
***********************
೯. ಆಶು ಕವಿ, ಹಾಸ್ಯಗಾರ ಸುಬ್ಬಣ್ಣ

     'ಮಹಾರಾಜಾಧಿರಾಜಾ . . .
     ಕೊತ್ತಂಬರಿ ಬೀಜಾ . . .
     ನಾಗರಾಜಾ . . ತಗೋ ಈ ಕೊಬ್ಬರಿ ಮಿಠಾಯಿ ತಾಜಾ . . .'


     ತಾತ ಈ ರೀತಿ ಹೇಳಲು ಪ್ರಾರಂಬಿಸಿದರೆ ತಾತ ನನಗೇನೋ ತಂದಿದ್ದಾನೆ ಎಂದು ಗೊತ್ತಾಗಿ ಆತನ ಕೈಯನ್ನೋ ಜೇಬನ್ನೋ ನೋಡುತ್ತಿದ್ದೆ. ತಾತ ಸಮಯ ಸಂದರ್ಭಕ್ಕೆ ತಕ್ಕಂತೆ ಪ್ರಾಸಬದ್ಧವಾಗಿ ಹಾಸ್ಯಮಯವಾಗಿ ಮಾತನಾಡುತ್ತಿದ್ದುದು ಎಲ್ಲರಿಗೂ -ವಿಶೇಷವಾಗಿ ಮಕ್ಕಳಿಗೆ- ಇಷ್ಟವಾಗುತ್ತಿತ್ತು. ಚಳಿಗಾಲದಲ್ಲಿ ಒಲೆಯ ಮುಂದೆ ಬಿಸಿ ಕಾಯಿಸಿಕೊಳ್ಳುತ್ತಾ ಮುದುರಿಕೊಂಡು ಕುಳಿತಿದ್ದರೆ  'ಚಳಿ ಚಳಿ ಎಂಬುದು ಮುದುಕಾ . .  ಮಕ್ಕಳ ಕೊರಳಿಗೆ ಪದಕಾ . . 'ಎಂದು ಹಾಡುತ್ತಿದ್ದರು. ಮಕ್ಕಳು ಆಟವಾಡುತ್ತಿದ್ದಾಗ ಬಿದ್ದರೆ 'ಶಿವನೇ . .' ಎಂದು ಹಣೆಯ ಮೇಲೆ ಕೈಯಿಟ್ಟುಕೊಳ್ಳುತ್ತಿದ್ದರು. ಬಿದ್ದ ನೋವು ಮರೆತು ಅವರನ್ನು ನೋಡಿದರೆ ಅವರು ಆ ರೀತಿ ಮಾಡಿದ್ದು ನಮಗಲ್ಲವೆಂಬಂತೆ  'ಶಿವನೀ, ಅಜ್ಜಂಪುರ, ತರೀಕೆರೆ, ಬೀರೂರು, ಕಡೂರು . . 'ಎಂದು ಬಸ್ ಕಂಡಕ್ಟರ್ ಹೇಳುವಂತೆ ಹೇಳುತ್ತಿದ್ದರು. ನಾವು ಗೊಂದಲಕ್ಕೊಳಗಾದಾಗ  'ಕಾಲು ಜಾರಿದರೆ ಅಂಡೂರು' ಎಂದು ಮುಗಿಸುತ್ತಿದ್ದಾಗ ಎಲ್ಲರಿಗೂ ನಗದಿರಲು ಸಾಧ್ಯವೇ ಇರುತ್ತಿರಲಿಲ್ಲ. ಇಂತಹ ಅಸಂಖ್ಯಾತ ಚುಟುಕುಗಳು ತಾತನ ತಲೆಯಲ್ಲಿ ಸಂಗ್ರಹವಾಗಿದ್ದು ಅವುಗಳನ್ನು ಕೇಳುತ್ತಿದ್ದ ಎಲ್ಲರಿಗೂ ಅವರ ಹಾಸ್ಯ ಮೆಚ್ಚುಗೆಯಾಗುತ್ತಿತ್ತು.
     ಒಬ್ಬ ವೈದ್ಯನ ಮುಂದೆ ರೋಗಿಯೊಬ್ಬ 'ನನಗೆ ಜೀವನವೇ ಬೇಸರವಾಗಿದೆ. ಖಿನ್ನತೆಗೆ ಒಳಗಾಗುತ್ತಿರುತ್ತೇನೆ. ಎಲ್ಲಾ ಕಷ್ಟಗಳೂ ನನಗೊಬ್ಬನಿಗೇ ಬಂದಿದೆಯೆಂದು ತೋರುತ್ತದೆ' ಎಂದು ಅಳಲು ತೋಡಿಕೊಂಡನಂತೆ. ಅದಕ್ಕೆ ಆ ವೈದ್ಯ 'ಮನಸ್ಸಿಗೆ ಸಂತೋಷ ನೀಡುವ ಕಾರ್ಯಕ್ರಮಗಳಿಗೆ ಹೋಗು. ಮನಸ್ಸು ಹಗುರವಾಗುತ್ತದೆ. ಈ ಊರಿಗೆ ಬಂದಿರುವ ಸರ್ಕಸ್‌ಗೆ ಹೋಗು. ಸರ್ಕಸ್‌ನ ಬಫೂನ್ ಬಹಳ ಚೆನ್ನಾಗಿ ಹಾಸ್ಯ ಮಾಡುತ್ತಾನೆ. ನನಗೂ ಬೇಜಾರಾಗಿತ್ತು. ಅವನ ಹಾಸ್ಯ ಕಂಡು ಬೇಜಾರು ಹೋಗಿ ಹುಮ್ಮಸ್ಸು ಬಂತು. ನೀನೂ ಒಂದು ಸಲ ಹೋಗಿ ಬಾ' ಎಂದು ಸಲಹೆ ನೀಡಿದನಂತೆ. ಅದಕ್ಕೆ ಆ ರೋಗಿ 'ಅಯ್ಯೋ ಡಾಕ್ಟರೇ, ನಾನೇ ಆ ಬಫೂನ್' ಎಂದನಂತೆ. ನನ್ನ ತಾತನೂ ಸಹ ಆತನಂತೆ ಬದುಕಿನಲ್ಲಿ ತುಂಬಾ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಹಾಸ್ಯಪ್ರಜ್ಞೆ ಕಳೆದುಕೊಳ್ಳಲಿಲ್ಲ. ನೋವು ನುಂಗಿ ಎಲ್ಲರನ್ನೂ ನಗಿಸುತ್ತಿದ್ದ ನಂಜುಂಡ ಅವರು. ಅವರು ಸ್ವತಃ ಕಟ್ಟಿ ಹಾಡುತ್ತಿದ್ದ ಹಾಸ್ಯಮಯ ಹಾಡಿನ ತುಣುಕುಗಳನ್ನು ಕೇಳಿದ್ದ ನನಗೆ ಖುಷಿಯಾಗುತ್ತಿತ್ತು. ಅವುಗಳೆಲ್ಲಾ ತಾತನದೇ ಸ್ವಂತ ರಚನೆಯಾಗಿತ್ತೆಂದು ನನ್ನ ಅನುಭವದಿಂದ ಧೃಢವಾಗಿ ಹೇಳಬಲ್ಲೆ. ಯೋಚಿಸದೆ ಥಟ್ಟಂತೆ ಸಂದರ್ಭಕ್ಕೆ ತಕ್ಕಂತೆ ಇಂತಹ ರಚನೆ ಮಾಡುತ್ತಿದ್ದ ತಾತ ನಿಜಕ್ಕೂ ಪ್ರತಿಭಾವಂತನೇ ಸರಿ. ಆದರೆ ಪ್ರತಿಭೆ ಪ್ರಕಾಶಕ್ಕೆ ಬರಲು ಜೀವನ ಅವಕಾಶ ಕೊಡಲಿಲ್ಲ. ಅದನ್ನೆಲ್ಲಾ ಬರೆದಿಟ್ಟಿದ್ದರೆ ಒಂದು ಅಮೂಲ್ಯ ಭಂಡಾರವಾಗುತ್ತಿದ್ದುದರಲ್ಲಿ ಸಂದೇಹವಿಲ್ಲ.
     ಕೆಳದಿಯ ಡಾ.ಗುಂಡಾಜೋಯಿಸರು ಸುಬ್ರಹ್ಮಣ್ಯಯ್ಯನ ಹಾಸ್ಯ ಪ್ರವೃತ್ತಿಯ ಬಗ್ಗೆ ಹೀಗೆ ಬರೆಯುತ್ತಾರೆ:
     "ಕವಿ ಸುಬ್ರಮಣ್ಯ ಕಷ್ಟದಿಂದ ಬಾಳಿದವರು ಎಂದು ನಮ್ಮ ತಾಯಿ ಹೇಳುತ್ತಿದ್ದುದನ್ನು ಕೇಳಿದ್ದೆ. ಆದರೆ ಅವರನ್ನು ಕಂಡಾಗ ಅದನ್ನು ನುಂಗಿಕೊಳ್ಳುತ್ತಿದ್ದರೋ ಎಂಬಂತೆ ತಮ್ಮ ಹಾಸ್ಯ ಚಟುವಟಿಕೆಯೊಂದಿಗೆ ಹಾಸ್ಯಭರಿತ ಕಥೆ ಹಾಗೂ ವಿಡಂಬನೆಗಳಿಂದ ನಮ್ಮನ್ನು ಸಂತುಷ್ಟಿ ಗೊಳಿಸುತ್ತಿದ್ದುದು ಈಗಲೂ ಮರೆಯಲಾರದಂತಿವೆ, ನನ್ನ ನೆನಪಿನ ಬುತ್ತಿಯಿಂದ ಕಂಡು ಬಂದ ಅಂಶವೊಂದನ್ನು ಮಾದರಿಗಾಗಿ ನಿರೂಪಿಸಲಾಗಿದೆ. ಎಲೆಮರೆಯ ಕಾಯಿಯಂತೆ ಕವಿ ಸುಬ್ರಮಣ್ಯನ ಹಾಸ್ಯ ಕವಿತಾ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ.
               ಆಹ್ವಾನ ಪತ್ರಿಕೆ
     ಶ್ರೀಮತಿ/ಶ್ರೀ ಮಂಥರೆ ಬಿಷ್ಟಭಟ್ಟರು ಮಾಡುವ ಚಮತ್ಕಾರಗಳು. ಶ್ರೀಮತ್ ಸಕಲ ದುರ್ಗುಣ ಸಂಪನ್ನರಾದ, ದೇಶದ್ರೋಹಿಗಳಾದ, ಬ್ರಾಹ್ಮಣ ವಿಘಾತಕರಾದ ಘೋರ ಚಂಡಾಲರಾದ, ಬಹು ನೀಚರಾದ, ಧರ್ಮಭ್ರಷ್ಟ-ಕರ್ಮಭ್ರಷ್ಟರಾದ, ದುರ್ಯೋಧನಾತ್ಮಕ ಅಸೂಯಾಪರರಾದ, ಪರರರಿಗೆ ನೋವುಂಟುಮಾಡುವವರಾದ, ಕೀಚಕ ಹಾಗೂ ಶಕುನಿ ಸ್ವರೂಪರಾದ . . . . .. . . . . .ರಿಗೆ. .
ಅಸ್ವಾಮೀ,
     ನನ್ನ ದುರ್ಮಾರ್ಗಿ ಮಗ ೭೯ ವರ್ಷದ ಕುಮಾರ ಅಧರ್ಮಭಟ್ಟನಿಗೆ ಉಪನಯನ ಮಹೋತ್ಸವವನ್ನು ತಾಮಸ ಕಿರಿಯರು ಮತ್ತು ಅಸೂಯಾಪರ ಹಿರಿಯರು ನೆರವೇರಿಸಲು ನಿಶ್ಚಯಿಸಿರುವುದರಿಂದ ಈ ಅಶುಭ ಕಾರ್ಯಕ್ಕೆ ತಾವುಗಳೆಲ್ಲರೂ ಅಸಕುಟುಂಬ ಅಪರಿವಾರ ಅಸಮೇತರಾಗಿ ಆಗಮಿಸದೇ, ವೃದ್ಧ ವಟುವಿಗೆ ಆಶೀರ್ವದಿಸದೇ, ಯಥೋಚಿತ ಸತ್ಕಾರ ಮತ್ತು ಆತಿಥ್ಯವನ್ನು ಸ್ವೀಕರಿಸದೆ ನನ್ನ ಮನಸ್ಸಂತೋಷಪಡಿಸದೇ ತೊಂದರೆ ಕೊಡುತ್ತಾ ಅಸೂಯಾಪರರಾಗಿ ಹೊಟ್ಟೆಕಿಚ್ಚು ಪಡುತ್ತಾ ಆತಿಥ್ಯ ಸ್ವೀಕರಿಸಬೇಕಾಗಿ ವಿನಂತಿ.

                                   ಇತಿ ಚಮತ್ಕಾರಗಳು
                    ಶ್ರೀಮತಿ ಮಂಥರೆ/ ಶ್ರೀ ಬೋಳಗುಡ್ಡೆ ಬಿಷ್ಟಭಟ್ಟ

ತಮ್ಮ ಆಗಮನಾಭಿಲಾಷಿಗಳು:
ಅಸೂಯಾತಜ್ಞ ದುರ್ಯೋಧನ ಗೋತ್ರದ ಬಂಧುವರ್ಗದವರು ಮತ್ತು
ಕುಟಿಲೋಪಾಯ ತಜ್ಞ ಶಕುನಿ ಗೋತ್ರದ ಬಂಧುಗಳು.

ಪಾವಗಡ ತಾಲ್ಲೂಕು
ಸೇರುಗಡದಲ್ಲಿರುವ
ಅಚ್ಚೇರುಗಡದ ನೌಟಾಸಿನ ಚಟಾಕಪ್ಪನವರಿಗೇ . .


     ಕವಿ ಸುಬ್ರಮಣ್ಯ ವಿರಚಿತ ಇಂತಹ ಹಾಸ್ಯಭರಿತ ವಿಡಂಬನೆಗಳು, ಜನಪದ ಸಂಗ್ರಹಗಳನ್ನು ಅವರ ಬಾಯಿಂದಲೇ ಕೇಳಿದ್ದ ನನಗೆ ಬಹಳಷ್ಟು ಮರೆತು ಹೋಗಿದ್ದು, ನೆನಪಿನ ಬುತ್ತಿಯಲ್ಲಿ ಕಂಡುಬಂದ ಇದನ್ನು ಉದ್ಧರಿಸಿದ್ದೇನೆ. ಹಲವು ಸಂಪುಟಗಳಾಗುವಷ್ಟು ಇವುಗಳು ಜಿ. ನಾರಾಯಣ ಸಂಪಾದಕತ್ವದ ವಿನೋದ ಪತ್ರಿಕೆಗಾದರೂ ಪ್ರಕಟಿಸಲು ಕೈತಪ್ಪಿಹೋಯಿತಲ್ಲಾ ಎಂಬುದಾಗಿ ಕೊರಗುತ್ತಿದ್ದೇನೆ. ನಮ್ಮ ಮನೆಗೆ ಸಂಬಂಧ ಬೆಳೆಸುವ ಉತ್ಕಟೇಚ್ಛೆಯಿದ್ದುದನ್ನು ತಾಯಿಯೊಂದಿಗೆ ತೋಡಿಕೊಂಡಿದ್ದರಂತೆ! ಈ ನಂತರ ಇತ್ತೀಚಿನವರೆಗೂ ಕವಿ ಸುಬ್ರಮಣ್ಯನು ಎಲ್ಲಿದ್ದಾರೋ ಎಂಬ ಸಮಾಚಾರವೇ ಇಲ್ಲದೆ ಸಂಪೂರ್ಣ ಮರೆತುಹೋಗಿತ್ತು.
     ಪ್ರತಿ ಶನಿವಾರ ಸುಬ್ರಹ್ಮಣ್ಯಯ್ಯನವರು ತುಮಕೂರಿಗೆ ಬಂದು ತನ್ನ ತಂಗಿಯ ಮಗ ದಿ. ಸತ್ಯನಾರಾಯಣರವರನ್ನು ಸುಮಾರು ೪-೫ ಕಿ.ಮೀ. ದೂರದಲ್ಲಿದ್ದ ಗರುಡ ದೇವಾಲಯಕ್ಕೆ ಆತನ ಆರೋಗ್ಯ ನಿವಾರಣೆಗಾಗಿ ಕಾಲ್ನಡಿಗೆಯಲ್ಲಿ ಕರೆದೊಯ್ಯುತ್ತಿದ್ದು, ದಾರಿಯಲ್ಲಿ ಅನೇಕ ವಿಧವಾದ ಕಥೆ, ಘಟನೆಗಳನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದರೆಂದು ದಿ. ಸತ್ಯನಾರಾಯಣರವರು ನೆನಪಿಸಿಕೊಳ್ಳುತ್ತಿದ್ದು ಅವರು ವಿಶಾಲ ಹೃದಯಿಗಳೆಂದು ಹೊಗಳುತ್ತಿದ್ದರು.
     ಕೆಳದಿ ಗುಂಡಾಜೋಯಿಸರು ಉಲ್ಲೇಖಿಸಿರುವ ಮಾದರಿಯಲ್ಲೇ 'ಹಾಗಲಕಾಯಿ ಕುಂಬಳಕಾಯಿ ಸೋರೆಕಾಯಿ (ಹ.ಕುಂ.ಶೋ. ಬದಲಿಗೆ) ಮುಸುಂಡಿ ಮೂದೇವಿಗೆ  ಮರಕೋತಿ ರಾಯ ಕಿರಿಕಿರಿ ಕೀರಲನ ಮಗ ಸುಟ್ಟಮೂತಿ ಸೊಟ್ಟಪ್ಪನಿಗೆ ಕೊಟ್ಟು ವಿವಾಹ ಮಾಡುವ ಬಗ್ಗೆ , ಇಂತಹ ಇತರ ವಿಷಯಗಳ ಬಗ್ಗೆ ಸಹ ಏನೇನೋ ಹೇಳುತ್ತಿದ್ದುದು ನನಗೆ ಗೊತ್ತಿದೆ. ಪೂರ್ತಿ ವಿವರ ಗೊತ್ತಿಲ್ಲದಿದ್ದರೂ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಅವರು ಮಾಡುತ್ತಿದ್ದರು. ಅವರು ಎಲ್ಲೇ ಇರಲಿ, ಅವರು ಇರುವ ಕಡೆಯಲ್ಲಿ ನಗು ಇರುತ್ತಿತ್ತು. ಕಷ್ಟ ಮರೆಯಲು, ಮರೆಸಲು ಅವರು ಕಂಡುಕೊಂಡಿದ್ದ ಈ ದಾರಿ ನಿಜಕ್ಕೂ ಅನುಕರಣೀಯವಾದುದಾಗಿದೆ.
*******************

೧೦. ಸುಬ್ರಹ್ಮಣ್ಯಯ್ಯನ ಪಂಚಾಂಗ ಶ್ರವಣ


     ಕೆಳದಿ ಶ್ರೀ ಗುಂಡಾಜೋಯಿಸರು ಕವಿ ಸುಬ್ರಹ್ಮಣ್ಯಯ್ಯನನ್ನು ಕುರಿತು ಹೇಳಿರುವುದನ್ನು ಅವರ ಮಾತುಗಳಲ್ಲೇ ಕೇಳಿ:
     "ದಿನಾಂಕ ೨೯-೩-೧೯೪೮ರಂದು (ಈಗ್ಯೆ ೫೯ ವರ್ಷಗಳ ಹಿಂದೆ) ಪೂಜ್ಯ ನಮ್ಮ ತಂದೆಯವರಿಗೆ ಅಕಾಲ ಮರಣವುಂಟಾಯಿತು. ಅಂತಹ ಸಾಯುವ ವಯಸ್ಸೇನೂ ಅವರಿಗಿರಲಿಲ್ಲ. ಸುಮಾರು ೫೨ ವರ್ಷಕ್ಕೇ ವಿಧಿಯು ಅವರನ್ನು ಕರೆದೊಯ್ದುದು ನಮ್ಮ ದುರ್ದೈವ. ನನಗೆ ಆಗ ಕೇವಲ ೧೭ ವರ್ಷ ವಯಸ್ಸು. ನಮಗೆ ದಿಕ್ಕೇ ತೋಚದಂತಾಯಿತು. ಇನ್ನೂ ನಮ್ಮ ಸಹೋದರಿಯರಿಗೆ ವಿವಾಹವೂ ಆಗಿರಲಿಲ್ಲ. ಸಹೋದರನಿಗೆ ಉಪನಯನವೂ ಆಗಬೇಕಾಗಿದ್ದು ನಿಂತು ಹೋದಂತಾಯಿತು.  ಮೇಲಾಗಿ ನಾನು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದು ಮುಂದಿನ ವಿದ್ಯಾಭ್ಯಾಸದ ಸಮಸ್ಯೆಗಳೂ ನಮ್ಮ ತಾಯಿಗೆ ಕಾಡಲಾರಂಭಿಸಿತು. ಇಂತಹ ಸಂದರ್ಭದಲ್ಲಿ ಎಂದಿಗೂ ಬಾರದಿದ್ದ ಕವಿ ಸುಬ್ರಮಣ್ಯನನ್ನು ದೇವರೇ ಕರೆದುಕೊಂಡು ಬಂದಂತಾಯಿತು. ಇವರ ಪರಿಚಯವೇ ಇಲ್ಲದ ಆ ಕಾಲದಲ್ಲಿ ಸಂಸಾರಸಹಿತ ಕೆಳದಿಯಲ್ಲೇ ನಮ್ಮೊಡನಿದ್ದು, ನಮಗೆಲ್ಲಾ ಮಾರ್ಗದರ್ಶಕರಾಗಿ ರಕ್ಷಿಸಿದುದು ಇಂದಿಗೂ ನಮ್ಮ ನೆನಪಿನಲ್ಲಿ ಹಾಗೆಯೇ ಉಳಿದುಕೊಂಡು ಬಂದಿದೆ. ನಮ್ಮ ತಂದೆಯವರು ಫಾಲ್ಗುಣ ಬಹುಳ ಪಂಚಮಿಯಂದು ದೇಹ ಬಿಟ್ಟಾಗ ಉಗಾದಿ ಹಬ್ಬದ ಹಿಂದಿನ ದಿನಕ್ಕೆ  ಕರ್ಮಗಳೆಲ್ಲವೂ ಮುಗಿಯಿತು. ಕೆಳದಿ ದೇವಸ್ಥಾನದಲ್ಲಿ ಉಗಾದಿಯಂದು ಪಂಚಾಂಗ ಶ್ರವಣ ನಡೆಯಬೇಕಾಗಿತ್ತು. ಈ ಪದ್ಧತಿ ನಿಲ್ಲಬಾರದೆಂದು ಸುಬ್ರಮಣ್ಯ ನಮ್ಮ ತಂದೆಯವರ ಹಳೆಯ ಕಾಗದ ಪತ್ರಗಳನ್ನೆಲ್ಲಾ ಜಾಲಾಡಿಸಿ ಉಗಾದಿ ಫಲದ ಕಡತವನ್ನು ಆಮೂಲಾಗ್ರವಾಗಿ ಅಭ್ಯಸಿಸಿ, ಪಂಚಾಂಗ ಶ್ರವಣವನ್ನು ತಮ್ಮ ಸ್ವಹಸ್ತಾಕ್ಷರದಿಂದಲೇ ಸಿದ್ಧಪಡಿಸಿ ನಡೆಸಿಕೊಟ್ಟುದು ಈಗ ಇತಿಹಾಸ. ಸುಬ್ರಮಣ್ಯ ಬರೆದ ಉಗಾದಿಫಲ ಹಸ್ತಪ್ರತಿಯ ಕೆಲವು ಸಾಲುಗಳು:
     "ಶುಭಮಸ್ತು|| ನಿರ್ವಿಘ್ನಮಸ್ತು|| ಸ್ವಸ್ತಿ ಶ್ರೀ ಜಯಾಭ್ಯುದಯ ನೃಪ ಶಾ.ಶ. ವರುಷ ೧೮೭೧ನೇ ಸರ್ವಧಾರಿನಾಮ ಸಂವತ್ಸರದ ಮಧ್ಯ ಮೇಷ ಸಂಕ್ರಾಂತಿಗೆ ಸಂದ ಶಾಲಿವಾಹನ ಶಕ ವರ್ಷ ೧೮೭೦ ಕಲಿವರ್ಷ ೫೦೫೦ ಕಲಿದಿನ ೧೮೪೪೧೮೬ ಧನಾಯನಾಂಶಃ
     ಅಥ ಸಂವತ್ಸರಸ್ಯ ರಾಜಾನಾಂ ಫಲಾನ್ಯುಚ್ಯಂತೇ ರಾಜಾ ಮಂದೋ ಕುಜೋರ್ ಮಂತ್ರೀ ಸೇನಾನಾಮಂ ಶಶಿಃ ಸಸ್ಯಾನಾಂ ಶುಕ್ರೋ ಧಾನ್ಯಾನಾಮ ಬುಧಃ ಅರ್ಘಾಣಾಮಂ ಚಂದ್ರೋ ಮೇಘಾಣಾಮಂ ಶಶಿಃ ರಸಾನಾಮಂ| ಅರ್ಕೊ ನಿರಸಾಧಿಪತಿ ಗುರು ಅಶ್ವಾನಾಮಂ ಮದಿತೋ ಮಂದೋ ಗಜಾನಾಮಂ| ಮಂ| ಕುಜಃ ಪಶುನಾಮಂ ಬಲರಾಮ ಭಾಗಾನಾಮಂ ಶನಿ ಮಹಿಷ್ಯಾಧಿಪತಿ ರವಿಃ ಉಷ್ಟ್ರಾನಾಮಂ ಶುಕ್ರೋ ದ್ರವ್ಯಾಣಾಂ ಮ| ಸೂರ್ಯೋ ಮೃಗಾಣಾಂ ಮಂ ಬುಧಃ ಸರ್ಪಾಣಾಂ ಮಂ ಚಂದ್ರೋ ವಸ್ತ್ರಾಣಾಂ ಮ ಮಂದೋ . . . ನಾಮಂ ಚಂದ್ರೋ ನಿರಸಾಧಿಪತಿರ್ರವಿಃ ಸ್ತ್ರೀಣಾಂಚಾಧಿಪತಿಶ್ಚಂದ್ರೋ ಯುದ್ದಾನಾಂ ಮ| ಶಶಿ| ಆಜ್ಞಾನಾಂ ಮಂ ಜೀಪೋವ್ಯವಹಾರಾದಿಪ ಶನಿಃ ವ್ಯಾಪಾರಾಧಿಪತಿರ್ಭಾನೋ ಕೋಶಾನಾಮಧಿಪತಿಶ್ಶನಿಃ ಮಾಂಗಲ್ಯಾಧಿಪತಿಃ ಸೂರ್ಯೋ ನರಾನಾಂ ಮ ಗುರುಃ| ವ್ಯಾಘ್ರಾಣಾಂ ಮ | ಸೌಮ್ಯೋ ವೃಕ್ಷಾಣಾಮ ಶಶಿ ಖಗಾನಾಮಶ್ಚಂದ್ರೋ . . . . . ಪತಯಕ್ರಮಾತ್|| ವಿಂಧ್ಯೋತ್ತರೇ ಗುರೋರ‍್ಮಾನೇ ವಿಕಾರಿ ನಾಮ ಸಂವತ್ಸರೇ ವರ್ತಮಾನೇ . . . . ಸರ್ವತ್ರ ಬಹು ಸಸ್ಯಾರ್ಘ ವೃದ್ಧಾಯಃ||
     ಈ ಸಂವತ್ಸರದಲ್ಲಿ ರಾಜರು ಪ್ರಜೆಗಳನ್ನು ಪಾಲನೆ ಮಾಡುವುದರಲ್ಲಿ ನಿರತರಾಗಿಯೂ ವಿರೋಧವಿಲ್ಲದವರಾಗಿಯೂ ಇರುವರು. ಬೆಳಸು ಚೆನ್ನಾಗಿದ್ದರೂ ಕ್ರಯವು ಹೆಚ್ಚು. ಶನೇ ರಾಜತ್ವ ಫಲಂ|| ಮಧ್ಯಾನಿ ಸಸ್ಯಾನಿ ವಿಚಿತ್ರ ವೃಷ್ಟಿಶ್ಚೋರಾಮಯಮೋದ್ಧಕರಾಜಕೋಪಃ| . . . . ಶನಿಯು ರಾಜನಾಗಿರುವುದರಿಂದ ಸಸ್ಯಗಳು ಮಧ್ಯಮವಾಗುತ್ತವೆ. ಮಳೆಯು ವಿಚಿತ್ರವಾಗಿರುತ್ತದೆ. ಕಳ್ಳರ ಭೀತಿ, ರೋಗಭಾಧೆ ಮತ್ತು ರಾಜರಲ್ಲಿ ಕೋಪಗಳು ಹೆಚ್ಚಾಗಿರುತ್ತವೆ. ಹೈನು, ಬೆಳಸು ಮತ್ತು ಚಿಲ್ಲರೆ ಧಾನ್ಯಗಳು ಚೆನ್ನಾಗಿ ಫಲಿಸುತ್ತವೆ. ಕುಜಸ್ಯ ಮಂತ್ರಿತ್ವ ಫಲಂ| ದಹನ ಪ್ರಹರಣ ಶಂಭರ ಮರುದಾಮಯ ಭೀತಿರ ಕುಳಸ್ಯಾತ್| ಕ್ಷಿತಿತನಯ ಸತಿಮಂತ್ರಿಣಿ ಪೂಷಂ ಸಮುಪೈತಿ ಸರ್ವಸಸ್ಯಚಯ| ಕುಜನು ಮಂತಿಯಾಗಿರುವುದರಿಂದ ಜನರಿಗೆ ಅಗ್ನಿ ಆಯುಧ ನೀರು ಗಾಳಿ ರೋಗ ಇವುಗಳಿಂದ ಹೆಚ್ಚಾದ ಭೀತಿಯುಂಟಾಗುತ್ತದೆ. ಎಲ್ಲಾ ಪೈರುಗಳು ವಣಗುತ್ತವೆ. ಚಂದ್ರಸ್ಯ ಸೇನಾಧಿಪತಿತ್ವ ಫಲಂ|| . . . . .ಚಂದ್ರನು ಸೇನಾಧಿಪತಿಯಾಗಿರುವುದರಿಂದ ಮೇಘಗಳು ಭೂಮಿಯಲ್ಲಿ ಮಳೆಯನ್ನು ಸುರಿಸುತ್ತವೆ. ಧಾನ್ಯಗಳಿಗೆ ಬೆಲೆಯು ಹೆಚ್ಚಾಗುತ್ತದೆ. ಪ್ರಜೆಗಳು ಸುಖಿಗಳಾಗಿರುತ್ತಾರೆ. ಗೋವುಗಳು ಹೆಚ್ಚಾಗಿ ಹಾಲನ್ನು ಕೊಡುತ್ತವೆ. . . . ಗುರೋಃ ನೀರಸಾಧಿಫಲಂ|| ಹರಿದ್ರಾ ಪೀತ ವರ್ಣಾನಾಂ ವಸ್ತ್ರಾದೀನಾಂ ತಥೈವಚ|| . . . ಗುರುವು ನೀರಸಾಧಿಪತಿಯಾಗಿರುವುದರಿಂದ ಅರಿಸಿನ ಹಳದೀ ಬಣ್ಣದ ವಸ್ತ್ರಗಳು ಬಟ್ಟೆಗಳು ಸಮೃದ್ಧಿಯಾಗುತ್ತದೆ. ಈ ವರ್ಷ ಬಟ್ಟೆ ಕಂಟ್ರೋಲ್ ಹೋಗುತ್ತದೆ. . . .  ಅಥ ಗುರುಚಾರ ಫಲಂ|| . . . . ಗುರು ಮೂರು ರಾಶಿ ಎಂದರೆ ವೃಶ್ಚಿಕ ಧನುಸ್ಸು ಮಕರ ರಾಶಿಗಳಲ್ಲಿ ಸಂಚರಿಸುವುದರಿಂದ ಭೂಮಿಯು ಏಳು ಕೋಟಿ ಹೆಣಗಳಿಂದ ಕೂಡಿದ್ದಾಗಿರುತ್ತದೆ. ಅಂದರೆ ಪ್ರಪಂಚದಲ್ಲಿ ಏಳು ಕೋಟಿ ಪ್ರಜಾನಾಶವಾಗುವುದು. . . . (ಸುಮಾರು ಮೂರು ದೊಡ್ಡ ಪುಟUಳಾಗುವಷ್ಟು ಉಗಾದಿ ಫಲ ಬರೆದಿದ್ದು ಸ್ವಲ್ಪ ಮಾತ್ರ ಇಲ್ಲಿ ಮಾಹಿತಿಗಾಗಿ ದಾಖಲಿಸಿದೆ).

    "ಜ್ಯೋತಿಷ್ಯದ ಗಂಧವಿಲ್ಲದೆ ಅಲ್ಪ ಕಾಲದಲ್ಲಿ ಅಧ್ಯಯನ ಮಾಡಿ ಉಗಾದಿ ಫಲವನ್ನು ದಿ. ಕವಿ ಸುಬ್ರಹ್ಮಣ್ಯ ಸಿದ್ಧಬಡಿಸಿ ಬರೆದುಕೊಟ್ಟಿರುವುದು ಸಂಪ್ರದಾಯಸ್ಥರಿಗೆ ಅಮೂಲ್ಯ ಕೊಡುಗೆಯಾಗಿದೆ.
     "ನಮ್ಮ ತಂದೆಯ ನಿಧನಾನಂತರ ೨-೩ ತಿಂಗಳುಗಳವರೆಗೆ ನಮಗೆ ಪ್ರತಿದಿನವೂ ಒಂದಲ್ಲ ಒಂದು ಸಮನ್, ವಾರೆಂಟ್‌ಗಳು ಬರುತ್ತಿತ್ತು. ಕೋರ್ಟ್ ಅಮೀನನು ನನಗೆ ಇಲ್ಲಿ ಸಹಿ ಮಾಡು ಎಂದು ಗದರಿಸುತ್ತಾ ಸಹಿ ಮಾಡಿಸಿಕೊಂಡು ಐದು ರೂಪಾಯಿ ಫೀಜು ಎಂದು ಕಿತ್ತುಕೊಂಡು ಹೋಗುತ್ತಿದ್ದನು. ಇದನ್ನು ಗಮನಿಸಿದ ಸುಬ್ರಮಣ್ಯ ಅಮೀನನು ತಂದ ಕಾಗದಗಳಿಗೆಲ್ಲಾ ತಾನೇ ಸಹಿ ಮಾಡಿ, ನಮ್ಮ ಭಾವ ಸೊರಬದ ರಂಗಣ್ಣನವರೊಂದಿಗೆ ತಾವೇ ಕೋರ್ಟಿಗೆ ಹಾಜರಾಗಿ ನಮ್ಮನ್ನು ಪಾರು ಮಾಡಿದ್ದು ಇತಿಹಾಸ.  ಈಗಿನಂತೆ ಆ ಕಾಲದಲ್ಲಿ ಕೆಳದಿಗೆ ಬಸ್ ವಾಹನಾದಿ ಸೌಕರ್ಯಗಳೇ ಇರಲಿಲ್ಲ. ಸಾಗರದಿಂದ ನಡೆದುಕೊಂಡೇ ಬರಬೇಕಾಗಿತ್ತು. ಸುಬ್ರಮಣ್ಯನ ನೆರವಿನಿಂದ ನಮ್ಮ ತಾಯಿಯ ಚಿಕ್ಕಮ್ಮ ಹಾಗೂ ಸೋದರಿ ಸುಬ್ಬಲಕ್ಷ್ಮಮ್ಮನೊಂದಿಗೆ ನಮ್ಮ ಮಾವ ಎಸ್. ಕೆ. ಕೃಷ್ಣಮೂರ್ತಿ ಕೆಳದಿಗೆ ನಮ್ಮ ತಾಯಿಯ ಸಹಾಯಕ್ಕೆ ಧಾವಿಸಿ ಗಹನ ಕಾರ್ಯ ಕೈಗೂಡಿಸಿಕೊಟ್ಟುದೂ ಇತಿಹಾಸ. ಈ ದಿಸೆಯಲ್ಲಿ ಜೀಬಿಕೋಟೆ ಮಾಧವರಾಯರು ನಿರ್ವಹಿಸಿದ ಸಹಾಯ ಹಸ್ತ ಅವಿಸ್ಮರಣೀಯವಾದುದು. ಇವರ ಅಳಿಯನೇ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿದ್ದ ಐ.ಏ.ಎಸ್. ಅಧಿಕಾರಿ ಶ್ರೀ ಜಿ.ವಿ.ಕೆ ರಾಯರು. ನಮ್ಮ ತಾಯಿ ಹಾಗೂ ಸುಬ್ರಮಣ್ಯ ಸೇರಿ ನನ್ನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಏರ್ಪಡಿಸಿದ್ದರಿಂದ ಫೋರ್ಟ್ ಹೈಸ್ಕೂಲಿನಲ್ಲಿ ಜರುಗಿತು".
     ಸುಬ್ರಹ್ಮಣ್ಯಯ್ಯನ ಅಧ್ಯಯನಶೀಲತೆ, ಪ್ರಸಂಗಾವಧಾನ, ಸಮಯ ಪ್ರಜ್ಞೆಗಳಿಗೆ ಈ ಸಂಗತಿಗಳು ಸಾಕ್ಷಿಯಾಗಿವೆ.
********************


೧೧. ಕಳಚಿದ ಕೊಂಡಿ ಸೇರಿತು
(ಚೀಟಿ ಮಾಡಿದ ಪವಾಡ)


     ಚಿ|| ವೆಂಕಟಸುಬ್ಬರಾಯನಿಗೆ ತರ್ಪಣಾದಿಕಾರ್ಯಗಳಲ್ಲಿ ಉಪಯೋಗಿಸ  ಬೇಕಾಗಿರುವ ಹೆಸರುಗಳು:-
                                    ಗೋತ್ರ  ರೂಪ
ಪಿತೃ - - ಸುಬ್ರಹ್ಮಣ್ಯಯ್ಯ-  ಹರಿತಸ  - ವಸು
ಪಿತಾಮಹ - - ವೆಂಕಣ್ಣ  - ಹರಿತಸ -  ರುದ್ರ
ಪ್ರಪಿತಾಮಹ  - -  ಕೃಷ್ಣಪ್ಪ-  ಹರಿತಸ  - ಆದಿತ್ಯ
ಸುಬ್ರಹ್ಮಣ್ಯಯ್ಯನಪ್ರಪಿತಾಮಹ  -  - ವೆಂಕಣ್ಣ  - -ಹರಿತಸ -  ಆದಿತ್ಯ
ಮಾತೃ ಆನಂದಲಕ್ಷ್ಮಮ್ಮ  - -       ಹರಿತಸ -  ವಸು
ಪಿತಾಮಹಿ  - - ಲಕ್ಷಮ್ಮ  - ಹರಿತಸ -  ರುದ್ರ
ಪ್ರಪಿತಾಮಹಿ  - - ಸುಬ್ಬಮ್ಮ -  ಹರಿತಸ  - ಆದಿತ್ಯ
ಸುಬ್ರಹ್ಮಣ್ಯಯ್ಯನಪ್ರಪಿತಾಮಹಿ  - - ಜಾನಕಮ್ಮ  - ಹರಿತಸ  - ಆದಿತ್ಯ
ಮಾತಾಮಹ  - - ವೆಂಕಟಸುಬ್ಬಯ್ಯ
ಮಾತುಪಿತಾಮಹ  - - ಗಣಪರಸಯ್ಯ
ಮಾತುಪ್ರಪಿತಾಮಹ   - -
ಮಾತಾಮಹಿ ಶೇಷಮ್ಮ  - -
ಸುಬ್ರಹ್ಮಣ್ಯಯ್ಯನಜೇಷ್ಠಪಿತೃ - -  ರಾಮಣ್ಣ
ತತ್ಪತ್ನಿ ನರಸಮ್ಮ
ಪುನರಪಿ ತತ್ಪತ್ನಿ  - - ಸುಭದ್ರಮ್ಮ
ತತ್ಪುತ್ರ ನಾರಾಯಣ  - - ಹರಿತಸ -  ವಸು
ಪುನರಪಿ ತತ್ಪುತ್ರ  - - ಹುಚ್ಚೂರಾಯ  - ಹರಿತಸ
ಸುಬ್ರಹ್ಮಣ್ಯಯ್ಯನ ಪಿತೃ ಭಗಿನೀ ಗಂಗಮ್ಮ ಜಮದಗ್ನಿ
ತದ್ಬಾತಾತರು  - - ಕೃಷ್ಣ ಜೋಯಿಸ್  - ಜಮದಗ್ನಿ
ಶೃಶೂರಂ  - - ಸೂರಪ್ಪ  - ಸಿದ್ಧಗತಿ
ಶೃಶ್ರು  - - ಸುಬ್ಬಮ್ಮ  - ಸಿದ್ಧಗತಿ
ಆಚಾರ್ಯ - -  ಅನಂತಭಟ್ಟ  - ಕಾಶ್ಯಪ
ಸ್ವಾಮಿನ್  - - ವೆಂಕಟರಮಣ -  ಕಾಶ್ಯಪ  

     ಇದು  ಸುಬ್ರಹ್ಮಣ್ಯಯ್ಯ ಒಂದು ಚೀಟಿಯಲ್ಲಿ ಬರೆದಿಟ್ಟಿದ್ದ ವಿವರ. ಇದನ್ನು ತನ್ನ ಮಗ ವೆಂಕಟಸುಬ್ಬರಾಯರಿಗೆ ಕೊಟ್ಟಿದ್ದು ಅದನ್ನು ಅವರು  ಯಥಾವತ್ತಾಗಿ ಒಂದು ಪುಸ್ತಕದಲ್ಲಿ ಅವರು ಬರೆದಿಟ್ಟುಕೊಂಡಿದ್ದರು. ಈ ಚೀಟಿ ಒಂದು ದಿನ ಕಳೆದುಹೋಗಿದ್ದ ಸಂಬಂಧಗಳನ್ನು ಕೂಡಿಸುವ ಸೂತ್ರಧಾರಿಯಾಗುವುದೆಂದು ನಾವು ಯಾರೂ ಭಾವಿಸಿರಲಿಲ್ಲ. ಯಾವ ಕಾರಣಗಳಿಗಾಗಿ ಅವರು ಮಕ್ಕಳನ್ನು ಬಂಧುಗಳ ಮನೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ ಮತ್ತು ಪರಿಚಯಿಸಿರಲಿಲ್ಲ ಎಂಬುದು ಗೊತ್ತಿಲ್ಲ. ಮೂಕಮ್ಮನನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದುದು ಮಾತ್ರ ಗೊತ್ತು ಎಂದು ಮಗ ವೆಂಕಟಸುಬ್ಬರಾಯರು ಹೇಳುತ್ತಾರೆ. ಬಂಧುಗಳನ್ನು ಪರಿಚಯಿಸಿರದಿದ್ದರೂ ಅವರುಗಳ ಹೆಸರನ್ನಾದರೂ  ತರ್ಪಣಾದಿಕಾರ್ಯಕ್ಕೆ ಬಳಸುವ ಸಲುವಾಗಿ ಬರೆದುಕೊಟ್ಟಿದ್ದು ಮುಂದೆ ಸಾರ್ಥಕ ರೀತಿಯಲ್ಲಿ ಉಪಯೋಗಕ್ಕೆ ಬಂದಿತು.
     ವೆಂಕಟಸುಬ್ಬರಾಯರು ಪುಸ್ತಕದಲ್ಲಿ ಬರೆದಿಟ್ಟಿದ್ದ ವಿವರಗಳನ್ನು ಅಕಸ್ಮಾತ್ ಆಗಿ ಕಂದಾಯ ಇಲಾಖೆಯ ಅಧಿಕಾರಿಯಾಗಿರುವ ಅವರ ಮಗ ನಾಗರಾಜ(ಲೇಖಕ) ಗಮನಿಸಿ ಸಂಸ್ಕಾರಬಲದಿಂದಲೋ, ದೈವಪ್ರೇರಣೆಯೋ, ಪೂರ್ವಜರ ಆಶೀರ್ವಾದವೋ ಗೊತ್ತಿಲ್ಲ, ಇದನ್ನು ಎಂಟು ವರ್ಷಗಳ ಹಿಂದೆ  ೨೮-೧೦-೨೦೦೦ದ ಬಲಿಪಾಡ್ಯಮಿಯಂದು ಒಂದು ವಂಶವೃಕ್ಷದ ರೀತಿ ಸಿದ್ಧಪಡಿಸಿ ಬಂಧುಗಳಿಗೆ ನೀಡಿದ್ದು ಉಪಯೋಗವಾಯಿತು. ಆಗಲೂ ಸಹ ನಮ್ಮ ಮೂಲ ಸ್ಥಳ ಕೊಪ್ಪ ಎಂದೇ ನಮ್ಮ ಕಲ್ಪನೆಯಾಗಿದ್ದು 'ಕೊಪ್ಪದ ವೆಂಕಣ್ಣನವರ ಅಮರ ವಂಶಾವಳಿ' ಎಂದು ಅದರಲ್ಲಿ ನಮೂದಿಸಿದ್ದೆನು. ನಮ್ಮ ಹೆಸರಿನಲ್ಲಿನ ಕೆ ಅಂದರೆ ಕೊಪ್ಪ ಎಂದೇ ನಾವು ಭಾವಿಸಿದ್ದೆವು. ವರ್ಷಕ್ಕೊಮ್ಮೆ  ಹಾಗೂ ಅಗತ್ಯ ಬಿದ್ದಾಗ ವಂಶವೃಕ್ಷವನ್ನು ಪರಿಷ್ಕರಿಸುತ್ತಿದ್ದೆನು. ನನ್ನ ತಾಯಿಯ ಕಡೆಯ ತುಂಬಾ ದೊಡ್ಡ ಬಳಗ ನೋಡುತ್ತಿದ್ದ ನಮಗೆ ನಮ್ಮ ತಂದೆಯ ಕಡೆಯ ಚಿಕ್ಕ ಬಳಗದ ಬಗ್ಗೆ ಪಿಚ್ಚೆನಿಸುತ್ತಿತ್ತು. ಸಿದ್ಧಪಡಿಸಿದ ವಂಶವೃಕ್ಷದಲ್ಲಿ ಕಂಡು ಬಂದ ಕೆಲವು ಹೆಸರುಗಳವರ ಮಕ್ಕಳು, ಮೊಮ್ಮಕ್ಕಳುಗಳ ವಿವರ ನಮಗೆ ಗೊತ್ತಿರಲಿಲ್ಲ. ಅವರುಗಳನ್ನು ಹೇಗಾದರೂ ಮಾಡಿ ಹುಡುಕಬೇಕು ಎಂಬ ಪ್ರಯತ್ನ ಸಹ ನಡೆಯಿತು. ಯಾವ ಯಾವುದೋ ಸಮಾರಂಭಗಳಲ್ಲಿ, ಊರುಗಳಲ್ಲಿ ಅವರು ಹುಚ್ಚೂರಾಯರ ಮೊಮ್ಮಗ ಅಂತೆ, ರಾಮಣ್ಣನವರ ಸಂಬಂಧಿಗಳಂತೆ  ಇತ್ಯಾದಿ ಕೇಳಿಬಂದಾಗ ಪರಿಚಯಿಸಿಕೊಂಡು ವಿಚಾರಿಸಿದಾಗ ಅವರು ನಮ್ಮ ಗೋತ್ರದವರಲ್ಲ, ಸಂಬಂಧಿಗಳಲ್ಲ ಎಂದು ತಿಳಿದಾಗ ನಿರಾಶೆಯೂ ಆಗುತ್ತಿತ್ತು.
     ರಾಜ್ಯದ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನನ್ನ ತಮ್ಮ ಸುರೇಶ ನಾಲ್ಕು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಹೊಂದಿ ಶಿವಮೊಗ್ಗದಲ್ಲಿ ನೆಲೆಸಿದಾಗ ಅವನಿಗೂ ಸಂಬಂಧಿಗಳನ್ನು ಹುಡುಕುವ ಪ್ರೇರಣೆ ಬಂದು ಕಾರ್ಯಪ್ರವೃತ್ತನಾಗಿ ಯಶಸ್ವಿಯಾದುದು ಈಗ ತಿಳಿದ ಸಂಗತಿ. ಸುರೇಶನ ಅನ್ವೇಷಣೆಗೆ ಸಹಕಾರಿಯಾಗಿ ಅವನ ಮಗ ದೀಪಕ್ ಮತ್ತು ಮಾವ ಶೇಷಗಿರಿರಾಯರೂ ಪ್ರವಾಸ ಮಾಡಿ ವಿವರ ಸಂಗ್ರಹ, ಪರಿಚಯಗಳಿಗೆ ನೆರವಾಗಿದ್ದಾರೆ. ಕೆಳದಿಯ ಸಂಶೋಧನಾ ರತ್ನ ಗುಂಡಾಜೋಯಿಸರ ಬಳಿಯಿದ್ದ ಕವಿ ಮನೆತನದ ವಂಶವೃಕ್ಷಕ್ಕೂ ನಮ್ಮಲ್ಲಿದ್ದ ವಂಶವೃಕ್ಷಕ್ಕೂ ತಾಳೆಯಾಯಿತು. ಪರಸ್ಪರರಲ್ಲಿನ ವಂಶವೃಕ್ಷದ ಕೈಬಿಟ್ಟ ಕೊಂಡಿಗಳು ಸರಿಯಾಗಿ ಕೂಡಿಕೊಂಡವು. ಸಂಬಂಧಿಸಿದ ಬಂಧುಗಳನ್ನು ವಿಚಾರಿಸಲಾಗಿ ಅವರುಗಳೂ ನಮ್ಮ ಗೋತ್ರದವರೇ ಆಗಿದ್ದು ನನ್ನ ತಾತ ಸುಬ್ರಹ್ಮಣ್ಯಯ್ಯನನ್ನು ಕಂಡವರೇ, ತಿಳಿದವರೇ ಆಗಿದ್ದು ಅವರ ಬಗ್ಗೆ ನಮಗಿಂತ ಹೆಚ್ಚು ಗೊತ್ತಿದ್ದವರಾಗಿದ್ದು, ತಾತ ಅವರುಗಳ ಮನೆಗೆ ಹೋಗಿಬರುತ್ತಿದ್ದುದು, ಎಲ್ಲಕ್ಕಿಂತ ಹೆಚ್ಚಾಗಿ ತಾತನನ್ನು ಸಂಬಂಧಿಯಾಗಿ ಗುರುತಿಸಿದುದು, ಇತ್ಯಾದಿ ಸಂಗತಿಗಳು ಸಂಬಂಧ ಸರಪಳಿ ಒಂದಾಗಿರುವುದನ್ನು ಧೃಢಪಡಿಸಿದವು. ಇದು ನಮಗೆ ದೊಡ್ಡ ನಿಧಿ ಸಿಕ್ಕಷ್ಟೇ ಸಂತೋಷವಾಯಿತು.
     ಬೈಬಲ್ ನಲ್ಲಿ ಒಂದು ಕಥೆ ಬರುತ್ತದೆ. ತಂದೆಯ ಮಕ್ಕಳ ಪೈಕಿ ಒಬ್ಬ ತನ್ನ ಪಾಲು ತೆಗೆದುಕೊಂಡು ಎಲ್ಲೋ ದೇಶಾಂತರ ಹೋಗಿ ಕೊನೆಗೆ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ಮನೆಗೆ ವಾಪಸು ಬರುತ್ತಾನೆ. ತಂದೆ ಸಂತೋಷಭರಿತನಾಗಿ ದೊಡ್ಡ ಸಮಾರಂಭ ಏರ್ಪಡಿಸಿ ಊರಿಗೆಲ್ಲಾ ಊಟ ಹಾಕಿಸುತ್ತಾನೆ. ಆಗ ಇನ್ನೊಬ್ಬ ಮಗ ತಾನು ಸದಾಕಾಲ ಮನೆಯಲ್ಲಿದ್ದು ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದರೂ ಅದನ್ನು ಗಮನಿಸದಿದ್ದುದು, ಆದರೆ ಎಲ್ಲಾ ಕಳೆದುಕೊಂಡು ಹಾಳಾಗಿ ಬಂದವನಿಗಾಗಿ ಸಂಭ್ರಮಿಸುತ್ತಿರುವುದಕ್ಕೆ ಆಕ್ಷೇಪಿಸುತ್ತಾನೆ. ತಂದೆ ಕಳೆದುಹೋಗಿದ್ದ ಮಗ ಸಿಕ್ಕಿದ್ದಕ್ಕೆ ಸಂತೋಷಿಸುತ್ತಿರುವುದಾಗಿ ಹೇಳುತ್ತಾನೆ. ನಮ್ಮದು ತಿರುವು ಮುರುವಾದ ಕಥೆ. ಕಳೆದು ಹೋಗಿದ್ದವರೇ ಕಳಚಿಕೊಂಡವರನ್ನು ಹುಡುಕಿದರು, ಸಂಭ್ರಮಿಸಿದರು. ೨೮-೦೧-೨೦೦೭ ರಂದು ಸುರೇಶ ತನ್ನ ಮನೆಯಲ್ಲಿ ಎಲ್ಲಾ ಬಂಧುಗಳನ್ನೂ ಸೇರಿಸಿ ನಾವು - ನಮ್ಮವರು ಎಂಬ ಹೆಸರಿನಲ್ಲಿ ಸಮಾರಂಭ ಏರ್ಪಡಿಸಿ ಒಳ್ಳೆಯ ಕೆಲಸ ಮಾಡಿದ್ದಾನೆ. ಈಗ ಪ್ರತಿ ವರ್ಷ ವಾರ್ಷಿಕ ಸಮಾವೇಶ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ. ಕವಿ ಕುಟುಂಬಗಳ ಪತ್ರಿಕೆ ಕವಿಕಿರಣ ಉತ್ತಮ ಸಂವಹನಾ ಮಾಧ್ಯಮವಾಗಿ ಹೊರಬರಲು ಸಜ್ಜಾಗಿದೆ. ಸಂಬಂಧ ಸರಪಳಿ  ಮತ್ತಷ್ಟು ಗಟ್ಟಿಯಾಗಿ ಹೊಸ ಹೊಳಪಿನಿಂದ ಕಂಗೊಳಿಸಲಿದೆ. ಸುಬ್ರಹ್ಮಣ್ಯಯ್ಯನ ಒಂದು ಚೀಟಿ  ಕಳಚಿದ ಕೊಂಡಿ ಕೂಡಿಸಿತು, ಇಷ್ಟೆಲ್ಲಾ ಒಳ್ಳೆಯ ಬೆಳವಣಿಗೆಗೆ ಕಾರಣವಾಯಿತು.


ಲೇಖಕ ಕಂಡಿದ್ದಂತೆ ಸುಬ್ರಹ್ಮಣ್ಯಯ್ಯನ ಸಹೋದರಿ ಸುಂದರಮ್ಮ
********************

೧೨. ಜೀವನ ಸಂಧ್ಯಾಕಾಲದಲ್ಲಿ

     ನಿವೃತ್ತಿಯ ಅಂಚಿನಲ್ಲಿ ನನ್ನ ತಾತ ಇದ್ದ ಸಂದರ್ಭದಲ್ಲಿ ನಾವು ಭದ್ರಾವತಿಯಲ್ಲಿ ಇದ್ದೆವು. ತಾತ ತನ್ನ ಬದುಕಿನ ಬಗ್ಗೆ ಪರಾಮರ್ಶಿಸಿಕೊಂಡು ತಪ್ಪು ಒಪ್ಪುಗಳನ್ನು ಲೆಕ್ಕ ಮಾಡಿಕೊಳ್ಳುತ್ತಿದ್ದ ಕಾಲ. ನನ್ನ ತಂದೆಯನ್ನು ಅವರು ಮಗೂ ಎಂದೇ ಕರೆಯತ್ತಿದ್ದರು. ತಂದೆಯವರು ಹೇಳುವಂತೆ ಅವರು ಆಗ  ಬದಲಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ಮನೆಯ ಕಡೆಗೆ ಸರಿಯಾಗಿ ನಿಗಾ ಕೊಡದ ಬಗ್ಗೆ ಹಾಗೂ ತನ್ನ ತಪ್ಪುಗಳ ಬಗ್ಗೆ ಅವರಿಗೆ ಪಶ್ಚಾತ್ತಾಪ ಭಾವವಿತ್ತು. ಒಣ ಆಸ್ತಮಾ ಕಾಯಿಲೆಯಿಂದ ಬಳಲಿದ್ದ ಅವರು ಆಗಾಗ್ಗೆ ಉಸಿರಾಟದ ತೊಂದರೆಯಿಂದ ಕಷ್ಟಪಡುತ್ತಿದ್ದರು. ತಾತನನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂಗಿಗೆ ಆಮ್ಲಜನಕದ ಸಿಲಿಂಡರ್ ಪೈಪು ಜೋಡಿಸಿ ಮಲಗಿಸಿದ್ದನ್ನು ಎರಡು ಬಾರಿ ನೋಡಿ ಆಗ ಸಂಕಟಪಟ್ಟಿದ್ದೇನೆ. ಅಂತಹ ಸಂದರ್ಭದಲ್ಲಿ ಚೇತರಿಸಿಕೊಂಡ ನಂತರ ವಿಶ್ರಾಂತಿಗಾಗಿ ಒಂದೆರಡು ತಿಂಗಳು ಭದ್ರಾವತಿಯ ನಮ್ಮ ಮನೆಗೆ ಬಂದು ಇರುತ್ತಿದ್ದರು. ನಿಶ್ಶಕ್ತಿಯಿಂದಾಗಿ ಓಡಾಡಲು ತೊಂದರೆಯಾಗಿದ್ದಾಗ ಕೈ ಹಿಡಿದುಕೊಂಡು ಶೌಚಾಲಯಕ್ಕೆ ನಾನೇ ಕರೆದುಕೊಂಡು ಹೋಗುತ್ತಿದ್ದೆ. ನಾನೇ ನೀರು ತೋಡಿ ಸ್ನಾನ ಮಾಡಿಸುತ್ತಿದ್ದೆ. ಆಗ ಅವರು ನನ್ನನ್ನು ತಬ್ಬಿಕೊಂಡು ನೀನು ನನ್ನಮ್ಮ ಕಣೋ ಎಂದು ಹೇಳುತ್ತಿದ್ದಾಗ ನನಗೆ ಒಂದು ತರಹ ಆಗುತ್ತಿತ್ತು.
     ನನ್ನ ತಂದೆಗೆ ಭದ್ರಾವತಿಯಿಂದ ಚಿತ್ರದುರ್ಗಕ್ಕೆ ವರ್ಗವಾದ ಸಮಯದಲ್ಲಿ ತಾತನಿಗೆ ಸೇವಾ ನಿವೃತ್ತಿಯಾಯಿತು. ಅಲ್ಲಿಗೂ ಅವರು ಬಂದು ಹೋಗಿ ಮಾಡುತ್ತಿದ್ದರು. ರಜಾಕಾಲದಲ್ಲಿ ನಾವೂ ಶಿವಮೊಗ್ಗಕ್ಕೆ ಹೋಗಿ ಬರುತ್ತಿದ್ದೆವು. ನಿವೃತ್ತಿ ವೇತನಕ್ಕಾಗಿ ನನ್ನ ತಾತ ಕಛೇರಿಗೆ ಅಲೆದು ಅಲೆದು ಸುಸ್ತಾದರೂ, ಅವರ ಚಪ್ಪಲಿ ಸವೆಯಿತೇ ಹೊರತು ಸುಮಾರು ಒಂದು-ಒಂದೂವರೆ ವರ್ಷ ಪಿಂಚಣಿ ಮಂಜೂರಾಗಲಿಲ್ಲ. ಆಮೇಲೆ ಮಂಜೂರಾತಿ ಆದೇಶ ಬಂದ ನಂತರ ಖುಷಿಯಾಗಿ ಖಜಾನೆಗೆ ಹೋಗಿ ವಿಚಾರಿಸಿದಾಗ ಆದೇಶದಲ್ಲಿ ತಪ್ಪಿದೆ, ಸರಿಯಾಗಬೇಕು ಎಂದು ಅಲ್ಲಿ ತಿಳಿಸಿದಾಗ ತಾತ ಅಲ್ಲೇ ಕುಸಿದು ಬಿದ್ದಿದ್ದನ್ನು ಕಂಡ ಹತ್ತಿರದ ಕೋರ್ಟಿನ ನೌಕರರೊಬ್ಬರು ಅವರನ್ನು ಉಪಚರಿಸಿ ವಾಹನವೊಂದರಲ್ಲಿ ಮನೆಗೆ ಕರೆದುಕೊಂಡು ಬಿಟ್ಟುಹೋಗಿದ್ದರು. ಆಮೇಲೆ ಅವರ ಆರೋಗ್ಯ ಅಷ್ಟಕ್ಕಷ್ಟೇ ಆಯಿತು. ಪ್ರತಿನಿತ್ಯ ಮನೆಯ ಗೇಟಿನ ಬಳಿ ನಿಂತು ಪೋಸ್ಟ್ ಮ್ಯಾನನನ್ನು ಕಾಯುವುದು, ಸರಿಯಾದ ಪಿಂಚಣಿ ಆದೇಶ ಬರುವುದನ್ನು ನಿರೀಕ್ಷಿಸಿ ನಿರಾಶರಾಗುವುದು ಅವರ ದಿನಚರಿ ಯಾಯಿತು. ಪೋಸ್ಟ್ ಮ್ಯಾನ್‌ಗೆ ಇದು ಎಷ್ಟು ಅಭ್ಯಾಸವಾಯಿತೆಂದರೆ, ದೂರದಿಂದ ಬರುವಾಗಲೇ ಪೋಸ್ಟ್ ಬಂದಿಲ್ಲವೆಂದು ಆತ ಕೈಯಾಡಿಸಿ ಹೋಗುತ್ತಿದ್ದ.

ಇಂತಹುದೇ ಒಂದು ದಿನ (೧೯೬೬ರ ಅಕ್ಟೋಬರ್ ತಿಂಗಳಿನಲ್ಲಿರಬಹುದು - ಕಾರ್ತೀಕ ಬಹುಳ ನವಮಿ) ಪೋಸ್ಟ್ ಮ್ಯಾನ್ ಬಂದು ಹೋದ ಮೇಲೆ ಅವರು ಮನೆಯೊಳಗೆ ಬಂದು ಮಗಳು ಸೀತಾಲಕ್ಷ್ಮಿಗೆ ಕಾಫಿ ಮಾಡಿಕೊಡಲು ಹೇಳಿ ಯಾಕೋ ಮಗುವನ್ನು ನೋಡಬೇಕು ಅನ್ನಿಸುತ್ತಿದೆ ಎಂದು ಚಿತ್ರದುರ್ಗದಲ್ಲಿದ್ದ ಮಗನಿಗೆ ಪತ್ರ ಬರೆದು ಪೋಸ್ಟ್ ಮಾಡಲು ಅಳಿಯ ಕೃಷ್ಣಮೂರ್ತಿಗೆ ತಿಳಿಸಿದರು.  ಈ ಪತ್ರ ತಮ್ಮ ಅಂತಿಮ ಪತ್ರ ಎಂದು ಅವರಿಗೆ ಅನ್ನಿಸಿರಬೇಕು. ಪತ್ರದಲ್ಲಿ ಮಗನ ತೊಡೆಯ ಮೇಲೆ ಮಲಗಿ ಪ್ರಾಣ ಬಿಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದರು.  ಈ ಪತ್ರವನ್ನು ಬಹಳ ಕಾಲದವರೆಗೆ ನನ್ನ ತಂದೆ ಜೋಪಾನವಾಗಿ ಇಟ್ಟುಕೊಂಡಿದ್ದರು. ಕಾಫಿ ಕುಡಿದು ನನಗೆ ನಿದ್ದೆ ಬರುತ್ತಿದೆ, ಎಬ್ಬಿಸಬೇಡ ಎಂದು ಮಗಳಿಗೆ ಹೇಳಿ ಮಲಗಿದರು. ಮಗಳಿಗೆ ಅವರನ್ನು ನಂತರ ಎಬ್ಬಿಸಲು ಆಗಲೇ ಇಲ್ಲ. ಏಕೆಂದರೆ ನನ್ನ ತಾತ ನಿದ್ರೆ ಮಾಡಲು ಮಲಗಿದವರು ಚಿರನಿದ್ರೆಗೆ ಜಾರಿದ್ದರು. . . . . . . ಅಯ್ಯೋ. . . , ನನ್ನ ತಾತ ಆಮೇಲೆ ಏಳಲೇ ಇಲ್ಲ. . . . ಮರುದಿನ ಪೋಸ್ಟ್ ಮ್ಯಾನ್ ಪಿಂಚಣಿ ಆದೇಶದ ಪತ್ರ ತಂದಿದ್ದ. ಆದರೆ ಗೇಟಿನ ಬಳಿ ತಾತ ನಿಂತಿರಲಿಲ್ಲ. ಅದನ್ನು ಪಡೆಯಲು ನನ್ನ ತಾತನೇ ಇರಲಿಲ್ಲ. . . . !
     ಟೆಲಿಗ್ರಾಮ್ ಮೂಲಕ ಅಂದು ಸಂಜೆ ಐದು ಗಂಟೆ ಸಮಯಕ್ಕೆ ವಿಷಯ ತಿಳಿದ ತಕ್ಷಣ ಕೋರ್ಟಿನಲ್ಲಿದ್ದ ನನ್ನ ತಂದೆ ಶಿವಮೊಗ್ಗಕ್ಕೆ ಹೋಗಲು ಆ ಸಮಯಕ್ಕೆ ಇದ್ದ ಒಂದೇ ಬಸ್ಸಿನಲ್ಲಿ ಧಾವಿಸಿ ಹೋಗುವ ಮುನ್ನ ಕೋರ್ಟಿನಲ್ಲಿ ಅವರ ಸಹೋದ್ಯೋಗಿಗಳಿಗೆ ತುರ್ತು ವೆಚ್ಚಕ್ಕಾಗಿ ಹಣವನ್ನು ನನ್ನ ಮೂಲಕ ಕಳುಹಿಸಿಕೊಡಲು ತಿಳಿಸಿಹೋಗಿದ್ದರು. ಮರುದಿನ ನಾನು ನನ್ನ ತಂದೆ ಕೆಲಸ ಮಾಡುತ್ತಿದ್ದ ಕೋರ್ಟಿಗೆ ಹೋದಾಗ ನನ್ನ ತಂದೆಯ ಸಹೋದ್ಯೋಗಿಗಳು (ಪರಮೇಶ್ವರಯ್ಯ, ಶ್ರೀನಿವಾಸರಾವ್) ಹಣ ಸಂಗ್ರಹಿಸಿ ಐವತ್ತೈದು ರೂಪಾಯಿ ಕೊಟ್ಟರು. ನಾನು ಆಗ ಎಸ್.ಎಸ್.ಎಲ್.ಸಿ.ಯಲ್ಲಿ ಓದುತ್ತಿದ್ದೆ. ಆ ದುಡ್ಡನ್ನು ತೆಗೆದುಕೊಂಡು ನಾನು ಶಿವಮೊಗ್ಗಕ್ಕೆ ಹೋದೆ. ಆಗ ಬಹುಶಃ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಸ್ ಪ್ರಯಾಣದರ ಎರಡು ರೂಪಾಯಿ ಇದ್ದಿರಬಹುದು. ಶಿವಮೊಗ್ಗ ತಲುಪಿದಾಗ ಸಾಯಂಕಾಲ ಸುಮಾರು ಐದು ಗಂಟೆಯಿರಬಹುದು. ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ ಒಂದು ರೀತಿಯ ಭ್ರಮೆ ಆವರಿಸಿದಂತಾಯಿತು. ಅತೀಂದ್ರಿಯ ಅನುಭವ ಅಂತಲೋ ಅಥವಾ ಇನ್ನೇನೋ ಗೊತ್ತಿಲ್ಲ, ಇದನ್ನು ಓದುಗರ ನಿರ್ಣಯಕ್ಕೇ ಬಿಡುತ್ತೇನೆ. ಬಸ್ ನಿಲ್ದಾಣದಿಂದ ಮನೆಗೆ ಸುಮಾರು ೮-೧೦ ನಿಮಿಷದ ದಾರಿ. ಆದರೆ ನಾನು ಎಲ್ಲೆಲ್ಲೋ ಸುತ್ತಾಡಿ ಮನೆಗೆ ಬಂದಾಗ ರಾತ್ರಿ ಎಂಟೂವರೆ ಗಂಟೆಯಿರಬಹುದು. ನನ್ನ ಜೊತೆಯಲ್ಲಿ ತಾತ ಇದ್ದಾರೆ ಎಂದು ಅನ್ನಿಸುತ್ತಿತ್ತು. ಭ್ರಮಾಧೀನ ಸ್ಥಿತಿಯಲ್ಲಿ ಎಲ್ಲಿಗೆ ಹೋಗಿದ್ದೆ, ಏಕೆ ಹೋಗಿದ್ದೆ ಎಂಬುದು ನನಗೆ ಗೊತ್ತಿಲ್ಲ. ಮನೆಯಲ್ಲಿ ನನ್ನ ತಂದೆ ಮತ್ತು ಇತರ ಬಂಧುಗಳು ಇದ್ದರು. ಅಲ್ಲಿ ಮೌನ ಮಡುಗಟ್ಟಿತ್ತು. ತಾತ ಇರುತ್ತಿದ್ದ ಕೋಣೆಯಲ್ಲಿ ಒಂದು ಹಣತೆ ಹಚ್ಚಿಡಲಾಗಿತ್ತು. ಮನೆಯಲ್ಲಿ ವಿದ್ಯುತ್ ಸೌಕರ್ಯ ಇಲ್ಲದಿದ್ದರಿಂದ ಅಲ್ಲೊಂದು ಇಲ್ಲೊಂದು ಲಾಟೀನಿನಿಂದ ಮಂದ ಬೆಳಕು ಬರುತ್ತಿತ್ತು. ಲಾಟೀನಿನ ಬೆಳಕಿಗಿಂತ ಹಣತೆಯ ಬೆಳಕೇ ಹೆಚ್ಚು ಪ್ರಖರವಾಗಿತ್ತು. ನಾನೂ ಮೌನವಾಗಿ ಎಲ್ಲರನ್ನೂ ನೋಡುತ್ತಿದ್ದೆ. ನನಗೆ ತಾತ ಅಲ್ಲೆಲ್ಲೋ ಇದ್ದಾರೆ, ನನ್ನನ್ನು ನೋಡುತ್ತಿದ್ದಾರೆ ಅಂತಲೇ ಭಾಸವಾಗುತ್ತಿತ್ತು. ತಾತ ಇದ್ದಾರೆ ಅನ್ನಿಸಿದ ಕಡೆ ನೋಡಿದರೆ ಅಲ್ಲೇನೂ ಇರುತ್ತಿರಲಿಲ್ಲ. ಭ್ರಮಾಧೀನನಾಗಿಯೇ ಅಂದಿನ ದಿನ ಕಳೆಯಿತು. ಮರುದಿನ ನಾನೊಬ್ಬನೇ ತಿರುಗಿ ಚಿತ್ರದುರ್ಗಕ್ಕೆ ಹೋಗಲು ಬಸ್‌ನಲ್ಲಿ ಕುಳಿತಾಗಲೇ ನಾನು ತಾತನನ್ನು ನೆನೆಸಿಕೊಂಡು ಅತ್ತಿದ್ದು. ಅಲ್ಲಿಯವರೆಗೂ ನನಗೆ ಅಳು ಬಂದಿರಲಿಲ್ಲ.  ತಾತನ ದೇಹಾವಸಾನವಾಯಿತು. ಆತ ಇನ್ನು ಮುಂದೆ ನಮ್ಮ ಜೊತೆಗೆ ಇರುವುದಿಲ್ಲ ಎಂಬ ಕಲ್ಪನೆ ನನಗೆ ಅಸಹನೀಯವಾಗಿತ್ತು.
     ತಾತನ ಜೀವನಯಾನ ಅಂತ್ಯ ಕಂಡಿತ್ತು. ಆದರೆ ತಾತನ ನೆನಪು ನಮ್ಮಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ನನ್ನ ತಾತ ಇದ್ದಾರೆ . . . . ಹೌದು . . . . . ಇದ್ದಾರೆ.

************************

೧೩. ಕವಿ ಸುಬ್ರಹ್ಮಣ್ಯಯ್ಯನ ವಂಶಾವಳಿ

ವಂಶಮೂಲವನರಸಿ ಜಾಡರಿತು ಸಾರೆ|
ಜಾಡು ಮುಗಿದೆಡೆಯಲ್ಲಿ ಜೀವಾಮೃತ ಧಾರೆ||
ಮುನ್ನೂರು ವರ್ಷಗಳ ಹಾದಿಯಿದು ಜಾಣಾ|
ಹತ್ತು ತಲೆಮಾರುಗಳ ಯಶಗೀತೆ ಕಾಣಾ||


   ಗೋತ್ರವದು ಹರಿತಸ ಸೂತ್ರ ಬೋಧಾಯನ|
   ಯಜುಃಶ್ಶಾಖಾ ಸ್ಮಾರ್ತ ವಿಪ್ರೋತ್ತಮರೆ ಪಾವನ||
   ಜಯಅಂಬೆ ಜಗದಂಬೆ ಕೊಲ್ಲೂರು ಮೂಕಾಂಬೆ|
   ಹರಸೆಮ್ಮ ಕುಡಿಗಳನು ಕಾಪಿಟ್ಟು ಸಲಹೆಂಬೆ||


ಹತ್ತು ತಲೆಮಾರಿನ ಮುಕುಟಮಣಿ ಲಿಂಗಣ್ಣ|
ಕೆಳದಿ ಬಸಪ್ಪರಾಯನಾಸ್ಥಾನ ಕವಿಯಣ್ಣ||
ಕೆಳದಿ ನೃಪವಿಜಯ ದಕ್ಷಾಧ್ವರ ವಿಜಯ ಆಹಾ|
ಪಠಿಸಿದರೆ ಶುಭವಕ್ಕೆ ಶಿವಪೂಜಾ ದರ್ಪಣ||


   ಪುತ್ರರತ್ನಗಳೆರಡು ಶಾಂಭಟ್ಟ ಮತ್ತೆ ವೆಂಕಣ್ಣ|
   ಕೆಳದಿ ರಾಮೇಶ್ವರನ ಕೃಪೆಯು ಅಪಾರವಣ್ಣ||
   ವೆಂಕಣ್ಣನ ವಿಜಯವದು ನರಹರಿ ವಿಜಯ|
   ಹಾಡಿ ನಲಿಯಬೇಕವನ ಕೀರ್ತನೆಗಳ ಪರಿಯ||


ಮೂರನೆಯ ಮೆಟ್ಟಲಲಿ ಶಿವರಾಮ ಸುಬ್ಬಣ್ಣ|
ಗಾನನಿಧಿ ವೆಂಕಣ್ಣನ ವಂಶ ಬೆಳಗಿದರಣ್ಣ||
ಸುಬ್ಬನ ಕೃತಿಯಮರ ರುಕ್ಮಿಣಿ ಸ್ವಯಂವರ|
ಪಾರಿಜಾತ ರಚಿಸಿದನೆ ಯಕ್ಷಗಾನ ಚತುರ||


   ಸುಬ್ಬಾಭಟ್ಟರ ಮಗನೆ ಸಹೃದಯಿ ವೆಂಕಣ್ಣ|
   ಜಾನಕಿಯ ಕೈಪಿಡಿದು ಮುನ್ನಡೆದನಣ್ಣ||
   ಏಳೇಳು ಜನ್ಮದ ಪುಣ್ಯ ವಿಶೇಷವಣ್ಣ|
   ಜನಿಸಿದನೆ ಕೃಷ್ಣ ತರಲು ಬಾಳಲಿ ಬಣ್ಣ||


ಜನಮನದ ಕವಿ ಕೃಷ್ಣಪ್ಪ ಮಡದಿ ಸುಬ್ಬಮ್ಮ|
ಹದವರಿತು ಬಾಳಿರಲು ಜೀವನದಿ ಸುಖವಪ್ಪ||
ಕೆಳದಿ ರಾಯರ ಚರಿತೆ ರೀತಿನೀತಿಗಳು|
ಲೋಕ ಮೆಚ್ಚಿರ್ಪ ತೆರದಿ ಬರಹದಲಿ ಒಪ್ಪ||


   ಕೃಷ್ಣಪ್ಪ ಸುಬ್ಬಮ್ಮ ಬಯಸಿ ಪಡೆದಿಹರು|
   ಮಕ್ಕಳೈವರು ರಾಮಣ್ಣ ವೆಂಕಣ್ಣ ಲಿಂಗಣ್ಣ||
   ಗಂಗೆ ತುಂಗೆಯರು ಮುಂಗೈಯರಗಿಳಿಯರು|
   ಆರನೆಯ ಪೀಳಿಗೆಯ ಕವಿವಂಶ ತಿಲಕರು||


ಅಗ್ರಜ ರಾಮಣ್ಣನ ಬಾಳರಸಿ ನರಸಿಯ|
ಕಾಲನರಸಿರಲು ಕರಪಿಡಿದಳೈ ಭದ್ರೆ ಸುಭದ್ರೆ||
ನಾರಾಯಣ ಶ್ರೀಕಂಠ ಸಿರಿಕುಡಿಗಳೆರಡು|
ನಡೆದು ಮುಂದಡಿಯಿಡಲು ಬಾಳೆಲ್ಲ ಸೊಗಡು||


   ರಾಮಣ್ಣನನುಜ ವೆಂಕಣ್ಣನೆಮ್ಮ ಮುತ್ತಾತನಣ್ಣ|
   ಸುಖ ದುಃಖ ಸಮಭಾಗಿ ಮುತ್ತಜ್ಜಿ ಲಕ್ಷ್ಮಮ್ಮ||
   ಸರಳ ಸಜ್ಜನನು ವೆಂಕಣ್ಣ ಅಜ್ಞಾತ ಕವಿಯು|
   ಕುಲಪುತ್ರ ಸುಬ್ರಹ್ಮಣ್ಯ ವರಪುತ್ರಿ ಸುಂದರಿಯು||


ಕವಿ ಸುಬ್ರಹ್ಮಣ್ಯಯ್ಯ ಆಶುಕವಿ ತಾನಯ್ಯ|
ಕಾಲನವಕೃಪೆಯು ವಿಧಿಯಟ್ಟಹಾಸವು||
ಮಮತೆ ವಂಚಿತನನಾಥ ಬಾಲಸುಬ್ಬಯ್ಯ|
ಮಾತಾಮಹನೊಲುಮೆ ಕೊಪ್ಪಕೆಳೆತಂದಿತಯ್ಯ||


   ಸುಬ್ರಹ್ಮಣ್ಯಯ್ಯನರ್ಧಾಂಗಿ ಆನಂದಲಕ್ಷ್ಮಿಯು|
   ಮಾನಸಿಕ ಕ್ಲೇಷದಿಂದಾನಂದ ನಿಶ್ಶೇಷವು||
   ಮಾತಾಮಹನ ನೆನಪು ಹಚ್ಚಹಸಿರಯ್ಯ|
   ಮಗನಿಗಿಟ್ಟ ಹೆಸರೆ ವೆಂಕಟಸುಬ್ಬರಾಯ||


ಸೀತೆ ನಾಗರತ್ನರು ಪ್ರೀತಿಯ ಕುವರಿಯರು|
ಮಕ್ಕಳೊಡನಾಟದಿ ನೋವ ಮರೆತಿಹರು||
ಧಾರಾಳತನದಿಂದ ಆಸ್ತಿ ಪಾಸ್ತಿಯದು ನಷ್ಟ|
ಕೋರ್ಟಿನಲಿ ಕಾಪಿಸ್ಟ ಸುಬ್ಬಣ್ಣ ಎಲ್ಲರಿಗಿಷ್ಟ||


   ಮಕ್ಕಳನು ನೆಲೆಗೊಳಿಸಿ ಸೇವೆಯಿಂ ನಿವೃತ್ತ|
   ಕಳೆಯಿತೆರಡು ವರ್ಷ ಪಿಂಚಿಣಿಯ ಕಾಯುತ್ತ||
   ಪಿಂಚಿಣಿಯ ಆದೇಶ ತಂದಿರಲು ಅಂಚೆಯಣ್ಣ|
   ಕೆಲಕಾಲವೇ ಮುನ್ನ ಒಯ್ದಿದ್ದ ಜವರಣ್ಣ||


ಸುಬ್ರಹ್ಮಣ್ಯಯ್ಯನಮರನೆಮ್ಮ ನೆನಪಿನಲಿ|
ನೋವು ನುಂಗಿ ನಕ್ಕ ನಂಜುಂಡ ಬಾಳಿನಲಿ||
ಆಶುಕವಿಯಾಗಿ ಬಾಲರಿಗೆ ಪ್ರಿಯನಾಗಿ|
ಬಾಳಿದಾ ಅಜ್ಜನಿಗೆ ನಮಿಪೆವೂ ಶಿರಬಾಗಿ||


   ಸಾಷ್ಟಾಂಗ ನಮನ ಹೆತ್ತಮ್ಮ ಸೀತಮ್ಮಗೆ|
   ಪೂಜ್ಯಪಿತ ಶ್ರೀ ವೆಂಕಟಸುಬ್ಬರಾಯರಿಗೆ||
   ಅರೆಘಳಿಗೆ ಬಿಟ್ಟಿರದ ಆದರ್ಶ ಜೋಡಿಗೆ|
   ಹರಸಲ್ಕೆ ಶುಭವ ಮಕ್ಕಳೈವರ ಪಾಲಿಗೆ||

**************************

೧೪. ಮುಗಿಸುವ ಮುನ್ನ

      ಒಂದು ಪುಟ್ಟ ಮಗು ಬಂಗಾರದ ಬಣ್ಣದ ಕಾಗದವನ್ನು ಹರಿದು  ಒಂದು ಸಣ್ಣ ರಟ್ಟಿನ ಪೆಟ್ಟಿಗೆಯ ಸುತ್ತಾ ಅಂಟಿಸುತ್ತಿದ್ದುದನ್ನು ಕಂಡ ಮಗುವಿನ ತಂದೆ ಮಗುವಿಗೆ 'ಆ ಕಾಗದಕ್ಕೆ ಎಷ್ಟು ಬೆಲೆ ಗೊತ್ತಾ?' ಎಂದು ಗದರಿಸುತ್ತಾನೆ. ಆ ಮಗು 'ಪ್ರಸೆಂಟೇಶನ್ ಪ್ಯಾಕ್ ಮಾಡುತ್ತಿದ್ದೀನಿ, ಅಪ್ಪಾ' ಎಂದು ಹೇಳುತ್ತದೆ. ಹೇಗೂ ಕಾಗದ ಹರಿದಾಗಿದೆಯಲ್ಲಾ ಎಂದು ತಂದೆ ಸುಮ್ಮನಾಗುತ್ತಾನೆ. ಮರುದಿನ ತಂದೆಗೆ ಆ ವಿಷಯ ನೆನಪಾಗಿ ಮಗುವನ್ನು 'ಏನದು ಪ್ರಸೆಂಟೇಶನ್?' ಎಂದು ವಿಚಾರಿಸಿದಾಗ 'ನೀನೇ ನೋಡು' ಎಂದು ಮಗು ಹೇಳುತ್ತದೆ. ತಂದೆ ಕುತೂಹಲದಿಂದ ಬಾಕ್ಸ್ ತೆಗೆದು ನೋಡಿದಾಗ ಅದು ಖಾಲಿಯಾಗಿದ್ದುದನ್ನು ಕಂಡು ಸಿಟ್ಟಿಗೆದ್ದು ಒಂದು ಪೆಟ್ಟು ಕೊಟ್ಟು 'ಯಾರಿಗೂ ಖಾಲಿ ಬಾಕ್ಸ್ ಕೊಡಬಾರದು. ಅದು ಸರಿಯಲ್ಲ ಅಂತ ಗೊತ್ತಿಲ್ಲವಾ?' ಎಂದು ಬೈಯುತ್ತಾನೆ. ಮಗು ಅಳುತ್ತಾ 'ಅಪ್ಪಾ, ಆ ಪ್ರಸೆಂಟೇಶನ್ ನಿನಗೇ ಅಪ್ಪಾ. ಆದು ಖಾಲಿಯಲ್ಲ. ಅದರಲ್ಲಿ ನನ್ನ ಪ್ರೀತಿಯ ಅಪ್ಪನಿಗೆ ನನ್ನ ಮುತ್ತುಗಳನ್ನು ತುಂಬಿ ಇಟ್ಟಿದ್ದೇನೆ' ಎಂದು ಹೇಳುತ್ತದೆ. ತಂದೆಗೆ ಭಾವನೆಗಳ ಕಟ್ಟೆ ಒಡೆದು ಮಗುವನ್ನು ಅಪ್ಪಿ ಮುದ್ದಾಡುತ್ತಾನೆ. ಸ್ವಲ್ಪ ದಿನಗಳ ನಂತರದಲ್ಲಿ ಅಪಘಾತದಲ್ಲಿ ಮಗು ಸಾಯುತ್ತದೆ. ಮಗುವಿನ ತಂದೆ ಕೊರಗುತ್ತಾ ತಾನು ಸಾಯುವವರೆಗೂ ಆ ಪುಟ್ಟ ರಟ್ಟಿನ ಪೆಟ್ಟಿಗೆಯನ್ನು ತನ್ನ ಜೊತೆಗೇ ಜೋಪಾನವಾಗಿ ಇಟ್ಟುಕೊಂಡಿರುತ್ತಾನೆ. ಡಾ. ಭರತ್‌ಚಂದ್ರ ರವರು ಬರೆದ ‘Motivation Plus’  ಎಂಬ ಪುಸ್ತಕದಲ್ಲಿನ ಒಂದು ಲೇಖನದಲ್ಲಿ ಉಲ್ಲೇಖವಾಗಿರುವ ಈ ಘಟನೆ ಉತ್ಕಟ ಪ್ರೀತಿಯ ದ್ಯೋತಕವಾಗಿದೆ.
     ನಾನು ನನ್ನ ತಾತನ ಬಗ್ಗೆ ಬರೆಯುವಾಗ ಇಂತಹುದೇ ತೀವ್ರ ಭಾವಪರವಶತೆಗೆ ಒಳಗಾಗಿದ್ದೇನೆ. ಯಾವ ಸಂದರ್ಭಗಳ ಕುರಿತು ಬರೆದಿದ್ದೇನೋ ಆಯಾ ಸಂದರ್ಭಗಳಲ್ಲಿ ನನ್ನನ್ನೂ ಪ್ರತ್ಯಕ್ಷದರ್ಶಿಯಾಗಿ ಕಲ್ಪಿಸಿಕೊಂಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಸಂತೋಷಪಟ್ಟಿದ್ದೇನೆ, ದುಃಖಪಟ್ಟಿದ್ದೇನೆ. ತಾತನ ಸಾವಿನ ಬಗ್ಗೆ ಬರೆಯುವಾಗ ಯಾರಿಗೂ ಕಾಣದಂತೆ ತುಂಬಾ ಅತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ನನ್ನನ್ನು ಕಂಡಿದ್ದವರು ಇವನು ಯಾಕೆ ಸುಮ್ಮಸುಮ್ಮನೆ ಒಬ್ಬನೇ ನಗುತ್ತಿದ್ದಾನೆ, ಯಾಕೆ ಪೆಚ್ಚಾಗಿದ್ದಾನೆ ಎಂದು ಆಶ್ಚರ್ಯಪಟ್ಟು ವಿಚಾರಿಸಿದ ಪ್ರಸಂಗವೂ ಎದುರಾಗಿದೆ. ನಾನು ಏಳೆಂಟು ವರ್ಷದವನಿದ್ದಾಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿದ್ದ ದೊಡ್ಡ ನೀರಿನ ಓವರ್ ಹೆಡ್ ಟ್ಯಾಂಕ್‌ನ ಏಣಿ ಹತ್ತಿ ತುದಿಯವರೆಗೆ ಏರಿ ನಂತರದಲ್ಲಿ ಇಳಿಯಲು ಭಯಪಟ್ಟು ಅಳತೊಡಗಿದಾಗ ಜೊತೆಗಿದ್ದ ನನ್ನ ತಂಗಿ, ತಮ್ಮಂದಿರು ಮನೆಗೆ ಓಡಿ ತಾತನನ್ನು ಕರೆದುಕೊಂಡು ಬಂದಿದ್ದರು. ಅವರು ಧೈರ್ಯ ಹೇಳಿ ಚತುರೋಪಾಯಗಳಿಂದ ನನ್ನನ್ನು ಕೆಳಗೆ ಇಳಿಯುವಂತೆ ಮಾಡಿದಾಗ ಬಿಟ್ಟ ನಿಟ್ಟುಸಿರು, ಅವರ ಕಣ್ಣುಗಳಲ್ಲಿದ್ದ ಗಾಬರಿ, ಆತಂಕ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬದುಕಿನುದ್ದಕ್ಕೂ ದುರದೃಷ್ಟದ ಸರಮಾಲೆಯನ್ನೇ ಎದುರಿಸಿದ ತಾತ ಕೊನೆಯಲ್ಲಿ ಪಿಂಚಣಿಗಾಗಿ ಎರಡು ವರ್ಷ ಅಲೆದಾಡಿದರೂ ಪಿಂಚಣಿ ಸಿಗದೆ ಅವರು ಸತ್ತ ಮರುದಿನದಂದು ಮಂಜೂರಾತಿ ಆದೇಶ ಬಂದಿದ್ದು ವಿಧಿಯ ಕ್ರೂರ ಅಣಕವಾಗಿದ್ದು ದುರದೃಷ್ಟದೊಂದಿಗೆ ಬದುಕು ಆರಂಭಗೊಂಡು ದುರದೃಷ್ಟದೊಂದಿಗೇ ಅಂತ್ಯ ಕಂಡ ತಾತನ ಬಗ್ಗೆ ನೊಂದಿದ್ದೇನೆ. ಬದುಕಿನ ಜಂಜಾಟ, ಸಾಲ ಸೋಲಗಳ ಸುಳಿ, ಕಷ್ಟ ನಷ್ಟಗಳಿದ್ದರೂ ಹಾಸ್ಯ ಪ್ರಸಂಗಗಳನ್ನು ಹೇಳಿ ಇತರರನ್ನು ರಂಜಿಸುತ್ತಿದ್ದ ಅವರ ಬಗ್ಗೆ ಹೆಮ್ಮೆ ಪಟ್ಟಿದ್ದೇನೆ. ನನ್ನನ್ನು ಪ್ರೀತಿಪೂರ್ವಕವಾಗಿ ದಿಟ್ಟಿಸುತ್ತಿದ್ದ ತಾತನ ಕಣ್ಣುಗಳನ್ನು ನಾನು ಎಂದೂ ಮರೆಯಲಾರೆ. ಕೊಟ್ಟಷ್ಟೂ ಕಡಿಮೆಯಾಗದಿರುವುದು ಪ್ರೀತಿಯೊಂದೇ. ತಾತನ ಪ್ರೀತಿಗೆ ಪ್ರತಿಯಾಗಿ ನನ್ನ ಈ ಬರಹದಲ್ಲಿ ನನ್ನ ಪ್ರೀತಿಯನ್ನು, ಕೃತಜ್ಞತೆಯನ್ನು ತುಂಬಿದ್ದೇನೆ. ಇದು ತಾತನಿಗೆ ತಲುಪುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ ಸ್ವಲ್ಪವಾದರೂ ಧನ್ಯತೆಯ ಭಾವ ನನಗೆ ಮೂಡಿದೆ. ಪ್ರೀತಿಯ ತಾತನಿಗೆ ಪ್ರೀತಿಯ ಮೊಮ್ಮಗ ತೋರಿಸಿರುವ  ಈ ಪ್ರೀತಿಯ ಅಭಿವ್ಯಕ್ತಿ ವ್ಯರ್ಥವಾಗುವುದಿಲ್ಲವೆಂಬುದು ನನ್ನ ಧೃಢ ವಿಶ್ವಾಸ.
*  *  *  *  *


ಅನುಬಂಧ



*****************

***********


************


***********


*********************
ಓದಿದ್ದಕ್ಕೆ ಧನ್ಯವಾದಗಳು
-ಕ.ವೆಂ.ನಾಗರಾಜ್.
*********************

 



1 ಕಾಮೆಂಟ್‌: